Pesarattu Recipe: ಆಂಧ್ರ ಶೈಲಿಯಲ್ಲಿ ಪೆಸರಟ್ಟು ಮಾಡಬೇಕಾ? ಇಲ್ಲಿದೆ ಸುಲಭ ವಿಧಾನ
Mar 17, 2024 11:17 AM IST
ಪೆಸರಟ್ಟು (pc: twitter)
- Pesarattu Recipe In Kannada: ನೀವು ದಕ್ಷಿಣ ಭಾರತೀಯ ತಿಂಡಿ ತಿನಿಸುಗಳನ್ನು ಇಷ್ಟಪಡುತ್ತೀರಾ? ಅದರಲ್ಲೂ ಸುಲಭವಾದ ಆಂಧ್ರ ಶೈಲಿಯ ಪೆಸರಟ್ಟು ಅಥವಾ ಹೆಸರುಕಾಳು ದೋಸೆ ಮಾಡಲು ಬಯಸುತ್ತೀರಾ ? ಹಾಗಾದ್ರೆ ಮನೆಯಲ್ಲಿಯೇ ಪೆಸರಟ್ಟು ಮಾಡುವ ಸುಲಭ ವಿಧಾನದ ಇಲ್ಲಿದೆ.
ಪ್ರತಿನಿತ್ಯವೂ ಬೆಳಗ್ಗೆ ಬ್ರೇಕ್ಫಾಸ್ಟ್ ಏನು ಸ್ಪೆಷಲ್ ಮಾಡೋದು ಎನ್ನುವ ಯೋಚನೆ ಇಲ್ಲದವರು ಯಾರು ಹೇಳಿ. ನಾಳೆ ಬೆಳಗ್ಗಿನ ತಿಂಡಿಗೆ ಇಂದಿನಿಂದಲೇ ಚಿಂತೆ ಶುರುವಾಗುತ್ತದೆ. ಸುಲಭದಲ್ಲಿ ತಯಾರಿಸುವಂತಿರಬೇಕು, ಮನೆಮಂದಿಗೆ ಅದರಲ್ಲೂ ಮಕ್ಕಳಿಗೂ ಇಷ್ಟವಾಗುವಂತಿರಬೇಕು ಮಾತ್ರವಲ್ಲದೇ ಆರೋಗ್ಯಕರವೂ ಆಗಿರುವಂತಹ ತಿಂಡಿಯನ್ನೇ ಮಾಡಬೇಕೆಂದು ಯೋಚಿಸುವ ತಾಯಂದಿರೇ ನಮ್ಮ ನಿಮ್ಮ ನಡುವೆ ಇರುವವರು. ಅಂಥವರಿಗಾಗಿ ಸುಲಭದಲ್ಲಿ ತಯಾರಿಸಬಹುದಾದ ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿಯ ರೆಸಿಪಿ ಇಲ್ಲಿದೆ.
ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ತಯಾರಿಸುವ ಪೆಸರಟ್ಟು ಅಥವಾ ಹೆಸರು ಕಾಳು ದೋಸೆ ರುಚಿಕರವಾಗಿರುವುದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಠಿಕಾಂಶಗಳಿಂದ ಕೂಡಿದೆ. ಹೆಸರು ಕಾಳು ಮತ್ತು ಮಸಾಲೆಗಳಿಂದ ತಯಾರಿಸಲ್ಪಡುವ ಈ ದೋಸೆಯನ್ನು ತಿಂದರೆ ನಾಲಿಗೆಯ ರುಚಿ ಹೆಚ್ಚುವುದರ ಜೊತೆಗೆ ದೇಹಕ್ಕೆ ಪ್ರೋಟೀನ್ ಮತ್ತು ಫೈಬರ್‌ನಂತಹ ಅಂಶಗಳು ಲಭ್ಯವಾಗುತ್ತವೆ. ವಿಶೇಷವಾಗಿ ಸಸ್ಯ ಆಧಾರಿತ ಪ್ರೋಟೀನ್ ಅನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಲು ಬಯಸುವ ಸಸ್ಯಾಹಾರಿಗಳಿಗಂತೂ ಇದು ಉತ್ತಮ ಆಯ್ಕೆಯಾಗಿದ್ದು, ತೆಂಗಿನ ಕಾಯಿ ಚಟ್ನಿಯೊಂದಿಗೆ ಇದನ್ನು ಸವಿಯಬಹುದು.
ಪೆಸರಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು:
ಒಂದು ಕಪ್ ಹೆಸರುಕಾಳು
ಕಾಲು ಕಪ್ ಅಕ್ಕಿ
2 ಹಸಿ ಮೆಣಸಿನಕಾಯಿಗಳು
2 ಚಿಕ್ಕ ಶುಂಠಿ ತುಂಡುಗಳು
1 ಚಮಚ ಜೀರಿಗೆ
ಒಂದು ಹಿಡಿ ಕೊತ್ತಂಬಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಪೆಸರಟ್ಟು ಮಾಡುವ ವಿಧಾನ:
1. ಪೆಸರಟ್ಟು ಅಥವಾ ಹೆಸರುಕಾಳು ದೋಸೆ ಮಾಡಲು ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಮೊದಲಿಗೆ ಹೆಸರುಕಾಳು ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಚೆನ್ನಾಗಿ ತೊಳೆದು, ಸುಮಾರು 4-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಿಮಗೆ ಸಮಯ ಕಡಿಮೆಯಿದ್ದರೆ, ನೀವು ಅವುಗಳನ್ನು ಕನಿಷ್ಠ 2 ಗಂಟೆಗಳ ಕಾಲವಾದರೂ ನೆನೆಸಬಹುದು.
2. ನೆನೆಸಿಟ್ಟ ಅಕ್ಕಿ ಹಾಗೂ ಹೆಸರುಕಾಳನ್ನು ನೀರಿನಿಂದ ಬೇರ್ಪಡಿಸಿ, ಬ್ಲೆಂಡರ್ಗೆ ವರ್ಗಾಯಿಸಿ.
3. ಅದರ ಜೊತೆಗೆ ಹಸಿರು ಮೆಣಸಿನಕಾಯಿಗಳು, ಶುಂಠಿ, ತಾಜಾ ಕೊತ್ತಂಬರಿ ಎಲೆಗಳು, ಜೀರಿಗೆ ಮತ್ತು ಉಪ್ಪನ್ನು ಮಿಕ್ಸಿ ಜಾರ್ಗೆ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ನಯವಾದ ರುಬ್ಬಿಕೊಂಡು ದೋಸೆ ಹಿಟ್ಟು ತಯಾರಿಸಿಕೊಳ್ಳಿ.
4. ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ ಸುಮಾರು 4-6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹುದುಗಲು ಬಿಡಿ. ಹುದುಗುವಿಕೆಯು ದೋಸೆಯ ಪರಿಮಳವನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೋಸೆ ಮೆತ್ತಗಾಗಲು ಕಾರಣವಾಗುತ್ತದೆ
5. ಹಿಟ್ಟು ಹುದುಗಿಸಿದ ನಂತರ, ಅದನ್ನು ಚೆನ್ನಾಗಿ ಕಲಸಿ
6. ನಾನ್ ಸ್ಟಿಕ್ ಪ್ಯಾನ್ ಅಥವಾ ದೋಸೆ ತವಾವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಪ್ಯಾನ್‌ನ ಮಧ್ಯಭಾಗದಲ್ಲಿ ಒಂದು ಲೋಟ ಹಿಟ್ಟನ್ನು ಸುರಿದು ವೃತ್ತಾಕಾರದಲ್ಲಿ ತೆಳುವಾಗಿ ದೋಸೆ ಎರೆಯಿರಿ. ದೋಸೆಯ ಅಂಚುಗಳ ಸುತ್ತಲೂ ಮತ್ತು ಮಧ್ಯದಲ್ಲಿ ಸ್ವಲ್ಪ ಎಣ್ಣೆಯನ್ನು ಸವರಿ.
7. ದೋಸೆ ಗೋಲ್ಡನ್ ಬ್ರೌನ್ ಕಲರ್ ಆಗುವವರೆಗೆ ಬೇಯಿಸಿ. ದೋಸೆಯನ್ನು ನಿಧಾನವಾಗಿ ತಿರುಗಿಸಿ ಮತ್ತು ಇನ್ನೊಂದು ಬದಿಯನ್ನು ಬೇಯಿಸಿಕೊಳ್ಳಿ. ಎರಡೂ ಬದಿ ಪರಿಪೂರ್ಣವಾಗಿ ಬೇಯಿಸಿ, ಈಗ ಪೆಸರಟ್ಟು ರೆಡಿ.
ತೆಂಗಿನಕಾಯಿ ಚಟ್ನಿ, ಶುಂಠಿ ಚಟ್ನಿ ಅಥವಾ ನಿಮ್ಮ ಆಯ್ಕೆಯ ಯಾವುದೇ ಚಟ್ನಿಯೊಂದಿಗೆ ಬಿಸಿ ಬಿಸಿಯಾದ ಪೆಸರಟ್ಟುವನ್ನು ಸವಿಯಿರಿ. ಸಾಂಬಾರ್ ಅಥವಾ ಮಸಾಲೆಯುಕ್ತ ಟೊಮೆಟೊ ಚಟ್ನಿಯೊಂದಿಗೆ ಸಹ ಪೆಸರಟ್ಟನ್ನು ಸವಿಯಬಹುದು. ಬೆಳಗ್ಗಿನ ಉಪಹಾರವನ್ನು ರುಚಿಕರವಾಗಿ ಹಾಗೂ ಪೋಷಕಾಂಶಭರಿತವಾಗಿ ತಿನ್ನಬೇಕೆಂದು ಬಯಸುವವರಿಗಿದು ಪೆಸರಟ್ಟು ಒಳ್ಳೆಯ ಆಯ್ಕೆ.