logo
ಕನ್ನಡ ಸುದ್ದಿ  /  ಜೀವನಶೈಲಿ  /  Forest Tales: ಅಭಿಮನ್ಯು ಆನೆಯ ಸರ್ಗೂಜ ಸಾಕ್ಷ್ಯಚಿತ್ರ ಯಾನ, ಹಸದೇವ್‌ ಆದಿವಾಸಿಗಳ ಅರಣ್ಯರೋದನ

Forest Tales: ಅಭಿಮನ್ಯು ಆನೆಯ ಸರ್ಗೂಜ ಸಾಕ್ಷ್ಯಚಿತ್ರ ಯಾನ, ಹಸದೇವ್‌ ಆದಿವಾಸಿಗಳ ಅರಣ್ಯರೋದನ

Umesha Bhatta P H HT Kannada

Jan 10, 2024 06:30 PM IST

ಛತ್ತೀಸಗಢದ ಸರ್ಗೂಜ ಜಿಲ್ಲೆಯ ಅರಣ್ಯರೋದನ ಹಾಗೂ ಕರ್ನಾಟಕದ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಕಥನ..

    • Abhimanyu and Sarguja Forest ಮೂರು ದಶಕದ ಹಿಂದೆ ಛತ್ತೀಸಗಢದ ಸರ್ಗೂಜಕ್ಕೆ ಆನೆ ಹಿಡಿಯಲು ನಮ್ಮ ಅಭಿಮನ್ಯು ಹೋಗಿತ್ತು. ಈಗ ಅದೇ ಸರ್ಗೂಜ ಭಾಗದಲ್ಲಿಕಲ್ಲಿದ್ದಲು ಗಣಿಯಿಂದ ಅರಣ್ಯ ಉಳಿಸುವ ಆದಿವಾಸಿಗಳ ಹೋರಾಟ ತೀವ್ರಗೊಂಡಿದೆ. ಈಗಲೂ ಅಲ್ಲಿ ಮತ್ತೆ ಆನೆ ಗದ್ದಲ. ಅಭಿಮನ್ಯುವಿನ ನೆನಪು ಮತ್ತೆ ಆಗುತ್ತಿದೆ.
ಛತ್ತೀಸಗಢದ ಸರ್ಗೂಜ ಜಿಲ್ಲೆಯ ಅರಣ್ಯರೋದನ ಹಾಗೂ ಕರ್ನಾಟಕದ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಕಥನ..
ಛತ್ತೀಸಗಢದ ಸರ್ಗೂಜ ಜಿಲ್ಲೆಯ ಅರಣ್ಯರೋದನ ಹಾಗೂ ಕರ್ನಾಟಕದ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಕಥನ..

ಸರ್ಗೂಜ ಎನ್ನುವುದು ಹಿಂದಿನ ಮಧ್ಯಪ್ರದೇಶ, ಈಗಿನ ಛತ್ತೀಸಗಢ ರಾಜ್ಯದಲ್ಲಿ ದಟ್ಟಾರಣ್ಯ ದಿಂದ ಅವೃತವಾದ ಜಿಲ್ಲೆ. ಈ ಸ್ಥಳಕ್ಕೂ ನಮ್ಮ ಕರ್ನಾಟಕಕ್ಕೂ ನಂಟಿದೆ. ಮೂರು ದಶಕದ ಹಾವಳಿ ಮಿತಿ ಮೀರಿತ್ತು. ಆನೆಗಳನ್ನು ಸೆರೆ ಹಿಡಿಯಬೇಕು. ಅವುಗಳ ಉಪಟಳ ತಪ್ಪಿಸಬೇಕು ಎನ್ನುವ ಬೇಡಿಕೆ ಸರ್ಗೂಜ ಭಾಗದಲ್ಲಿ ಜೋರಾಗಿತ್ತು. ಸ್ಥಳೀಯರ ಒತ್ತಡಕ್ಕೆ ಮಣಿದ ಮಧ್ಯಪ್ರದೇಶ ರಾಜ್ಯ ಸರ್ಕಾರ ಆನೆ ಸೆರೆ ಹಿಡಿಯಲು ಅನುಮತಿಯನ್ನು ನೀಡಿತು.

ಟ್ರೆಂಡಿಂಗ್​ ಸುದ್ದಿ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

Personality Test: ಚಿತ್ರದಲ್ಲಿ ಮೊದಲು ಕಂಡಿದ್ದೇನು? ನೀವು ನೇರ ಸ್ವಭಾವದವರಾ, ಮೌನಪ್ರೇಮಿಯೇ, ನಿಮ್ಮ ವ್ಯಕ್ತಿತ್ವ ತಿಳಿಸುವ ಚಿತ್ರವಿದು

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಸರ್ಗೂಜ ಅರಣ್ಯದಿಂದ ಹೊರ ಬರುತ್ತಿದ್ದ ಕಾಡಾನೆಗಳನ್ನು ಹಿಡಿಯುವುದು ಹೇಗೆ ಎನ್ನುವ ಪ್ರಶ್ನೆ ಎದುರಾದಾಗ ಮಧ್ಯಪ್ರದೇಶ ಅರಣ್ಯ ಇಲಾಖೆ ಚಿತ್ತ ಹರಿದಿದ್ದು ಕರ್ನಾಟಕದ ಕಡೆಗೆ. ಕರ್ನಾಟಕದ ಖೆಡ್ಡಾ ಆನೆಗಳು ಬಲಶಾಲಿ. ಅವುಗಳನ್ನು ತಂದು ಇಲ್ಲಿಯೂ ಆನೆ ಸೆರೆ ಕಾರ್ಯಾಚರಣೆ ಮಾಡಬಹುದು ಎನ್ನುವ ತೀರ್ಮಾನಕ್ಕೆ ಬಂದರು. ಅದರಂತೆ ಮೈಸೂರು ದಸರಾ ಅಂಬಾರಿ ಹೊರುವ ಗಜಪಡೆಯ ತಂಡದ ಈಗಿನ ಕ್ಯಾಪ್ಟನ್‌ ಅಭಿಮನ್ಯು ಸಹಿತ ಹಲವು ಆನೆಗಳನ್ನು ಆಗಲೇ ಸರ್ಗೂಜಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಕಾಡಾನೆಗಳನ್ನು ಸೆರೆ ಹಿಡಿಯುವಲ್ಲಿ ನಮ್ಮ ಆನೆಗಳ ಸಹಕಾರ ಬಹುವಾಗಿ ಬಳಕೆಯಾಗಿ ಕರ್ನಾಟಕದ ಆನೆಗಳ ಶಕ್ತಿಯ ಅರಿವೂ ಅಲ್ಲಿ ಆಗಿತ್ತು. ಮೂರು ತಿಂಗಳಿಗೂ ಅಧಿಕ ಕಾಲ ಅಲ್ಲಿ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಬಂದಿದ್ದವು. ಈ ಆನೆ ಸೆರೆ ಕಾರ್ಯಾಚರಣೆ ಆಗ The Last Migration - Wild Elephant Capture ಎನ್ನುವ ಹೆಸರಿನೊಂದಿಗೆ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಇದು ನಮ್ಮ ಅಭಿಮನ್ಯುವಿನ ಮೇಲಿನ ಅಭಿಮಾನ ಹೆಚ್ಚಿಸಿ ಈಗಲೂ ಅಪರೇಷನ್‌ ಎಂದರೆ ಅಭಿಮನ್ಯು ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.

ಮೂರು ದಶಕದ ನಂತರ ಸರ್ಗೂಜ

ಈಗ ಸರ್ಗೂಜ ಅರಣ್ಯವನ್ನು ನೆನಪಿಸಿಕೊಳ್ಳಲು ಕಾರಣವೂ ಇದೆ. ಇದೇ ಸರ್ಗೂಜ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆನೆಗಳ ಉಪಟಳ ಮತ್ತೆ ಜೋರಾಗಿದೆ. ಆನೆಗಳು ಹಿಂಡು ಹಿಂಡಾಗಿ ಊರುಗಳತ್ತ ಧಾವಿಸುತ್ತಿವೆ. ಅರಣ್ಯದಲ್ಲಿ ಆಗುತ್ತಿರುವ ಅಲ್ಲೋಲ ಕಲ್ಲೋಲದ ವಾತಾವರಣ ಆನೆಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅಷ್ಟೇ ಅಲ್ಲ. ಈ ಭಾಗದಲ್ಲಿ ಅನಾದಿ ಕಾಲದಿಂದಲೂ ವನದೇವತೆಯ ಆರಾಧನೆಯೊಂದಿಗೆ ಬದುಕು ಕಟ್ಟಿಕೊಂಡಿರುವ 20 ಸಾವಿರಕ್ಕೂ ಅಧಿಕ ಆದಿವಾಸಿಗಳ ಕುಟುಂಬಗಳಿಗೂ ಕಂಟಕ ಬಂದಿದೆ. ಈಗಾಗಲೇ ಒಂದು ದಶಕದಿಂದ ಆದಿವಾಸಿಗಳು, ಈ ಭಾಗದ ಸಂಘಟನೆಗಳು ಹೋರಾಟದ ಹಾದಿ ತುಳಿದಿವೆ.

ಇದರ ಹಿಂದಿರುವ ಕಾರಣ ಗಣಿಗಾರಿಕೆ. ಅದರಲ್ಲೂ ಕಲ್ಲಿದ್ದಲು ಗಣಿಗಾರಿಕೆಯಂತೂ ಸರ್ಗೂಜ ಜಿಲ್ಲೆಯ ಹಸದೇವ್‌ ಅರಣ್ಯ ಭಾಗದಲ್ಲಂತೂ ಭಾರೀ ಅನಾಹುತವನ್ನೇ ಮಾಡುತ್ತಿದೆ. ಹಸದೇವ್‌ ಅರಣ್ಯದಲ್ಲಿನ ಬರೋಬ್ಬರಿ 2 ಲಕ್ಷಗಳ ಮರಗಳನ್ನು ಹನನ ಮಾಡುವ ದೊಡ್ಡ ಯೋಜನೆಯಿದು. ಈಗಾಗಲೇ ಶೇ.30 ಕ್ಕೂ ಅಧಿಕ ಪ್ರದೇಶದಲ್ಲಿ ಗಣಿಗಾರಿಕೆ ವಿವಾದ, ಹೋರಾಟಗಳ ನಡುವೆ ಮುಗಿದೇ ಹೋಗಿದೆ. ಅರಣ್ಯದ ಅಂಚಿನಲ್ಲಿಯೇ ಅನಾದಿ ಕಾಲದಿಂದಲೂ ಜೀವನ ನಡೆಸಿಕೊಂಡು ಅರಣ್ಯದ ಉಳಿವಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿರುವ ಆದಿವಾಸಿಗಳು ಕೂಡ ಸಂಕಷ್ಟಕ್ಕೆ ಸಿಲುಕಿ ಅರಣ್ಯದ ಸಂಬಂಧ ಕಡಿದುಕೊಳ್ಳುವ ಸ್ಥಿತಿಗೆ ಬಂದಿದ್ಧಾರೆ.

ಆದಿವಾಸಿಗಳ ಆಕ್ರೋಶ

ಇದರಿಂದ ಆದಿವಾಸಿಗಳ ಹೋರಾಟವಂತೂ ಅರಣ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೋರಾಗಿಯೇ ನಡೆದಿದೆ. 12 ವರ್ಷದಿಂದ ಹೋರಾಟ ಮಾಡುತ್ತಲೇ ಇದ್ದಾರೆ. ನಮ್ಮ ಹೋರಾಟ ನಿಲ್ಲೋಲ್ಲ. ಗಣಿ ಕಬಂಧಬಾಹುಗಳಿಂದ ನಮ್ಮ ಕಾಡನ್ನು, ಊರನ್ನು ಉಳಿಸಿಕೊಳ್ಳುತ್ತೇವೆ ಎನ್ನುವುದು ಅವರ ಒಕ್ಕೊರಲ ದನಿ. ಅವರ ದನಿಯನ್ನು ಅಧಿಕಾರಸ್ಥರು ಕೇಳಿಸಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು, ರಾಜಕೀಯ ನೇತಾರರು ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಸುಮ್ಮನಿದ್ದು, ಸೋತಾಗ ಜನರ ಕಣ್ಣೊರೆಸುವ ತಂತ್ರ ಮೆರೆಯುತ್ತಿದ್ದಾರೆ. ಇದು ಕೇಂದ್ರ, ರಾಜ್ಯ ಸರ್ಕಾರ ಎನ್ನುವ ಇಲ್ಲವೇ ಇಂತಹುದೇ ರಾಜಕೀಯ ಪಕ್ಷ ಎನ್ನುವ ಉದಾಹರಣೆ ನೀಡುವ ಹಾಗಿಲ್ಲ. ಅರಣ್ಯ ನಾಶದ ಹಿಂದೆ ಇವರೆಲ್ಲರೂ ಛತ್ತೀಸಗಢದ ಈ ಗಣಿ ಉದ್ಯಮದ ಭಾಗಿದಾರರೇ.

ಹಸದೇವ್‌ ಅರಣ್ಯ ಹಸನಾಗಿಲ್ಲ

ಉತ್ತರ ಛತ್ತೀಸಗಢ ರಾಜ್ಯ ಈಗಲೂ ದಟ್ಟ ಅರಣ್ಯದಿಂದ ಕೂಡಿದ ಪ್ರದೇಶ. ಇದರಲ್ಲಿ ಹಸದೇವ್‌(Hasdeo) ಅರಣ್ಯ ಪ್ರಮುಖವಾದದ್ದು. ಇಲ್ಲಿ ಹಸದೇವ್‌ ನದಿಯೂ ಹರಿಯುತ್ತದೆ. ಇದು ನಾಲ್ಕೈದು ಜಿಲ್ಲೆಗಳ ಜೀವ ನಾಡಿ. ನಮ್ಮ ಕಾವೇರಿ ನದಿ ರೀತಿ ಕಾಡಿನ ನಡುವೆಯೇ ಹರಿಯುತ್ತಾ ಹಸಿರು ಪ್ರದೇಶ ರೂಪಿಸಿದೆ. ಶತಮಾನಗಳಿಂದ ಹಸದೇವ್‌ ನದಿ ಹಾಗೂ ಅರಣ್ಯ ಪ್ರದೇಶ ಅಸ್ಮಿತೆಯೂ ಹೌದು. ಇದಕ್ಕೆ ಹೊಂದಿಕೊಂಡಂತೆ ಕಾನ್ಹಾ ಸೇರಿದಂತೆ ಹಲವು ಹುಲಿ ಯೋಜನೆ ಪ್ರದೇಶಗಳು, ಆನೆ ಕಾರಿಡಾರ್‌ಗಳು ಇವೆ. ವನ್ಯಜೀವಿಗಳು, ಪಕ್ಷಿ ಸಂಕುಲಕ್ಕೂ ಈ ಅರಣ್ಯವೇ ಆಸರೆ.

ಕೆಲ ವರ್ಷಗಳಿಂದ ಇಲ್ಲಿನ ಅರಣ್ಯದ ಮೇಲೆ ಕೆಲವರ ಕಣ್ಣು ಬಿದ್ದಿತ್ತು. ಹಸದೇವ್‌ ಅರಣ್ಯ ಪ್ರದೇಶದಲ್ಲಿನ ಕಲ್ಲಿದ್ದಲು ಗಣಿಗಾರಿಕೆಗೆ ದೊಡ್ಡ ಆದಾಯ ಮೂಲವಾಗಬಹುದು ಎನ್ನುವುದು ದೂರದೃಷ್ಟಿಯ ಮೂಲ. ಇದಕ್ಕೆ ದಶಕಗಳಿಂದಲೂ ಪ್ರಯತ್ನಗಳು ನಡೆಯುತ್ತಲೂ ಬಂದಿವೆ. ಆದರೆ 2010 ರ ಸಮಯದಲ್ಲಿ ಯುಪಿಎ 2 ಸರ್ಕಾರ ಸಾಕಷ್ಟು ವಿರೋಧಗಳ ನಡುವೆಯೂ ಕಲ್ಲಿದ್ದಲು ಗಣಿಗಾರಿಕೆ ಅನುಮತಿ ನೀಡಿತು. ಮರು ವರ್ಷವೇ ಇಲ್ಲಿ ಚಟುವಟಿಕೆ ಒಂದು ಭಾಗದಿಂದ ಶುರುವಾಯಿತು. ಈ ಭಾಗದ ಆದಿವಾಸಿ ಸಂಘಟನೆಗಳು, ಹಲವು ಸಂಘ ಸಂಸ್ಥೆಗಳು ಅರಣ್ಯದಲ್ಲಿ ಗಣಿ ಗದ್ದಲ ಬೇಡವೇ ಬೇಡ ಎಂದು ಗಟ್ಟಿ ದನಿ ಎತ್ತರಿಸಿ ಧಿಕ್ಕಾರ ಕೂಗಿದವು. ಆಗ ಛತ್ತೀಸಗಢದಲ್ಲಿದ್ದ ಬಿಜೆಪಿ ಸರ್ಕಾರವೂ ಇದರ ಭಾಗವೇ ಆಗಿ ಹೋಯಿತು. ನಿಧಾನವಾಗಿ ಗಣಿಗಾರಿಕೆ ಇಲ್ಲಿ ವಿಸ್ತರಣೆಯಾಗುತ್ತಲೇ ಹೋಯಿತು. ಕೋರ್ಟು ಕಟ್ಟಳೆಗಳ ಹೋರಾಟ ಪ್ರಬಲವಾಗಿದ್ದರೂ ಅದ್ಯಾವುದು ಗಣಿ ಉದ್ಯಮವನ್ನು ಬಾಧಿಸಿಯೇ ಇಲ್ಲ. ಅಲ್ಲಲ್ಲಿ ನಿಂತರೂ ಮತ್ತೊಂದು ಕಡೆ ಇದರ ಚಟುವಟಿಕೆ ಎನ್ನುವಂತಹ ಸನ್ನಿವೇಶ. ಕೇಂದ್ರದಲ್ಲಿ ಯುಪಿಎ ಹೋಗಿ ಎನ್‌ಡಿಎ ಬಂದರೂ, ಛತ್ತೀಸಗಢದಲ್ಲಿ ಬಿಜೆಪಿ ಸೋತು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಬದಲಾವಣೆ ಮಾತ್ರ ಶೂನ್ಯವೇ ಎಂಬ ಸ್ಥಿತಿ ಮಾತ್ರವೇ ಸತ್ಯ.

ಇಲ್ಲಿನ ಕಲ್ಲಿದ್ದಲು ರಾಜ್ಯಸ್ಥಾನ ಗ್ರಾಮೀಣ ವಿದ್ಯುತ್‌ ಯೋಜನೆಗೆ ಹೋಗುತ್ತದೆ. ಅದಾನಿ ಸಮೂಹ ಈ ಗಣಿಗಾರಿಕೆ ಗುತ್ತಿಗೆ ಪಡೆದಿದೆ. ರಾಜಸ್ಥಾನದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಗಣಿಗೆ ಅನುಮತಿ ನೀಡುವ ಒತ್ತಡ ಹೇರಿತು. ಇಲ್ಲಿದ್ದ ಕಾಂಗ್ರೆಸ್‌ ಸರ್ಕಾರ ವಿರೋಧದ ನಡುವೆಯೇ ಅನುಮತಿ ನೀಡುವುದನ್ನು ತಪ್ಪಿಸಲು ಆಗಲೇ ಇಲ್ಲ. ಎರಡು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ ಈಗ ಆದಿವಾಸಿಗಳ ಪರವಾದ ಹೋರಾಟದ ಪ್ರಮುಖ ಭಾಗಿದಾರ. ಎರಡು ತಿಂಗಳ ಹಿಂದೆ ಆದಿವಾಸಿಗಳ ಬೆಂಬಲಕ್ಕಿದ್ದೇವೆ ಎನ್ನುವ ಬಿಜೆಪಿ ನಾಯಕರು ಅದೇ ಹೋರಾಟದತ್ತಲೂ ಬಂದಿಲ್ಲ. ಪ್ರತಿಭಟನೆಗೆ ಬಿಜೆಪಿ ಸರ್ಕಾರ ಸಹಸ್ರಾರು ಪೊಲೀಸ್‌ ಬಲವನ್ನು ಬಳಸುತ್ತಲೇ ಇದೆ. ಇದು ಅಲ್ಲಿನ ಅರಣ್ಯ ಸಂರಕ್ಷಣೆಯ ನೈಜ ಸ್ಥಿತಿ.

ವರದಿಗಳು ಬಿಚ್ಚಿಡುವ ಸತ್ಯ

ಡೌನ್‌ ಟು ಅರ್ಥ್‌ 2024ರ ವರದಿಯ ಪ್ರಕಾರ , ಈಗಾಗಲೇ 137 ಹೆಕ್ಟೇರ್‌ ಅರಣ್ಯ ಪ್ರದೇಶ ಕಲ್ಲಿದ್ದಲು ಗಣಿಗಾರಿಕೆಗೆ ನಾಶವಾಗಿದೆ. ಪೂರ್ವ ಪರ್ಸಾ ಹಾಗೂ ಕಂಟಾ ಬಸನ್‌ ಕಲ್ಲಿದ್ದಲು ಭಾಗಗಳಿಗಾಗಿ ಇಷ್ಟು ಅರಣ್ಯ ನಾಶವಾಗಿ ಹೋಗಿದೆ. 2022ರ ಹೊತ್ತಿಗೆ ಒಟ್ಟು43 ಹೆಕ್ಟೇರ್‌ ಅರಣ್ಯ ನಾಶವಾಗಿತ್ತು. 2023ರಲ್ಲೇ ಇನ್ನೂ 91 ಹೆಕ್ಟೇರ್‌ ಅರಣ್ಯ ಕಡಿದು ಹಾಕಲಾಗಿದೆ. ಈಗಲೂ ಇದು ನಿಂತಿಲ್ಲ. ಶತಮಾನದಿಂದ ಬೆಳೆದ ಗಜಗಾತ್ರದ ಮರಗಳು ಯಂತ್ರದ ಬಾಯಿಗೆ ಸಿಲುಕಿ ಕ್ಷಣ ಮಾತ್ರದಲ್ಲಿ ನೆಲಕ್ಕೆ ಉರುಳುತ್ತಿವೆ. ಆ ಮರಗಳನ್ನು ತಬ್ಬಿಕೊಂಡು ಕಣ್ಣೀರು ಹಾಕುವುದು ಆದಿವಾಸಿಗಳಿಗೆ ಮಾತ್ರ ಬೇಕಾಗಿದೆ. ಏಕೆಂದರೆ ಇದು ನಮ್ಮ ಅರಣ್ಯ, ನಮ್ಮ ಭೂಮಿ. ನಾವು ಇದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಆದಿವಾಸಿಗಳು ಕೂಗುಹಾಕುತ್ತಲೇ ಇವೆ.

ಇದಲ್ಲದೇ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ( ICFRE) ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ( WII) ಹಸದೇವ್‌ ಅರಣ್ಯದ ಸ್ಥಿತಿಗತಿ, ಗಣಿಗಾರಿಕೆಯ ಹಾನಿ ಕುರಿತಾದ ಎರಡು ಪ್ರತ್ಯೇಕ ವರದಿಯನ್ನು ನೀಡಿವೆ. ಇದರಿಂದ ಹಸದೇವ್‌ ನದಿಯ ಸ್ವರೂಪವೇ ಬದಲಾಗಲಿದೆ. ಕಾಡಾನೆ- ಮಾನವ ಸಂಘರ್ಷ ನಿರೀಕ್ಷೆಗಿಂತಲೂ ಅಧಿಕವಾಗಲಿದೆ. ರಾಷ್ಟ್ರೀಯ ಹೆದ್ದಾರಿಗೆ ಆನೆಗಳು ಬಂದು ನಿಲ್ಲುವ ದಿನ ದೂರವಿಲ್ಲ. ಒಟ್ಟಾರೆ ಜೀವ ವೈವಿಧ್ಯದ ಮೇಲೆ ಪರಿಣಾಮ ಬೀರಲಿದೆ. ಸರ್ಗೂಜ ಜಿಲ್ಲೆಯ 700 ಕ್ಕೂ ಅಧಿಕ ಆದಿವಾಸಿ ಕುಟುಂಬಗಳ ಬದುಕನ್ನು ಅತಂತ್ರಗೊಳಿಸುತ್ತಿದೆ. ಸಹಲಿ, ತಾರಾ, ಜನಾರ್ದನಪುರ, ಘಟಬಾರ, ಫತೇಪುರ್‌, ಹರಿಹರಪುರ ಸಹಿತ ಹಲವು ಭಾಗದ ಆದಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಇದು ಒಂದು ಸುದೀರ್ಘ ಸಂಸ್ಕೃತಿಯನ್ನೇ ಒಕ್ಕಲೆಬ್ಬಿಸುವ ಕೃತ್ಯ ಎನ್ನುವ ವರದಿಯನ್ನೂ ನೀಡಲಾಗಿದೆ.

ಹೋರಾಟಗಾರರ ಗಟ್ಟಿ ದನಿ

ಹಸದೇವ್‌ ಅರಣ್ಯ ಬಚಾವೋ ಸಂಘರ್ಷ ಸಮಿತಿಯ ಪ್ರಮುಖರಾದ ಉಮೇಶ್ವರ್‌ ಸಿಂಘ್‌ ಆರ್ಮೋ ಅವರು ಅಲ್ಲಿನ ಚಿತ್ರಣ ಬಿಡಿಸಿಡುತ್ತಾರೆ. ದಶಕದಿಂದ ನಮ್ಮ ಹೋರಾಟ ನಡೆಯುತ್ತಿದೆ. ಕಾನೂನು ಹೋರಾಟ ಕೂಡ. ಆದರೂ ಆಡಳಿತ ನಡೆಸುವ ಸರ್ಕಾರಗಳು ಮಾತ್ರ ಗಣಿಗಾರಿಕೆ ನಿಲ್ಲಿಸುತ್ತಿಲ್ಲ. ಪ್ರತಿ ವರ್ಷ ಅರಣ್ಯ ನಾಶದ ಪ್ರಮಾಣ ಹೆಚ್ಚುತ್ತಲೇ ಇದೆ. ನಾವು ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಈಗಲೂ ಭಾರೀ ಪೊಲೀಸ್‌ ಸರ್ಪಗಾವಲು ಇದೆ. ಕಾಂಗ್ರೆಸ್‌ನವರು ಹಿಂದೆ ನಮ್ಮಿಂದ ತಪ್ಪಾಗಿದೆ ಎಂದು ಈಗ ಬಂದು ಕ್ಷಮೆ ಕೇಳುತ್ತಿದ್ದಾರೆ. ನಾವು ಇವೆಲ್ಲವನ್ನೂ ನೋಡಿಕೊಂಡು ಹೋರಾಟ ಮಾಡುತ್ತಲೇ ಇದ್ದೇವೆ. ನಮ್ಮ ಹೋರಾಟಕ್ಕೆ ಜಯ ಸಿಗುವ ವಿಶ್ವಾಸ ಮಾತ್ರ ಒಂದಿನಿತೂ ಕುಗ್ಗಿಲ್ಲ. ಗೆಲ್ಲುವವರೆಗೂ ನಮ್ಮ ಹೋರಾಟ ಎಂದು ಹೇಳುತ್ತಾರೆ.

ಏರಿತು ಬಿಸಿಲು, ಇಳಿಯಿತು ನದಿ ನೀರು

ದಟ್ಟಾರಣ್ಯ, ಸುಂದರ ಪರಿಸರ, ಹವಾಮಾನದ ಅನುಭವ ಅನುಭವಿಸಿದವರು ಈಗ ವೈಪರಿತ್ಯಗಳನ್ನು ಹಸದೇವ್‌ ನದಿ ನೀರಿನ ಮಟ್ಟ ನಿಧಾನಕ್ಕೆ ಇಳಿಯುವ ರೂಪದಲ್ಲಿ ನೋಡುತ್ತಿದ್ದಾರೆ. ಬೇಸಿಗೆಯಲ್ಲಿ 46 ಡಿಗ್ರಿ ಸೆಲ್ಸಿಯಸ್‌ನ ಬಿಸಿಯನ್ನೂ ಅನುಭವಿಸಿದ್ದಾರೆ. ಆನೆಗಳು ಊರಿನತ್ತ ಬಂದು ಜನರ ಮೇಲೆ ದಾಳಿ ಮಾಡುವುದನ್ನು ಕಾಣುತ್ತಿದ್ದಾರೆ. ಅವರಿಗೆಲ್ಲ ನಮ್ಮ ಕಾಡು ಉಳಿದರೆ ಸಾಕು ಎನ್ನುವ ಭಾವನೆಯಿದೆ. ಕೇಳೋರು ಯಾರು ಎನ್ನುವ ಪ್ರಶ್ನೆ ಅವರ ಮನಸಿನಲ್ಲೂ ಇದೆ.

ದಶಕಗಳ ಹಿಂದೆ ಹೀಗೆಯೇ ಹಿಮಾಲಯ ಪ್ರದೇಶದಲ್ಲಿ ಯೋಜನೆಗಾಗಿ ಅರಣ್ಯ ಹನನಕ್ಕೆ ಸರ್ಕಾರ ಮುಂದಾದಾಗ ಚಿಪ್ಕೊ ಚಳವಳಿ ಶುರುವಾಯಿತು. ಆಗ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರೇ ಹೋರಾಟಕ್ಕೆ ಬಾಗಿದರು. ಅರಣ್ಯ ನಿಯಮಗಳನ್ನೂ ಗಟ್ಟಿಗೊಳಿಸಿದರು. ಈಗಲೂ ಚಿಪ್ಕೋ ರೂಪದ ಹೋರಾಟವನ್ನೇ ಸ್ಥಳೀಯರು ಮಾಡುತ್ತಿದ್ದಾರೆ. ಅವರಿಗೆ ಗಾಂಧಿವಾದದ ಬಲ, ಸುಂದರಲಾಲ್‌ ಬಹುಗುಣ ಅವರ ಉದಾತ್ತ ಹೋರಾಟ ಮುಂದೆ ಇದೆ. ಕೇಳಿಸಿಕೊಂಡು ಅರಣ್ಯ ಉಳಿಸುವಂತಹ ನೀತಿ ಜಾರಿಗೆ ಮಾಡುವ ಇಂದಿರಾಗಾಂಧಿ ಅವರಂತಹ ನಾಯಕರು ಬೇಕಲ್ಲವೇ, ಅರಣ್ಯರೋದನಕ್ಕೆ ಉತ್ತರಿಸೋರು ಯಾರು?.

-ಕುಂದೂರು ಉಮೇಶಭಟ್ಟ

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು