logo
ಕನ್ನಡ ಸುದ್ದಿ  /  ಕರ್ನಾಟಕ  /  ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ; ದಿವಂಗತ ವಿದ್ಯಾ ಸರಸ್ವತಿ ಚೂಂತಾರು - ವ್ಯಕ್ತಿ ವ್ಯಕ್ತಿತ್ವ ಅಂಕಣ

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ; ದಿವಂಗತ ವಿದ್ಯಾ ಸರಸ್ವತಿ ಚೂಂತಾರು - ವ್ಯಕ್ತಿ ವ್ಯಕ್ತಿತ್ವ ಅಂಕಣ

Umesh Kumar S HT Kannada

May 06, 2024 06:15 AM IST

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ ದಿವಂಗತ ವಿದ್ಯಾ ಸರಸ್ವತಿ ಚೂಂತಾರು (ಎಡ ಚಿತ್ರದಲ್ಲಿರುವವರು). ಅವರ ಕನಸಿನ ಕೂಸು ವಿದ್ಯಾ ಸ್ತುತಿ ಪುಸ್ತಕ (ಬಲ ಚಿತ್ರ)

  • ಗುರುಕುಲ ಪದ್ಧತಿಯಲ್ಲಿ ಗುರು, ಗುರುಮಾತೆಗೆ ವಿಶೇಷ ಸ್ಥಾನವಿದೆ. ಅವರು ಕೂಡ ಮಕ್ಕಳ ಕುಟುಂಬ ಸದಸ್ಯರಂತೆಯೇ ಇರುತ್ತಾರೆ. ಇತ್ತೀಚೆಗೆ ಪುತ್ತೂರಿನಲ್ಲಿ ಬಿಡುಗಡೆಯಾದ "ವಿದ್ಯಾ ಸ್ತುತಿ" ಪುಸ್ತಕ ನೂರಾರು ವಿದ್ಯಾರ್ಥಿಗಳ ನೆನಪಿನಂಗಳದ ಗುರುಮಾತೆ ದಿ.ವಿದ್ಯಾಸರಸ್ವತಿ ಚೂಂತಾರು ಅವರ ವ್ಯಕ್ತಿ ಚಿತ್ರಣವನ್ನು ನೀಡಿದೆ. ಈ ಸಲದ ವ್ಯಕ್ತಿ ವ್ಯಕ್ತಿತ್ವ ಅಂಕಣದಲ್ಲಿದೆ.

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ ದಿವಂಗತ ವಿದ್ಯಾ ಸರಸ್ವತಿ ಚೂಂತಾರು (ಎಡ ಚಿತ್ರದಲ್ಲಿರುವವರು). ಅವರ ಕನಸಿನ ಕೂಸು ವಿದ್ಯಾ ಸ್ತುತಿ ಪುಸ್ತಕ (ಬಲ ಚಿತ್ರ)
ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ ದಿವಂಗತ ವಿದ್ಯಾ ಸರಸ್ವತಿ ಚೂಂತಾರು (ಎಡ ಚಿತ್ರದಲ್ಲಿರುವವರು). ಅವರ ಕನಸಿನ ಕೂಸು ವಿದ್ಯಾ ಸ್ತುತಿ ಪುಸ್ತಕ (ಬಲ ಚಿತ್ರ)

ದಕ್ಷಿಣ ಕನ್ನಡ, ಕಾಸರಗೋಡು ಭಾಗದಲ್ಲಿ ರೂಢಿಯಂತೆ ಈ ಬಾರಿಯೂ ವಸಂತ ವೇದ ಶಿಬಿರಗಳು ನಡೆಯುತ್ತಿವೆ. ಈ ಪೈಕಿ ದಿವಂಗತ ಕೃಷ್ಣ ಭಟ್‌ ಪ್ರತಿಷ್ಠಾನ ಚೂಂತಾರು ಮತ್ತು ದ್ವಾರಕಾ ಪ್ರತಿಷ್ಠಾನ ಪುತ್ತೂರು ಮುಕ್ರಂಪಾಡಿಯ ದ್ವಾರಕಾ ಬಡಾವಣೆಯ ನಂದಗೋಕುಲದ ವಸಂತವೇದ ಶಿಬಿರದ ಉದ್ಘಾಟನೆಯ ಸಂದರ್ಭದಲ್ಲಿ ಗಮನಸೆಳೆದುದು "ವಿದ್ಯಾ ಸ್ತುತಿ" ಎಂಬ ಪುಸ್ತಕ ಬಿಡುಗಡೆ. ಕೇವಲ ಶೀರ್ಷಿಕೆಯನ್ನಷ್ಟೇ ಗಮನಿಸಿದರೆ ವಿಶೇಷವೆನಿಸದು. ಅದು ದಶಕಕ್ಕೂ ಹೆಚ್ಚು ಕಾಲ ಪ್ರತಿ ವರ್ಷ 60ಕ್ಕೂ ಹೆಚ್ಚು ಮಕ್ಕಳಿಗೆ ಊಟೋಪಚಾರ ಮಾಡಿದ ಗುರುಮಾತೆ ದಿವಂಗತ ವಿದ್ಯಾಸರಸ್ವತಿ ಚೂಂತಾರು ಅವರಿಗೆ ಅರ್ಪಣೆಯಾಗಿರುವ ಪುಸ್ತಕ ಅದು. ಸಹಜವಾಗಿಯೇ ವಿದ್ಯಾಸರಸ್ವತಿ ಅವರ ವ್ಯಕ್ತಿತ್ವ ಕುತೂಹಲ ಕೆರಳಿಸುವ ವಿಚಾರವಾಗಿ ಕಾಣುತ್ತದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ವಿದ್ಯಾ ಸರಸ್ವತಿ ಅವರ ವ್ಯಕ್ತಿ ಚಿತ್ರಣ ಗಮನಿಸುವ ಮೊದಲು ಗುರುಕುಲ ಪದ್ಧತಿ, ವಸಂತ ವೇದ ಶಿಬಿರಗಳು ಏನು ಎಂಬುದನ್ನು ಅರಿಯೋಣ. ಗುರುಕುಲ ಪದ್ಧತಿಯ ಶಿಕ್ಷಣ ಭಾರತೀಯ ಪ್ರಾಚೀನ ಪರಂಪರೆಯ ಭಾಗ. ಈ ಶಿಕ್ಷಣ ಪದ್ಧತಿಯನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುವುದು ಸಾಧ್ಯವಿಲ್ಲ. ವೇದಾಧ್ಯಯನ ಶಿಕ್ಷಣ ವ್ಯವಸ್ಥೆಯಲ್ಲಿ ಈ ಶಿಕ್ಷಣ ಪರಂಪರೆ ಉಳಿದುಕೊಂಡಿದೆ. ವಸಂತವೇದ ಶಿಬಿರಗಳಲ್ಲಿ ಕೂಡ ಇಂತಹ ಪ್ರಾಚೀನ ಪರಂಪರೆಯ ಛಾಪನ್ನು ಕೊಂಚ ಪರಿವರ್ತನೆಯೊಂದಿಗೆ ಕಾಣಬಹುದು. ವಸಂತ ವೇದ ಶಿಬಿರಗಳು ಸಾಮಾನ್ಯವಾಗಿ ಶಾಲೆಗಳಿಗೆ ಬೇಸಿಗೆ ರಜೆ ಇರುವಾಗ ನಡೆಯುತ್ತವೆ. ಕೆಲವು ಒಂದು ತಿಂಗಳು ನಡೆದರೆ, ಇನ್ನು ಕೆಲವು 45 ದಿನ ನಡೆಯುತ್ತವೆ. ಇಲ್ಲಿ ಸಾಮಾನ್ಯವಾಗಿ ಸಂಧ್ಯಾವಂದನೆ, ನಿತ್ಯ ಪ್ರಾರ್ಥನೆಗೆ ಬೇಕಾದ ಸೂಕ್ತಗಳು, ರುದ್ರ ಪ್ರಶ್ನಃ, ಚಮಕ, ಪಂಚಾಯತನ ಪೂಜೆ ಮುಂತಾದವುಗಳನ್ನು ಕಲಿಸುತ್ತಾರೆ. ಸಾಮಾನ್ಯವಾಗಿ ಮೂರು ವರ್ಷ ವಸಂತ ವೇದ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿ ನಿತ್ಯ ದೇವರ ಪೂಜೆಯನ್ನು ಸರಾಗ ಮಾಡುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಆಸಕ್ತರು ಪೌರೋಹಿತ್ಯವನ್ನು ವೃತ್ತಿಯನ್ನಾಗಿಯೂ ಸ್ವೀಕರಿಸುತ್ತಾರೆ. ಈ ವಿಚಾರ ಹಾಗಿರಲಿ.

ವಸಂತ ವೇದ ಶಿಬಿರ ವಿದ್ಯಾಸರಸ್ವತಿ ಅವರ ಮನೆಯಲ್ಲಿಯೇ ನಡೆಯುತ್ತಿತ್ತು. ಪತಿ ವೇದ ಮೂರ್ತಿ ಸಿ ಶಿವಪ್ರಸಾದ್ ಭಟ್ ಅವರು ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ 60 ರಷ್ಟು ವಿದ್ಯಾರ್ಥಿಗಳಿಗೆ ವೇದ ಪಾಠ ಮಾಡುತ್ತಿದ್ದರು. ಗುರುಮಾತೆಯಾದರೂ ವಿದ್ಯಾ ಸರಸ್ವತಿ ಚೂಂತಾರು ಅವರು ಆಪ್ತವಲಯದಲ್ಲಿ, ವಿದ್ಯಾರ್ಥಿಗಳ ವಲಯದಲ್ಲಿ ವಿದ್ಯತ್ತೆ, ವಿದ್ಯ ಚಿಕ್ಕಮ್ಮ, ವಿದ್ಯಕ್ಕ ಎಂದೇ ಗುರುತಿಸಿಕೊಂಡವರು. ಹಾಗೆ ದಶಕಕ್ಕೂ ಹೆಚ್ಚು ಕಾಲ ನಡೆದ ವಸಂತ ವೇದ ಶಿಬಿರದಲ್ಲಿ ಕಲಿತವರು ಎರಡು ವರ್ಷ ಹಿಂದೆ ದೈವಾಧೀನರಾದ ವಿದ್ಯಾಸರಸ್ವತಿ ಅವರಿಗೆ ನುಡಿನಮನ ಸಲ್ಲಿಸುವುದಕ್ಕೆ ಅವರ ಆಸೆ ಪೂರೈಸುವುದಕ್ಕೆ ಬಿಡುಗಡೆ ಮಾಡಿದ ಪುಸ್ತಕ "ವಿದ್ಯಾಸ್ತುತಿ". ಇದೊಂದು ರೀತಿಯಲ್ಲಿ ಅನ್ವರ್ಥ.

ವಿದ್ಯಕ್ಕನ ಆಸೆ ಈಡೇರಿಸಿದ "ವಿದ್ಯಾ ಸ್ತುತಿ"

ವಸಂತ ವೇದ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ವಿವಿಧ ಶ್ಲೋಕ, ಸೂಕ್ತ, ಭಜನೆಗಳಿಗೆ ಬೇರೆ ಬೇರೆ ಪುಸ್ತಕಗಳನ್ನು ಬಳಸಬೇಕಾಗುತ್ತಿತ್ತು. ಇದನ್ನು ಗಮನಿಸಿದ ವಿದ್ಯಾ ಸರಸ್ವತಿ ಅವರು ತಾವೇ, ಪಾಠಕ್ಕೆ ಸಂಬಂಧಿಸಿದ ವಿವಿಧ ಸ್ತೋತ್ರ, ಭಜನೆ, ಶ್ಲೋಕಗಳನ್ನು ಒಂದೆಡೆ ಬರೆದಿಟ್ಟುಕೊಂಡು ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಈ ರೀತಿ ಸಂಗ್ರಹಿಸಿದ ಸ್ತೋತ್ರ, ಭಜನೆ, ಶ್ಲೋಕಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಬೇಕು ಎಂದು ಹೇಳುತ್ತಲೇ ಬಂದಿದ್ದರು. ಅದನ್ನು ಕೇಳಿಸಿಕೊಂಡಿದ್ದ ವಿದ್ಯಾರ್ಥಿಗಳ ಪೈಕಿ ನವೀನ ಕೃಷ್ಣ ಎಸ್ ಉಪ್ಪಿನಂಗಡಿ, "ವಿದ್ಯಾಸ್ತುತಿ"ಯ ಪರಿಕಲ್ಪನೆಯನ್ನು ಗುರುಗಳಾದ ವೇದ ಮೂರ್ತಿ ಸಿ ಶಿವಪ್ರಸಾದ್ ಭಟ್ ಮತ್ತು ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಕೃಷ್ಣ ಭಟ್ ಅರ್ತ್ಯಡ್ಕ ಬಳಿ ಹೇಳಿಕೊಂಡಿದ್ದರು. ಇದು ಪುಸ್ತಕ ಪ್ರಕಟಣೆಗೆ ಕಾರಣವಾಯಿತು.

ವಿದ್ಯಾ ಸ್ತುತಿ ಪುಸ್ತಕದಲ್ಲಿ ಶ್ರೀ ಗಣೇಶ ಸ್ತೋತ್ರಮ್‌ನಿಂದ ಹಿಡಿದು ಶಾಂತಿ ಮಂತ್ರದ ತನಕ 14 ಸ್ತೋತ್ರಗುಚ್ಛ ಇದೆ. ಇದಾಗಿ, ಆರು ಪುಟ ಭಜನಾವಳಿ ಇದೆ. ನಂತರ ದಿವಂಗತ ವಿದ್ಯಾಸರಸ್ವತಿ ಅವರ ನುಡಿನಮನ ಲೇಖನಗಳಿವೆ. ಅವುಗಳು ವಿದ್ಯಾ ಸರಸ್ವತಿ ಅವರ ವ್ಯಕ್ತಿ ಚಿತ್ರವನ್ನು ಕಟ್ಟಿಕೊಟ್ಟಿವೆ. ರಾಮಕುಂಜದಲ್ಲಿರುವ ಗಣರಾಜ ಕುಂಬ್ಳೆ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ವಿದ್ಯಾ ಸ್ತುತಿಯಲ್ಲಿದೆ ವಿದ್ಯಾ ಸರಸ್ವತಿ ಅವರ ವ್ಯಕ್ತಿ ಚಿತ್ರಣ

ವಸಂತ ವೇದ ಶಿಬಿರದಲ್ಲಿ ಮಕ್ಕಳಿಗೆ ವೇದಪಾಠ ಹೇಳುತ್ತಿರುವ ವೇದ ಮೂರ್ತಿ ಸಿ ಶಿವಪ್ರಸಾದ್ ಭಟ್ ಶಿಷ್ಯ ನವೀನಕೃಷ್ಣ ಎಸ್ ಉಪ್ಪಿನಂಗಡಿ ವಿದ್ಯಾ ಸ್ತುತಿಯಲ್ಲಿ, "ಈ ಪುಸ್ತಕ ಗುರುಪತ್ನಿ ವಿದ್ಯಾಸರಸ್ವತಿಯವರಿಗೆ ಅವರ ನೆನಪುಗಳೊಂದಿಗೆ ಅರ್ಪಣೆಯಾಗಿದೆ. ಚೂಂತಾರಿನ ಸ್ಕಂದ ಕೃಪಾ ಮನೆಯಲ್ಲಿ ಗುರುಗಳಾದ ಶಿವಪ್ರಸಾದ ಭಟ್ಟರು ಆರಂಭಿಸಿದ ವಸಂತ ವೇದ ಶಿಬಿರಕ್ಕೆ ಭದ್ರ ಬುನಾದಿಯಾಗಿ, ಬೆನ್ನೆಲುಬಾಗಿದ್ದವರು ಗುರುಪತ್ನಿ ವಿದ್ಯಾ ಸರಸ್ವತಿ ಚೂಂತಾರು. ಋಷಿಗಳ ಕಾಲದಲ್ಲಿ ಹೇಗೆ ಗುರುಕುಲಗಳಲ್ಲಿ ಶಿಷ್ಯರಿಗೆ ಊಟ, ವಸತಿ, ವೇದವಿದ್ಯೆಗಳನ್ನು ಪ್ರದಾನ ಮಾಡುತ್ತಿದ್ದರೋ ಹಾಗೆಯೇ ಕಲಿಯುಗದಲ್ಲಿ ಅದನ್ನು ಮುಂದುವರಿಸುತ್ತ ವೇದ ವಿದ್ಯಾ ಪ್ರದಾನಕ್ಕೆ ಪಾಠಶಾಲೆಯ ಏಳ್ಗೆಗೆ ಗುರುಪತ್ನಿ ಪ್ರಮುಖ ಕೊಡುಗೆ ನೀಡಿದ್ದರು ಗುರುಪತ್ನಿಯ ಉತ್ಸಾಹ, ವೃತ್ತಿಬದ್ಧತೆಗೆ ಸರಿಸಾಟಿ ಇರಲಿಲ್ಲ. ಪ್ರತಿ ವಿದ್ಯಾರ್ಥಿಗೂ ಬೇಕು ಬೇಕಾದ ತಿಂಡಿ ತಿನಿಸುಗಳನ್ನು ಶುಚಿ ರುಚಿಯಾಗಿ ತಯಾರಿಸಿಕೊಡುತ್ತಿದ್ದ ಅವರು ಈಗ ನಮ್ಮೊಂದಿಗೆ ಇಲ್ಲ. ಅವರೊಂದಿಗೆ ಕಳೆದ ಮಧುರ ಕ್ಷಣಗಳು ಈಗ ಪದೇಪದೆ ಮರುಕಳಿಸುವ ನೆನಪುಗಳಾಗಿ ಸ್ಮೃತಿಪಟಲದಲ್ಲಿ ಉಳಿದುಕೊಂಡಿವೆ. ಆ ನೆನಪುಗಳಲ್ಲಿ ಅವರನ್ನು ಕಾಣುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

ಇನ್ನು, ವೇದ ಮೂರ್ತಿ ಸಿ ಶಿವಪ್ರಸಾದ್ ಭಟ್ ಅವರು ತಮ್ಮ ಪತ್ನಿ ವಿದ್ಯಾ ಸರಸ್ವತಿ ಅವರನ್ನು ನೆನಪಿಸುತ್ತ, "ವಿದ್ಯಾಳಿಂದಾಗಿಯೇ ವೇದ ಪಾಠ ಶಾಲೆ ಶುರುವಾಯಿತು ಎಂದರೆ ಉತ್ಪ್ರೇಕ್ಷೆಯಾಗಲ್ಲ. ಪಾಕಶಾಸ್ತ್ರದ ಎಲ್ಲ ಕೆಲಸಗಳೂ ಆಕೆಗೆ ಕರಗತವಾಗಿದ್ದವು. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರಿಗೆ ಬೇಕಾದ ರೀತಿಯಲ್ಲಿ ತಿಂಡಿ ತಿನಿಸು ಮಾಡಿಕೊಟ್ಟು ಮಕ್ಕಳ ಪ್ರೀತಿಗೂ ಪಾತ್ರರಾಗಿದ್ದರು. ಎಲ್ಲ ಮಕ್ಕಳಿಗೂ ಅಮ್ಮನ ಸ್ಥಾನದಲ್ಲಿದ್ದು ಪೋಷಿಸಿದಳು. ತನ್ನ ಮಕ್ಕಳಂತೆಯೇ ಎಲ್ಲ ಮಕ್ಕಳನ್ನೂ ನೋಡಿಕೊಂಡ ದೊಡ್ಡ ಗುಣ ಅವರದ್ದಾಗಿತ್ತು. ಹೀಗಾಗಿಯೇ 11 ವರ್ಷ ಕಾಲ (2009ರಿಂದ 2019) ಸ್ಕಂದಕೃಪಾ ವಸಂತ ವೇದ ಶಿಬಿರ ನಡೆಯಿತು. ಕೊರೋನಾ ಸಂಕಷ್ಟ ಬಂದಾಗಲೇ ದಿಢೀರ್ ಅರ್ಬುದ ಕಾಡಿದ ಕಾರಣ ವಿದ್ಯಾ ಸರಸ್ವತಿ ಅವರು 2022ರ ಜುಲೈ 17ರಂದು ದೈವಾಧೀನರಾದರು. ಜಗತ್ತಿನಲ್ಲಿ ಸ್ವಹಿತವನ್ನೇ ಮುಖ್ಯವಾಗಿಟ್ಟುಕೊಂಡು ಬದುಕುವವರ ನಡುವೆ, ಯಾರು ಪರರಿಗಾಗಿ ಜೀವಿಸುತ್ತಾರೋ ಅವರು ಚಿರಂಜೀವಿಗಳಾಗುತ್ತಾರೆ" ಎಂದು ನುಡಿನಮನ ಸಲ್ಲಿಸಿದ್ದಾರೆ.

ವಿದ್ಯಾ ಸರಸ್ವತಿ ಚೂಂತಾರು ಅವರ ಹಿನ್ನೆಲೆ

ಗಿರಿಗದ್ದೆ ಪರಮೇಶ್ವರ ಜೋಯಿಸರ ಮಗ ವೆಂಕಟ್ರಮಣ ಭಟ್ಟರ ಪುತ್ರಿ ವಿದ್ಯಾ ಸರಸ್ವತಿ. ಬಿಕಾಂ ಪದವೀಧರೆಯಾಗಿರುವ ವಿದ್ಯಾ ಸರಸ್ವತಿ ಅವರ ವಿವಾಹ ಚೂಂತಾರು ಕೃಷ್ಣ ಭಟ್ಟರ ಪುತ್ರ ಶಿವಪ್ರಸಾದ ಭಟ್ಟ ಅವರೊಂದಿಗೆ 1998ರ ಡಿಸೆಂಬರ್ 3ರಂದು ನಡೆಯಿತು. ಶಿವಪ್ರಸಾದ ಭಟ್ಟ ವೃತ್ತಿಯಲ್ಲಿ ಪುರೋಹಿತ. 2002ರಲ್ಲಿ ಪಾಲಿಗೆ ಬಂದ ಜಾಗದಲ್ಲಿ ಹೊಸ ಮನೆ "ಸ್ಕಂದ ಕೃಪಾ"ವನ್ನು ಕಟ್ಟಿಸಿದರು. ದಂಪತಿ ಮೂವರು ಮಕ್ಕಳು - ಒಬ್ಬ ಪುತ್ರ, ಇಬ್ಬರು ಪುತ್ರಿಯರು. ಶಿವ ಪ್ರಸಾದ ಭಟ್ಟರು ಹವ್ಯಕ ಮಹಾಸಭಾ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸುತ್ತಿದ್ದ ವಸಂತ ವೇದ ಶಿಬಿರದಲ್ಲಿ ವೇದ ಪಾಠ ಮಾಡುತ್ತಿದ್ದರು. ಕಾಲಾನುಕ್ರಮದಲ್ಲಿ ಈ ವೇದ ಶಿಬಿರ ನಿಂತು ಹೋಯಿತು. ಆಗ ವಿದ್ಯಾ ಸರಸ್ವತಿ ಅಡುಗೆ, ಮಕ್ಕಳ ನಿರ್ವಹಣೆ ವಿಚಾರದಲ್ಲಿ ಬೆನ್ನೆಲುಬಾಗಿ ನಿಂತ ಕಾರಣ 2009ರಲ್ಲಿ ಸ್ಕಂದಕೃಪಾ ವಸಂತ ವೇದ ಶಿಬಿರ ಶುರುವಾಯಿತು. 2019ರ ತನಕ ನಡೆಯಿತು. ವಿದ್ಯಾ ಸರಸ್ವತಿ ಅವರು ದೈವಾಧೀನರಾದಾಗ ಅವರಿಗೆ 42 ವರ್ಷ ವಯಸ್ಸು ಅಷ್ಟೆ ಎಂದು ಶಿವ ಪ್ರಸಾದ ಭಟ್ಟರ ಅಣ್ಣ ಸತ್ಯಶಂಕರ ಭಟ್‌ ಚೂಂತಾರು ನೆನಪಿಸಿಕೊಂಡಿದ್ದಾರೆ.

"ಪ್ರತಿ ವರ್ಷವೂ ಸ್ಕಂದಕೃಪಾ ಶಿಬಿರಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳುತ್ತಿದ್ದಾಗ ವಿದ್ಯಕ್ಕನೊಂದಿಗೆ ಶಿಬಿರದ ಮಕ್ಕಳು ಸಂತೋಷದಲ್ಲಿ ನಗುನಗುತ್ತಾ ಮಾತೃ ವಾತ್ಸಲ್ಯದಲ್ಲಿ ಪುನೀತರಾಗುತ್ತಿದ್ದುದನ್ನು ಕಂಡಿದ್ದೇನೆ. ಅವರ ಕನಸು ನನಸಾಗಬೇಕು. ಸ್ಕಂದ ಕೃಪಾ ವಸಂತ ವೇದ ಶಿಬಿರ ಮುಂದುವರಿಯಬೇಕು" ಎಂದು ಸುಳ್ಯದ ಶ್ರೀ ಕಾಂಚಿಕಾಮಕೋಟಿ ವೇದ ವಿದ್ಯಾಲದ ಅಧ್ಯಾಪಕ ವೇದಮೂರ್ತಿ ವೆಂಕಟೇಶ ಶಾಸ್ತ್ರಿ ಆಶಯ ವ್ಯಕ್ತಪಡಿಸಿದ್ದಾರೆ.

ವಿದ್ಯಾ ಸರಸ್ವತಿಯವರು ಅಲ್ಪಕಾಲ ಬದುಕಿದ್ದರೂ, ಸ್ವಾವಲಂಬಿಗಳಾಗಿ ಬದುಕುವುದಕ್ಕೆ, ಸ್ವತಂತ್ರವಾಗಿ ವೃತ್ತಿ ಪ್ರಾರಂಭಿಸುವುದಕ್ಕೆ ಅನೇಕರಿಗೆ ಪ್ರೇರಣೆಯಾಗಿದ್ದರು ಎಂಬುದು ವಿದ್ಯಾ ಸ್ತುತಿ ಮೂಲಕ, ಅವರಿಂದ ಪಾಠ ಕಲಿತವರನ್ನು ಮಾತನಾಡಿಸಿದಾಗ ಮನವರಿಕೆಯಾಗುತ್ತದೆ. ಸಾರ್ಥಕ ಬದುಕಿಗೆ ಇಂಥವರೇ ಆದರ್ಶ ಮತ್ತು ಪ್ರೇರಣೆ.

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ