logo
ಕನ್ನಡ ಸುದ್ದಿ  /  ಕರ್ನಾಟಕ  /  Aap First List: ವಿಧಾನಸಭೆ ಚುನಾವಣೆ 2023: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 7 ಮಂದಿ ರೈತರಿಗೆ ಟಿಕೆಟ್

AAP First List: ವಿಧಾನಸಭೆ ಚುನಾವಣೆ 2023: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 7 ಮಂದಿ ರೈತರಿಗೆ ಟಿಕೆಟ್

HT Kannada Desk HT Kannada

Mar 20, 2023 03:56 PM IST

google News

ಆಮ್ ಆದ್ಮಿ ಪಾರ್ಟಿಯ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ

  • ನಿರೀಕ್ಷೆಯಂತೆ ಆಮ್ ಆದ್ಮಿ ಪಾರ್ಟಿ ವಿಧಾನಸಭೆ ಚುನಾವಣೆಗೆ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 80 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದರಲ್ಲಿ ಏಳು ಮಂದಿ ರೈತರು, 7 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದೆ.

ಆಮ್ ಆದ್ಮಿ ಪಾರ್ಟಿಯ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ
ಆಮ್ ಆದ್ಮಿ ಪಾರ್ಟಿಯ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ

ಬೆಂಗಳೂರು: ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯವಾಗಿರುವ ಆಮ್ ಆದ್ಮಿ ಪಾರ್ಟಿ-ಎಎಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಲವು ವಿಚಾರಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ಹಾಗೂ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಇದೀಗ ವಿಧಾನಸಭೆ ಚುನಾವಣೆಗೆ ಇಳಿಯುತ್ತಿದ್ದಾರೆ.

ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಇವತ್ತು (ಮಾರ್ಚ್ 20, ಸೋಮವಾರ) ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು 80 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ 7 ಮಂದಿ ರೈತರು ಹಾಗೂ 7 ಮಂದಿ ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸುತ್ತಿದೆ.

ಅಭ್ಯರ್ಥಿಗಳ ಪಟ್ಟಿ ಘೋಷಣೆ ಬಳಿಕ ಮಾತನಾಡಿರುವ ಪೃಥ್ವಿ ರೆಡ್ಡಿ, ಆಮ್‌ ಆದ್ಮಿ ಪಾರ್ಟಿಯು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಲು ಹೆಮ್ಮೆ ಪಡುತ್ತದೆ. ಎಎಪಿಯು ಭ್ರಷ್ಟಾಚಾರ-ವಿರೋಧಿ ಆಂದೋಲನದ ಮೂಲಕ ಹುಟ್ಟಿಕೊಂಡ ಪಕ್ಷವಾಗಿದೆ. ಭ್ರಷ್ಟಾಚಾರದಿಂದಾಗಿ ಈ ದೇಶದ ಜನರು ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ ಹಾಗೂ ಭಾರತವು ವಿಶ್ವದ ನಂಬರ್‌ ಒನ್‌ ಸ್ಥಾನ ಅಲಂಕರಿಸುವುದಕ್ಕೆ ಭ್ರಷ್ಟಾಚಾರ ಅಡ್ಡಿಯಾಗಿದೆ.

ಭಾರತವನ್ನು ಶೇ. 100ರಷ್ಟು ಭ್ರಷ್ಟಾಚಾರ ಮುಕ್ತ ಮಾಡಬೇಕೆಂದರೆ ಶೇ. 100ರಷ್ಟು ಪ್ರಮಾಣಿಕರಾಗಿರುವವರು ನಮ್ಮನ್ನು ಪ್ರತಿನಿಧಿಸಬೇಕು. ನಮ್ಮ ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಮಾಣಿಕರಿದ್ದರೂ ಅವರು ರಾಜಕೀಯ ಪ್ರವೇಶಿಸಲಿಲ್ಲ ಹಾಗೂ ಚುನಾವಣೆಗೆ ನಿಲ್ಲಲಿಲ್ಲ. ಇಂತಹವರು ಚುನಾವಣೆಗೆ ಸ್ಪರ್ಧಿಸುವುದು, ಸಾಂಪ್ರದಾಯಿಕ ಪಕ್ಷಗಳ ಹಣಬಲಕ್ಕೆ ತೀವ್ರ ಪೈಪೋಟಿ ನೀಡುವುದು ಇಲ್ಲಿಯವರೆಗೂ ಕಷ್ಟಕರವಾಗಿತ್ತು.

ಈಗ ಎಎಪಿ ಎಲ್ಲವನ್ನೂ ಬದಲಾಯಿಸಿದೆ. ಸಾಮಾನ್ಯ ಹಿನ್ನೆಲೆಯ ಪ್ರಾಮಾಣಿಕ ಜನರನ್ನು ನಾವು ರಾಜಕೀಯಕ್ಕೆ ಕರೆತಂದಿದ್ದೇವೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೇವೆ. ಜಯಗಳಿಸದ ನಂತರ ಶೇ. 100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುವುದು ಮಾತ್ರವಲ್ಲದೇ, ಪ್ರತಿಯೊಬ್ಬ ನಾಗರಿಕನಿಗಿರುವ ಕನಸು ಕಾಣುವ ಹಾಗೂ ಬೆಳೆಯುವ ಹಕ್ಕುಗಳನ್ನು ಕಾಪಾಡುವುದಾಗಿ ಇವರು ಖಚಿತ ಪಡಿಸಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯು ಇಂದು ದೇಶದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದ್ದು, ಅನೇಕ ರಾಜ್ಯಗಳಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು ಮತ್ತು ಗೆಲ್ಲಲು ಸಮರ್ಥ ಇದೆ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ.

ಪ್ರತಿಯೊಬ್ಬರೂ ಜನಪ್ರತಿನಿಧಿಗಳಾಗಲು ಸಮರ್ಥರು ಎಂದು ನಂಬಲಾಗಿತ್ತು. ಇಂದು ಭಾರತದಲ್ಲಿ, ಎಎಪಿಯನ್ನು ಒಂದು ವೇದಿಕೆಯಾಗಿ ಬಳಸಿಕೊಂಡು ಜನಸಾಮಾನ್ಯರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಹಾಗೂ ಜನರನ್ನು ಪ್ರತಿನಿಧಿಸಬಹುದು.

ಸಾಮಾನ್ಯ ಮನುಷ್ಯನ ನೋವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಜೀವನದ ಅನುಭವಗಳನ್ನು ಪ್ರತಿನಿಧಿಸಲು ಅಭ್ಯರ್ಥಿಗಳು ಜೀವನದ ವಿವಿಧ ಹಂತಗಳನ್ನು ಅನುಭವಿಸಿರುವುದು ಮುಖ್ಯವಾಗಿದೆ ಎಂದು ನಾವು ನಂಬಿದ್ದೇವೆ. ಅಭ್ಯರ್ಥಿಗಳ ಪಟ್ಟಿಯು ಇದರೊಂದಿಗೆ ಇದೆ. ಇವರೆಲ್ಲ ಜೀವನದ ವಿವಿಧ ಹಂತಗಳನ್ನು ಅನುಭವಿಸಿದವರಾಗಿದ್ದು, ಸಾಮಾನ್ಯ ಸಮಾಜವನ್ನು ಪ್ರತಿನಿಧಿಸುತ್ತಾರೆ ಎಂದಿದ್ದಾರೆ.

ಪೃಥ್ವಿ ರೆಡ್ಡಿ ಅವರ ಇತರೆ ಪ್ರಮುಖ ಅಂಶಗಳು

  • ನಮ್ಮದು ಯುವ ದೇಶವಾಗಿದ್ದು, ಯುವಕರು ತಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಧ್ವನಿ ಹೊಂದಿರಬೇಕು. ನಮ್ಮ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಯುವ ಸ್ಪರ್ಧಿಗಳು. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
  • ನಮ್ಮ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಕೃಷಿಯನ್ನು ಅವಲಂಬಿಸಿದೆ. ಆದರೆ, ನಮ್ಮ ವಿಧಾನಸಭೆಯಲ್ಲಿ ರೈತರಿಗೆ ಪ್ರಾತಿನಿಧ್ಯವಿಲ್ಲ. ನಮ್ಮ ಮೊದಲ ಪಟ್ಟಿಯಲ್ಲಿ 7 ರೈತರು ಇರುವುದು ನಮಗೆ ಖುಷಿ ತಂದಿದೆ.
  • ನಮ್ಮ ಜನಸಂಖ್ಯೆಯ ಶೇ. 50ರಷ್ಟು ಮಹಿಳೆಯರು, ಮತ್ತು ಬೇರೆ ಪಕ್ಷಗಳು ಅವರನ್ನು ನಾಮನಿರ್ದೇಶನ ಮಾಡದ ಕಾರಣ ಮಹಿಳೆಯರಿಗೆ ಸಾರ್ವಜನಿಕ ಹುದ್ದೆಯನ್ನು ಪಡೆಯುವುದು ಕಷ್ಟವಾಗಿದೆ. ನಮ್ಮ ಮೊದಲ ಪಟ್ಟಿಯಲ್ಲಿ 7 ಮಹಿಳೆಯರಿದ್ದಾರೆ ಎನ್ನುಲು ನಾವು ಸಂತೋಷಪಡುತ್ತೇವೆ ಮತ್ತು ನಮ್ಮ ಮುಂದಿನ ಪಟ್ಟಿಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುತ್ತಾರೆ ಎಂದು ಭಾವಿಸಿದ್ದೇವೆ
  • ನಮ್ಮ ರಾಜ್ಯದ ಜನರಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಸಾಮಾಜಿಕ ಕಾರ್ಯಕರ್ತರು ಎಎಪಿಯನ್ನು ಒಂದು ವೇದಿಕೆಯಾಗಿ ದೇಶಾದ್ಯಂತ ಸಾಮಾಜಿಕ ಕಾರ್ಯಕರ್ತರು ಹೆಚ್ಚಾಗಿ ನೋಡುತ್ತಾರೆ. ನಮ್ಮ ಮೊದಲ ಪಟ್ಟಿಯಲ್ಲಿ 5 ಸಾಮಾಜಿಕ ಕಾರ್ಯಕರ್ತರು ಇದ್ದಾರೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ