logo
ಕನ್ನಡ ಸುದ್ದಿ  /  ಕರ್ನಾಟಕ  /  Independence Day 2023: ಹಾಸನ ಎಸ್ಪಿ ಕಚೇರಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಪ್ರತಿಭಾವಂತ ಯುವತಿ ಧ್ವಜಾರೋಹಣ: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ

Independence day 2023: ಹಾಸನ ಎಸ್ಪಿ ಕಚೇರಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಪ್ರತಿಭಾವಂತ ಯುವತಿ ಧ್ವಜಾರೋಹಣ: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ

Umesha Bhatta P H HT Kannada

Aug 16, 2023 01:34 PM IST

ಹಾಸನ ಎಸ್ಪಿ ಕಚೇರಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಯುವತಿ ಸಂಗೀತಾ ಎಸ್ಪಿ ಹರಿರಾಮಶಂಕರ್‌ ಅವರೊಂದಿಗೆ ಧ್ವಜಾರೋಹಣ ನೆರವೇರಿಸಿದರು.

    • IPS Officer Gesture ಎಲ್ಲೆಡೆ ಸ್ವಾತಂತ್ರೋತ್ಸವದ ಧ್ವಜಾರೋಹಣದ ಸಡಗರ. ಹಾಸನ ಎಸ್ಪಿ ಕಚೇರಿಯಲ್ಲಿ ವಿಭಿನ್ನ ಸನ್ನಿವೇಶ. ಹಕ್ಕಿಪಿಕ್ಕಿ ಜನಾಂಗದ ಪ್ರತಿಭಾವಂತ ಯುವತಿ ಪೊಲೀಸರೊಂದಿಗೆ ನಿಂತು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯದ ಪರಿಕಲ್ಪನೆಗೆ ಅರ್ಥ ತಂದಳು. ಇದಕ್ಕೆ ಅವಕಾಶ ನೀಡಿದ್ದು ಕೇರಳದವರಾದ( Kerala) ಹಾಸನ ಎಸ್ಪಿ ಹರಿರಾಮಶಂಕರ್‌. ಆ ಸನ್ನಿವೇಶದ ವಿವರ ಓದಿ.
ಹಾಸನ ಎಸ್ಪಿ ಕಚೇರಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಯುವತಿ ಸಂಗೀತಾ ಎಸ್ಪಿ ಹರಿರಾಮಶಂಕರ್‌ ಅವರೊಂದಿಗೆ ಧ್ವಜಾರೋಹಣ ನೆರವೇರಿಸಿದರು.
ಹಾಸನ ಎಸ್ಪಿ ಕಚೇರಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಯುವತಿ ಸಂಗೀತಾ ಎಸ್ಪಿ ಹರಿರಾಮಶಂಕರ್‌ ಅವರೊಂದಿಗೆ ಧ್ವಜಾರೋಹಣ ನೆರವೇರಿಸಿದರು.

ಹಾಸನ: ಭಾರತ ಅಮೃತ ವರ್ಷವನ್ನು ದಾಟಿ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುತ್ತಿದೆ.‌ ಇನ್ನೂ ಸಮಾಜದಲ್ಲಿ ಸಮಾನತೆಯ ಚರ್ಚೆಗಳು ಇರುವಾಗಲೇ ಹಾಸನದಲ್ಲಿ ವಿಭಿನ್ನ ಸ್ವಾತಂತ್ರೋತ್ಸವದ ಕ್ಷಣ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಿಳಾ ಸಬಲೀಕರಕ್ಕೆ ಒತ್ತು ನೀಡಿ ದೇಶವನ್ನುದ್ದೇಶಿಸಿ ಮಾತನಾಡಿದ ಮರುದಿನವೇ ಹಾಸನದಲ್ಲಿ ಹಕ್ಕಿಪಿಕ್ಕಿ ಜನಾಂಗದ ಯುವತಿಯೊಬ್ಬಳು ತನ್ನ ಸಾಧನೆಯಿಂದ ಸ್ವಾತಂತ್ರ್ರೋತ್ಸವದ ಅತಿಥಿಯಾಗಿ ಧ್ವಜಾರೋಹಣ ನಡೆಸಿ ಗಮನ ಸೆಳೆದರು.ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಐಪಿಎಸ್‌ ಅಧಿಕಾರಿಯಾಗಿರುವ ಹಾಸನ ಎಸ್ಪಿ ಹರಿರಾಮಶಂಕರ್‌. ಇಂತಹದೊಂದು ಪ್ರಯತ್ನಕ್ಕೆ ಎಸ್ಪಿ ಜತೆಗೆ ಕರ್ನಾಟಕ ಪೊಲೀಸರ ಬಗ್ಗೆಯೂ( Karnataka police) ಮೆಚ್ಚುಗೆಯೂ ವ್ಯಕ್ತವಾಯಿತು.

ಟ್ರೆಂಡಿಂಗ್​ ಸುದ್ದಿ

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ರೈತನ ಮಗಳು ಅಂಕಿತಾ ಬಸಪ್ಪ ಕೊಣ್ಣೂರು ರಾಜ್ಯಕ್ಕೆ ಪ್ರಥಮ; ಬಡತನದಲ್ಲಿ ಅರಳಿದ ಪ್ರತಿಭೆ

ಅಕ್ಷಯ ತೃತೀಯ 2024ರ ಕೊಡುಗೆ, ಯಾವ ಜುವೆಲ್ಲರ್ಸ್ ಏನು ಆಫರ್, ಉಚಿತ ಚಿನ್ನ ಬೆಳ್ಳಿ ನಾಣ್ಯ, ಮೇಕಿಂಗ್ ಚಾರ್ಜ್‌ ವಿನಾಯಿತಿ ಸೇರಿ ಹಲವು ಆಫರ್‌

SSLC Result 2024: ತುಮಕೂರು ಜಿಲ್ಲೆಯ ಶಿರಾ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ; 625ಕ್ಕೆ 624 ಅಂಕ ಗಳಿಸಿದ ಹರ್ಷಿತಾ

ವಿಧಾನ ಪರಿಷತ್ ಚುನಾವಣೆ; ಮೇಲ್ಮನೆಯ 6 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ, ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು, ಮೈತ್ರಿ ಗೊಂದಲ ಬಿಜೆಪಿಗೆ

ಹೀಗಿತ್ತು ಧ್ವಜಾರೋಹಣ

ಸಹಜವಾಗಿ ಎಸ್ಪಿ, ಡಿಸಿ ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳೋ ಅಥವಾ ನಿವೃತ್ತ ಅಧಿಕಾರಿಗಳಿಂದ ಧ್ವಜಾರೋಹಣ ಮಾಡಿಸಲಾಗುತ್ತದೆ. ಕೆಲವೊಮ್ಮೆ ನಿವೃತ್ತ ಸೇನಾಧಿಕಾರಿಯೋ, ಸ್ವಾತಂತ್ರ್ಯ ಹೋರಾಟಗಾರರು ಭಾಗಿಯಾಗಬಹುದು. ಈ ಬಾರಿ ವಿಭಿನ್ನ ಸಾಧಕರನ್ನು ಕರೆತರಬೇಕು ಎಂದು ಎಸ್ಪಿ ಸೂಚಿಸಿದ್ದರು. ಅದರಂತೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಾಧಕರನ್ನು ಹುಡುಕುವ ಪ್ರಯತ್ನವನ್ನು ಪೊಲೀಸರು ಮಾಡಿದ್ದರು. ಬೇಲೂರು ತಾಲ್ಲೂಕಿನ ಹಗರೆ ಸಮೀಪದ ಅಂಗಡಿಹಳ್ಳಿ ಗ್ರಾಮದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣಳಾದ ಯುವತಿ ಸಂಗೀತಾ ಇದ್ಧಾಳೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಪ್ರಥಮ ಸ್ಥಾನ ಪಡೆದ ಮೊದಲಿಗಳು. ಈಗಾಗಲೇ ಹಗರೆ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದರು. ಆಕೆಯನ್ನೇ ಧ್ವಜಾರೋಹಣ ದಿನದ ಅತಿಥಿಯಾಗಿಸಲು ಎಸ್ಪಿ ಹರಿರಾಮಶಂಕರ್‌ ಸೂಚಿಸಿದ್ದರು. ಅದರಂತೆ ಆಕೆಗೆ ಮೊದಲೇ ತಿಳಿಸಿ ವಿಶೇಷ ವ್ಯವಸ್ಥೆ ಕಲ್ಪಿಸಿ ಕಾರ್ಯಕ್ರಮಕ್ಕೆ ಕರೆತರಲಾಗಿತ್ತು.

ಸಂತಸದ ಕ್ಷಣ

ಹಾಸನ ಎಸ್ಪಿ ಕಚೇರಿಯಲ್ಲಿ ಅದೊಂದು ವಿಭಿನ್ನ ಕ್ಷಣ. ಪೊಲೀಸ್‌ ಕಚೇರಿ ಎಂದರೆ ಈಗಲೂ ಜನಸಾಮಾನ್ಯರು ಬರಲು ಹೆದರುವ ಸನ್ನಿವೇಶ ಇದೆ. ಇನ್ನು ಎಸ್ಪಿ ಕಚೇರಿ ಎಂದರೆ ಸಾಮಾನ್ಯರು ಅತ್ತ ಕಡೆ ಬರುವುದೂ ಇಲ್ಲ. ಇಂತಹ ವಾತಾವರಣ ಇರುವಾಗ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹೆಮ್ಮೆ ಪಡುವ ಸಂಗತಿಯೇ ಆಗಿತ್ತು. ಹಾಸನ ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗದ ಪ್ರತಿಭಾವಂತ ಯುವತಿ ಅಲ್ಲಿಗೆ ಬಂದಿದ್ದಳು. ಎಸ್ಪಿ ಕಚೇರಿಗೆ ಮೊದಲ ಬಾರಿಗೆ ಬಂದ ಪುಳಕದಲ್ಲಿದ್ದ ಆಕೆಯ ಸಂತಸಕ್ಕೆ ಪಾರವೇ ಇರಲಿಲ್ಲ. ಎಸ್ಪಿ ಕಚೇರಿಯ ಸಿಬ್ಬಂದಿ ಆಕೆಯನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಎಸ್ಪಿ ಕಚೇರಿಯಲ್ಲಿ ಕೆಲ ಹೊತ್ತು ಕಳೆದ ಆಕೆ ಎಸ್ಪಿ ಹರಿರಾಮಶಂಕರ್‌ ಹಾಗೂ ಅವರ ಪತ್ನಿ ಜತೆಗೂಡಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್‌ ಸಿಬ್ಬಂದಿ ರಾಷ್ಟ್ರಗೀತೆ ನುಡಿಸಿದಾಗ ಅದಕ್ಕೂ ಗೌರವ ಸಲ್ಲಿಸಿದಳು. ಸಂಗೀತ ಹಾಗೂ ಆಕೆಯ ಇಡೀ ಕುಟುಂಬಕ್ಕೆ ಈ ಗಳಿಗೆ ಸಂತಸದ್ದಾಗಿರಲಿಲ್ಲ. ಜತೆಗೆ ಎಸ್ಪಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಅವರ ಪರಿವಾರದವರೂ ಇಂತಹದೊಂದು ಸನ್ನಿವೇಶ ಕಂಡು ಪುಳಕಿತರಾದರು. ಎಸ್ಪಿ ಅವರ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.

ಇಡೀ ಕುಟುಂಬ ಭಾಗಿ

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಗರೆ ಸಮೀಪದ ಅಂಗಡಿಹಳ್ಳಿ ಗ್ರಾಮದಲ್ಲಿ ಮೂರುನೂರಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳಿವೆ. ಹಲವಾರು ವರ್ಷಗಳಿಂದ ಇಲ್ಲಿ ನೆಲೆಸಿರುವ ಕುಟುಂಬದವರು ವ್ಯಾಪಾರ ಮಾಡುತ್ತಾರೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಶಿಕ್ಷಣ ದೊರೆತು ಅವರು ಮುಖ್ಯವಾಹಿನಿಗೆ ಬರಬೇಕು ಎನ್ನುವ ಆಶಯ ಹೊಂದಿರುವ ಹಕ್ಕಿಪಿಕ್ಕಿ ಕುಟುಂಬದವರಿಗೆ ಗ್ರಾಮದ ಹರೀರ ಹಾಗೂ ಮಂಜುಳಾ ಅವರ ಪುತ್ರಿ ಸಂಗೀತಾ ಸಾಧನೆ ಹೆಮ್ಮೆ ತಂದಿದೆ. ಆಕೆಗೆ ಎಸ್ಪಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ತೆರಳುತ್ತಿದ್ದಾಳೆ ಎನ್ನುವ ಖುಷಿಯಲ್ಲಿ ಕುಟುಂಬದ ಬಹುತೇಕರು ಹಾಸನಕ್ಕೆ ಬಂದಿದ್ದರು. ಈ ಕ್ಷಣವನ್ನು ಅಲ್ಲಿಯೇ ಇದ್ದು ಕಣ್ತುಂಬಿಕೊಂಡರು. ನಂತರ ಎಸ್ಪಿ ಕಚೇರಿ ಆತಿಥ್ಯವನ್ನೂ ಸ್ವೀಕರಿಸಿ ಖುಷಿಯಿಂದಲೇ ತೆರಳಿದರು.

ನಮ್ಮೂರಿನ ಬಾಲಕಿಯನ್ನು ಧ್ವಜಾರೋಹಣಕ್ಕೆ ಎಸ್ಪಿ ಅವರು ಆಹ್ವಾನಿಸಿದ್ದು ಖುಷಿ ನೀಡಿದೆ. ಇದು ನಿಜಕ್ಕೂ ನಮ್ಮ ಊರಿಗೆ, ಸಮುದಾಯಕ್ಕೆ ಹೆಮ್ಮೆಯ ಕ್ಷಣ. ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ, ಕುಟುಂಬದವರ ನಡುವೆ ಆಕೆ ಧ್ವಜಾರೋಹಣ ನಡೆಸಿದ್ದನ್ನು ಕಂಡು ಪುಳಕಿತರಾದೆವು ಎಂದು ಹಕ್ಕಿಪಿಕ್ಕಿಸಮುದಾಯದ ಹಿರಿಯರಾದ ಸತ್ಯರಾಜ್‌ ಹೇಳಿಕೊಂಡರು.

ಕೇರಳ( Kerala) ಮೂಲದ ಹರಿರಾಮಶಂಕರ್

ಕೇರಳ ಮೂಲದವರಾದ ಹರಿರಾಮಶಂಕರ್‌ ಕರ್ನಾಟಕ ಕೆಡರ್‌ನ 2016ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಏಳು ವರ್ಷದಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಕುಂದಾಪುರ ಎಎಸ್ಪಿಯಾಗಿದ್ದ ಹರಿರಾಮಶಂಕರ್‌ ಅಲ್ಲಿ ಒಂದೂವರೆ ವರ್ಷ ಇದ್ದವರು. ಆನಂತರ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥ ಡಿಸಿಪಿಯಾಗಿಯೂ ಉತ್ತಮ ಕೆಲಸ ಮಾಡಿದವರು. ಬಳಿಕ ಅವರನ್ನು ವರ್ಷದ ಹಿಂದೆ ಹಾಸನ ಎಸ್ಪಿಯಾಗಿ ನೇಮಿಸಲಾಗಿದೆ.

ಹರಿರಾಮ್ ಶಂಕರ್ ಕೇರಳದ ತ್ರಿಶೂರ್ ಮೂಲದವರು. ಹರಿರಾಮ ಎನ್ ಐಟಿ ಕ್ಯಾಲಿಕಟ್ ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತ್ರಿಶೂರ್ ದ ಸೇಂಟ್ ಪಾಲ್ಸ್ ಶಾಲೆಯಲ್ಲಿ ಮತ್ತು ಮಾಧ್ಯಮಿಕ ಶಾಲೆಯನ್ನು ತ್ರಿಶೂರ್ ಜಿಲ್ಲೆಯ ಪೂಚಟ್ಟಿಯಲ್ಲಿರುವ ಭಾರತೀಯ ವಿದ್ಯಾಭವನದ ವಿದ್ಯಾ ಮಂದಿರದಲ್ಲಿ ಪೂರೈಸಿದ್ದಾರೆ. ನಂತರ ಕೆಲ ದಿನ ಎಂಜಿನಿಯರ್‌ ಆಗಿ ಕೆಲಸ ಮಾಡಿ ಐಪಿಎಸ್‌ ಅಧಿಕಾರಿಯಾಗಬೇಕೆಂಬ ಛಲದೊಂದಿಗೆ ಐದನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಸೇವೆಯಲ್ಲಿದ್ದಾರೆ. ಕಾರ್ಯದಕ್ಷತೆಗೂ ಹೆಸರಾದ ಹರಿರಾಮಶಂಕರ್‌ ಇಂತಹ ಮಾನವೀಯ ಚಟುವಟಿಕೆ ಮೂಲಕವೂ ಗಮನ ಸೆಳೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು