Forest Tales:ಅರಣ್ಯದ ಮೇಲೆ ಬೆಂಕಿಯ ಬಲೆ, ಮರ, ಪ್ರಾಣಿ, ಪಕ್ಷಿ ಸಂಪತ್ತು ನಾಶದ ಆತಂಕ: ಕಾಡಿಗೆ ಬೆಂಕಿ ಹಚ್ಚೋರು ಯಾರು
Jan 02, 2024 06:08 PM IST
ಕಾಡಿನ ಬೆಂಕಿ ಸ್ವಾಭಾವಿಕಕ್ಕಿಂತ ಮಾನವ ನಿರ್ಮಿತವೇ ಅಧಿಕ. ಈ ವರ್ಷದ ಕಾಡಿನ ಬೆಂಕಿ ತಡೆಗೆ ಸಿದ್ದತೆಗಳೂ ಶುರುವಾಗಿವೆ.
- Forest Fire Effect ನಮ್ಮಲ್ಲಿ ಆಕಸ್ಮಿಕ ಕಾಡಿನ ಬೆಂಕಿ ಪ್ರಮಾಣ ಶೇ.1ರಷ್ಟಿದ್ದರೆ ಮಾನವನ ಹೊಟ್ಟೆಯುರಿಗೆ ಶೇ.99ರಷ್ಟು ಅರಣ್ಯ ಬೆಂದು ಹೋಗುತ್ತಿರುವುದು ಬಹಿರಂಗ ಸತ್ಯ. ಹಚ್ಚೋರು ಸುಮ್ಮನಿದ್ದುಬಿಡುತ್ತಾರೆ. ಕಾಡಿನೊಳಗೆ ಇರುವ ಪ್ರಾಣಿ, ಪಕ್ಷಿ, ಮರಗಳಿಗೆ ಬೆಂಕಿಯ ಕಷ್ಟ ಗೊತ್ತು.
ಆರು ವರ್ಷದ ಹಿಂದಿನ ಘಟನೆ. ಬಂಡೀಪುರ ವನ್ಯಜೀವಿ ವಲಯಕ್ಕೆ ನೇಮಕಗೊಂಡಿದ್ದ ಗಾರ್ಡ್ ಒಬ್ಬರನ್ನು ಕಾಡಿನ ಬೆಂಕಿ ತಡೆ ಕೆಲಸಕ್ಕೆ ಹಚ್ಚಲಾಯಿತು. ಬೆಂಕಿ ಕಾವು ಹೆಚ್ಚಾಗಿ ಸಿಬ್ಬಂದಿ ಸಿಲುಕಿ ಜೀವ ಬಿಟ್ಟರು. ಉತ್ತರ ಕರ್ನಾಟಕ ಭಾಗದ ಆ ಯುವಕ ಕಾಡಿನಲ್ಲಿ ಕೆಲಸ ಮಾಡುವ ಉಮೇದಿನೊಂದಿಗೆ ಬಂದು ಕೆಲವೇ ದಿನದಲ್ಲಿ ಪ್ರಾಣ ಬಿಡುವಂತಾಯಿತು.
ಹೋದ ವರ್ಷ ಆ ಬಾಲಕಿಗೆ ಜಾತ್ರೆಗೆ ಹೋಗುವ ಖುಷಿ. ಮನೆಯವರೊಂದಿಗೆ ತುಮಕೂರಿನ ದೇವರಾಯನದುರ್ಗದಲ್ಲಿ ಹೋಗುವಾಗ ಕಾಡಿನ ಬೆಂಕಿ ತಗುಲಿ ಮೃತಪಟ್ಟಳು. ಆಕೆಯ ಜಾತ್ರೆಯ ಖುಷಿ ಕಾಡಿನ ಬೆಂಕಿಯಲ್ಲಿ ಲೀನವಾಗಿತ್ತು.
ಕಾಡಿನಬೆಂಕಿ ವಿಚಾರದಲ್ಲಿ ಕರ್ನಾಟಕದಲ್ಲಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ಬಂಡೀಪುರ, ನಾಗರಹೊಳೆಯಂತಹ ಹುಲಿ, ಆನೆ ಅಧಿಕವಾಗಿರುವ, ಸಸ್ಯ ಸಂಪತ್ತು ಯಥೇಚ್ಛವಾಗಿರುವ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು,ಬೆಳಗಾವಿ, ಚಾಮರಾಜನಗರ, ಹಾಸನದಂತಹ ಜಿಲ್ಲೆಗಳಲ್ಲೂ ಕಾಡಿನ ಬೆಂಕಿಯ ಪ್ರಕರಣಗಳು ದಾಖಲಾಗುತ್ತಲೇ ಇವೆ.
ಹೆಚ್ಚುತ್ತಿವೆ ಪ್ರಕರಣ
ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಗಳ ಜತೆಗೆ ಮನುಷ್ಯ ಜೀವ ಹಾನಿಯೂ ಆದ ಉದಾಹರಣೆಗಳೂ ಇವೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಇಲಾಖೆ ಸಿಬ್ಬಂದಿಯೇ ಜೀವ ಕಳೆದುಕೊಳ್ಳುವುದು ನಡದಿದೆ. ಇದು ಆತಂಕಕಾರಿ ಬೆಳವಣಿಗೆಯೂ ಹೌದು.
ಕಾಡು ಮತ್ತು ಬೆಂಕಿಗೆ ಮೊದಲಿನಿಂದಲೂ ಅವಿನಾಭಾವ ಸಂಬಂಧ. ಕಾಡು ಇದ್ದಲ್ಲಿ ಬೆಂಕಿ ಇರುವುದು ಸಹಜ ಎಂದು ಹೇಳುವಷ್ಟರ ಮಟ್ಟಿಗೆ ಗಾಢ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಬೆಳೆದಿದೆ. ಅದೂ ಬೇಸಿಗೆ ಬಂತೆಂದರೆ ಕಾಡಿನ ಬೆಂಕಿ ಪ್ರಮಾಣ ಅಧಿಕವಾಗುತ್ತಾ ಹೋಗುತ್ತದೆ. ಒಣಗಿ ಮಳೆಗೆ ಕಾದು ನಿಂತ ಮುಗಿಲೆತ್ತರದ ಮರಗಳು, ಕುರುಚಲು ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗುತ್ತವೆ. ಅಷ್ಟೇ ಅಲ್ಲ ಅರಣ್ಯವನ್ನು ಉಳಿಸುವ ಪ್ರಾಣಿಗಳಿಂದ ಹಿಡಿದು ಸಣ್ಣ ಸಣ್ಣ ಪ್ರಾಣಿ, ಪಕ್ಷಿಗಳು ಕಾಡಿನ ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತವೆ. ಅದೆಷ್ಟೋ ಸೂಕ್ಷ್ಮ ಜೀವಿಗಳು ಅಳಿದು ಹೋಗುತ್ತವೆ. ಮರ, ಗಿಡಗಳ ಲೆಕ್ಕವೇ ಇಲ್ಲ. ಅದರಲ್ಲೂ ಆನೆಗಳು ಪ್ರೀತಿಯ ಆಹಾರ ಬಿದಿರೂ ಸೇರಿದಂತೆ ಎಲ್ಲವೂ ಸುಟ್ಟು ಹೋಗುತ್ತದೆ.
ಈಗಾಗಲೇ ಕರ್ನಾಟಕದ ಯಾವುದೇ ಅರಣ್ಯ ಪ್ರದೇಶಕ್ಕೆ ಹೋದರೂ ಅಲ್ಲಿನ ಸಿಬ್ಬಂದಿ ಕಾಡಿನ ಬೆಂಕಿಯ ಕೆಲಸ ಶುರು ಮಾಡಿರುತ್ತಾರೆ. ಫೆಬ್ರವರಿ ನಂತರ ಬೇಸಿಗೆ ಶುರುವಾಗೋದು. ಡಿಸೆಂಬರ್‌ನಲ್ಲಿಯೇ ಕಾಡಿನ ಬೆಂಕಿ ಕೆಲಸವೇ ಎನ್ನುವ ಪ್ರಶ್ನೆಯನ್ನು ಕೇಳಬಹುದು. ಎರಡು ತಿಂಗಳು ಮುಂಚೆ ತಯಾರಿ ಶುರು ಮಾಡಿದರೆ ಕಾಡಿನ ಬೆಂಕಿಯನ್ನು ತಡೆಗಟ್ಟಲು ಸಾಧ್ಯ ಎನ್ನುವುದು ಅರಣ್ಯ ಇಲಾಖೆ ನೀಡುವ ಸ್ಪಷ್ಟನೆ.
ಇದು ನಿಜವೂ ಹೌದು. ಏಕೆಂದರೆ ಭಾರತದ ಅರಣ್ಯಗಳಲ್ಲಿ ಬೆಂಕಿ ಬೀಳುವ ಪ್ರಕರಣ ಸಾಮಾನ್ಯ. ಭಾರತದಲ್ಲಿ ಪ್ರತಿ ಸಣ್ಣ ಪ್ರಕರಣದಿಂದ ಹಿಡಿದು ಒಂದು ಲಕ್ಷಕ್ಕೂ ಅಧಿಕ ಬೆಂಕಿ ಪ್ರಕರಣಗಳು ದಾಖಲಾಗುತ್ತವೆ. ಈಶಾನ್ಯ ಭಾರತ, ಮಧ್ಯ ಭಾರತದಲ್ಲಿಯೇ ಈ ಪ್ರಕರಣಗಳು ಹೆಚ್ಚು. ದಕ್ಷಿಣದಲ್ಲಿ ಕೇರಳ, ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾಡಿನ ಬೆಂಕಿ ಪ್ರಕರಣಗಳು ವರದಿಯಾಗುತ್ತವೆ.
ಕರ್ನಾಟಕದಲ್ಲೂ ಅಧಿಕ
ಕರ್ನಾಟಕದಲ್ಲಿ ಏನಿಲ್ಲವೆಂದರೂ 2 ಸಾವಿರ ಪ್ರಕರಣ ದಾಖಲಾಗುತ್ತವೆ. ಇದರಲ್ಲಿ ಅತಿ ದೊಡ್ಡಅನಾಹುತ ಪ್ರಕರಣಗಳು ಕನಿಷ್ಠ 10 ಆದರೂ ಇರುತ್ತವೆ. ಹಿಂದಿನ ದುರಂತಗಳಿಂದ ಪಾಠ ಕಲಿತ ಕರ್ನಾಟಕ ಅರಣ್ಯ ಇಲಾಖೆ ಈ ಕಾರಣದಿಂದಲೇ ಮುನ್ನೆಚ್ಚರಿಕೆಗೆ ಇನ್ನಿಲ್ಲದ ಒತ್ತು ನೀಡಿದೆ. ಇದರಿಂದಲೇ ಮೂರ್ನಾಲ್ಕು ವರ್ಷದಲ್ಲಿ ಪ್ರಕರಣಗಳ ಸಂಖ್ಯೆ ತಗ್ಗಿದರೂ ಆತಂಕ ಮಾತ್ರ ಬೇಸಿಗೆಯ ಮೂರ್ನಾಲ್ಕು ತಿಂಗಳಲ್ಲಿ ಇದ್ದೇ ಇರುತ್ತದೆ.
" ಮೂರು ವರ್ಷ ನಾಗರಹೊಳೆಯಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಹೇಳುವುದಾದರೆ, ಮಾನವನ ಕಾರಣಕ್ಕೆ ಕಾಡಿನ ಬೆಂಕಿ ವರದಿಯಾಗೋದು. ನಮ್ಮಲ್ಲಿ ಬೆಂಕಿ ಬೀಳುವ ಮುನ್ನಾ ಕೈಗೊಳ್ಳುವ ಚಟುವಟಿಕೆಗಳು ಹೆಚ್ಚು. ಇವು ಫಲಪ್ರದಾಯಕವೂ ಹೌದು. ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಬೆಂಕಿ ತಡೆಗೆ ಹೆಚ್ಚು ಚಟುವಟಿಕೆ ರೂಪಿಸಲಾಗುತ್ತದೆ. ಬೆಂಕಿ ಬಿದ್ದಾಗ ನಿಯಂತ್ರಣಕ್ಕೆ ಸ್ಥಳೀಯರು, ಇಲಾಖೆ ಹಂತದಲ್ಲೇ ನಾವು ಕ್ರಮ ವಹಿಸಬೇಕು. ಒಮ್ಮೊಮ್ಮೆ ದೊಡ್ಡ ಅನಾಹುತಗಳೂ ಆಗಿ ಅಧಿಕ ಅರಣ್ಯ ಹಾಳಾದ ಉದಾಹರಣೆಗಳೂ ಇವೆ. ಜನ ಸಮುದಾಯದ ಸಹಕಾರದಿಂದಲೇ ಕಾಡಿನ ಬೆಂಕಿ ತಗ್ಗಿಸಬಹುದು " ಎಂದು ಮೈಸೂರು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಐಎಫ್‌ಎಸ್ ಅಧಿಕಾರಿ ಡಿ.ಮಹೇಶ್ ಕುಮಾರ್ ಹೇಳುತ್ತಾರೆ.
ಕಾಡಿನಬೆಂಕಿಗೆ ಕಾರಣ ಹತ್ತಾರು
- ಅರಣ್ಯ ಪ್ರದೇಶದಲ್ಲಿ ಪ್ರಾಕೃತಿಕ ಕಾರಣಕ್ಕೆ ಬೀಳುವ ಬೆಂಕಿಯ ಪ್ರಮಾಣ ಅತಿ ಕಡಿಮೆ
- ಅರಣ್ಯದಂಚಿನ ಗ್ರಾಮದ ಕಬ್ಬಿನ ಗದ್ದೆ ಇಲ್ಲವೇ ಬೆಳೆಗೆ ಬಿದ್ದ ಕಿಡಿ ಹಾರಿ ಅರಣ್ಯ ಸುಟ್ಟ ಪ್ರಸಂಗಗಳೂ ಇವೆ.
- ಆದರೆ ಭಾರತದ ಸನ್ನಿವೇಶದಲ್ಲಿ ಮಾನವ ನಿರ್ಮಿತ ಬೆಂಕಿ ಪ್ರಕರಣಗಳೇ ಅಧಿಕ
- ಸ್ಥಳೀಯವಾಗಿ ಅರಣ್ಯ ಇಲಾಖೆ ಮೇಲೆ ಸಿಟ್ಟಿಗೆ ಕೆಲವರು ಬೆಂಕಿ ಕೊಟ್ಟ ಉದಾಹರಣೆ ಹೆಚ್ಚು
- ಅರಣ್ಯ ಇಲಾಖೆ ಸಿಬ್ಬಂದಿಗಳೇ ಅಧಿಕಾರಿಗಳ ಮೇಲಿನ ಸಿಟ್ಟಿಗೆ ಕಾಡಿಗೆ ಬೆಂಕಿ ಇಟ್ಟ ಪ್ರಕರಣಗಳೂ ಇವೆ
- ಕಾಡಿಗೆ ಹೊಂದಿಕೊಂಡ ಗ್ರಾಮ, ಹಾಡಿ ಜನರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಇದ್ದಾಗಲೂ ಬೆಂಕಿ ಹಚ್ಚಿನ ಪ್ರಕರಣ ದಾಖಲಾಗಿವೆ
- ಕಾಡಿಗೆ ಪ್ರವಾಸಕ್ಕೆಂದು ಬರುವ ಕೆಲವು ಕಿಡಿಗೇಡಿಗಳು ಹೊತ್ತಿಸುವ ಕಿಡಿಯೂ ಬೆಂಕಿಯಾಗಿ ಕಾಡು ಸುಟ್ಟ ಸನ್ನಿವೇಶಗಳೂ ಇವೆ
ಇದನ್ನೂ ಓದಿರಿ: Fish Dishes: ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೇದು ಈ 9 ಮೀನು ಖಾದ್ಯಗಳು
ಪ್ರಮುಖ ಬೆಂಕಿ ಪ್ರಕರಣಗಳು
- ಚಿಕ್ಕಮಗಳೂರು ಜಿಲ್ಲೆ ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ 70 ರ ದಶಕದಲ್ಲಿ ಬಿದ್ದ ಬೆಂಕಿ ಅನಾಹುತ ಭಾರೀ ದೊಡ್ಡದು. ನೂರಾರು ಹೆಕ್ಟೇರ್ ಪ್ರದೇಶವನ್ನು ಅದು ಆಹುತಿ ಪಡೆದಿತ್ತು. ಹಿರಿಯ ಅರಣ್ಯಾಧಿಕಾರಿ ಎ.ಸಿ.ಲಕ್ಷ್ಮಣ್ ಅವರು ಬೆಂಕಿಯಿಂದ ಆದ ಅನಾಹುತ, ಅದನ್ನು ನಂದಿಸಲು ಪಟ್ಟ ಶ್ರಮ, ಕಾರಣಗಳನ್ನು ತಮ್ಮ ಪುಸ್ತಕವೊಂದರಲ್ಲಿ ಉಲ್ಲೇಖಿಸಿದ್ದಾರೆ.
- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಭಾಗದಲ್ಲೂ ಬೆಂಕಿ ಬಿದ್ದು ಸಾಕಷ್ಟು ಕಾಡು ನಾಶವಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ಸ್ಥಳೀಯವಾಗಿಯೇ ಬೆಂಕಿ ಹಚ್ಚಿದ್ದು ಕಂಡು ಬಂದಿತ್ತು. ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು.
- ದಶಕದ ಹಿಂದೆ ನಾಗರಹೊಳೆಯ ಹೃದಯ ಭಾಗದಲ್ಲಿಯೇ ಬೆಂಕಿ ಬಿದ್ದಿತ್ತು. ಆಗಲೂ ನೂರಾರು ಎಕರೆ ಅರಣ್ಯ ಸುಟ್ಟು ಹೋಗಿತ್ತು. ಈಗಲೂ ಆ ಭಾಗದಲ್ಲಿ ಅರಣ್ಯ ಸುಟ್ಟು ಹೋಗಿ ಹೊಸದಾಗಿ ಬೆಳೆದ ಕುರುಹು ಇದೆ. ಕೆಲ ಕಿಡಿಗೇಡಿಗಳು ನೀಡಿದ ಬೆಂಕಿಯಿಂದಾಗಿ ಅರಣ್ಯ ಆಹುತಿಯಾಗಿತ್ತು. ಇಡೀ ಪ್ರಕರಣವನ್ನು ಸಿಐಡಿಗೆ ಸರ್ಕಾರ ವಹಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದರು.
- ಏಳೆಂಟು ವರ್ಷದ ಹಿಂದೆ ಗದಗ ಜಿಲ್ಲೆ ಕಪ್ಪತ್ತಗುಡ್ಡದಲ್ಲಿ ಕೆಲವರು ಬೆಂಕಿ ಹಚ್ಚಿದ್ದರು. ಗಣಿಗಾರಿಕೆಗೆ ತೆರೆದುಕೊಂಡು ಅನಾಹುತ ಎದುರಿಸುವ ಮುನ್ನ ಈ ಬೆಟ್ಟವನ್ನು ಉಳಿಸಿಕೊಳ್ಳಲು ಹೋರಾಟ ನಡೆದಿತ್ತು. ಈ ವೇಳೆ ಕೆಲವರು ಬೆಂಕಿ ಹಚ್ಚಿ ಬೆಟ್ಟದ ಭಾಗ ಸುಟ್ಟು ಹೋಗಿತ್ತು.
- ಐದು ವರ್ಷದ ಹಿಂದೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕಲ್ಕೆರೆಯಿಂದ ಬೇಗೂರು ಅರಣ್ಯ ವ್ಯಾಪ್ತಿವರೆಗೂ ವ್ಯಾಪಿಸಿದ ಬೆಂಕಿ ಸುಮಾರು 500 ಹೆಕ್ಟೇರ್ ಪ್ರದೇಶವನ್ನು ಆವರಿಸಿತು. ಆನಂತರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯಂತ್ರಣ ತಪ್ಪಿ ಹೊತ್ತಿ ಉರಿಯಲಾರಂಭಿಸಿತ್ತು. ಸತತ ವಾರದ ವರೆಗೂ ಕಾಡನ್ನು ಸುಡುತ್ತಾ ಹೋದ ಬೆಂಕಿ ಸುಮಾರು 1200 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚಿನ ಅರಣ್ಯವನ್ನು ಭಸ್ಮ ಮಾಡಿತು. ಇದರೊಂದಿಗೆ ಸಾವಿರಾರು ಪ್ರಾಣಿಗಳು, ಪಕ್ಷಿಗಳು, ಜೀವವೈವಿಧ್ಯತೆ ನಾಶವಾದವು.
- ಆರೇಳು ವರ್ಷದ ಹಿಂದಿನ ಮಾತು. ಚಾಮರಾಜನಗರ/ ಮೈಸೂರು ಜಿಲ್ಲೆಯ ಬಂಡೀಪುರದಲ್ಲಿ ನಿರ್ದೇಶಕರಾಗಿದ್ದ ಹಿರಿಯ ಅಧಿಕಾರಿ ಮೇಲಿನ ಸಿಟ್ಟಿಗೆ ಆ ವರ್ಷ ಬಂಡೀಪುರ ಕಚೇರಿ ಸಮೀಪದಲ್ಲಿಯೇ ಬೆಂಕಿ ಹಚ್ಚಿದ್ದರು ಕಿಡಿಗೇಡಿಗಳು. ಇದರಿಂದ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದು ಅರಣ್ಯ ನಾಶವಾಯಿತು. ಆನಂತರ ಇದೇ ಪ್ರಕರಣದಲ್ಲಿ ಕೆಲವರನ್ನು ಬಂಧಿಸಿದರು. ಆಗಿನ ನಿರ್ದೇಶಕರ ಸಹಿತ ಆರೇಳು ಅಧಿಕಾರಿ, ಸಿಬ್ಬಂದಿಯನ್ನು ಅರಣ್ಯ ಇಲಾಖೆ ಅಮಾನತುಪಡಿಸಿತು. ಪ್ರಕರಣದ ಕುರಿತು ತನಿಖೆಯನ್ನೂ ಕೈಗೊಳ್ಳಲಾಗಿತ್ತು.
- ಮೈಸೂರಿನ ಚಾಮುಂಡಿಬೆಟ್ಟವೂ ಪ್ರಮುಖ ಧಾರ್ಮಿಕ ಕ್ಷೇತ್ರ. ಇಲ್ಲಿ ಒಂದಷ್ಟು ಕಾಡಿದೆ. ಇಲ್ಲಿಯೂ ನಾಲ್ಕು ವರ್ಷದ ಹಿಂದೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಸುಮಾರು ಭಾಗ ಸುಟ್ಟು ಹೋಗಿತ್ತು. ಬೆಟ್ಟಕ್ಕೆ ಬರುವ ಕೆಲ ಯುವಕರು ಬೆಂಕಿ ಹಚ್ಚಿದ್ದು ವಿಚಾರಣೆ ವೇಳೆ ಬಯಲಾಗಿತ್ತು.
- ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕುಗಳಲ್ಲಿಯೂ ಯಥೇಚ್ಚ ಅರಣ್ಯವಿದೆ. ಇಲ್ಲಿಯೂ ಪ್ರತಿ ವರ್ಷ ಒಂದಿಲ್ಲೊಂದು ಕಡೆ ಬೆಂಕಿ ಕೊಡುವುದು ನಡೆದೇ ಇದೆ. ಮೂರು ವರ್ಷದ ಹಿಂದೆ ಸುಳ್ಯ ತಾಲ್ಲೂಕಿನ ಅರಂತೋಡು ಬಳಿ ಬೆಂಕಿ ಪ್ರಕರಣ ಅದಕ್ಕೆ ಉದಾಹರಣೆ.
- ಕಳೆದ ವರ್ಷ ಕಾಡಿನ ಬೆಂಕಿಗೆ ಕರ್ನಾಟಕದಲ್ಲಿ ಮೂವರು ಬಲಿಯಾಗಿದ್ದರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿಯ ಮಾಣಿಬೀಡು ದಟ್ಟಕಾಡಿನಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಅರಣ್ಯ ವೀಕ್ಷಕರೊಬ್ಬರು ಮೃತಪಟ್ಟಿದ್ದರು. ಯಲ್ಲಾಪುರ ಅರಣ್ಯ ವಿಭಾಗದ ತೆಲಂಗಾರ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸುವ ವೇಳೆ ವಿದ್ಯುದಾಘಾತದಿಂದ ಅರಣ್ಯ ವೀಕ್ಷಕ ತೀರಿಕೊಂಡಿದ್ದರು. ತುಮಕೂರಿನ ಕೊರಟಗೆರೆ ತಾಲೂಕಿನ 15 ವರ್ಷದ ಬಾಲಕಿ ದೇವರಾಯನದುರ್ಗದಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕಾಡಿನ ಮೂಲಕ ಹೋಗುತ್ತಿದ್ದಾಗ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಳು.
ಇದನ್ನೂ ಓದಿರಿ: Siddeshwara Swamiji: ಸಿದ್ದೇಶ್ವರ ಶ್ರೀಗೆ ಪ್ರಧಾನಿ ಮೋದಿ ನಮನ: ವಿಜಯಪುರದಲ್ಲಿ ಗುರುನಮನ ಸಲ್ಲಿಸಿದ ಸಿಎಂ, ಭಕ್ತಗಣದಿಂದ ತುಂಬಿದ ಆಶ್ರಮ
ಅನುದಾನದ ಬಲ ಹೆಚ್ಚಲಿ
ಭಾರತಕ್ಕೆ ಹೋಲಿಸಿದರೆ ಅಮೆರಿಕಾ, ಆಸ್ಟ್ರೇಲಿಯಾ, ಯೂರೋಪ್ ದೇಶಗಳು, ಆಫ್ರಿಕಾ ಕಾಡುಗಳಲ್ಲಿ ಬೆಂಕಿ ಪ್ರಮಾಣ ಅಧಿಕ. ಒಮ್ಮೆ ಅಲ್ಲಿ ಬೆಂಕಿ ಬಿದ್ದರೆ ಸಹಸ್ರಾರು ಹೆಕ್ಟೇರ್ ಅರಣ್ಯ ನಾಶ ವಾಗಿಬಿಡುತ್ತದೆ. ಆ ಬೆಂಕಿ ಆರಿಸಲು ಪಡುವ ಕಷ್ಟವೂ ಅಷ್ಟಿಷ್ಟಲ್ಲ. ಪ್ರತಿ ವರ್ಷ ಆ ದೇಶಗಳಲ್ಲೂ ಬೆಂಕಿಯ ಪ್ರಕರಣಗಳು ಇದ್ದೇ ಇರುತ್ತವೆ. ಆ ದೇಶಗಳನ್ನು ಅರಣ್ಯವನ್ನು ರಾಷ್ಟ್ರೀಯ ಸಂಪತ್ತು ಎಂದು ಅಲ್ಲಿನ ದೇಶಗಳು ಘೋಷಿಸಿಕೊಂಡು ಬೆಂಕಿ ಬಿದ್ದಾಗ ತಂತ್ರಜ್ಞಾನ ಬಳಸಿ ಆರಿಸಲು ಶ್ರಮಿಸುತ್ತವೆ. ಹೆಲಿಕಾಪ್ಟರ್‌ಗಳೂ ಬೆಂಕಿ ನಂದಿಸಲು ಮುಗಿಲೆತ್ತರಕ್ಕೆ ಹೋಗುತ್ತವೆ. ಇದಕ್ಕಾಗಿಯೇ ಅನುದಾನವನ್ನೂ ಮೀಸಲಿಡುತ್ತವೆ.
ಭಾರತದಲ್ಲಿ ಪರಿಸ್ಥಿತಿ ಹಾಗಿಲ್ಲ. ಇಲ್ಲಿ ಬೆಂಕಿ ಬೀಳುವ ಪ್ರಕರಣಗಳು ಅಧಿಕ. ಹಾನಿಯೂ ಅಷ್ಟೇ ಪ್ರಮಾಣದಲ್ಲಿ ಇರುತ್ತದೆ. ಬೆಂಕಿ ಆರಿಸಲು ಸಮುದಾಯ ಆಧರಿತ ಚಟುವಟಿಕೆಗಳೇ ನಮ್ಮಲ್ಲಿ ಇರುವುದು, ಇಲ್ಲಿನ ಪರಿಸರ, ಅರಣ್ಯದ ಹಿನ್ನೆಲೆಯನ್ನು ಗಮನಿಸಿದಾಗ ಹಾನಿ ಪ್ರಮಾಣ, ಬೆಂಕಿ ಆವರಿಸುವ ಪ್ರದೇಶ ಕಡಿಮೆಯೇ. ಇತ್ತೀಚಿನ ದಶಕಗಳಲ್ಲಿ ಸೆಟಲೈಟ್ ಆಧರಿತ ಬೆಂಕಿ ಮುನ್ಸೂಚನೆ ಚಟುವಟಿಕೆಗಳನ್ನುರೂಪಿಸಿ ಅದನ್ನು ಭಾರತದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇರುವ ಯೋಜನೆಗಳಲ್ಲಿಯೇ ಇಂತಿಷ್ಟು ಹಣವನ್ನು ಕಾಡಿನ ಬೆಂಕಿ ಚಟುವಟಿಕೆಗಳಿಗೆ ನೀಡಲಾಗುತ್ತದೆ. ಹುಲಿ ಯೋಜಿತ ಪ್ರದೇಶಗಳಿಗೆ ಕೊಂಚ ಇದು ಹೆಚ್ಚಿದ್ದರೆ ಇತರೆಡೆ ಸೀಮಿತ ಅನುದಾನ. ಆದರೂ ಅರಣ್ಯ ಸಂಪತ್ತು ಉಳಿಸಿಕೊಳ್ಳಲು ಕಾಡಿನ ಬೆಂಕಿ ನಿಯಂತ್ರಣಕ್ಕೆಂದೇ ಹೆಚ್ಚಿನ ಅನುದಾನ ಹಂಚಿಕೆ ಮಾಡಿದರೆ ಅರಣ್ಯ ಇಲಾಖೆಯವರು ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವುದು ತಪ್ಪುತ್ತದೆ. ಅರಣ್ಯ ಇಲಾಖೆ ಮಾತ್ರವಲ್ಲದೇ ಕಾಡು ಕೂಡ ಅನಾಹುತದಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಡಬಹುದು.
-ಕುಂದೂರು ಉಮೇಶಭಟ್ಟ.
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)
----------