Shilpa Shetty Diet: ಎಂದಿಗೂ ಬ್ರೇಕ್‌ಫಾಸ್ಟ್ ತಪ್ಪಿಸಬೇಡಿ; ನಟಿ ಶಿಲ್ಪಾ ಶೆಟ್ಟಿ ಡಯೆಟ್, ಸಪೂರ ಮೈಕಟ್ಟು, ಫಿಟ್ನೆಸ್ ರಹಸ್ಯ ತಿಳಿಯಿರಿ
Shilpa Shetty Diet Plan: ಕರ್ನಾಟಕ ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಫಿಟ್ನೆಸ್ ಗುಟ್ಟಿನ ಕುರಿತು ಸಾಕಷ್ಟು ಜನರಿಗೆ ಕುತೂಹಲ ಇರುತ್ತದೆ. ಇವರ ಸೌಂದರ್ಯ, ಆರೋಗ್ಯ, ಫಿಟ್ನೆಸ್ ಗುಟ್ಟು ಸಮತೋಲಿತ ಆಹಾರ. ಇವರು ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳೋದಿಲ್ಲ. ರಾತ್ರಿ 7.30ರ ಮೊದಲು ಊಟ ಮಾಡ್ತಾರೆ.
ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ನಟಿ, ನಿರ್ಮಾಪಕಿ, ಡ್ಯಾನ್ಸರ್, ಬರಹಗಾರ್ತಿ, ಮಾಡೆಲ್ ಮತ್ತು ಉದ್ಯಮಿ ಶಿಲ್ಪಾ ಶೆಟ್ಟಿ ಕರ್ನಾಟಕ ಮೂಲದವರು. ಕರ್ನಾಟಕದ ಕೀರ್ತಿಯನ್ನು ದೇಶ-ವಿದೇಶಗಳಿಗೆ ಹಬ್ಬಿರುವ ಶಿಲ್ಪಾ ಶೆಟ್ಟಿಯ ಫಿಟ್ನೆಸ್ ಮತ್ತು ಸೌಂದರ್ಯದ ಕುರಿತು ಸಾಕಷ್ಟು ಜನರಿಗೆ ಕುತೂಹಲ ಇದ್ದೇ ಇರುತ್ತದೆ. ವಿಶೇಷವಾಗಿ ಪ್ರತಿನಿತ್ಯ ಅವರ ಪ್ಲೇಟ್‌ನಲ್ಲಿ ಏನು ಇರುತ್ತದೆ? ಅವರ ಡಯೆಟ್ ಪ್ಲ್ಯಾನ್ ಏನು? ಎಷ್ಟು ವ್ಯಾಯಾಮ ಮಾಡ್ತಾರೆ, ಫಿಟ್ನೆಸ್‌ಗಾಗಿ ಏನೆಲ್ಲ ಕಸರತ್ತು ಮಾಡ್ತಾರೆ ಎಂಬ ಸಂದೇಹ ಇದ್ದೇ ಇರುತ್ತದೆ. 1993ರಲ್ಲಿ ಬಾಝಿಗಾರ್ ಸಿನಿಮಾದ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಶಿಲ್ಪಾ ಶೆಟ್ಟಿ ಫಿಟ್ನೆಸ್ ಗುಟ್ಟು
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಈಗ 49 ವರ್ಷ. ಆದರೆ, ನೋಡಿದಾಗ ಹಾಗೆ ಅನಿಸದು. ಇವರು ಇಬ್ಬರು ಮಕ್ಕಳ ತಾಯಿಯೂ ಹೌದು. ಹರೆಯದ ನಟಿಯರನ್ನು ನಾಚಿಸುವಂತಹ ಸೌಂದರ್ಯ ಹೊಂದಿರುವ ಶಿಲ್ಪಾ ಶೆಟ್ಟಿಗೆ 2012ರಲ್ಲಿ ಮೊದಲ ಮಗುವಾಗಿತ್ತು. ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ 2020ರಲ್ಲಿ ಪಡೆದರು. ಎರಡು ಮಕ್ಕಳ ತಾಯಿಯಾಗಿದ್ದರೂ ಪ್ರತಿನಿತ್ಯ ಡಯೆಟ್ ಮತ್ತು ಫಿಟ್ನೆಸ್ ಕಡೆಗೆ ಗಮನ ನೀಡುತ್ತಾರೆ. ವರದಿಗಳ ಪ್ರಕಾರ ತಮ್ಮ ಪುಟ್ಟ ಮಕ್ಕಳು ನಿದ್ದೆಗೆ ಜಾರಿದ ಬಳಿಕ ಅಪರಾಹ್ನ ಶಿಲ್ಪಾ ಶೆಟ್ಟಿ ವರ್ಕೌಟ್ ಮಾಡುತ್ತಿದ್ದರು. ಈಗ ಮಕ್ಕಳು ತುಸು ದೊಡ್ಡವರರಾಗಿರುವ ಕಾರಣ ಈ ರುಟೀನ್ ಬದಲಾಗಿರಬಹುದು.
ಶಿಲ್ಪಾ ಶೆಟ್ಟಿ ಡಯೆಟ್ ಪ್ಲ್ಯಾನ್
ಪ್ರತಿದಿನ ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳಬೇಡಿ. ಶಿಲ್ಪಾ ಶೆಟ್ಟಿ ಪ್ರಕಾರ ಬೆಳಗ್ಗಿನ ಉಪಹಾರವು ಪ್ರಮುಖ ಮೀಲ್. ಎಂದಿಗೂ ಶಿಲ್ಪಾ ಶೆಟ್ಟಿ ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳುವುದಿಲ್ಲ. ಒಂದು ಬೌಲ್ ಆಪಲ್, ಮ್ಯಾಂಗೋ, ಆಲ್ಮೋಡ್ ಮಿಲ್ಕ್ ಕುಡೀತಾರೆ. ಎರಡು ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ತಿನ್ನುತ್ತಾರೆ. ಬೆಳಗ್ಗಿನ ಉಪಹಾರ ಉತ್ತಮವಾಗಿರುವುದು ನಮ್ಮ ಮಿದುಳು ಮತ್ತು ದೇಹಕ್ಕೆ ಒಳ್ಳೆಯದು ಎಂದು ಶಿಲ್ಪಾ ಶೆಟ್ಟಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಬೆಳಗ್ಗಿನ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುವವರು ಶಿಲ್ಪಾ ಶೆಟ್ಟಿ ಹೇಳಿರುವ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಒಳ್ಳೆಯದು.
ಶಿಲ್ಪಾ ಶೆಟ್ಟಿಗೆ ಸಮತೋಲನ ಹೊಂದಿರುವ ಆಹಾರ ಇಷ್ಟ. ಅವರು ತೆಂಗಿನ ಹಾಲು ಬಳಸುತ್ತಾರೆ. ಇದು ತೂಕ ಇಳಿಕೆ ಮಾಡಲು ನೆರವು ನೀಡುತ್ತದೆ ಎನ್ನುವುದು ಅವರ ಅಭಿಪ್ರಾಯ. ಇದರಿಂದ ದೇಹದಲ್ಲಿ ನೈಸರ್ಗಿಕ ತ್ವಚೆ ಮತ್ತು ಹೊಳಪು ಉಂಟಾಗುತ್ತದೆ .
ಯೋಗದಿಂದ ಆರೋಗ್ಯ
ಶಿಲ್ಪಾ ಶೆಟ್ಟಿಗೆ ಯೋಗದ ಹಲವು ಪ್ರಯೋಜನಗಳ ಅರಿವಿದೆ. ಯೋಗ ಇವರ ವರ್ಕೌಟ್‌ನಲ್ಲಿ ತಪ್ಪುವುದಿಲ್ಲ. ಇದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ದೇಹದ ಆಕಾರವೂ ಉತ್ತಮಗೊಳ್ಳುತ್ತದೆ. "ಯೋಗದಿಂದ ನಿಮ್ಮ ಜೀವನಕ್ಕೆ ಹಲವು ವರ್ಷಗಳು ಸೇರ್ಪಡೆಗೊಳ್ಳುತ್ತದೆ, ನಿಮ್ಮ ಹಲವು ವರ್ಷಗಳಿಗೆ ಉತ್ತಮ ಜೀವನ ನೀಡುತ್ತದೆ" ಎಂದು ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಕ್ಕರೆಯಿಂದ ದೂರ ಮತ್ತು ರಾತ್ರಿ ಬೇಗ ಊಟ
ತೂಕ ಇಳಿಕೆ ಮತ್ತು ಫಿಟ್ನೆಸ್ ಮಾಡಲು ಬಯಸುವವರು ಸಕ್ಕರೆಯಿಂದ ದೂರ ಇರುವುದು ಸಾಮಾನ್ಯ. ಶಿಲ್ಪಾ ಶೆಟ್ಟಿ ಕೂಡ ಸಕ್ಕರೆ ಬದಲು ಜೇನು, ಬೆಲ್ಲದ ಪುಡಿ ಅಥವಾ ತೆಂಗಿನಕಾಯಿ ಸಕ್ಕರೆಯನ್ನು ಪರ್ಯಾಯವಾಗಿ ಬಳಸುತ್ತಾರೆ. ರಾತ್ರಿ 7.30 ಗಂಟೆಗೆ ಮೊದಲು ಇವರು ಡಿನ್ನರ್ ಮಾಡುತ್ತಾರೆ. ಸೂಪ್, ಚಪಾತಿ ಮತ್ತು ಕೊಂಚ ತರಕಾರಿ ಸೇವಿಸುತ್ತಾರೆ. ಇವರು ಕಡಿಮೆ ಪ್ರಮಾಣದ ಮತ್ತು ಆರೋಗ್ಯಕಾರಿ ಆಹಾರ ಸೇವಿಸುತ್ತಾರೆ.