Karnataka Polls 2023: ಎಲ್ಲರಲ್ಲೂ ಇದೆ ಗೆಲುವಿನ ಭರವಸೆ, ಇದು ಸೋಲು-ಗೆಲುವಿನ ಕತ್ತಿ ವರಸೆ: ಚುನಾವಣೆ ಅಖಾಡ ರಂಗೇರಿದಾಗ..
Mar 30, 2023 07:23 AM IST
ಸಂಗ್ರಹ ಚಿತ್ರ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಿಟಿಕೆಗಳು ಆರಂಭಗೊಂಡಿವೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚುನಾಚಣಾ ತಯಾರಿ ಮತ್ತು ಗೆಲುವಿನ ರಣತಂತ್ರ ಹೇಗಿದೆ ಎಂಬುದನ್ನು ನೋಡುವುದಾದರೆ...
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಿರುವ ಚುನಾವಣಾ ಆಯೋಗ, ಮೇ 10 ರಂದು ಒಂದೇ ಹಂತದ ಮತದಾನ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದ್ದು, ಕರ್ನಾಟಕವನ್ನು ಮುನ್ನಡೆಸುವ ಹೊಸ ಸರ್ಕಾರ ಯಾರದ್ದಾಗಲಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬರಲಿದೆ.
ಈ ಮಧ್ಯೆ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೇ, ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ತಯಾರಿಯನ್ನು ಆರಂಭಿಸಿದ್ದು, 'ಗೆಲುವು ನಮ್ಮದೇ..' ಎಂದು ಈ ಪಕ್ಷಗಳ ನಾಯಕರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚುನಾಚಣಾ ತಯಾರಿ ಮತ್ತು ಗೆಲುವಿನ ರಣತಂತ್ರ ಹೇಗಿದೆ ಎಂಬುದನ್ನು ನೋಡುವುದಾದರೆ...
ಬಿಜೆಪಿ:
ರಾಜ್ಯದಲ್ಲಿ ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಶತಾಯಗತಾಯ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕ್ಕಾರಕ್ಕೇರುವ ಹುಮಸ್ಸಿನಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸುದೀರ್ಘ ರಾಜಕೀಯ ಅನುಭವ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತದಾರನ ಮನಗೆಲ್ಲುವುದು ಬಿಜೆಪಿಯ ಚುನಾವಣಾ ತಂತ್ರಗಾರಿಕೆಯಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ''ಕರ್ನಾಟಕದ ಬೆಳವಣಿಗೆಯ ಪಯಣವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಬಡವರು, ಅಂಚಿನಲ್ಲಿರುವವರು ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಬಿಜೆಪಿ ಬದ್ಧವಾಗಿದೆ. ನಮ್ಮ ಅಭಿವೃದ್ಧಿ ಕಾರ್ಯಸೂಚಿಯ ಆಧಾರದ ಮೇಲೆ ನಾವು ಜನರ ಆಶೀರ್ವಾದವನ್ನು ಪಡೆಯುತ್ತೇವೆ..'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
''ರಾಜ್ಯದ ಶ್ರಮಜೀವಿಗಳಿಂದಾಗಿ ಕರ್ನಾಟಕ ಅಭಿವೃದ್ಧಿಯ ಶಕ್ತಿಕೇಂದ್ರವಾಗಿದ್ದು, ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯ ಆಧಾರದ ಮೇಲೆ ಬಿಜೆಪಿ ಮತ ಯಾಚಿಸಲಿದೆ..'' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇನ್ನು ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬಿಜೆಪಿ ಸದೃಢ ಸಂಘಟನೆಯೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
''ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತಿತರ ವಿಚಾರದಲ್ಲಿ ಡಬಲ್ ಇಂಜಿನ್ ಸರ್ಕಾರ ಉತ್ತಮ ಕೆಲಸ ಮಾಡಿದೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದ ಜನ ಮೆಚ್ಚಿಕೊಂಡಿದ್ದು, ಮೇ 13 ರಂದು ಬಿಜೆಪಿ ಸಂಪೂರ್ಣ ಬಹುಮತ ಪಡೆಯುವುದು ಖಚಿತ..'' ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ದುರಾಡಳಿತ, ಅಲ್ಪಸಂಖ್ಯಾತ ಓಲೈಕೆ ರಾಜಕಾರಣ, ರಾಹುಲ್ ಗಾಂಧಿ ಅಪಕ್ವ ನಾಯಕತ್ವ, ಪ್ರಧಾನಿ ಮೋದಿ ಅವರ ಸದೃಢ ನಾಯಕತ್ವ, ಇವು ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಬಳಸುವ ತಂತ್ರಗಾರಿಕೆಯಾಗಿದೆ.
ಸವಾಲು: ಭ್ರಷ್ಟಾಚಾರ ಆರೋಪಗಳು, 40 ಪರ್ಸೆಂಟ್ ಕಮಿಷನ್ ಆರೋಪ, ಮೀಸಲಾತಿ ವಿಚಾರ, ಬಿಎಸ್ ಯಡಿಯೂರಪ್ಪ ಅವರಿಂದ ನಾಯಕತ್ವ ಕಸಿದುಕೊಂಡಿರುವುದು ಬಿಜೆಪಿಗೆ ಚುನಾವಣೆಯಲ್ಲಿ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.
ಕಾಂಗ್ರೆಸ್:
ಇನ್ನು ಪ್ರತಿಪಕ್ಷ ಕಾಂಗ್ರೆಸ್ ಕೂಡ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜ್ಯದಲ್ಲಿ ಈ ಬಾರಿ ಶತಾಯಗತಾಯ ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂಬ ಬಯಕೆಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದೆ. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದವರಾಗಿರುವುದರಿಂದ, ಈ ಚುನಾವಣೆಯನ್ನು ಗೆಲ್ಲುವುದು ಕಾಂಗ್ರೆಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೇ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ''ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ನಾವು ಚುನಾವಣೆಯಲ್ಲಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ..'' ಎಂದು ಹೇಳಿರುವುದು ಗಮನ ಸೆಳೆದಿದೆ.
ಚುನಾವಣಾ ಆಯೋಗದ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ನಿರ್ಧಾರವನ್ನು ಸ್ವಾಗತಿಸಿರುವ ಕಾಂಗ್ರೆಸ್, ''ಮೇ 10 ಕೇವಲ ಮತದಾನದ ದಿನವಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಾಗೂ ಜನರ ಭವಿಷ್ಯ ನಿರ್ಮಾಣ ಮಾಡುವ ದಿನ..'' ಎಂದು ಅಭಿಪ್ರಾಯಪಟ್ಟಿದೆ.
ರಾಜ್ಯ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳು, 40 ಪರ್ಸೆಂಟ್ ಕಮಿಷನ್ ಆರೋಪಗಳು, ಜಾರಿ ರಾಜಕಾರಣ, ನಿರುದ್ಯೋಗ, ಬೆಲೆ ಏರಿಕೆ, ಇವು ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಬಳಸುವ ತಂತ್ರಗಾರಿಕೆಯಾಗಿದೆ.
ಸವಾಲು: ಅಲ್ಪಸಂಖ್ಯಾತ ಓಲೈಕೆ ರಾಜಕಾರಣದ ಆರೋಪದಿಂದ ಹೊರಬರುವುದು, ಅಧಿಕಾರಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಸ್ಪರ್ಧೆಯನ್ನು ಸಹಿಸುವುದು, ಬಣ ರಾಜಕೀಯವನ್ನು ಸಾಧ್ಯವಾದಷ್ಟು ಹದ್ದುಬಸ್ತಿನಲ್ಲಿಡುವುದು ಮತ್ತು ಪ್ರಧಾನಿ ಮೋದಿ ಅವರ ಜನಪ್ರಿಯತೆಯ ಸುನಾಮಿಯನ್ನು ಎದುರಿಸುವುದು.
ಜೆಡಿಎಸ್:
ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ತಿರಸ್ಕರಿಸಿ ಜನರು ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡುತ್ತಾರೆ ಎಂದು ಜನತಾ ದಳ (ಜಾತ್ಯತೀತ) ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ''ಈ ಬಾರಿ ಕನ್ನಡಿಗರು ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ನಾವು ಕನ್ನಡಿಗರ ಬಿ-ಟೀಮ್ ಆಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಭರವಸೆ ನೀಡುತ್ತೇವೆ..'' ಎಂದು ಹೆಚ್‌ಡಿಕೆ ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು, ಮಾಜಿ ಪ್ರಧಾನಮಂತ್ರಿ ಹೆಚ್‌ಡಿ ದೇವೇಗೌಡ ಅವರ ಅನಾರೋಗ್ಯ ವಿಚಾರ, ಪ್ರಾದೇಶಿಕ ಪಕ್ಷದ ಟ್ರಂಪ್‌ಕಾರ್ಡ್, ಹೆಚ್‌ಡಿಕೆ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳು, ಇವು ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಜೆಡಿಎಸ್ ಬಳಸುವ ತಂತ್ರಗಾರಿಕೆಯಾಗಿದೆ.
ಒಟ್ಟಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಸಜ್ಜಾಗಿದ್ದು, ಅಂತಿಮವಾಗಿ ಮತದಾರ ಯಾರ ಪರವಾಗಿ ತನ್ನ ತೀರ್ಮಾನವನ್ನು ಪ್ರಕಟಿಸಲಿದ್ದಾನೆ ಎಂಬ ಪ್ರಶ್ನೆಗೆ ಮೇ 13ರಂದು ಸ್ಪಷ್ಟ ಉತ್ತರ ದೊರೆಯಿದೆ.
ಕರ್ನಾಟಕ ವಿಧಾನಸಭೆ 224 ಸ್ಥಾನಗಳನ್ನು ಹೊಂದಿದ್ದು, ಆಡಳಿತಾರೂಢ ಬಿಜೆಪಿ 119, ಕಾಂಗ್ರೆಸ್ 75 ಮತ್ತು ಜೆಡಿಎಸ್ 28 ಸ್ಥಾನಗಳನ್ನು ಹೊಂದಿದೆ.