ಕೆಎಲ್ ರಾಹುಲ್ ಮೇಲೆ ಕೂಗಾಡಿದ ಸಂಜೀವ್ ಗೋಯೆಂಕಾ; ಹಣ ಶಿಷ್ಟಾಚಾರ ಕಲಿಸಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ
KL Rahul vs Sanjev Goenka : 17ನೇ ಆವೃತ್ತಿಯ ಐಪಿಎಲ್ನ 57ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ನಾಯಕ ಕೆಎಲ್ ರಾಹುಲ್ ಮೇಲೆ ಕೂಗಾಡಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (SRH vs LSG) 10 ವಿಕೆಟ್ಗಳ ಹೀನಾಯ ಸೋಲಿಗೆ ಶರಣಾಯಿತು. ಇದರೊಂದಿಗೆ ಪ್ಲೇಆಫ್ ಹಾದಿ ಮತ್ತಷ್ಟು ದುರ್ಗಮವಾಯಿತು. ಆದರೆ ಪಂದ್ಯದ ನಂತರ ನಾಯಕ ಕೆಎಲ್ ರಾಹುಲ್ (KL Rahul) ಅವರನ್ನು ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ (Sanjeev Goenka) ತರಾಟೆ ತೆಗೆದುಕೊಂಡಿದ್ದಾರೆ. ಕಳಪೆ ಬ್ಯಾಟಿಂಗ್ ಮತ್ತು ಕಳಪೆ ಬೌಲಿಂಗ್ ಪ್ರದರ್ಶನಕ್ಕೆ ಅಸಮಾಧಾನ ಹೊರ ಹಾಕಿರುವ ಮಾಲೀಕ, ಕಟುವಾಗಿ ವಾಗ್ದಂಡನೆ ನೀಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೇ 8ರಂದು ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್, ಆರಂಭದಿಂದಲೂ ಬ್ಯಾಟಿಂಗ್ನಲ್ಲಿ ತೀವ್ರ ವೈಫಲ್ಯ ಅನುಭವಿಸಿತು. ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿತು. ಆಯುಷ್ ಬದೋನಿ 55* ಮತ್ತು ನಿಕೋಲಸ್ ಪೂರನ್ 48* ರನ್ ಗಳಿಸಿ ಗಮನ ಸೆಳೆದರು. 166 ರನ್ಗಳ ಗುರಿ ಬೆನ್ನಟ್ಟಿದ ಎದುರಾಳಿ ಸನ್ರೈಸರ್ಸ್ ಹೈದರಾಬಾದ್, ಎಲ್ಎಸ್ಜಿ ಬೌಲರ್ಗಳನ್ನು ಚಿಂದಿ ಉಡಾಯಿಸಿತು. ಅಭಿಷೇಕ್ ಶರ್ಮಾ 75* ಮತ್ತು ಟ್ರಾವಿಸ್ ಹೆಡ್ 89* ರನ್ ಚಚ್ಚಿ ಅಜೇಯರಾಗಿ ಉಳಿದರು. ಆ ಮೂಲಕ ಎಸ್ಆರ್ಹೆಚ್ಗೆ 10 ವಿಕೆಟ್ಗಳ ಅಮೋಘ ಗೆಲುವು ತಂದುಕೊಟ್ಟರು. 9.4 ಓವರ್ಗಳಲ್ಲೇ ಪಂದ್ಯ ಫಿನಿಷ್ ಮಾಡಿದರು.
ರಾಹುಲ್ಗೆ ಸಂಜೀವ್ ಗೋಯೆಂಕಾ ತರಾಟೆ
ಪಂದ್ಯ ಮುಕ್ತಾಯದ ಬೆನ್ನಲ್ಲೇ ಕ್ಯಾಪ್ಟನ್ ಕೆಎಲ್ ರಾಹುಲ್ ಅವರು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾದರು. ಆದರೆ ಈ ವೇಳೆ ತಂಡದ ಕೆಟ್ಟ ಪ್ರದರ್ಶನದ ಕುರಿತು ಫ್ರಾಂಚೈಸ್ನ ಮಾಲೀಕ ಗೋಯೆಂಕಾ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕವಾಗಿ ಮತ್ತು ಕ್ಯಾಮರಾಗಳ ಮುಂದೆಯೇ ರಾಹುಲ್ ವಿರುದ್ಧ ಕಿಡಿಕಾರಿದ್ದಾರೆ. ಇದ ಪಂದ್ಯದಲ್ಲಿ ನಾಯಕನ ನಿರ್ಧಾರ ಮಾಲೀಕರಿಗೆ ಇಷ್ಟವಾಗಲಿಲ್ಲ ಎಂಬಂತೆ ಕಾಣುತ್ತದೆ. ಮೈದಾನದಲ್ಲಾದ ತಪ್ಪುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಫ್ರಾಂಚೈಸ್ ಮಾಲೀಕರು ಕೋಪದಿಂದ ಮಾತನಾಡುತ್ತಿದ್ದರೆ, ಕೆಎಲ್ ರಾಹುಲ್ ಮಾತ್ರ ಅತ್ಯಂತ ಬೇಸರದೊಂದಿಗೆ ಉತ್ತರ ಕೊಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿವಾದಕ್ಕೂ ಕಾರಣವಾಗಿದೆ. ಪಂದ್ಯದ ನಡುವೆಯೇ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸಂಜೀವ್ ಗೋಯೆಂಕಾ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಎಸ್ಆರ್ಹೆಚ್ ಬ್ಯಾಟಿಂಗ್ ವೇಳೆ ಈ ಆಕ್ರೋಶ ಇನ್ನಷ್ಟು ಹೆಚ್ಚಾಗಿತ್ತು. ಮಾಲೀಕರ ನಡೆಯಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಗೋಯೆಂಕಾ ವಿರುದ್ಧ ಅಭಿಮಾನಿಗಳು ಬೇಸರ
ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ನಡೆಗೆ ಕ್ರಿಕೆಟ್ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಕ್ರಿಕೆಟ್ ಬಗ್ಗೆ ಏನೂ ತಿಳಿಯದ ನೀವು ಟೀಮ್ ಕ್ಯಾಪ್ಟನ್ ಮೇಲೆ ಕೂಗಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್. ಅದರಲ್ಲೂ ನಿಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಬದಲು ಡ್ರೆಸ್ಸಿಂಗ್ನಲ್ಲಿ ಮಾತನಾಡಬೇಕಿತ್ತು. ಇದು ನಿಮ್ಮ ಘನತೆಯನ್ನೂ ಉಳಿಸುತ್ತಿತ್ತು. ಆಟವೆಂದ ಮೇಲೆ ಗೆಲುವು-ಸೋಲು ಸಹಜ. ಹಾಗಂತ ಆಟಗಾರರನ್ನು ನಿಂದಿಸುವ ಹಕ್ಕು ನಿಮಗಿಲ್ಲ ಎಂದಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.