logo
ಕನ್ನಡ ಸುದ್ದಿ  /  ಕರ್ನಾಟಕ  /  ಚಿನ್ನದ ನಾಡು ಕೋಲಾರವನ್ನ ಸಂಸತ್‌ನಲ್ಲಿ ಪ್ರತಿನಿಧಿಸುವ ಅದೃಷ್ಟವಂತ ಯಾರು? ಹಸ್ತದ ಬಣ ರಾಜಕೀಯ, ಬಿಜೆಪಿಯ ಮುನಿಸ್ವಾಮಿಗೆ ಟಿಕೆಟ್ ತಪ್ಪುವ ಆತಂಕ

ಚಿನ್ನದ ನಾಡು ಕೋಲಾರವನ್ನ ಸಂಸತ್‌ನಲ್ಲಿ ಪ್ರತಿನಿಧಿಸುವ ಅದೃಷ್ಟವಂತ ಯಾರು? ಹಸ್ತದ ಬಣ ರಾಜಕೀಯ, ಬಿಜೆಪಿಯ ಮುನಿಸ್ವಾಮಿಗೆ ಟಿಕೆಟ್ ತಪ್ಪುವ ಆತಂಕ

Raghavendra M Y HT Kannada

Mar 15, 2024 02:05 PM IST

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇದರ ನಡುವೆ ಬಿಜೆಪಿ ಕೋಲಾರ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳ್ತಿದ್ದಾರೆ.

    • ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಣದ ರಾಜಕೀಯ ನಡುವೆ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲ  ಇದ್ದರೆ, ಅತ್ತ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಎಸ್ ಮುನಿಸ್ವಾಮಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇದರ ನಡುವೆ ಬಿಜೆಪಿ ಕೋಲಾರ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳ್ತಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇದರ ನಡುವೆ ಬಿಜೆಪಿ ಕೋಲಾರ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳ್ತಿದ್ದಾರೆ.

ಕೋಲಾರ (Kolar Constituency) ಎಸ್‌ಸಿಗೆ ಮೀಸಲಾದ ಕ್ಷೇತ್ರ. ಕೋಲಾರ ಎಂದರೆ ನೆನಪಾಗುವುದು ಕೆಜಿಎಫ್ ಚಿನ್ನದ ಗಣಿ. ಜೊತೆಗೆ ತರಕಾರಿ ಬೆಳೆಯುವ ರೈತರು. ಕೋಲಾರ ಸಿಲ್ಕ್ ಮತ್ತು ಮಿಲ್ಕ್‌ನ ತವರೂರು ಕೂಡಾ ಹೌದು. ಇನ್ನು ರಾಜಕೀಯವಾಗಿ ಹೇಳುವುದಾದರೆ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಕೋಲಾರದವರು. ಇಷ್ಟೆಲ್ಲಾ ಹೆಗ್ಗಳಿಕೆ ಇದ್ದರೂ ಕೋಲಾರ ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದಿದೆ ಎನ್ನುವುದು ಅಷ್ಟೇ ಕಟು ವಾಸ್ತವ. ಇದುವರೆಗೂ 17 ಲೋಕಸಭಾ ಚುನಾವಣೆಗಳು ನಡೆದಿದ್ದು, 7 ಮಂದಿ ಮಾತ್ರ ಹಲವು ಬಾರಿ ಗೆದ್ದಿದ್ದಾರೆ. 1952 ರಲ್ಲಿ ಕೋಲಾರ ಲೋಕಸಭಾ ಕ್ಷೇತ್ರವು ದ್ವಿಸದಸ್ಯರ ಕ್ಷೇತ್ರವಾಗಿತ್ತು. ಆಗ ಕಾಂಗ್ರೆಸ್‌ ಪಕ್ಷದಿಂದ ದೊಡ್ಡತಿಮ್ಮಯ್ಯ ಮತ್ತು ಎಂ.ವಿ.ಕೃಷ್ಣಪ್ಪ ಮೊದಲ ಸಂಸದರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರದ ವರ್ಷಗಳಲ್ಲಿ ದೊಡ್ಡತಿಮ್ಮಯ್ಯ ಮೂರು ಬಾರಿ, ಇವರೊಂದಿಗೆ ದ್ವಿಸದಸ್ಯ ಕ್ಷೇತ್ರಗಳನ್ನು ಎಂವಿ ಕೃಷ್ಣಪ್ಪ, ಕೆ.ಚಂಗಲರಾಯರೆಡ್ಡಿ ಹಂಚಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

ಆನಂತರ ಜಿ.ವೈ ಕೃಷ್ಣನ್‌ ನಾಲ್ಕು ಬಾರಿ, ಜಿ.ವೆಂಕಟೇಶ್‌, ವೈ.ರಾಮಕೃಷ್ಣ ತಲಾ ಒಂದು ಬಾರಿ ಗೆದ್ದವರು. ಇವರ ನಂತರ ಸತತ ಏಳು ಗೆಲುವುಗಳನ್ನು ದಾಖಲಿಸಿದ ಹಿರಿಮೆ ಕೆ.ಎಚ್‌ ಮುನಿಯಪ್ಪ ಅವರದ್ದು. 1991ರಿಂದ ಸತತ ಏಳು ಸಲ ಗೆಲುವು ಸಾಧಿಸಿದ್ದ ಅವರು 2019ರ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ಮುನಿಸ್ವಾಮಿ ಎದುರು ಮೊದಲ ಸೋಲು ಕಂಡಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ಮತ್ತು ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಕೋಲಾರ ವ್ಯಾಪ್ತಿಗೆ ಬರುತ್ತವೆ. 3ರಲ್ಲಿ ಜೆಡಿಎಸ್ ಮತ್ತು 5ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಬಿ.ಎನ್ ರವಿಕುಮಾರ್ ಜೆಡಿಎಸ್(ಶಿಡ್ಲಘಟ್ಟ), ಸಚಿವ ಡಾ. ಎಂ.ಸಿ ಸುಧಾಕರ್ (ಚಿಂತಾಮಣಿ), ಜಿಕೆ ವೆಂಕಟಶಿವಾರೆಡ್ಡಿ ಜೆಡಿಎಸ್ (ಶ್ರೀನಿವಾಸಪುರ), ಸಮೃದ್ಧಿ ಶ್ರೀನಿವಾಸ್ ಜೆಡಿಎಸ್(ಮುಳಬಾಗಿಲು ಎಸ್ ಸಿ); ಎಂ. ರೂಪಕಲಾ ಕಾಂಗ್ರೆಸ್ (ಕೆಜಿಎಫ್ ಎಸ್ ಸಿ); ಕೆ ಎಂ. ನಾರಾಯಣಸ್ವಾಮಿ ಕಾಂಗ್ರೆಸ್(ಕೋಲಾರ), ಕೆ ವೈ ನಂಜೇಗೌಡ ಕಾಂಗ್ರೆಸ್ (ಮಾಲೂರು), ಎಸ್ ಎನ್ ನಾರಾಯಣಸ್ವಾಮಿ (ಬಂಗಾರಪೇಟೆ ಎಸ್ ಸಿ).

ಈ ಮೀಸಲು ಕ್ಷೇತ್ರದಲ್ಲಿ ಎಸ್ ಸಿ ( ಶೇ. 28.6); ಎಸ್ ಟಿ ( ಶೇ. 6.4); ಮುಸ್ಲಿಂ( ಶೇ. 12.71) ಮತದರಾರಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮುನಿಸ್ವಾಮಿ 2,10,021 ಮತಗಳ ಅಂತರದಿಂದ ಕಾಂಗ್ರೆಸ್‌ನ ಕೆ.ಎಚ್ ಮುನಿಯಪ್ಪ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು. ಬೆಂಗಳೂರಿನಲ್ಲಿ ಒಮ್ಮೆ ಪಾಲಿಕೆ ಸದಸ್ಯರಾಗಿದ್ದ ಮುನಿಸ್ವಾಮಿ ಇವರನ್ನು ಇವರ ರಾಜಕೀಯ ಗುರು ಅರವಿಂದ ಲಿಂಬಾವಳಿ ಕೋಲಾರಕ್ಕೆ ಕರೆದೊಯ್ದು ಅಭ್ಯರ್ಥಿ ಮಾಡಿದರು. ಅಸ್ತಿತ್ವವೇ ಇಲ್ಲದ ಕ್ಷೇತ್ರದಲ್ಲಿ ಇವರು ಗೆದ್ದದ್ದು ಹೇಗೆ ಎಂದು ಆಶ್ಚರ್ಯವಾಗಬಹುದು. ಕೋಲಾರದಲ್ಲಿ ಮುನಿಯಪ್ಪ ಅವರಿಗೆ ಸ್ವಪಕ್ಷಿಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇವರನ್ನು ಸೋಲಿಸಲು ಜಿಲ್ಲೆಯ ಶಾಸಕರು ಪಣ ತೊಟ್ಟು ಬಿಜೆಪಿ ಗೆಲುವಿಗೆ ಸಹಕಾರ ನೀಡಿದರು. ಹಾಗಾಗಿ ಮುನಿಸ್ವಾಮಿ ಗೆಲುವು ಸುಲಭವಾಯಿತು.

ಈ ಬಾರಿ ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ. ಕಾಂಗ್ರೆಸ್ ಜೆಡಿಎಸ್ ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಬಿಜೆಪಿ ಸ್ಪರ್ಧೆ ಮಾಡುವುದಾದರೆ ಮುನಿಸ್ವಾಮಿ ಅವರಿಗೆ ಮತ್ತೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಬಿಜೆಪಿ ಹೈಕಮಾಂಡ್ ಕೋಲಾರ ಕ್ಷೇತ್ರವನ್ನು ತಮಗೆ ನೀಡುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಒಂದು ವೇಳೆ ಮೈತ್ರಿಯಲ್ಲಿ ಕೋಲಾರ ಜೆಡಿಎಸ್ ಪಾಲಾದರೆ ಮುನಿಸ್ವಾಮಿಗೆ ಟಿಕೆಟ್ ಕೈತಪ್ಪಲಿದೆ. 2014 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುನಿಯಪ್ಪ ಏಳನೇ ಬಾರಿಗೆ ಸ್ಪರ್ಧಿಸಿದ್ದರು. ಮೋದಿ ಅಲೆಯ ನಡುವೆಯೂ ಜೆಡಿಎಸ್‌ನ ಕೋಲಾರ ಕೇಶವ ಅವರನ್ನು 47,850 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.

ಇಲ್ಲಿ ಸೋತವರು ಗೆದ್ದಿಲ್ಲ, ಜೆಡಿಎಸ್‌ ಬಲವಿದ್ದರೂ ಗೆದ್ದಿಲ್ಲ

ಸೋತವರು ಗೆಲ್ಲದೇ ಇರುವುದು ಈ ಲೋಕಸಭಾ ಕ್ಷೇತ್ರದ ವಿಶೇಷ. ಲೋಕಸಭೆ ಚುನಾವಣೆಯಲ್ಲಿ ಸೋತವರು ಮತ್ತೇ ಚುನಾವಣೆ ಗೆದ್ದ ಇತಿಹಾಸವಿಲ್ಲ. ಮುನಿಯಪ್ಪ ಅವರ ಹಾಗೆ ಗೆಲ್ಲುವವರು ಗೆಲ್ಲುತ್ತಲೇ ಇರುತ್ತಾರೆ. ಗೆದ್ದವರು ಒಮ್ಮೆ ಸೋತರೆ ಮತದಾರ ಮತ್ತೆ ಅವರನ್ನು ಪುನರಾಯ್ಕೆ ಮಾಡುವುದಿಲ್ಲ ಎಂಬ ಅಘೋಷಿತ ನಿಯಮ ಇದ್ದ ಹಾಗಿದೆ. ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಪಕ್ಷದ ಭದ್ರ ಕೋಟೆ ಎನ್ನುವುದರಲ್ಲಿ ಸಂಶಯವಿಲ್ಲ. ಈವರೆಗೂ ನಡೆದಿರುವ 17 ಚುನಾವಣೆಯಲ್ಲಿ 15ರಲ್ಲಿ ಕಾಂಗ್ರೆಸ್‌ ಗೆದ್ದ ಇತಿಹಾಸವಿದೆ.

ಬಲವಿದ್ದರೂ ಗೆಲ್ಲದೆ ಇರುವುದು ಜೆಡಿಎಸ್‌ನ ದುರಾದೃಷ್ಟ. ಬೇರು ಮಟ್ಟದಿಂದಲೂ ಕಾರ್ಯಕರ್ತರ ಪಡೆ ಇದೆ. ಶಾಸಕರಿದ್ದಾರೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಗೆಲುವು ಕಾಣುತ್ತಿಲ್ಲ. 1984ರಲ್ಲಿ ಡಾ.ಜಿ ವೆಂಕಟೇಶ್‌ ಜನತಾ ಪಕ್ಷದಿಂದ ಗೆದ್ದಿದ್ದು ಕೊನೆ.

ಸಮಸ್ಯೆಗಳ ಆಗರ ಕೋಲಾರ

ಎಲ್ಲವೂ ಇದ್ದು ಏನೂ ಇಲ್ಲದ ಪರಿಸ್ಥಿತಿ ಇವರದ್ದು. ಅತಿ ಹೆಚ್ಚು ತರಕಾರಿ ಬೆಳೆಯುವ ಜಿಲ್ಲೆ ಕೋಲಾರ. ಇಲ್ಲಿ 100 ಎಕರೆ ವಿಸ್ತಾರದಲ್ಲಿ ಮಾರುಕಟ್ಟೆ ನಿರ್ಮಿಸಬೇಕೆಂಬ ರೈತರ ಬೇಡಿಕೆ ಇದುವರೆಗೂ ಈಡೇರಿಲ್ಲ. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದಿದ್ದಾಗ ಹಣ್ಣು ತರಕಾರಿಗಳನ್ನು ರಸ್ತೆಗೆ ಚೆಲ್ಲುವುದರ ಬದಲು ಸಂಗ್ರಹಿಸಲು ಶೀತಲ ಗೃಹಗಳನ್ನು ಸ್ಥಾಪಿಸಲು ಬೇಡಿಕೊಳ್ಳುತ್ತಿದ್ದಾರೆ. ಟೊಮೆಟೊ ಹಣ್ಣು ಕೆಚಪ್ ಕೇಂದ್ರ ಸ್ಥಾಪಿಸಿದರೂ ರೈತರಿಗೆ ವರದಾನವಾಗುತ್ತದೆ. ಇಲ್ಲಿ ನೀರಿನ ಸಮಸ್ಯೆಯನ್ನು ಬಗೆ ಹರಿಸಿದ್ದಕ್ಕಿಂತ ರಾಜಕೀಯ ಮಾಡಿದ್ದೇ ಹೆಚ್ಚು. ಕೆ.ಸಿ ವ್ಯಾಲಿಯಿಂದ ಬರುವ ನೀರನ್ನು ಮೂರು ಬಾರಿ ಶುದ್ಧೀಕರಿಸಿ ಕೊಡಲು ಒತ್ತಾಯಿಸಲಾಗುತ್ತಿದೆ.

ಟಿಕೆಟ್ ಯಾರಿಗೆ ?

ಇಲ್ಲಿನ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮಿತಿ ಮೀರಿದೆ. ಕೆ.ಆರ್‌ ರಮೇಶ್‌ ಕುಮಾರ್‌ ಮತ್ತು ಕೆ.ಎಚ್ ಮುನಿಯಪ್ಪ ಒಂದೊಂದು ದಿಕ್ಕಿಗೆ ಸಾಗುತ್ತಿದ್ದಾರೆ. ಇದು ಮೈತ್ರಿಕೂಟಕ್ಕೆ ಮತ್ತೆ ವರದಾನವಾಗಬಹುದು. ಕೆ.ಎಚ್ ಮುನಿಯಪ್ಪ ಅವರನ್ನು ಕಣಕ್ಕಿಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಆದರೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ನನ್ನ ಬದಲಾಗಿ ನಾನು ಸೂಚಿಸಿದವರಿಗೆ ಟಿಕೆಟ್ ನೀಡಿ ಎಂದು ಹೇಳಿದ್ದಾರೆ. ಮುನಿಯಪ್ಪ ಅಳಿಯ ಕೆಜಿ ಚಿಕ್ಕಪೆದ್ದಣ್ಣ ಅವರೂ ಆಕಾಂಕ್ಷಿಯಾಗಿದ್ದಾರೆ.

ಜೆಡಿಎಸ್‌ಗೆ ಈ ಬಾರಿ ಟಿಕೆಟ್‌ ಲಭಿಸಿದರೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌, ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬಂಗಾರಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಲ್ಲೇಶ್‌ ಬಾಬು ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಯೋಜನೆ ರೂಪಿಸುತ್ತಿದ್ದಾರೆ. (ವರದಿ: ಮಾರುತಿ)

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ