logo
ಕನ್ನಡ ಸುದ್ದಿ  /  ಕರ್ನಾಟಕ  /  Congress Cm Fight: ಇನ್ನಾದರೂ ಅರಿತುಕೊಳ್ಳಿ ಡಿಕೆಶಿ ತಂತ್ರ: ಸಿದ್ದರಾಮಯ್ಯ ಅವರಿಗೆ ಬಿಜೆಪಿಯ "ಕಾಳಜಿ ಪೂರ್ವಕ" ಎಚ್ಚರ!

Congress CM Fight: ಇನ್ನಾದರೂ ಅರಿತುಕೊಳ್ಳಿ ಡಿಕೆಶಿ ತಂತ್ರ: ಸಿದ್ದರಾಮಯ್ಯ ಅವರಿಗೆ ಬಿಜೆಪಿಯ "ಕಾಳಜಿ ಪೂರ್ವಕ" ಎಚ್ಚರ!

HT Kannada Desk HT Kannada

Nov 29, 2022 11:54 AM IST

ಸಂಗ್ರಹ ಚಿತ್ರ

    • ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ ನಾಯಕರು ದಿನನಿತ್ಯ ಬೀದಿ ಕಾಳಗ ಮಾಡುವ ಮೂಲಕ ರಾಜ್ಯದ ಜನರಿಗೆ ಮನರಂಜನೆ ಒದಗಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರನ್ನು ಹಣಿಯಲೆಂದೇ ಡಿಕೆ ಶಿವಕುಮಾರ್‌ ಒಬ್ಬರಿಗೆ ಒಂದೇ ಟಿಕೆಟ್‌ ಎಂಬ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT_PRINT)

ಬೆಂಗಳೂರು: ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಸ್ಪರ್ಧೆ ಆರಂಭವಾಗುತಿದ್ದಂತೇ, ಬಿಜೆಪಿ ರಾಜ್ಯ ಘಟಕ ಆ್ಯಕ್ಟೀವ್‌ ಆಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನಡುವಿನ ಕಾದಾಟ, ರಾಜ್ಯ ಬಿಜೆಪಿ ಘಟಕಕ್ಕೆ ಭರಪೂರ ಆಹಾರ ಒದಗಿಸಿದೆ.

ಟ್ರೆಂಡಿಂಗ್​ ಸುದ್ದಿ

ಕೈಮಗ್ಗ ಜವಳಿ ತಂತ್ರಜ್ಞಾನ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ್ ಪ್ರವೇಶ, ಯಾರಿಗೆ ಉಂಟು ಅವಕಾಶ

ಕರ್ನಾಟಕದ 2ನೇ ಹಂತದ ಮತದಾನ ಮುಕ್ತಾಯ, ಘರ್ಷಣೆ, ಬಿಸಿಲ ನಡುವೆ ಭಾರೀ ಹಕ್ಕು ಚಲಾವಣೆ

Bangalore News: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನ; ಎಸ್‌ಐಟಿ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ

Heart Attack: ಕರ್ನಾಟಕದಲ್ಲಿ ಹಠಾತ್ ಹೃದಯಾಘಾತಕ್ಕೆ ಯುವಕರ ಬಲಿ, ಆರೋಗ್ಯ ಸಚಿವರಿಗೆ ರಾಜಾರಾಂ ತಲ್ಲೂರ್‌ ಪತ್ರ

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ ನಾಯಕರು ದಿನನಿತ್ಯ ಬೀದಿ ಕಾಳಗ ಮಾಡುವ ಮೂಲಕ ರಾಜ್ಯದ ಜನರಿಗೆ ಮನರಂಜನೆ ಒದಗಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

" ಚುನಾವಣಾ ಕಾಲದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಕಾದಾಟ ಮತ್ತೆ ತಾರಕಕ್ಕೇರಿದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ದಿನನಿತ್ಯ ಬೀದಿಕಾಳಗ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಹಣಿಯಲೆಂದೇ, ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂಬ ಹೊಸ ನಿಯಮವನ್ನು ಡಿಕೆಶಿ ಜಾರಿಗೆ ತಂದರು.." ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

"ಹೈಕಮಾಂಡ್ ಒತ್ತಡದಿಂದ ಸಿದ್ದರಾಮಯ್ಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಂತೇ, "ಒಬ್ಬರಿಗೆ ಒಂದೇ ಕ್ಷೇತ್ರ" ಎಂಬ ಹೊಸ ನಿಯಮವನ್ನು ಡಿಕೆ ಶಿವಕುಮಾರ್‌ ಘೋಷಿಸಿದರು. ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಟಿಕೆಟ್ ಅರ್ಜಿ, ಒಂದೇ ಕ್ಷೇತ್ರದ ಷರತ್ತು ವಿಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ.." ಎಂದು ಬಿಜೆಪಿ ಟ್ವೀಟ್‌ ಮೂಲಕ ಎಚ್ಚರಿಸಿದೆ.

"ಸಿದ್ದರಾಮಯ್ಯ ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು "ಟಿಕೆಟ್ ಘೋಷಿಸುವ ಅಧಿಕಾರ ಸಿದ್ದರಾಮಯ್ಯ ಅವರಿಗಿಲ್ಲ" ಎನ್ನುವ ಹೇಳಿಕೆಯನ್ನು ಡಿಕೆಶಿ ಘಂಟಾಘೋಷವಾಗಿ ನೀಡಿದರು. ಇದು ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರವೇ.."? ಎಂದು ಬಿಜೆಪಿ ಪ್ರಶ್ನಿಸಿದೆ.

ಚುನಾವಣಾ ಕಾಲದಲ್ಲಿ ಜನರಿಗೆ ಹತ್ತಿರವಾಗುವ ಬದಲು, ರಾಜ್ಯ ಕಾಂಗ್ರೆಸ್‌ ನಾಯಕರು ಸಿಎಂ ಕುರ್ಚಿಗಾಗಿ ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಈ ಬೀದಿ ಕಾಳಗ ಜನರಿಗೆ ಭರಪೂರ ಮನರಂಜನೆ ಒದಗಿಸುತ್ತಿದೆ. ಕಾಂಗ್ರೆಸ್‌ನ ಈ ಒಳಜಗಳದಿಂದ ರೋಸಿ ಹೋಗಿರುವ ರಾಜ್ಯದ ಜನತೆ, ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿರ್ಧಾರ ಮಾಡಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ಅಧಿಕಾರಕ್ಕಾಗಿ ಕಾಂಗ್ರೆಸ್‌ ನಾಯಕರು ಅದೆಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ನಡುವಿನ ಈ ಶೀತಲ ಸಮರವೇ ಸಾಕ್ಷಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಕನಸು ಕಾಣುತ್ತಿರುವ ಈ ನಾಯಕರು, ಈಗಲೇ ಸಿಎಂ ಕುರ್ಚಿಗೆ ಟವಲ್‌ ಹಾಕಿರುವುದನ್ನು ನೋಡಿ ರಾಜ್ಯದ ಜನ ನಗುತ್ತಿದ್ದಾರೆ ಎಂದು ಬಿಜೆಪಿ ಕುಹುಕವಾಡಿದೆ.

ಮುಂಬರುವ ಚುನಾವಣೆಯಲ್ಲಿ ಯಾರಿಗೆ ಅಧಿಕಾರ ನೀಡಬೇಕು ಎಂಬುದನ್ನು ರಾಜ್ಯದ ಜನತೆ ಈಗಾಗಲೇ ನಿರ್ಧರಿಸಿ ಆಗಿದೆ. ಚುನಾವಣಾ ಫಲಿತಾಂಶ ಬರುವವರೆಗೂ ಕಾಂಗ್ರೆಸ್‌ ನಾಯಕರು ಇದೇ ರೀತಿ ಪರಸ್ಪರ ಕಚ್ಚಾಡುವುದನ್ನು ಮುಂದುವರೆಸಲಿ. ಈ ಮೂಲಕ ರಾಜ್ಯದ ಜನತೆಗೆ ಕಾಂಗ್ರೆಸ್‌ ನಾಯಕರ ಅಸಲಿಯತ್ತು ತಿಳಿಯುವಂತಾಗಲಿ ಎಂದು ಬಿಜೆಪಿ ಕಾಲೆಳೆದಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಬ್ಬರಿಗೆ ಒಂದೇ ಟಿಕೆಟ್‌ ಎಂದು ಘೋಷಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಒಕ್ಕಲಿಗರ ಸಭೆಯಲ್ಲಿ ಈ ಬಾರಿ ನಿಮ್ಮ ಸಮುದಾಯದ ವ್ಯಕ್ತಿಯೋರ್ವನನ್ನು ಸಿಎಂ ಕುರ್ಚಿ ಮೇಲೆ ಕೂರಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಹೇಳುವ ಮೂಲಕ, ತಾವು ಸಿಎಂ ಕುರ್ಚಿಯ ಆಕಾಂಕ್ಷಿ ಎಂದು ಸಾರಿದ್ದರು.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಹೆಬ್ಬಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದ್ದರು. ಈ ಎಲ್ಲಾ ಬೆಳವಣಿಗೆಗಳು, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಮತ್ತೊಂದು ಸುತ್ತಿನ ಸ್ಪರ್ಧೆ ಏರ್ಪಟ್ಟಿದೆ ಎಂಬ ಚರ್ಚೆಗೆ ಕಾರಣವಾಗಿವೆ.

    ಹಂಚಿಕೊಳ್ಳಲು ಲೇಖನಗಳು