logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದ ತನಿಖೆ ಹೊಣೆ ಸಿಒಡಿಗೆ, ಗೃಹ ಸಚಿವ ಡಾ ಜಿ ಪರಮೇಶ್ವರ

Tumkur News: ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದ ತನಿಖೆ ಹೊಣೆ ಸಿಒಡಿಗೆ, ಗೃಹ ಸಚಿವ ಡಾ ಜಿ ಪರಮೇಶ್ವರ

D M Ghanashyam HT Kannada

Apr 22, 2024 07:18 PM IST

ಗೃಹ ಸಚಿವ ಡಾ ಜಿ ಪರಮೇಶ್ವರ (ಎಡಚಿತ್ರ). ಮೃತ ಯುವತಿ ನೇಹಾ ಹಿರೇಮಠ (ಬಲಚಿತ್ರ)

    • ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಕೊಲೆಯ ಕುರಿತು ಸರ್ಕಾರವೇ ಅಗತ್ಯ ತೀರ್ಮಾನ ತೆಗೆದುಕೊಂಡಿದೆ. ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಒಡಿಗೆ ನಿಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಪರಮೇಶ್ವರ ತಿಳಿಸಿದರು.
ಗೃಹ ಸಚಿವ ಡಾ ಜಿ ಪರಮೇಶ್ವರ (ಎಡಚಿತ್ರ). ಮೃತ ಯುವತಿ ನೇಹಾ ಹಿರೇಮಠ (ಬಲಚಿತ್ರ)
ಗೃಹ ಸಚಿವ ಡಾ ಜಿ ಪರಮೇಶ್ವರ (ಎಡಚಿತ್ರ). ಮೃತ ಯುವತಿ ನೇಹಾ ಹಿರೇಮಠ (ಬಲಚಿತ್ರ)

ತುಮಕೂರು: ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣವನ್ನು ಸಿಒಡಿಯಿಂದ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ ತಿಳಿಸಿದರು. ನಗರದಲ್ಲಿ ಸೋಮವಾರ (ಏ 22) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಯನ್ನು ಘಟನೆ ನಡೆದ ಒಂದು ಗಂಟೆಯಲ್ಲಿ ಬಂಧನ ಮಾಡಲಾಗಿದೆ. ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಕೊಲೆಯ ಕುರಿತು ಸರ್ಕಾರವೇ ಅಗತ್ಯ ತೀರ್ಮಾನ ತೆಗೆದುಕೊಂಡಿದೆ. ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಒಡಿಗೆ ನಿಡಲು ಸರ್ಕಾರ ಆದೇಶ ಹೊರಡಿಸಿದೆ. ತಂಡವು ಇಂದೇ (ಏ 22) ಹುಬ್ಬಳ್ಳಿಗೆ ಭೇಟಿ ನೀಡಿ ತನಿಖೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ನುಡಿದರು.

ಟ್ರೆಂಡಿಂಗ್​ ಸುದ್ದಿ

Mangalore News: ವಿರೋಧ ಪಕ್ಷದವರ ಮನೆ ಬಾಗಿಲಿಗೂ ಹೋಗಿ ವರ್ಷದ ಸಾಧನೆ ವರದಿ ನೀಡಿದ ಪುತ್ತೂರು ಶಾಸಕ, ಏನಿದೆ ವಿಶೇಷ

Indian Railways: ಬೆಂಗಳೂರು-ಧರ್ಮಪುರಿ, ಹರಿಪ್ರಿಯಾ, ಮೈಸೂರು-ಕಾಚೀಗುಡ, ವಾಸ್ಕೋ ಸಹಿತ 7 ರೈಲುಗಳ ಸಂಚಾರ ಸಮಯ ಬದಲು

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಈ ಘಟನೆಯಲ್ಲಿ ನಾಲ್ಕೈದು ಜನರು ಶಾಮೀಲಾಗರುವ ಬಗ್ಗೆ ಮೃತ ಯುವತಿ ನೇಹಾ ಅವರ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಒಡಿ ತಂಡವು ಈ ಕುರಿತೂ ತನಿಖೆ ನಡೆಸಲಿದೆ. ಇನ್ನು 10 ರಿಂದ 12 ದಿನಗಳಲ್ಲಿ ಸಿಒಡಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಯುವತಿಯ ತಂದೆ-ತಾಯಿಗೆ ನ್ಯಾಯ ಸಿಗುವ ವಿಶ್ವಾಸ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೇಹಾ ಹಿರಮೇಠ ಪ್ರಕರಣವನ್ನು ಬಿಜೆಪಿ ನಾಯಕರು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಕುರಿತು ಪ್ರಕಟವಾಗಿರುವ ಟ್ವೀಟ್‌ಗಳನ್ನು ಗಮನಿಸಿದಾಗ ಈ ಅಂಶವು ಸ್ಪಷ್ಟವಾಗುತ್ತದೆ. ನಾನು ಮೊನ್ನೆಯೇ ತಂದೆ ತಾಯಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವಾಗಿ ಹೇಳಿದ್ದೇನೆ. ಆದರೆ ಮುಖ್ಯಮಂತ್ರಿ ಮತ್ತು ನನ್ನ ಹೇಳಿಕೆಯನ್ನು ರಾಜಕೀಯ ಕಾರಣಕ್ಕೆ ಕೀಳಾಗಿ ವಿಶ್ಲೇಷಿಸಿ, ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಟೀಕಿಸಿದರು.

ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಅಮಿತ್‌ ಶಾ ಟ್ವೀಟ್‌ಗೆ ಆಕ್ರೋಶ

ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರ ಶೇ 4 ರ ಮೀಸಲಾತಿ ನಿಲ್ಲಿಸುತ್ತೇವೆ. ಅದನ್ನು ಬೇರೆಯವರಿಗೆ ಕೊಡುತ್ತೇವೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ವಿಚಾರವನ್ನೂ ಗೃಹ ಸಚಿವ ಆರ್ ಪರಮೇಶ್ವರ ಪ್ರಸ್ತಾಪಿಸಿದರು. 'ಸಬ್ ಕಾ ಸಾಥ್ ಅಂದ್ರೆ ಏನರ್ಥ ಗೊತ್ತಿಲ್ಲ ನನಗೆ, ಸಬ್ ಕಾ ಸಾಥ್ ಅಂದರೆ ಏನು, ನೀವು ಅವರನ್ನ ಬಿಟ್ಟು ಬೇರೆಯವರಿಗೆ ಮೀಸಲಾತಿ ಕೊಡ್ತೀವಿ ಅಂದ್ರೆ ಏನು' ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಟ್ವೀಟ್

ನೇಹಾ ಹಿರೇಮಠ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿದ್ದಾರೆ.

ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನೇಹಾ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಬಿಜೆಪಿ ಪ್ರತಿಭಟನೆ: ಹಿಂದೂಗಳ ರಕ್ತಕ್ಕೆ ಬೆಲೆಯಿಲ್ಲ ಎಂದ ಆರ್ ಅಶೋಕ್

ತುಮಕೂರಿನಲ್ಲಿ ಸೋಮವಾರ (ಏ 22) ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾರ್ಯಕರ್ತರು ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ನೇಹಾ ಹಿರೇಮಠ ಹತ್ಯೆ ಖಂಡಿಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ಆರ್.ಅಶೋಕ್, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ. ನೇಹಾ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಅಪರಾಧಿ ಸ್ಥಾನದಲ್ಲಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು-ನಕ್ಸಲಿಸಂ ಬಂತು, ಕಾಂಗ್ರೆಸ್ ಬಂತು-ಭಯೋತ್ಪಾದನೆ ಬಂತು, ಕಾಂಗ್ರೆಸ್ ಬಂತು-ಲವ್ ಜಿಹಾದ್ ಬಂತು, ಲವ್ ಜಿಹಾದ್ ಹೆಸರಲ್ಲಿ ನೇಹಾ ಕಗ್ಗೊಲೆಯಾಗಿದೆ. ಇದನ್ನು ಇಡೀ ದೇಶವೇ ನೋಡುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ.ಪರಮೇಶ್ವರ ಅವರು ಮಾತ್ರ ಇದನ್ನು ಲವ್ ಕೇಸು ಎನ್ನುತ್ತಾರೆ. ನಾವು ಸಹ ಅದನ್ನೇ ಹೇಳುತ್ತಿರುವುದು. ಇವರಿಗೆ ಲವ್ ಎಂದರೇನು ಮತ್ತು ಲವ್ ಜಿಹಾದ್ ಎಂದರೇನು ಎಂಬ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲ' ಎಂದು ಹರಿಹಾಯ್ದರು.

ಕಾಂಗ್ರೆಸ್‌ನವರು ಮುಸ್ಲಿಂ ಯುವಕರಿಗೆ ಹಣ ಕೊಟ್ಟು ತರಬೇತಿ ನೀಡಿ ಕಳುಹಿಸುತ್ತಿರುವುದು ಲವ್ ಜಿಹಾದ್ ಅಲ್ಲದೇ ಬೇರೇನು? ಈ ಪ್ರಕರಣವನ್ನು ಕಾಂಗ್ರೆಸ್ನವರು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ರಾಜಕಾರಣದ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳ ವಿರೋಧ ಮಾಡುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಮುಸ್ಲಿಂ ಮೂಲಭೂತವಾದಿಗಳು ಬೆಂಕಿ ಹಚ್ಚಿದ್ದರು, ಆಗಲೂ ಕಾಂಗ್ರೆಸ್‌ವರು ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದರು' ಎಂದು ವ್ಯಂಗ್ಯವಾಡಿದರು.

ಮುಸ್ಲಿಮರ ವಿಚಾರ ಬಂದಾಗ ಯಾರಿಗೆ ತೊಂದರೆಯಾದರೂ ಸುಮ್ಮನಾಗುತ್ತಾರೆ ಎಂದು ಆಕ್ರೋಶ ಹೊರ ಹಾಕಿದ ಅವರು ಇಂತಹ ವಿಚಾರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೌನರಾಮಯ್ಯ ಆಗುತ್ತಾರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮುಸ್ಲಿಂ ಯುವಕರನ್ನು ಬ್ರದರ್ಸ್ ಎಂದು ಹೇಳುತ್ತಾರೆ, ಡಿ.ಕೆ. ಶಿವಕುಮಾರ್ ಅವರೇ ಸಿಸ್ಟರ್‌ಗಳ ರಕ್ಷಣೆಗೂ ಗಮನ ಹರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ, ನೇಹಾ ಕೊಲೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ, ಮಾನ ಮರ್ಯಾದೆ ಏನೂ ಇಲ್ಲದಂತಾಗಿದೆ. ಬೇರೆಯವರು ಮುಖ್ಯಮಂತ್ರಿಯಾಗಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಿದ್ದರು, ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಏನೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಬಂದರೆ ಡೇಂಜರ್, ಕಾಂಗ್ರೆಸ್ ಬಂದರೆ ಕೊಲೆ, ಸುಲಿಗೆ, ಹತ್ಯೆ, ಕಾಂಗ್ರೆಸ್ ಬಂದರೆ ನಕ್ಸಲಿಸಂ, ಕಾಂಗ್ರೆಸ್ ಬಂದರೆ ಬರಗಾಲ, ಕಾಂಗ್ರೆಸ್ ಬಂದರೆ ಭಯೋತ್ಪಾದಕರ ರಕ್ಷಣೆಯಾಗುತ್ತದೆ, ಕಾಂಗ್ರೆಸ್ ಬಂದರೆ ಕರೆಂಟ್ ಇಲ್ಲ, ಅಕ್ಕಿಯನ್ನೂ ಕೊಡಲ್ಲ, ಅವರು ಕೊಡುವುದು ಎಣ್ಣೆ ಬಿಟ್ಟರೆ ಏನೂ ಕೊಡಲ್ಲ, ನೇಹಾ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಪರಾಧ ಸ್ಥಾನದಲ್ಲಿದೆ ಎಂದು ಕಿಡಿಕಾರಿದರು.

ಚೊಂಬು ಜಾಹೀರಾತಿಗೆ ಟೀಕೆ

ಚೊಂಬು ಜಾಹೀರಾತಿನಲ್ಲಿ ಹಿಂದೂಗಳ ರಕ್ತ ತುಂಬಿ ಚೆಲ್ಲುತ್ತಿರುವುದು ಕಾಂಗ್ರೆಸ್ನ ಪ್ರತೀಕವಾಗಿದೆ, ನಾವು ಸಹ ಕಾಂಗ್ರೆಸ್ ವಿರುದ್ಧ ಡೇಂಜರ್ ಎಂಬ ರೀತಿಯಲ್ಲಿ ಜಾಹೀರಾತು ನೀಡಿದ್ದೇವೆ ಎಂದ ಅವರು, ರಾಮೇಶ್ವರ ಕೆಫೆ ಸ್ಫೋಟ, ಜೈಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಿದಾಗಲೂ ನಾವು ಹೋರಾಟ ಮಾಡಿದ್ದೇವೆ, ಈಗಲೂ ಮಾಡುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಶಾಸಕರಾದ ಬಂಡೆಪ್ಪ ಕಾಶಂಪೂರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿಶಂಕರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಸೇರಿದಂತೆ ಉಭಯ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ