Karnataka Election 2023 LIVE: ಕಾಗಿನೆಲೆ ಮಠಕ್ಕೆ ಅಮಿತ್ ಶಾ ಭೇಟಿ, ನಾಳೆ ಮಂಗಳೂರಿನಲ್ಲಿ ರೋಡ್ ಶೋ
Apr 28, 2023 10:19 PM IST
ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಈಗ ಚುನಾವಣಾ ಪ್ರಚಾರ ರಂಗೇರಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್‌ಆದ್ಮಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಜೋರಾಗಿದೆ.
ಪರಮೇಶ್ವರ್ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪ್ರಚಾರದ ವೇಳೆ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆದಿದ್ದನ್ನು ಖಂಡಿಸಿ ಹಾಗೂ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕಾಗಿನೆಲೆ ಮಠಕ್ಕೆ ಅಮಿತ್ ಶಾ ಭೇಟಿ
ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ದಾವಣಗೆರೆಯ ಕಾಗಿನೆಲೆ ಮಠಕ್ಕೆ ಭೇಟಿ ನೀಡಿದ್ದಾರೆ.
ಡಾ ಜಿ ಪರಮೇಶ್ವರ್ ಮೇಲೆ ಕಲ್ಲೆಸೆತ; ತಲೆಗೆ ತೀವ್ರ ಗಾಯ
ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೈರೇನಹಳ್ಳಿ ಗ್ರಾಮದಲ್ಲಿ ಚುನಾವಣ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಡಿಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಡಾ. ಜಿ ಪರಮೇಶ್ವರ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಅವರ ತಲೆಗೆ ತೀವ್ರ ಗಾಯವಾಗಿದೆ.
ಮಳೆಯಲ್ಲಿಯೂ ಬೊಮ್ಮಾಯಿ ರೋಡ್ ಶೋ
ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಸುರಿಯುವ ಮಳೆಯಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದ್ದಾರೆ.
ಮಂಗಳೂರಿನಲ್ಲಿ ನಾಳೆ (ಏ.29) ಅಮಿತ್ ಶಾ ರೋಡ್ ಶೋ
ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಅದರ ಭಾಗವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶನಿವಾರ (ಏ.29) ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಕಾಂಗ್ರೆಸ್ ಸಮಾವೇಶಕ್ಕೆ ವರುಣ ಅಡ್ಡಿ
ಕಲಬುರಗಿ ಜಿಲ್ಲೆಯ ಜೇರ್ವಗೀ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಾರ್ವಜನಿಕ ಸಭೆ ವೇಳೆ ಮಳೆ ಬಂದಿದ್ದು, ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ. ಆದರೂ ರಾಹುಲ್ ಗಾಂಧಿ ಅವರು ಮಳೆಯಲ್ಲಿಯೇ ಭಾಷಣ ಮಾಡಿದ್ದಾರೆ.
ಶ್ರೀದೇವಿ ನಾಯಕ್ ಪರ ಸಿದ್ದರಾಮಯ್ಯ ಮತ ಯಾಚನೆ
ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು ಪಕ್ಷದ ಅಭ್ಯರ್ಥಿ ಶ್ರೀದೇವಿ ನಾಯಕ್ ಅವರ ಪರ ಮತ ಯಾಚಿಸಿದರು.
ಸಿಎಂ ಬೊಮ್ಮಾಯಿ ರೋಡ್ ಶೋ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಹಾಪುರ ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ ಪರವಾಗಿ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜುಗೌಡ, ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ, ನಟಿ ಶೃತಿ ಹಾಜರಿದ್ದರು.
ಕಲಬುರಗಿಯಲ್ಲಿ ರಾಹುಲ್ ಗಾಂಧಿ
ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಇಲ್ಲಿ ಸರ್ಕಾರ ರಚಿಸುತ್ತೇವೆ,ಇದನ್ನೂ ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಬಿಜೆಪಿ 40 ನಂಬರ್ ಅನ್ನು ಹೆಚ್ಚು ಪ್ರೀತಿಸುವುದರಿಂದ ಕರ್ನಾಟಕದ ಜನರು ಅವರಿಗೆ ಕೇವಲ 40 ಸ್ಥಾನಗಳನ್ನು ನೀಡುತ್ತಾರೆ ಎಂಬುದೂ ನಿಶ್ಚಿತವಾಗಿದೆ. ಕಾಂಗ್ರೆಸ್ ಕನಿಷ್ಠ 150 ಸ್ಥಾನಗಳನ್ನು ಪಡೆಯಲಿದೆ ಎಂದು ಕಲಬುರಗಿಯಲ್ಲಿ ರಾಹುಲ್ ಗಾಂಧಿ ಹೇಳಿದರು.
ಕೊತ್ತಲ ಬಸವೇಶ್ವರ ದರ್ಶನ ಪಡೆದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಕಲಬುರ್ಗಿ ಜಿಲ್ಲೆಯ ಸೇಡಂನ ಕೊತ್ತಲ ಬಸವೇಶ್ವರ ದರ್ಶನ ಪಡೆದರು. ನಟಿ ಶೃತಿ, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್. ಸದಾಶಿವ ಸ್ವಾಮೀಜಿ, ಸಿದ್ದಪ್ಪ ತಳ್ಳಳಿ ಹಾಜರಿದ್ದರು.
ಕಾಂಗ್ರೆಸ್ ಸೇರಿದ ಗೀತಾ ಶಿವಕುಮಾರ್
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಜನ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ - ಸಿಎಂ ಬೊಮ್ಮಾಯಿ
ಜನರನ್ನು ಗುಲಾಮರೆಂದು ತಿಳಿದುಕೊಂಡಿರುವ ಕಾಂಗ್ರೆಸ್ ಮತ ಬ್ಯಾಂಕ್ ಎಂದು ತಿಳಿದುಕೊಂಡು ಏನು ಬೇಕಾದರೂ ಮಾತಾಡಿದರೆ ನಡೆಯುತ್ತದೆ ಎಂಬ ಅಮಲಿನಲ್ಲಿ ಇದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿ ಅಶ್ವತ್ಥ್ ನಾರಾಯಣ ಮತಯಾಚನೆ
ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ ಅವರು ವೈಯಾಲಿಕಾವಲ್ ಪ್ರದೇಶದ ಭುವನೇಶ್ವರಿ ನಗರದಲ್ಲಿ ಇಂದು ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದ್ದಾರೆ.
ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಗಲಾಟೆ - ಓರ್ವನಿಗೆ ಗಾಯ
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಓರ್ವ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಮಾಡಿದ ಜೈರಾಮ್ ರಮೇಶ್
ಆದಿಚುಂಚನಗಿರಿ ಮಠದ 72ನೇ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿಯವರೊಂದಿಗೆ ನಾನು ಮತ್ತು ರಾಜೀವ್ ಗೌಡ ಅವರು ಸುಮಾರು ಒಂದು ಗಂಟೆ ಮಾತಾನಡಿದೆವು. ನನ್ನ ಸ್ನೇಹಿತರಾದ NR ನಾರಾಯಣ ಮೂರ್ತಿಯವರಂತೆ ಸ್ವಾಮೀಜಿಯವರು NIE ಮೈಸೂರು ಮತ್ತು IIT ಯ ಹಳೆಯ ವಿದ್ಯಾರ್ಥಿ. ನಾವು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ಆಳ ಚರ್ಚೆ ನಡೆಸಿದ್ದೇವೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಹುಣಸೂರು, ನಂಜನಗೂಡಿನಲ್ಲಿ ಕಟೀಲ್ ಪ್ರಚಾರ
ಮತ್ತೊಂದೆಡೆ ಹುಣಸೂರು, ನಂಜನಗೂಡ ಹಾಗೂ ಕೃಷ್ಣರಾಜದಲ್ಲಿ ಬಿಜೆಪಿ ರಾಷ್ಟ್ರೀಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರೋಡ್ ಶೋ ನಲ್ಲಿ ಭಾಗವಹಿಸಿ ಮತಯಾಚನೆ ಮಾಡ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪರ ಬಿಎಸ್ ವೈ ಮತಯಾಚನೆ
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರು ಕಮಲಾಪುರ, ಅಫ್ಜಲ್‌ಪುರ, ಯಡ್ರಾಮಿ ಹಾಗೂ ಅಳಂದದಲ್ಲಿಂದು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ.
ಮಲೆನಾಡಿನಲ್ಲಿ ಜೆಪಿ ನಡ್ಡಾ ಕೆೇಸರಿ ಅಭ್ಯರ್ಥಿಗಳ ಪರ ಮತಬೇಟೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕಳಸ, ಸೊರಬ, ಶಿರಾಳಕೊಪ್ಪ ಇಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3ರ ವರೆಗೆ ಕ್ಯಾಂಪೇನ್ ಮಾಡಲಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿಂದು ಅಮಿತ್ ಶಾ ಪ್ರಚಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಣ್ಣಿಗೇರಿ, ಲಕ್ಷ್ಮೇಶ್ವರ, ಅಕ್ಕಿ ಆಲೂರು, ಹರಿಹರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಶಿವಣ್ಣ ಕ್ಯಾಂಪೇನ್
ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಸೇವೆ ಅವೈಜ್ಞಾನಿಕ ಯೋಜನೆ - ಕಟೀಲ್ ಟೀಕೆ
ಕಾಂಗ್ರೆಸ್ ನ ತನ್ನ 5ನೇ ಗ್ಯಾರೆಂಟಿ ಯೋಜನೆಗೆ ಘೋಷಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಗೆಲ್ಲೊದೇ ಗ್ಯಾರಂಟಿ ಇಲ್ಲ, ಕಾಂಗ್ರೆಸ್ನದ್ದೇ ಗ್ಯಾರಂಟಿ ಇಲ್ಲ, ಹಾಗಾಗಿ ಗ್ಯಾರಂಟಿಗಳನ್ನು ಕೊಡುತ್ತಾ ಹೋಗುತ್ತಾರೆ. ಕಾಂಗ್ರೆಸ್‌ನ ಗ್ಯಾರಂಟಿಗಳು ಧಾರಾವಾಹಿಗಳಿದ್ದ ಹಾಗೆ. ವಾರ ವಾರ ಬಿಡುಗಡೆಯಾಗುತ್ತಾ ಹೋಗುತ್ತವೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಟೀಕಿಸಿದ್ದಾರೆ.
ಕಲಬುರಗಿ, ಯಾದಗಿರಿಯಲ್ಲಿ ಸಿಎಂ ಮತಬೇಟೆ
ಕಲಬುರಗಿ ಮತ್ತು ಯಾದಗಿರಿಯಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತಬೇಟೆಯಾಡಲಿದ್ದಾರೆ. ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಯಾಚನೆ ಮಾಡಲಿದ್ದಾರೆ.
ಗುಂಡೂರಾವ್ ಪರ ಡಿಕೆಶಿ ಕ್ಯಾಂಪೇನ್
ಬೆಂಗಳೂರಿನ ರಾಜಾಜಿನಗರ ಹಾಗೂ ಗಾಂಧಿನಗರದಲ್ಲಿಂದು ಮಧ್ಯಾಹ್ನದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಕ್ಯಾಂಪೇನ್ ಮಾಡಲಿದ್ದಾರೆ. ಸಂಜೆ 5.30ಕ್ಕೆ ಬಸವನಗುಡಿಯಲ್ಲಿ ನಡೆಯಲಿರುವ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಇಂದಿನಿಂದ ಮಾಜಿ ಪ್ರಧಾನಿ ದೇವೇಗೌಡರ ಅಬ್ಬರ ಪ್ರಚಾರ
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಇಂದಿನಿಂದ ಮೇ 8ರವರೆಗೆ 42 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಇಂದು ಕಾಂಗ್ರೆಸ್ ಸೇರ್ಪಡೆ
ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರ ಸಹೋದರ ಮಧು ಬಂಗಾರಪ್ಪ ಪರ ಅವರು ಪ್ರಚಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆ ಗೆಲ್ಲಲು ಕಾಂಗ್ರೆಸ್ ಮಹಾರಾಷ್ಟ್ರದಿಂದ ಜನರನ್ನು ಕರೆತರುತ್ತಿದೆ - ಸ್ಮೃತಿ ಇರಾನಿ
ಕರ್ನಾಟಕ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮಹಾರಾಷ್ಟ್ರದಿಂದ ಜನರನ್ನು ಕರೆತರುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿದ್ದಾರೆ.
5ನೇ ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ, ಇದು ಮಹಿಳೆಯರಿಗಾಗಿ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುವುದು ಎಂದು ರಾಹುಲ್ ಗಾಂಧಿ ಗುರುವಾರ ಘೋಷಣೆ ಮಾಡಿದರು. ಮಂಗಳೂರಿನ ಅಡ್ಯಾರು ಬಳಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರಿಗಾಗಿ ಮತ್ತೊಂದು ಯೋಜನೆ ಘೋಷಣೆ ಮಾಡಿದರು.
ಕ್ಷಮೆ ಯಾಚಿಸಿದ ಖರ್ಗೆ
ಪ್ರಧಾನಿ ಮೋದಿಯನ್ನು ವಿಷದ ಹಾವೆಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ತಪ್ಪಾಗಿ ಅರ್ಥೈಸಿ ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ಮೀನುಗಾರರಿಗೆ 10 ಲಕ್ಷ ರೂಪಾಯಿ ವಿಮೆ ಘೋಷಿಸಿದ ರಾಹುಲ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ 10 ಲಕ್ಷ ರೂಪಾಯಿ ವಿಮೆ ನೀಡುತ್ತೇವೆ. ಮೀನುಗಾರರ ಅಗತ್ಯತೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಅತ್ಯಂತ ಸೂಕ್ಷ್ಮವಾಗಿರುತ್ತದೆ ಮತ್ತು ನಿಮ್ಮ ಹಿತಾಸಕ್ತಿಗಳನ್ನು ನಾವು ರಕ್ಷಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಡುಪಿಯಲ್ಲಿ ಬೆಸ್ತರ ಸಮುದಾಯದ ಜೊತೆಗಿನ ಸಂವಾದದಲ್ಲಿ ಹೇಳಿದರು.
ಉಲ್ಟಾ ಹೊಡೆದ ಖರ್ಗೆ
"ಮೋದಿ ವಿಷದ ಹಾವು ಇದ್ದಂಗೆ, ನೆಕ್ಕಿದ್ರೆ ಸತ್ರಿ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಮೋದಿಯನ್ನು ವಿಷದ ಹಾವು ಎಂದಿಲ್ಲ. ಬಿಜೆಪಿಗೆ ಹೇಳಿದ್ದು ಎಂದು ತಿಳಿಸಿದ್ದಾರೆ.
'ಮೋದಿ ವಿಷದ ಹಾವು' ಎಂದ ಖರ್ಗೆ
"ಮೋದಿ ಅಂದ್ರೆ ವಿಷದ ಹಾವು ಇದ್ದಂಗೆ. ನೀವೇನಾದ್ರು ಇದು ವಿಷದ ಹಾವು ಹೌದಾ ಅಲ್ವಾ ಅಂತ ನೋಡೋಣ ಅಂತ ನೆಕ್ಕಲು ಹೋಗಬೇಡಿ. ನೆಕ್ಕಿದ್ರೆ ಸತ್ರಿ ಅಂತ ಅರ್ಥ. ಹಾಗೆ, ನೀವು ಇದು ವಿಷ ಅಲ್ವೇನೋ ಮೋದಿ ಕೊಟ್ಯಾನೆ, ಒಳ್ಳೆ ಮನುಷ್ಯ ಇದಾನ ಪ್ರಧಾನ್ ಮಂತ್ರಿ, ನಾವ್ ಸ್ವಲ್ಪ ನೆಕ್ಕಿ ನೋಡೋಣ ಅಂತ ವಿಷವನ್ನು ನೆಕ್ಕಿದ್ರೆ ನೀವು ಮಲಗೇ ಬಿಡ್ತೀರ ಅಲ್ಲಿ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಪಿಎಂ ಮೋದಿ ರೋಡ್ ಶೋ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಸ್ಟಾರ್ ಪ್ರಚಾರಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 29 ರಂದು ರಾಜ್ಯಕ್ಕೆ ಆಗಮಿಸಲಿದ್ದು, ಅಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಪ್ರಚೋದನಕಾರಿ ಭಾಷಣ ಆರೋಪ; ಅಮಿತ್ ಶಾ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್
ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಮತ್ತು ಬಿಜೆಪಿ ರ‍್ಯಾಲಿ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಡಾ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರು ದ್ವೇಷ ಭಾಷಣದ ಆರೋಪ ಮಾಡಿದ್ದಾರೆ.
ಕರುನಾಡಲ್ಲಿ ಕಮಲ ಅರಳಿಸಲು ಕಾರ್ಯಕರ್ತರು ಸಜ್ಜಾಗಿ: ಪ್ರಧಾನಿ ಮೋದಿ ಕರೆ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆಯ ಮೂಲಕ ಕರ್ನಾಟಕದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಜ್ಜಾಗಬೇಕೆಂದು ಪ್ರಧಾನಿ ಮೋದಿ ಇದೇ ವೇಳೆ ಕರೆ ನೀಡಿದರು.
ಬಿಜೆಪಿ ಪ್ರಚಾರ ಅಬ್ಬರ ಬಲು ಜೋರು; ಇಲ್ಲೆಲ್ಲಾ ಓಡಾಡಲಿದೆ ಬಿಎಸ್‌ವೈ, ಬೊಮ್ಮಾಯಿ ನಿರ್ಮಲಾ ಸೀತಾರಾಮನ್ ಕಾರು
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಆಡಳಿತಾರೂಢ ಬಿಜೆಪಿ ಭರ್ಜರಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಉತ್ತರ, ಮಧ್ಯಾಹ್ನ 1:30ಕ್ಕೆ ರಾಮದುರ್ಗ ಮತ್ತು ಮಧ್ಯಾಹ್ನ 3:30ಕ್ಕೆ ಮುದ್ದೇಬಿಹಾಳದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬೆಳಗ್ಗೆ 9:30ಕ್ಕೆ ಮತ್ತು 11 ಗಂಟೆಗೆ ಮಂಗಳೂರು ದಕ್ಷಿಣ ಮತ್ತು ಸುಳ್ಯದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ಯೋಗಿ ಆದಿತ್ಯನಾಥ್ ಕರ್ನಾಟಕ ಪ್ರವಾಸದಿಂದ ಕಮಲ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿನ್ನೆ(ಏ.26) ಕರ್ನಾಟಕದಲ್ಲಿ ಮಿಂಚಿನ ಸಂಚಾರ ನಡೆಸಿದ್ದು, ಬುಲ್ಡೋಜರ್ ಬಾಬಾ ಖ್ಯಾತಿಯ ಬಿಜೆಪಿ ನಾಯಕನ ಪ್ರಚಾರದಿಂದಾಗಿ, ಕರ್ನಾಟಕದ ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದೆ.
40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆದು ಜನಪರ ಆಡಳಿತ ನೀಡುವುದು ಕಾಂಗ್ರೆಸ್‌ನ ಸಂಕಲ್ಪ: ಖರ್ಗೆ
ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಾರ ನಡೆಸಿದ್ದು, 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆದು ಜನಪರ ಆಡಳಿತ ನೀಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ. ಸಮರ್ಥ, ಭ್ರಷ್ಟಾಚಾರ ಮುಕ್ತ, ಪ್ರಗತಿಪರ ಸರ್ಕಾರ ರಾಜ್ಯದ ಜನರ ಆಯ್ಕೆಯಾಗಲಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಇನ್ನೇನಿದ್ದರೂ ಅಭಿವೃದ್ಧಿ ಜಪ: ಗೆಲುವು ನಿಶ್ಚಿತ ಎಂದ ಬಿಜೆಪಿ
ಮಂಡ್ಯ ಜಿಲ್ಲೆಯಲ್ಲಿ ಇನ್ನು ಮುಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ತಂತ್ರ-ಕುತಂತ್ರಗಳು ನಡೆಯುವುದಿಲ್ಲ. ಜಿಲ್ಲೆಯಲ್ಲಿ ಇನ್ನೇನಿದ್ದರೂ ಅಭಿವೃದ್ಧಿ ಜಪ ಮಾತ್ರ ಎಂದು ಬಿಜೆಪಿ ಗೆಲುವಿನ ಆತ್ಮವಿಶ್ವಾಸ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯ ಲಿಂಗಾಯತ ಸ್ವಾಭಿಮಾನ ಕೆಣಕುವ ದುಸ್ಸಾಹಸ ಮಾಡದಿರಲಿ: ಯತ್ನಾಳ್
ಅಧಿಕಾರಕ್ಕೋಸ್ಕರ ಯಾವುದೇ ಸಮುದಾಯವನ್ನು ಕೀಳಾಗಿ ಕಾಣುವುದು ಸಲ್ಲ ಎಂದಿರುವ ವಿಜಯಪುರ ಬಿಜೆಪಿ ಅಭ್ಯರ್ಥಿ ಬಸವನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯ ಅವರು ಲಿಂಗಾಯತ ಸ್ವಾಭಿಮಾನವನ್ನು ಕೆಣಕುವ ದುಸ್ಸಾಹಸ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಕನಕಪುರದಲ್ಲಿ ಅಮೇಥಿ ಫಲಿತಾಂಶ ಪುನರಾವರ್ತನೆ: ಆರ್. ಅಶೋಕ್ ಅಭಿಮತ
ಕನಕಪುರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿರುವ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್, ಉತ್ತರ ಪ್ರದೇಶದ ಅಮೇಥಿ ಲೋಕಸಭೆ ಚುನಾವಣೆಯ ಫಲಿತಾಂಶ ಇಲ್ಲೂ ಪುನರಾವರ್ತನೆಯಾಗಲಿದೆ ಎಂದು ಹೇಳಿದ್ದಾರೆ. ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು, ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು.