MLA Salary: ಕೋಟಿಕೋಟಿ ಖರ್ಚು ಮಾಡಿ ಶಾಸಕರಾದವರಿಗೆ ಸಿಗುವ ಸಂಬಳ, ಭತ್ಯೆ, ಸವಲತ್ತುಗಳು ಒಂದೆರೆಡಲ್ಲ; ಇದರ ಜೊತೆಗೆ ಅಧಿಕಾರ
May 25, 2023 03:24 PM IST
ಕರ್ನಾಟಕದಲ್ಲಿ ಶಾಸಕರ ವೇತನ ಮತ್ತು ಸವಲತ್ತು (2022ರ ಏಪ್ರಿಲ್ 1ರ ನಿಯಮಾನುಸಾರದ ವಿವರ)
MLA Salary: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ನೂತನ ಸದಸ್ಯರ ಪ್ರಮಾಣವಚನ ಪೂರ್ಣಗೊಂಡಿದೆ. ನೂತನ ಶಾಸಕರಿಗೆ ವೇತನ ಮತ್ತು ಇತರೆ ಸವಲತ್ತು ಎಷ್ಟಿರಬಹುದು ಎಂಬುದು ಸಹಜ ಕುತೂಹಲ. ಆ ಕೌತುಕ ತಣಿಸುವ ವಿವರ ಇಲ್ಲಿದೆ ಗಮನಿಸಿ.
ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾದವರಿಗೆ ಸಿಗುವ ವೇತನ ಮತ್ತು ಸವಲತ್ತು ಏನೇನು? ಇದು ಸಹಜವಾದ ಕುತೂಹಲ. ಪ್ರತಿ ವಿಧಾನಸಭಾ ಚುನಾವಣೆ ಮುಗಿದು ನೂತನ ಶಾಸಕರು ಪ್ರಮಾಣ ಸ್ವೀಕರಿಸುವಾಗ ಎದುರಾಗುವ ಪ್ರಶ್ನೆ ಈ ಶಾಸಕರಿಗೆಲ್ಲ ವೇತನ ಎಷ್ಟಿರಬಹುದು? ಏನೇನು ಸವಲತ್ತುಗಳಿರಬಹುದು ಎಂಬುದು. ಆ ಕುತೂಹಲ ತಣಿಸುವ ಪ್ರಯತ್ನ ಇದು.
ಕಳೆದ ವರ್ಷ ಶಾಸಕರ ವೇತನ ಪರಿಷ್ಕರಣೆ ಆಗಿದೆ. ಇದರಂತೆ, 2022ರ ಏಪ್ರಿಲ್ 1 ರಿಂದ ಅನ್ವಯವಾದ ನಿಯಮಾನುಸಾರ ಕರ್ನಾಟಕ ವಿಧಾನಮಂಡಲದ ಸದಸ್ಯರಿಗೆ ಇರುವ ಸೌಲಭ್ಯಗಳ ವಿವರ ಹೀಗಿದೆ.
ಇದಲ್ಲದೆ, ಶಾಸಕರಾದವರಿಗೆ ಇನ್ನಿತರ ಭತ್ಯೆಗಳೂ, ಸವಲತ್ತುಗಳೂ ಲಭ್ಯ ಇವೆ. ಈ ಪೈಕಿ ಈ ಕೆಳಗಿನವು ಪ್ರಮುಖವಾದವು.
ಚುನಾವಣಾ ಕ್ಷೇತ್ರ (ಆಯ ಶಾಸಕರು ಪ್ರತಿನಿಧಿಸುವ ಕ್ಷೇತ್ರ) ಪ್ರಯಾಣದ ಭತ್ಯೆ ತಿಂಗಳಿಗೆ 60,000 ರೂಪಾಯಿ. ಇದಲ್ಲದೆ, ಸಭೆಗಳಿಗೆ ಹಾಜರಾಗಲು ದಿನ ಭತ್ಯೆ - ರಾಜ್ಯದೊಳಗೆ ದಿನಕ್ಕೆ 2,500 ರೂಪಾಯಿ, ರಾಜ್ಯದ ಹೊರಗೆ ದಿನಕ್ಕೆ 3,500 ರೂಪಾಯಿ ಸಿಗುತ್ತದೆ.
ನಿಗದಿತ ದರಗಳಲ್ಲಿ ಊಟ ಮತ್ತು ವಸತಿ ಒದಗಿಸುವ ಹೋಟೆಲ್ ಮತ್ತು ಇತರೆ ನೋಂದಾಯಿತ ವ್ಯಾಪಾರ ಸಂಸ್ಥೆಗಳಲ್ಲಿ ಉಳಿಯಲು ಹಾಜರುಪಡಿಸುವ ಬಿಲ್ಲುಗಳು ಷರತ್ತಿಗೆ ಒಳಪಟ್ಟು ದಿನಕ್ಕೆ 7,000 ರೂಪಾಯಿ, ಸ್ಥಳೀಯ ಸಾರಿಗೆ 2,000 ರೂಪಾಯಿ ಇದೆ.
ಪ್ರಯಾಣ ಭತ್ಯೆ: ಪ್ರಯಾಣದ ಮಾದರಿಯನ್ನು ಗಣನೆಗೆ ತೆಗೆದುಕೊಳ್ಳದೆ ಪ್ರತಿ ಕಿಲೋ ಮೀಟರ್‌ಗೆ 35 ರೂಪಾಯಿ ಅಥವಾ 1,500 ರೂಪಾಯಿ ನಿಗದಿತ ಭತ್ಯೆ (ಕಿಲೋ ಮೀಟರ್‌ಗಳಲ್ಲಿ ಪ್ರಯಾಣಿಸಿದ ಅಂತರದ ಆಧಾರದ ಮೇಲೆ ಪ್ರಯಾಣ ಭತ್ಯೆ ಲೆಕ್ಕ ಹಾಕುವುದಕ್ಕೆ ಬದಲಾಗಿ ಪ್ರತಿಸಭೆಯ ಹಾಜರಾತಿಗೆ ಅನ್ವಯ) ಲಭ್ಯವಿದೆ.
ವಿಮಾನ ಮತ್ತು ರೈಲ್ವೆ ಪ್ರಯಾಣ ವೆಚ್ಚ: ಪ್ರತಿ ಆರ್ಥಿಕ ವರ್ಷ ಸದಸ್ಯರು ಭಾರತದಲ್ಲಿ ವಿಮಾನದ ಮೂಲಕ ಅಥವಾ ರೈಲ್ವೆ ಮೂಲಕ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಯಾಣಗಳಲ್ಲಿ ಒಬ್ಬರೇ ಅಥವಾ ಸಹಚರರೊಂದಿಗೆ ಪ್ರಯಾಣಿಸುವ ಉದ್ದೇಶಕ್ಕಾಗಿ ಏಪ್ರಿಲ್ ಮತ್ತು ಅಕ್ಟೋಬರ್‌ಗಳಲ್ಲಿ 2.5 ಲಕ್ಷ ರೂಪಾಯಿ ಮೊತ್ತವನ್ನು ಎರಡು ಸಮಾನ ಕಂತುಗಳಲ್ಲಿ ಪಡೆಯಲು ಅವಕಾಶವಿದೆ. ಇದು ಆಯಾ ಶಾಸಕರ ಹಕ್ಕು.
ಮೋಟಾರ್ ಕಾರು/ ಮೋಟಾರ್ ಸೈಕಲ್ ಖರೀದಿಗೆ ಮುಂಗಡ
ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ಮೋಟಾರ್ ಕಾರು ಖರೀದಿಗಾಗಿ ಶೇಕಡ 7ರ ಸರಳ ಬಡ್ಡಿದರದಲ್ಲಿ 15 ಲಕ್ಷ ರೂಪಾಯಿ ಮುಂಗಡ ಮೊತ್ತ ಪಡೆಯಲು ಹಕ್ಕುಳ್ಳವರು. ಇದೇ ರೀತಿ, ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ಮೋಟಾರ್ ಸೈಕಲ್ ಖರೀದಿಸುವುದಕ್ಕೆ 8,000 ರೂಪಾಯಿ ಮುಂಗಡ ಪಡೆಯಲು ಹಕ್ಕುಳ್ಳವರು
ಮುಂಗಡ ಹಣದ ಬಾಕಿಗಳು ವಸೂಲಿಯಾಗುವುದಕ್ಕೆ ಮುಂಚೆ ಸದಸ್ಯ ಮರಣ ಹೊಂದಿದಲ್ಲಿ (ಅಸಲು ಮತ್ತು ಅದರ ಮೇಲಿನ ಬಡ್ಡಿ ಎರಡೂ ಸೇರಿ) ಬಾಕಿ ಇರುವ ಸಂಪೂರ್ಣ ಮೊತ್ತ ಮನ್ನಾ ಆಗುತ್ತದೆ.
ವೈದ್ಯಕೀಯ ಸೌಲಭ್ಯಗಳು: ರಾಜ್ಯ ಸರ್ಕಾರವು ನಿರ್ವಹಿಸುತ್ತಿರುವ ಯಾವುದೇ ಆಸ್ಪತ್ರೆ ಅಥವಾ ಚಿಕಿತ್ಸಾಲಯ ಅಥವಾ ಕರ್ನಾಟಕ ವಿಧಾನಮಂಡಲವು ಅಧಿಸೂಚಿಸಿದ ಯಾವುದೇ ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿ ತಾನು ಮತ್ತು ತನ್ನ ಕುಟುಂಬದ ಸದಸ್ಯರು ಪಡೆದ ವೈದ್ಯೋಪಚಾರ ಮತ್ತು ಚಿಕಿತ್ಸಾ ವೆಚ್ಚಗಳನ್ನು ಮಾಡುವಂಥ ಯಾರೇ ಸದಸ್ಯರು ಚಿಕಿತ್ಸೆಗಾಗಿ ಮಾಡಿದ ವೆಚ್ಚಗಳ ಮರುಪಾವತಿಗೆ ಹಕ್ಕುಳ್ಳವರು. ಮರುಪಾವತಿಸುವ ವೆಚ್ಚಗಳ ಪೈಕಿ ಚಿಕಿತ್ಸೆಯನ್ನು ಪಡೆದುಕೊಂಡ ಸ್ಥಳದಲ್ಲಿ ವಸತಿಗಾಗಿ ಮಾಡಿದ ಖರ್ಚುವೆಚ್ಚಗಳು ಸಹ ಒಳಗೊಂಡಿರುತ್ತವೆ.
ಯಾರೇ ಸದಸ್ಯರು, ರಾಜ್ಯ ಸರ್ಕಾರವು ನಿರ್ವಹಿಸುತ್ತಿರುವ ಆಸ್ಪತ್ರೆ ಅಥವಾ ಚಿಕಿತ್ಸಾಲಯವಾಗಿರದ ಮತ್ತು ಕರ್ನಾಟಕ ವಿಧಾನಮಂಡಲವು ಅಧಿಸೂಚಿಸಿದ ಆಸ್ಪತ್ರೆ ಅಥವಾ ಚಿಕಿತ್ಸಾಲಯವಾಗಿರದ ಬೇರೆ ಯಾವುದೇ ಸ್ಥಳದಲ್ಲಿ ತಾನು ಪಡೆದ ವೈದ್ಯೋಪಚಾರ ಹಾಗೂ ಚಿಕಿತ್ಸೆಗಾಗಿ ವೈದ್ಯಕೀಯ ವೆಚ್ಚಗಳನ್ನು ಭರಿಸಿದ ಸಂದರ್ಭದಲ್ಲಿ ಅವರು ಸರ್ಕಾರಿ ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿ ಪಡೆದ ವೈದ್ಯೋಪಚಾರ ಅಥವಾ ಚಿಕಿತ್ಸಾ ವೆಚ್ಚಗಳ ಸಮನಾದ ವೆಚ್ಚಕ್ಕೆ ಮರುಪಾವತಿ ಪಡೆಯಲು ಅರ್ಹರು.
ಯಾರೇ ಸದಸ್ಯರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಗೆ ಮಾತ್ರ ಶ್ರವಣ ಸಾಧನಕ್ಕಾಗಿ ಪ್ರತಿ ಕಿವಿಗೆ ಒಂದು ಲಕ್ಷ ರೂಪಾಯಿ, ದಂತಪಂಕ್ತಿಗಾಗಿ 50 ಸಾವಿರ ರೂಪಾಯಿ ಮತ್ತು ಕ್ಯಾಪ್‌ನೊಂದಿಗೆ ರೂಟ್ ಕೆನಾಲ್‌ಗಾಗಿ 10,000 ರೂಪಾಯಿ ತನಕ ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯಬಹುದು
ಈ ಮೇಲಿನ ಸನ್ನಿವೇಶದಲ್ಲಿ, ʻಕುಟುಂಬ ಸದಸ್ಯʼ ಎಂದರೆ ಗಂಡ ಅಥವಾ ಹೆಂಡತಿ, 25 ವರ್ಷ ವಯೋಮಾನದ ವರೆಗಿನ ಅವಲಂಬಿತ ಅವಿವಾಹಿತ ಮಗ, ಅವಲಂಬಿತ ಅವಿವಾಹಿತ ಮಗಳು, ಅಂಗವಿಕಲ ಮಕ್ಕಳೂ ಸೇರಿ ಮಾನಸಿಕ ಅಸ್ವಸ್ಥ ಮಕ್ಕಳು, ತಂದೆ ಹಾಗೂ ತಾಯಿ, ವಿಧಾನಮಂಡಲದ ಮಹಿಳಾ ಸದಸ್ಯರ ಸಂದರ್ಭದಲ್ಲಿ ಅವರ ಅತ್ತೆ ಮಾವ ಎಂದು ಪರಿಗಣಿಸಬೇಕು.
ಗಣಕ ಯಂತ್ರ ಅನುದಾನ: ಕರ್ನಾಟಕ ವಿಧಾನಸಭೆಯ ಪ್ರತಿಯೊಬ್ಬ ಶಾಸಕ (ಮಾನ್ಯ ಮುಖ್ಯಮಂತ್ರಿ, ಸಚಿವರು, ಸಂಸದೀಯ ಪದಾಧಿಕಾರಿಗಳನ್ನು ಒಳಗೊಂಡಂತೆ) ತಮ್ಮ ಸದಸ್ಯತ್ವದ ಅಧಿಕಾರಾವಧಿಯಲ್ಲಿ ಕಂಪ್ಯೂಟರ್/ಐ-ಪ್ಯಾಡ್/ ಟ್ಯಾಬ್ಲೆಟ್‌ಗಳನ್ನು ಖರೀದಿಸಲು 50,000 ರೂಪಾಯಿಯನ್ನು ಗಣಕ ಯಂತ್ರ ಅನುದಾನ ಎಂದು ಮಂಜೂರು ಮಾಡಬಹುದು.
ಇತರೆ ಸೌಲಭ್ಯಗಳು: ಸದಸ್ಯರು ಕೋರಿಕೆಯ ಮೇರೆಗೆ ಮಿಲಿಟರಿ ಅಥವಾ ರಕ್ಷಣಾ ಇಲಾಖೆಯಿಂದ ತಿರಸ್ಕೃತ ಗೊಂಡ ಮಿಲಿಟರಿ ಜೀಪು/ ಮೋಟಾರು ಸೈಕಲ್‌ಗಳನ್ನು ಖರೀದಿಸಬಹುದು.
ಸದಸ್ಯರಿಗೆ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನವರು ಹಂಚಿಕೆ ಮಾಡುವ ಎಲ್‌ಪಿಜಿ ಸಂಪರ್ಕವನ್ನು ಪ್ರಥಮ ಆದ್ಯತೆ ಮೇರೆಗೆ ಒದಗಿಸಲಾಗುತ್ತದೆ.