logo
ಕನ್ನಡ ಸುದ್ದಿ  /  ಕರ್ನಾಟಕ  /  Bms Trust: ಬಿಎಂಎಸ್​ ಟ್ರಸ್ಟ್​ ಅಕ್ರಮ; ಉನ್ನತ ಮಟ್ಟದ ತನಿಖೆ, ಉನ್ನತ ಶಿಕ್ಷಣ ಸಚಿವರ ರಾಜೀನಾಮೆಗೆ ಹೆಚ್​​ಡಿಕೆ ಆಗ್ರಹ

BMS Trust: ಬಿಎಂಎಸ್​ ಟ್ರಸ್ಟ್​ ಅಕ್ರಮ; ಉನ್ನತ ಮಟ್ಟದ ತನಿಖೆ, ಉನ್ನತ ಶಿಕ್ಷಣ ಸಚಿವರ ರಾಜೀನಾಮೆಗೆ ಹೆಚ್​​ಡಿಕೆ ಆಗ್ರಹ

HT Kannada Desk HT Kannada

Sep 23, 2022 10:31 AM IST

ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ

    • ಬಿಎಂಎಸ್​ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು, ಟ್ರಸ್ಟ್‌ & ಆ ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್​ ಅಶ್ವತ್ಥ್ ನಾರಾಯಣ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೆಚ್​​ಡಿಕೆ ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ

ಬೆಂಗಳೂರು: ನಿನ್ನೆ ಬಿಎಂಎಸ್​ ಕಾಲೇಜು ಟ್ರಸ್ಟ್ ಅಕ್ರಮದ ಕುರಿತು ವಿಧಾನಸಭೆಯಲ್ಲಿ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಇದೀಗ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಂದ ನಂತರ ಕೆಲಸ ಹುಡುಕುತ್ತೀರಾ, ಹೆಚ್ಚು ವೇತನ ಒದಗಿಸಬಲ್ಲ 7 ಕೌಶಲಗಳಿವು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೀಘ್ರದಲ್ಲೇ ಪ್ರಕಟ; 10ನೇ ತರಗತಿ ರಿಸಲ್ಟ್‌, ಅಂಕ ಪರಿಶೀಲಿಸಲು ಹೀಗೆ ಮಾಡಿ

ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯೇ ಇದೆ ನೋಡಿ

ಸೋಮವಾರಪೇಟೆ: ಸಿಹಿಯೂಟದ ವಿಚಾರಕ್ಕೆ ಗಲಾಟೆ; ನಿಶ್ಚಿತಾರ್ಥದ ಉಂಗುರ ವಧುವಿನತ್ತ ಎಸೆದು ಹೋದ ತುಮಕೂರು ವರ

ಬಿಎಂಎಸ್​ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು, ಟ್ರಸ್ಟ್‌ & ಆ ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್​ ಅಶ್ವತ್ಥ್ ನಾರಾಯಣ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೆಚ್​​ಡಿಕೆ ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್​ಗಳನ್ನು ಮಾಡಿರುವ ಅವರು, ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ಇನ್ನು ನನ್ನ ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ ಎಂದು ಹೇಳಿದ್ದಾರೆ.

ಬಿಎಂಎಸ್ ಟ್ರಸ್ಟ್ ಬಗ್ಗೆ ಬಿಜೆಪಿ ಸರಕಾರ ಕಾನೂನುರೀತಿಯ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಕಾನೂನುರೀತಿಯ ಕ್ರಮ ಎಂದರೆ, ಸಾವಿರಾರು ಕೋಟಿ ರೂ. ಮೌಲ್ಯದ ಸರಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ? ಎಂದು ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆ ಅಕ್ರಮಕ್ಕೆ ಕನ್ನಡಿ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲಾ ಸಕ್ರಮವಾಗಿದ್ದರೆ, ಇದಕ್ಕಿಂತ ದುರಂತ ಇನ್ನೊಂದಿಲ್ಲ. ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ನೋಡಿ. ಅಷ್ಟೂ ಆಸ್ತಿಯನ್ನು ಲಪಟಾಯಿಸಲು ಟ್ರಸ್ಟ್​ನಲ್ಲಿ ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ನೀವು ಹೇಗೆಲ್ಲಾ ಸಹಕಾರ ನೀಡಿದ್ದೀರಿ ಎನ್ನುವುದು ಈಗ ಜಗಜ್ಜಾಹೀರು.

ಉನ್ನತ ಶಿಕ್ಷಣ ಸಚಿವರೇ, 1957ರಲ್ಲಿ ರಚನೆಗೊಂಡು ನೋಂದಣಿಯಾದ ಬಿಎಂಎಸ್ ಟ್ರಸ್ಟಿನ ಮೂಲ ಡೀಡನ್ನು ಒಮ್ಮೆ ಓದಿ. ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಇರುವ ಷರತ್ತುಗಳನ್ನೂ ತಿಳಿಯಿರಿ. ಆದರೆ, ನೀವು ಜನರಿಗೆ & ಸರಕಾರಕ್ಕೆ ಸೇರಿದ ಇಡೀ ಟ್ರಸ್ಟಿನ ಆಸ್ತಿ ಹೊಡೆಯಲು ನಿಂತವರ ಪರ ನಾಚಿಕೆ ಇಲ್ಲದೆ ವಕಾಲತ್ತು ವಹಿಸುತ್ತಿದ್ದೀರಿ.

ಬಿಎಂಎಸ್ ಎಂಜೀಯರಿಂಗ್‌ ಕಾಲೇಜಿನಲ್ಲಿ ಸೀಟ್‌ ಬ್ಲಾಕಿಂಗ್‌, ಪೇಮೆಂಟ್‌ ಸೀಟುಗಳನ್ನು 50:50 ರಂತೆ ಟ್ರಸ್ಟಿಗಳಿಬ್ಬರು ಹಂಚಿಕೊಂಡಿದ್ದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಕಾಮೆಡ್-ಕೆ ಆಕ್ಷೇಪಣಾ ಪತ್ರ, ಸರಕಾರದ ಇಬ್ಬರು ಅಧಿಕಾರಿಗಳು ಟ್ರಸ್ಟಿನ ಅಕ್ರಮಗಳ ಬಗ್ಗೆ ಬರೆದ ಪತ್ರಗಳನ್ನು ನೀವು ಓದಲಿಲ್ಲವೇ ಸಚಿವರೇ? ಓದಲಿಲ್ಲ ಎಂದರೆ, ಅದಕ್ಕೆ ಕಾರಣವೇನು?

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಎಂದರೆ ಸರಕಾರಿ ಸ್ವತ್ತುಗಳನ್ನು ಭೂರಕ್ಕಸರ ಬಾಯಿಗೆ ಹಾಕುವುದಾ? ಮುಜರಾಯಿ ಇಲಾಖೆಯ ಶ್ರೀ ದೊಡ್ಡ ಬಸವಣ್ಣ, ಕಾರಂಜಿ ಶ್ರೀ ಆಂಜನೇಯ ಸ್ವಾಮಿ ದೇಗುಲಗಳಿಗೆ ಸೇರಿದ ಕೋಟ್ಯಂತರ ರೂ. ಬೆಲೆಯ ಆಸ್ತಿಯನ್ನು ನುಂಗಲು ಹೊರಟ ನುಂಗಣ್ಣರಿಗೆ ದಾರಿ ಸಲೀಸು ಮಾಡಿಕೊಡುವುದಾ? ಇದ್ಯಾವ ಶಿಕ್ಷಣ ನೀತಿ? ಇದ್ಯಾವ ಧರ್ಮನೀತಿ?

ನಮ್ಮ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಬಹಳ ಕ್ರಮ ಕೈಗೊಂಡಿದ್ದೇವೆ ಎನ್ನುತ್ತೀರಿ. ಸುಧಾರಣೆ ಎಂದರೆ, ಸಾರ್ವಜನಿಕ ಟ್ರಸ್ಟುಗಳನ್ನು ಹೀಗೆ ನುಂಗಿ ನೀರು ಕುಡಿಯಲು ಒಳಗೊಳಗೇ ಸಹಕಾರ ನೀಡುವುದಾ? ಪ್ರಧಾನಿ ಮೋದಿ ಅವರು ಹೇಳಿಕೊಟ್ಟ ವಿಶ್ವಗುರು ಪರಿಕಲ್ಪನೆ ಇದೇನಾ? ಶೈಕ್ಷಣಿಕೋದ್ಧಾರ ಮಾಡುವುದು ಎಂದರೆ ಹೀಗೆನಾ?

2018ರಲ್ಲಿ ನನ್ನ ನೇತೃತ್ವದ ಸರಕಾರವು ದಾನಿ ಟ್ರಸ್ಟಿ, ಅಜೀವ ಟ್ರಸ್ಟಿ ನೇಮಕದ ಬಗ್ಗೆ ಬಿಎಂಎಸ್ ಟ್ರಸ್ಟಿನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳು ಅಕ್ರಮ ಎಂದು ಸಾರಿ, ಆ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿತ್ತು. ನನ್ನ ಸರಕಾರ ಹೋದ ಮೇಲೆ ಬಂದ ಬಿಜೆಪಿ ಸರಕಾರ ಈ ಅಕ್ರಮ ತಿದ್ದುಪಡಿಗಳನ್ನು ಶರವೇಗದಲ್ಲಿ ಪುರಸ್ಕರಿಸಿದ್ದು ಹೇಗೆ?

ಟ್ರಸ್ಟಿನಲ್ಲಿ ಸರಕಾರದ ಟ್ರಸ್ಟಿಗೇ ಕೊಕ್ ಕೊಟ್ಟು, ಈ ಟ್ರಸ್ಟಿನಲ್ಲಾಗುತ್ತಿದ್ದ ಗೋಲ್ʼಮಾಲ್ ಬಗ್ಗೆ ಸರಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿ ಡಾ.ಮಂಜುಳಾ ಮತ್ತು ಇನ್ನೊರ್ವ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಬರೆದ ಪತ್ರಗಳನ್ನು ಕಸದಬುಟ್ಟಿಗೆ ಹಾಕಿದ್ದು ಏಕೆ? ಇದರ ಹಿಂದಿನ ಹುನ್ನಾರ ಏನು ಉನ್ನತ ಶಿಕ್ಷಣ ಸಚಿವರೇ?

ಟ್ರಸ್ಟಿನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣಿಯನ್ನು ಒಮ್ಮೆ ಓದಿಕೊಳ್ಳಿ ಅಶ್ವತ್ಥನಾರಾಯಣ ಅವರೇ. ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಹೆಚ್​ಡಿಕೆ ಟ್ವೀಟ್​ ಮಾಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು