logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ನಮ್ ಕಡೆ ಇದ್ರೆ ಕರಪ್ಟ್ ಅವರ್ ಕಡೆ ಇದ್ರೆ ಕರೆಕ್ಟ್; ಪ್ರಧಾನಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Kalaburagi News: ನಮ್ ಕಡೆ ಇದ್ರೆ ಕರಪ್ಟ್ ಅವರ್ ಕಡೆ ಇದ್ರೆ ಕರೆಕ್ಟ್; ಪ್ರಧಾನಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Praveen Chandra B HT Kannada

Feb 22, 2024 07:04 AM IST

google News

ಪ್ರಧಾನಿ ನರೇಂದ್ರ ಮೋದಿ - ಮಲ್ಲಿಕಾರ್ಜುನಾ ಖರ್ಗೆ

    • Kalburgi news: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯವರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ದೇಶದಲ್ಲಿ ಸರ್ವಾಧಿಕಾರದ ಆಡಳಿತ ತರಬೇಕು ಎನ್ನುವುದು ಮೋದಿ ಉದ್ದೇಶ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ - ಮಲ್ಲಿಕಾರ್ಜುನಾ ಖರ್ಗೆ
ಪ್ರಧಾನಿ ನರೇಂದ್ರ ಮೋದಿ - ಮಲ್ಲಿಕಾರ್ಜುನಾ ಖರ್ಗೆ

ಕಲಬುರಗಿ: ವಿರೋಧ ಪಕ್ಷಗಳಲ್ಲಿ ಇರುವ ಮುಖಂಡರನ್ನು ಹೆದರಿಸಿ ತಮ್ಮ ಕಡೆ ಸೆಳೆದುಕೊಳ್ತಿರೋ ಪ್ರಧಾನಿ ಮೋದಿ, ‘ನಮ್ಮ ಕಡೆ ಇದ್ದಾಗ ಕರಪ್ಟ್, ಅವರ್ ಕಡೆ ಹೋದಾಗ ಕರೆಕ್ಟ್’ ಅಂತನ್ನುವ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಡಿಕ್ಟೇಟರ್ ಶಿಪ್ ತರಬೇಕು ಅನ್ನೋದು ಮೋದಿಯವರ ಉದ್ದೇಶವಾಗಿದ್ದು, ಇದು ದೇಶದ ಭವಿಷ್ಯದ ದೃಷ್ಟಿಯಿಂದ ತುಂಬಾ ಅಪಾಯಕಾರಿ ಎಂದು ವ್ಯಾಖ್ಯಾನಿಸಿದರು. ದೇಶದಲ್ಲಿ 545 ಪಾರ್ಲಿಮೆಂಟ್ ಸೀಟ್ಸ್ ಇವೆ. ಎಲ್ಲವನ್ನೂ ನಾವೇ ಗೆಲ್ತೀವಿ ಅಂತಾರೆ. ಮೋದಿಯವರ ಈ ನಡುವಳಿಕೆ ಮತ್ತು ಪ್ರಜಾಪ್ರಭುತ್ವದ ಕುರಿತು ಅವರಿಗೆ ಇರುವ ಅಭಿಪ್ರಾಯ ಸರಿಯಿಲ್ಲ ಎಂದರು.

ದೇಶದಲ್ಲಿ ಸರ್ವಾಧಿಕಾರದ ಆಡಳಿತ ತರಬೇಕು ಅನ್ನೋದು ಪ್ರಧಾನಿ ಮೋದಿಯವರ ಉದ್ದೇಶವಾಗಿದ್ದು, ಇದನ್ನು ದೇಶದ ಜನರು ಅರ್ಥ ಮಾಡಿಕೊಳ್ಳಬೇಕು. ಮೋದಿ ಇದ್ದರೆ ಮಾತ್ರ ದೇಶ ನಡೆಯುತ್ತೆ ಅಂತ ಕೆಲವರು ತಿಳ್ಕೊಂಡಿದ್ದಾರೆ. ಆದರೆ, ಮೋದಿಗಿಂತಲೂ ಮೊದಲು ದೇಶದಲ್ಲಿ ಯಾರೂ ಪ್ರಧಾನಮಂತ್ರಿಗಳು ಇರಲಿಲ್ಲವಾ? ಎಂದು ಮರುಪ್ರಶ್ನೆ ಹಾಕಿದರು.

ಈ ಮೊದಲಿನ ಸರಕಾರಗಳಲ್ಲಿ ಬಡವರ ಬಗ್ಗೆ ಅನುಕಂಪ ಇರುವ ಆಡಳಿತ ಇತ್ತು. ಈಗೇನಿದ್ದರೂ ಕೇವಲ ಜಾಹೀರಾತು ಸರಕಾರವಿದೆ. ಟಿವಿ, ಪೇಪರ್ ಸೇರಿದಂತೆ ಎಲ್ಲಿಯೇ ನೋಡಿದರೂ ಮೋದಿ ಫೋಟೊ ಇಲ್ಲದೆ ಏನೂ ಇರಲ್ಲ. ಪ್ರಧಾನಿ ಮೋದಿ ರೀತಿ ನಮಗೆ ಸುಳ್ಳು ಹೇಳೋಕೆ ಆಗಲ್ಲ ಎಂದು ಟಾಂಗ್ ನೀಡಿದರು. ಎರಡು ಕೋಟಿ ಉದ್ಯೋಗ ಕೊಡೋದಾಗಿ ಮೋದಿ ಭರವಸೆ ಕೊಟ್ಟಿದ್ದರು. ಆದರೆ ಈವರೆಗೆ ಒಬ್ಬನೇ ಒಬ್ಬ ಪಕೋಡ ಮಾರೋನಿಗೂ ನೌಕರಿ ಸಿಕ್ಕಿಲ್ಲ ಎಂದು ಕಿಚಾಯಿಸಿದರು.

ಚಂಡಿಗಢ ಮುನ್ಸಿಪಲ್ ಚುನಾವಣೆ ಬಗ್ಗೆ ಸುಪ್ರಿಂಕೋರ್ಟ್ ನೀಡಿದ ಆದೇಶ ಕುರಿತು ಪ್ರಸ್ತಾಪಿಸಿದ ಅವರು, ಪಾರ್ಲಿಮೆಂಟ್ ಹಾಗೂ ಅಸೆಂಬ್ಲಿ ಎಲೆಕ್ಷನ್ ಗೆಲ್ಲೋದಕ್ಕೆ ಮೋದಿ ಸರಕಾರ ಏನು ಬೇಕಾದ್ರೂ ಮಾಡುತ್ತೆ ಅನ್ನೋದಕ್ಕೆ ಚಂಡಿಗಢ ಒಂದು ನಿದರ್ಶನ ಮಾತ್ರ. ದೆಹಲಿ ಸಮೀಪದಲ್ಲೇ ಪರಿಸ್ಥಿತಿ ಹೀಗಿದೆ ಅನ್ನೋದಾದ್ರೆ ಇಂಟೀರಿಯರ್ ಏರಿಯಾಗಳಲ್ಲಿ ಏನ್ ಬೇಕಾದ್ರೂ ಮಾಡಬಹುದು ಅನ್ನೋದು ಸಿದ್ಧವಾಗಿದೆ ಎಂದು ವ್ಯಾಖ್ಯಾನಿಸಿದರು

ವರದಿ: ಮಹೇಶ್ ಕುಲಕರ್ಣಿ

ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ: ಸಿ.ಎಂ

ಬೆಂಗಳೂರು: ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ವಿಧಾನ‌ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವಾಗ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿವರಿಸುವಾಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಬಿಸಿ ಬಿಸಿ ವಾಗ್ವಾದ ನಡೆಯಿತು.

ಕೇಂದ್ರದಲ್ಲಿ ಯುಪಿಐ ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಮೋದಿಯವರು, ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿದ್ದ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ, ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ. ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ50 ರಷ್ಟು ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎನ್ನುವ ಮಾತನ್ನೂ ಮೋದಿ ಅವರು ಆಡಿದ್ದರು. ಆದರೆ ಈಗ ಅದೇ ಮೋದಿ ಅವರು ಪ್ರಧಾನಿ ಆಗಿರುವಾಗ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಶೇ 12-13 ರಷ್ಟು ಮಾತ್ರ. ಮೋದಿ ಅವರು ಆಗೊಂದು ಮಾತು ಈಗೊಂದು ರೀತಿ ಮಾತನಾಡಿದ್ದಾರೆ. ಇದನ್ನು ಪ್ರಸ್ತಾಪಿಸಿದರೆ ನಿಮಗೇಕೆ ಸಿಟ್ಟು ಎಂದು ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.

ನಾವು ಕೊಡುವ ಪ್ರತಿ 100 ರೂಪಾಯಿಗೆ ಕೇವಲ 12 ರೂ ವಾಪಾಸ್ ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ? ಇಷ್ಟು ಕಡಿಮೆ ಪಾಲು ನಮಗೆ ಕೊಟ್ಟರೆ ರಾಜ್ಯದ ಶೂದ್ರರು, ದಲಿತರು, ಆದಿವಾಸಿಗಳು, ದುಡಿಯುವವರು, ಶ್ರಮಿಕರು, ಯುವಕರ, ಮಹಿಳೆಯರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣದ ಪಾಲು ಅನ್ಯಾಯವಾದುದು.2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,44,213 ಕೋಟಿ ಇತ್ತು. ಅಂದು ರಾಜ್ಯಕ್ಕೆ 51000 ಕೋಟಿ ಮಾತ್ರ ಬಂತು. 2020-21 ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 30,42,243 ಕೋಟಿ ಇದ್ದರೆ ನಮಗೆ ಬಂದಿದ್ದು 31734ಕೋಟಿ ರೂ., 2021-22 ರಲ್ಲಿ 34,83,236 ಕೋಟಿ ಗಾತ್ರದ ಬಜೆಟ್ ಗೆ , ರಾಜ್ಯಕ್ಕೆ 48589 ಕೋಟಿ ಬಂತು. 2022-23ರಲ್ಲಿ ಕೇಂದ್ರದ ಬಜೆಟ್ 4181232 ಕೋಟಿ , ರಾಜ್ಯಕ್ಕೆ 53510 ಕೋಟಿ ಮಾತ್ರ ಬಂತು. 2023-24ರಲ್ಲಿ 45,03007 ಕೋಟಿ ಕೇಂದ್ರದ ಬಜೆಟ್ ಗಾತ್ರ. ರಾಜ್ಯಕ್ಕೆ ಬಂದಿದ್ದು 50257 ಕೋಟಿ ಮಾತ್ರ. 2024-25ರಲ್ಲಿ ರಾಜ್ಯಕ್ಕೆ 59785 ಕೋಟಿ ಬರುತ್ತದೆ ಎಂದು ರಾಜ್ಯಕ್ಕೆ ಆಗುತ್ಯಲೇ ಇರುವ ಅನ್ಯಾಯದ ಅಂಕಿ ಅಂಶಗಳನ್ನು ಬಿಚ್ಚಿಟ್ಟರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ