ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋತವರು ಮನೆಗೆ; ಆರ್ಸಿಬಿ vs ಪಿಬಿಕೆಎಸ್ ಸಂಭಾವ್ಯ ತಂಡ, ಹವಾಮಾನ ಹಾಗೂ ಪಿಚ್ ವರದಿ
RCB vs PBKS : 2024ರ ಐಪಿಎಲ್ನ 58ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್, ಪಿಚ್ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ.
17ನೇ ಆವೃತ್ತಿಯ ಐಪಿಎಲ್ನ 58ನೇ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು (Punjab Kings vs Royal Challengers Bengaluru) ಮುಖಾಮುಖಿಯಾಗುತ್ತಿವೆ. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದುಕೊಂಡಿದ್ದು, ಗೆದ್ದವರಿಗೆ ಪ್ಲೇಆಫ್ ಆಸೆಯನ್ನು ಜೀವಂತವಾಗಿರಲಿದೆ. ಸೋತ ತಂಡವು ಮುಂಬೈ ಇಂಡಿಯನ್ಸ್ ನಂತರ 2ನೇ ತಂಡವಾಗಿ ಎಲಿಮಿನೇಟ್ ಆಗಲಿದೆ.
ಆರ್ಸಿಬಿ ಮತ್ತು ಪಂಜಾಬ್ ತಂಡಗಳು ತಲಾ 11 ಪಂದ್ಯಗಳನ್ನು ಆಡಿದ್ದು, 7ರಲ್ಲಿ ಸೋಲು, 4ರಲ್ಲಿ ಗೆದ್ದಿವೆ. ಒಟ್ಟು 8 ಅಂಕ ಸಂಪಾದಿಸಿವೆ. ಆದರೆ, ನೆಟ್ರನ್ರೇಟ್ನಲ್ಲಿ ಆರ್ಸಿಬಿ (-0.049), ಪಿಬಿಕೆಎಸ್ಗಿಂತ (-0.187) ಕೊಂಚ ಮುಂದಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 10 ಅಂಕ ಪಡೆದು ಪ್ಲೇಆಫ್ ರೇಸ್ನಲ್ಲಿ ಉಳಿದ ತಂಡಗಳಿಗೆ ತೀವ್ರ ಪೈಪೋಟಿ ನೀಡಿದರೆ, ಸೋತ ತಂಡವು ಗಂಟುಮೂಟೆ ಕಟ್ಟಬೇಕಾಗುತ್ತದೆ. ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಪಿಚ್ ರಿಪೋರ್ಟ್, ವೆದರ್ ರಿಪೋರ್ಟ್ ಇಲ್ಲಿದೆ.
ಆರ್ಸಿಬಿ ಲಯಕ್ಕೆ ಮರಳಿದೆ. ಕಳೆದ ಐದು ಪಂದ್ಯಗಳಿಂದ ಭಯಾನಕ ಫಾರ್ಮ್ನಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆರ್ಸಿಬಿ ಪರಾಕ್ರಮ ತೋರುತ್ತಿದೆ. ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಡು ಪ್ಲೆಸಿಸ್, ವಿಲ್ ಜಾಕ್ಸ್, ರಜತ್ ಪಾಟೀದಾರ್ ಮತ್ತು ಬೌಲಿಂಗ್ನಲ್ಲಿ ಸಿರಾಜ್, ಯಶ್ ದಯಾಳ್, ವಿಜಯ್‌ಕುಮಾರ್ ಫಾರ್ಮ್ ಮುಂದುವರೆಸಿದರೆ, ಪಂಜಾಬ್ ವಿರುದ್ಧವೂ ಜಯ ಸಾಧಿಸುವುದು ಪಕ್ಕಾ. ಹ್ಯಾಟ್ರಿಕ್ ಜಯ ಸಾಧಿಸಿರುವ ಆರ್ಸಿಬಿ, ಸತತ 4ನೇ ಗೆಲುವಿನ ಕಣ್ಣಿಟ್ಟಿದೆ.
ಶಿಖರ್ ಧವನ್ ಈ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ. ಕಳೆದ ಕೆಲ ಪಂದ್ಯಗಳಲ್ಲಿ ಪ್ರಭುಸಿಮ್ರಾನ್ ಸಿಂಗ್ ಮತ್ತು ಜಾನಿ ಬೈರ್‌ಸ್ಟೋ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೊನೆಯಲ್ಲಿ ಅಶುತೋಷ್ ಶರ್ಮಾ-ಶಶಾಂಕ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವುದು ತಂಡದ ಬಲ ಹೆಚ್ಚಿಸಿದೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ, ಸ್ಯಾಮ್ ಕರನ್ ಒಂದು ಪಂದ್ಯದಲ್ಲೂ ಮಿಂಚಲಿಲ್ಲ. ಈ ಪಂದ್ಯಕ್ಕೆ ಲಿಯಾಮ್ ಲಿವಿಂಗ್ಸ್ಟೋನ್ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆದರೆ ಸಿಕ್ಕ ಅವಕಾಶದಲ್ಲಿ ಲಿವಿಂಗ್ಸ್ಟೋನ್ ವಿಫಲರಾಗಿದ್ದಾರೆ. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ ಹೊರತುಪಡಿಸಿ ಉಳಿದವರು ವೈಫಲ್ಯ ಅನುಭವಿಸಿದ್ದಾರೆ.
ಆರ್ಸಿಬಿ ಪ್ಲೇಯಿಂಗ್ XI
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್, ಯಶ್ ದಯಾಳ್ (ಇಂಪ್ಯಾಕ್ಟ್ ಪ್ಲೇಯರ್)
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
ಪ್ರಭ್‌ಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಲೀ ರೊಸೋ/ಲಿಯಾಮ್ ಲಿವಿಂಗ್ಸ್ಟೋನ್, ಅಶುತೋಷ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್), ಸ್ಯಾಮ್ ಕರನ್ (ನಾಯಕ), ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹರ್, ಅರ್ಷದೀಪ್ ಸಿಂಗ್.
ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 32
ಪಿಬಿಕೆಎಸ್ ಗೆಲುವು - 17
ಆರ್ಸಿಬಿ ಗೆಲುವು - 15
ಪಿಚ್ ರಿಪೋರ್ಟ್
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ಅತ್ಯಂತ ಸೌಂದರ್ಯವಾದ ಮೈದಾನವಾಗಿದೆ. ಸಮುದ್ರ ಮಟ್ಟದಿಂದ 1317 ಮೀಟರ್ ಎತ್ತರದಲ್ಲಿರುವ ಎಚ್‌ಪಿಸಿಎ, ಅಡಿಲೇಡ್ ಓವಲ್, ನ್ಯೂಜಿಲೆಂಡ್ ಮೈದಾನಗಳಂತೆ ಅತ್ಯಂತ ರಮಣೀಯವಾಗಿದೆ. ಇಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದು, ನಾಯಕರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಒಮ್ಮೆ ಮಾತ್ರ ಪಂದ್ಯವನ್ನು ಗೆದ್ದಿದ್ದಾರೆ.
ಈ ಋತುವಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು 167 ರನ್ಗಳಿಗೆ ಪಿಬಿಕೆಎಸ್ ಆಲೌಟ್ ಮಾಡಿತ್ತು. ಆದರೆ ಪಂಜಾಬ್ 9ಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಿಚ್ ಬೌಲರ್‌ಗಳಿಗೆ, ಸೀಮರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಸಹಾಯವಾಗಲಿದೆ. ಬ್ಯಾಟರ್ಗಳು ಕೊಂಚ ರನ್ ಗಳಿಸಲು ಪರದಾಟ ನಡೆಸುವ ಸಾಧ್ಯತೆ ಇದೆ. ಈ ಮೈದಾನದ ಪ್ರೇಕ್ಷಕರ ಸಾಮರ್ಥ್ಯ 23 ಸಾವಿರ.
ಹವಾಮಾನ ವರದಿ
ಧರ್ಮಶಾಲಾ ಹವಾಮಾನ ಮುನ್ಸೂಚನೆಯು ಕ್ರಿಕೆಟ್ ಫ್ಯಾನ್ಸ್ಗೆ ಗುಡ್ನ್ಯೂಸ್ ನೀಡಿದೆ. ಆಕಾಶದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯ ಮುನ್ಸೂಚನೆ ಇರುವುದಿಲ್ಲ. ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಸುಳಿದಾಡುತ್ತದೆ ಎಂದು ಯೋಜಿಸಲಾಗಿದೆ. ಇದು ಆಟಗಾರರು ಮತ್ತು ಪ್ರೇಕ್ಷಕರಿಗೆ ಆಹ್ಲಾದಕರ ವಾತಾವರಣ ಖಾತ್ರಿಪಡಿಸುತ್ತದೆ. ಮಳೆಯ ಆತಂಕವಿಲ್ಲದೆ ಪಂದ್ಯ ಸಂಪೂರ್ಣ ನಡೆಯಲಿದೆ.
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.