ಸತತ 8 ಗಂಟೆಗಳ ಕಾಲ ನಿದ್ರಿಸಲು ಸಾಧ್ಯವಾಗುತ್ತಿಲ್ಲವೇ? ಹಾಸಿಗೆಗೆ ಬಿದ್ದ ಕೂಡಲೇ ನಿದ್ದೆ ಹತ್ತಲು ಈ ಸಲಹೆಗಳನ್ನು ಪಾಲಿಸಿ ನೋಡಿ
Apr 30, 2024 06:06 PM IST
ಹಾಸಿಗೆಗೆ ಬಿದ್ದ ಕೂಡಲೇ ನಿದ್ದೆ ಹತ್ತಲು ಈ ಸಲಹೆಗಳನ್ನು ಪಾಲಿಸಿ ನೋಡಿ
- ಅನೇಕರಿಗೆ ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರುವುದಿಲ್ಲ. ಇದು ಸಾಕಷ್ಟು ರೀತಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ ಸರಿಯಾಗಿ ನಿದ್ರೆ ಬರಬೇಕು ಎಂದರೆ ನಾವೇನು ಮಾಡಬೇಕು? ನಮ್ಮ ಯಾವ ಅಭ್ಯಾಸಗಳು ನಿದ್ದಗೆ ಭಂಗ ತರುತ್ತಿವೆ? ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ರಾತ್ರಿ ನಿದ್ರೆಯೊಂದು ಸರಿಯಾದರೆ ಸಾಕು ಇಡೀ ದಿನ ಉಲ್ಲಾಸದಿಂದ ಸಾಗುತ್ತದೆ. ಆದರೆ, ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡಲು ಹೆಣಗಾಡಿಬಿಡುತ್ತದೆ. ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ, ಮೂರರಲ್ಲಿ ಒಂದು ಭಾಗದಷ್ಟು ವಯಸ್ಕರು ರಾತ್ರಿ ಸರಿಯಾದ ನಿದ್ರೆ ಪಡೆಯಲು ಹೆಣಗಾಡುತ್ತಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ರಾತ್ರಿ ಸರಿಯಾಗಿ ನಿದ್ರೆ ಬಾರದಿರಲು ಒತ್ತಡ, ಆತಂಕಗಳೇ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಮೆಡಿಸಿನ್‌ನ ಮನೋವೈದ್ಯ ಹಾಗೂ ಪ್ರಾಧ್ಯಾಪಕರಾದ ಮೋಲಿ ಅಟ್ವುಡ್ ಹೇಳುವ ಪ್ರಕಾರ, ನಿಮ್ಮ ದೇಹಕ್ಕೆ ಏನು ಬೇಕು ಎನ್ನುವುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು. ಅದರಂತೆಯೇ ಅದಕ್ಕೆ ಆದ್ಯತೆ ನೀಡಲು ಆರಂಭಿಸಬೇಕು. ನಿದ್ರೆಯನ್ನು ಸಾಮಾನ್ಯ ಪ್ರಕ್ರಿಯೆ ಎಂದು ಸುಮ್ಮನೇ ಬಿಡಬಾರದು. ದಿನನಿತ್ಯ ವಿಶ್ರಾಂತಿ ಪಡೆಯುವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಸಮರ್ಪಕವಾದ ನಿದ್ರೆಯನ್ನು ಹೊಂದಲು ಆನ್‌ಲೈನ್‌ನಲ್ಲಿ ನಿಮಗೆ ಸಾಕಷ್ಟು ಸಲಹೆಗಳು ಸಿಗಬಹುದು. ಆದರೆ ಇವುಗಳನ್ನು ನಂಬಬೇಡಿ. ಉತ್ತಮ ನಿದ್ರೆಗಾಗಿ ತಜ್ಞರು ಶಿಫಾರಸು ಮಾಡಿದ ಸರಳ ತಂತ್ರಗಳನ್ನೇ ಬಳಕೆ ಮಾಡಿ ಎಂದು ವೈದ್ಯ ಮೋಲಿ ಅಟ್ವುಡ್ ಸಲಹೆ ನೀಡಿದ್ದಾರೆ. ಉತ್ತಮ ನಿದ್ರೆಯನ್ನು ಹೊಂದಲು ನಾವೇನು ಮಾಡಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ .
ಬಫರ್ ವಲಯವನ್ನು ರಚಿಸಿ
ಕೆಲಸದ ಒತ್ತಡದಿಂದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಳಲುತ್ತಾರೆ. ತಡರಾತ್ರಿವರೆಗೂ ಕೆಲಸ ಮಾಡಿ ಕೂಡಲೇ ಮಲಗುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಕೆಲಸ ಮುಗಿದ ಬಳಿಕ ಮತ್ತು ಮಲಗುವ ಮಧ್ಯದಲ್ಲಿ ಬಫರ್ ವಲಯವನ್ನು ರಚಿಸಿಕೊಳ್ಳಿ. ನೀವು ಮಲಗುವ ಒಂದು ಗಂಟೆಯ ಮೊದಲು ನಿಮ್ಮ ವೃತ್ತಿ ಜೀವನದ ಯಾವುದೇ ಒತ್ತಡವನ್ನು ನಿಮ್ಮತ್ತ ಸುಳಿಯಲು ಬಿಡಬೇಡಿ. ಮಲಗುವ ಕೆಲವೇ ನಿಮಿಷಗಳ ಮುನ್ನ ಇಮೇಲ್ ಪರಿಶೀಲಿಸುವುದು, ಯಾವುದ್ಯಾವುದೋ ಬಿಲ್ ಪಾವತಿ ಮಾಡುವುದು ಈ ರೀತಿಯ ಯಾವುದೇ ಕೆಲಸಗಳನ್ನು ಮಾಡಬೇಡಿ. ನಿದ್ರೆಗೂ ಒಂದು ಗಂಟೆಗೂ ಮುನ್ನ ಒಂದೊಳ್ಳೆ ಪುಸ್ತಕವನ್ನು ಓದಿ. ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಉತ್ತಮ ಸಮಯವನ್ನು ಕಳೆಯಿರಿ.
ಇದನ್ನೂ ಓದಿ | ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ
ನೀವೇನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಇರಲಿ
ಇನ್ನೇನು ಮಲಗುವ 2 ನಿಮಿಷಕ್ಕೂ ಮುನ್ನ ತಿನ್ನುವ ಅಭ್ಯಾಸ ನಿಮಗೆ ಸಮರ್ಪಕ ನಿದ್ರೆಯನ್ನು ನೀಡಲು ಸಾಧ್ಯವೇ ಇಲ್ಲ. ಹೀಗಾಗಿ ನಿದ್ರೆಗೂ ಮೂರು ಗಂಟೆಗಳ ಮುನ್ನ ನಿಮ್ಮ ಆಹಾರ ಸೇವನೆ ಮುಗಿದಿರಬೇಕು. ಅಲ್ಲದೆ ರಾತ್ರಿ ಭಾರಿ ಭೋಜನ ಬೇಡ. ರಾತ್ರಿ ಸರಳವಾದ ಆಹಾರ ಸೇವನೆ ಮಾಡಿ. ಹಾಗಂತ ಹಸಿವಿನಿಂದ ಮಲಗುವುದು ಒಳ್ಳೆಯದಲ್ಲ. ಉತ್ತಮ ಪ್ರೊಟೀನ್ ಅಂಶವನ್ನು ಹೊಂದಿರುವ ಆಹಾರ ಸೇವನೆ ನಿಮ್ಮ ಅಭ್ಯಾಸವಾಗಲಿ.
ಕೆಫೀನ್ ಹಾಗೂ ಮದ್ಯ ಸೇವನೆ ಬೇಡ
ರಾತ್ರಿ ವೇಳೆ ಭೋಜನದ ಬಳಿಕ ಅನೇಕರಿಗೆ ಮದ್ಯ ಸೇವನೆ ಹಾಗೂ ಕೆಫೀನ್ ಅಂಶವುಳ್ಳ ಪಾನೀಯ ಸೇವನೆ ಅಭ್ಯಾಸ ಇರುತ್ತದೆ. ಆದರೆ ಇದು ನಿಮಗೆ ಸಮರ್ಪಕ ನಿದ್ರೆಯನ್ನು ಕೊಡಲಾರದು. ಹೀಗಾಗಿ ನಿಮ್ಮ ನಿದ್ರಾ ಚಕ್ರದ ಗುಣಮಟ್ಟ ಸರಿಯಾಗಿ ಇರಬೇಕು ಎಂದರೆ ಇವುಗಳ ಸೇವನೆಯನ್ನು ನೀವು ತ್ಯಜಿಸುವುದು ಉತ್ತಮ. ಮದ್ಯ ಸೇವನೆಯು ಆರಂಭದಲ್ಲಿ ನಿಮಗೆ ನಿದ್ರೆ ತಂದರೂ ಸಹ, ಮಧ್ಯದಲ್ಲಿ ಎಚ್ಚರಗೊಳ್ಳಲು ಕಾರಣವಾಗುತ್ತದೆ. ಕೆಫಿನ್ ಅಂಶಯುಕ್ತ ಪಾನೀಯ ನಿಮಗೆ ಅಡಿನೋಸೈನ್ ಅಂಶವನ್ನು ಬ್ಲಾಕ್ ಮಾಡುತ್ತದೆ. ಈ ಅಂಶವಿಲ್ಲದೇ ನಿಮಗೆ ಸರಿಯಾಗಿ ನಿದ್ರೆ ಬಾರದು.
ತಂತ್ರಜ್ಞಾನದಿಂದ ಅಂತರ ಕಾಯ್ದುಕೊಳ್ಳಿ
ಹಾಸಿಗೆಗೆ ಬೀಳುವ ಮುನ್ನ ಫೋನ್ ಹಾಗೂ ಕಂಪ್ಯೂಟರ್‌ಗಳಿಂದ ಅಂತರ ಕಾಯ್ದುಕೊಳ್ಳಬೇಕು. ಫೋನ್ ಹಾಗೂ ಕಂಪ್ಯೂಟರ್ ಸ್ಕ್ರೀನ್‌ನಿಂದ ಬರುವ ಬೆಳಕು ಸಿರ್ಕಾಡಿಯನ್ ರಿದಮ್ಹಗೆ ಅಡ್ಡಿಪಡಿಸುತ್ತದೆ. ಇದರಿಂದ ನಮ್ಮ ದೇಹದೊಳಗಿನ ಮಾನಸಿಕ ಗಡಿಯಾರವು ಸ್ವಾಭಾವಿಕವಾಗಿ ಎಚ್ಚರಗೊಳ್ಳುತ್ತದೆ. ಇದು ನಿದ್ರೆಗೆ ಸಹಾಯ ಮಾಡುವ ಮೆಲಟೋನಿನ್ ಅಂಶವನ್ನು ನಿಗ್ರಹಿಸುತ್ತದೆ. ಹೀಗಾಗಿ ಮಲಗುವ ಒಂದು ಗಂಟೆಗೂ ಮುನ್ನ ಈ ಎಲ್ಲಾ ತಂತ್ರಜ್ಞಾನದಿಂದ ನೀವು ದೂರ ಇರುವುದು ಉತ್ತಮ.
ವೈದ್ಯರ ಸಂಪರ್ಕ
ಈ ಮೇಲಿನ ಯಾವುದೇ ಅಂಶಗಳು ನಿಮ್ಮ ಸಮರ್ಪಕ ನಿದ್ರೆಗೆ ಸಹಾಯ ಮಾಡುತ್ತಿಲ್ಲ ಎಂಬುದು ನಿಮಗೆ ಮನವರಿಕೆಯಾದರೆ ಖಂಡಿತ ನೀವು ವೈದ್ಯರನ್ನು ಭೇಟಿಯಾಗುವುದು ಒಳಿತು. ನೀವು ಎಷ್ಟೇ ವಿಶ್ರಾಂತಿ ಪಡೆದರೂ ಸಹ ಕೆಲವೊಮ್ಮೆ ನಿದ್ರೆಗೆ ಇದು ಸಹಕಾರಿಯಾಗದೇ ಇರಬಹುದು. ಇಂಥಾ ಸಂದರ್ಭದಲ್ಲಿ ನೀವು ವೈದ್ಯರ ಭೇಟಿಯಾಗಿ ಸಮರ್ಪಕ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ .