ರಸ್ತೆ ಅತಿಕ್ರಮಿಸಿ ಧಾರ್ಮಿಕ ಕಟ್ಟಡಗಳ ನಿರ್ಮಾಣ ಬೇಡ, ಸರ್ವೇ ವರದಿ ಸಲ್ಲಿಕೆಗೆ 3 ವಾರದ ಗಡುವು ನೀಡಿದ ಕರ್ನಾಟಕ ಹೈಕೋರ್ಟ್
Karnataka Court News: ಸಾರ್ವಜನಿಕ ರಸ್ತೆಗಳಲ್ಲಿ ಧಾರ್ಮಿ ಶ್ರದ್ಧಾಕೇಂದ್ರಗಳ ನಿರ್ಮಾಣ ಸಹಿಸುವುದು ಸಾಧ್ಯವಿಲ್ಲ. ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ದೇಗುಲ ನಿರ್ಮಾಣವಾಗಿಯೇ ಅಥವಾ ದೇಗುಲದ ಸುತ್ತ ರಸ್ತೆ ನಿರ್ಮಾಣವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಸರ್ವೇ ನಡೆಯಲಿ ಎಂದು ಕರ್ನಾಟಕ ಹೈಕೋರ್ಟ್ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.
ಬೆಂಗಳೂರು: ಸಾರ್ವಜನಿಕ ರಸ್ತೆಗಳಲ್ಲಿ ದೇವಾಲಯ, ಮಸೀದಿ, ಚರ್ಚ್‌ಗಳನ್ನು ನಿರ್ಮಿಸಿದರೆ ಜನ ಸಂಚಾರಕ್ಕೆ ಏನು ಮಾಡಬೇಕು?, ಈ ರೀತಿ ರಸ್ತೆ ಒತ್ತುವರಿ ನಡವಳಿಕೆಗಳನ್ನು ಸಹಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಸ್ಪಷ್ಟಪಡಿಸಿದೆ.
ಬೆಂಗಳೂರು ನಗರದ ಸುಂಕದ ಕಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡು ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್ ಸದಸ್ಯರು ದೇಗುಲ ನಿರ್ಮಿಸುತ್ತಿದ್ದಾರೆ ಎಂಬ ಆರೋಪದ ದಾವೆ ವಿಚಾರಣೆ ವೇಳೆ ಗುರುವಾರ (ಜ.11) ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ಈ ವಿಚಾರ ಸ್ಪಷ್ಪಪಡಿಸಿದೆ.
ಸುಂಕದಕಟ್ಟೆ ಸಮೀಪದ ಸಲ್ಲಾಪುರದಮ್ಮ ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡು, ಸ್ಥಳ ಪರಿಶೀಲನೆ ಮಾಡಿ ಸರ್ವೇ ನಡೆಸಿ 3 ವಾರದಲ್ಲಿ ವಸ್ತುನಿಷ್ಠವಾದ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠವು ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತು.
ಸುಂಕದಕಟ್ಟೆ ನಿವಾಸಿ ಸಿ. ಹೊನ್ನಯ್ಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸರ್ಕಾರ, ಬಿಬಿಎಂಪಿ ಹಾಗೂ ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿತು.
ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇಮಿಸಿದ ಭೂ ದಾಖಲೆಗಳ ಉಪ ನಿರ್ದೇಶಕ ಅವರ (ಡಿಡಿಎಲ್ಆರ್) ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಡೆಸಬೇಕು. ಸರ್ವೇ ವರದಿಯನ್ನು 3 ವಾರದಲ್ಲಿ ನ್ಯಾಯಪೀಟಕ್ಕೆ ಸಲ್ಲಿಸಬೇಕು.
ಇನ್ನು, ನೋಟಿಸ್ ಪಡೆದವರು ಸರ್ವೇ ನಡೆಸುವುದಕ್ಕಾಗಿ ವಿವಾದಿತ ಜಾಗಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಡಿಡಿಎಲ್ಆರ್ ಅವರಿಗೆ ನೀಡಬೇಕು. ಡಿಡಿಎಲ್‌ಆರ್ ಅವರು ಸಂಬಂಧಿತ ಎಲ್ಲ ಸಾರ್ವಜನಿಕ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಬಹುದು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮೊದಲು 2021ರ ಮಾರ್ಚ್ 8ರಂದು ವಿಚಾರಣೆ ಸಂದರ್ಭದಲ್ಲಿ, ಸ್ಥಳಕ್ಕೆ ಭೇಟಿ ನೀಡಿ ಒಂದು ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಕೋರ್ಟ್ ನಿರ್ದೇಶನ ನೀಡಿತ್ತು.
ಸಾರ್ವಜನಿಕ ರಸ್ತೆಯಲ್ಲಿ ಧಾರ್ಮಿಕ ಕೇಂದ್ರ ನಿರ್ಮಿಸಿದರೆ ಜನರೇನು ಮಾಡಬೇಕು: ಕೋರ್ಟ್ ಪ್ರಶ್ನೆ
ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಆ ರಸ್ತೆಯಲ್ಲಿ ಓಡಾಟ ನಡೆಸದಂತೆ ನಿರ್ಬಂಧಿಸಿದ್ದಾರೆ ಎಂಬುದರ ಕಡೆಗೆ ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ನ್ಯಾಯಪೀಠದ ಗಮನಕ್ಕೆ ತಂದರು.
ಫೋಟೋಗಳನ್ನು ಪರಿಶೀಲಿಸಿದ ಬಳಿಕ, ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿದೆಯೇ? ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್ ನಿರ್ಮಿಸಿದರೆ ಜನರು ಏನು ಮಾಡಬೇಕು? ಇದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ಎಚ್ಚರಿಸಿತು.
ಅಲ್ಲದೆ, ನ್ಯಾಯಾಲಯದ ಹಿಂದಿನ ನಿರ್ದೇಶನದ ಮೇರೆಗೆ ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ ಅದರಲ್ಲಿ ದೇವಸ್ಥಾನ ನಿರ್ಮಿಸಲು ರಸ್ತೆ ಒತ್ತುವರಿ ಮಾಡಲಾಗಿದೆಯೇ ಎಂಬ ವಿಚಾರವನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂಬುದರ ಕಡೆಗೆ ನ್ಯಾಯಪೀಠವು ಅಧಿಕಾರಿಗಳ ಗಮನಸೆಳೆಯಿತು.
ಹಲವು ವರ್ಷಗಳಿಂದ ಅಲ್ಲಿ ದೇವಸ್ಥಾನ ಇತ್ತು ಎಂಬುದು ಟ್ರಸ್ಟ್ ಸದಸ್ಯರ ವಾದ.ಇದನ್ನು ದೃಢೀಕರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಆದ್ದರಿಂದ ಸ್ವತಂತ್ರ ಪ್ರಾಧಿಕಾರವೇ ಸ್ಥಳ ಪರಿಶೀಲನೆ ನಡೆಸಿ ಸ್ಪಷ್ಟ ವರದಿ ಒದಗಿಸುವುದು ಸೂಕ್ತ ಎಂದು ನ್ಯಾಯಪೀಠ ನಿರ್ದೇಶಿಸಿದೆ.