Menstrual Cramp: ಹೊಕ್ಕುಳ ಮೇಲೆ ಕೊಬ್ಬರಿಎಣ್ಣೆ ಹಾಕಿದರೆ ಮುಟ್ಟಿನ ನೋವು ಕಡಿಮೆಯಾಗುತ್ತೆ; ಅಮ್ಮನ ಮಾತು ಕೇಳಿಸಿಕೊಳ್ಳಿ
Apr 29, 2024 04:42 PM IST
ಹೊಕ್ಕುಳ ಮೇಲೆ ಕೊಬ್ಬರಿಎಣ್ಣೆ ಹಾಕಿದರೆ ಮುಟ್ಟಿನ ನೋವು ಕಡಿಮೆಯಾಗುತ್ತೆ
- ಮುಟ್ಟಿನ ನೋವು ಹೆಣ್ಣುಮಕ್ಕಳಿಗೆ ಶಾಪ ಅಂತಲೇ ಹೇಳಬಹುದು. ತಿಂಗಳಿಗೊಮ್ಮೆ ಬರುವ ಮುಟ್ಟು 4-5 ದಿನಗಳ ಕಾಲ ನೋವು, ಸುಸ್ತು, ಆಯಾಸ ಉಂಟು ಮಾಡುತ್ತದೆ. ಇದಕ್ಕೆ ಈಗಾಗಲೇ ನೀವು ಹಲವು ಮನೆಮದ್ದುಗಳನ್ನು ಅನುಸರಿಸಿ ನೋಡಿರಬಹುದು. ಆದರೆ ಪರಿಹಾರ ಸಿಕ್ಕಿಲ್ಲ ಅಂದ್ರೆ ಇಲ್ಲಿ ನಾವು ತಿಳಿಸಿರುವ ಮನೆಮದ್ದು ಟ್ರೈ ಮಾಡಿ. ಇದರಿಂದ ಇನ್ನೂ ಹಲವು ಪ್ರಯೋಜನಗಳಿವೆ.
ʼಮುಟ್ಟಿನ ದಿನಗಳು ಬಂತೆಂದರೆ ಕಿರಿಕಿರಿ, ಅಸಹನೆ ಆರಂಭವಾಗುತ್ತದೆ. ಅದರಲ್ಲೂ ಈ ಮುಟ್ಟಿನ ನೋವು ಯಾವಾಗಲೂ ಹಿಂಸೆ ನೀಡುತ್ತದೆ. ಯಾವಾಗೊಮ್ಮೆ ಪೀರಿಯಡ್ಸ್ ಮುಗಿಯುತ್ತದೆ ಎಂದು ಅನ್ನಿಸಿ ಬಿಡುತ್ತದೆ. ಮುಟ್ಟಿನ ನೋವು ನಿವಾರಣೆಗೆ ಯಾವುದೇ ಕ್ರಮ ಅನುಸರಿಸಿದ್ರೂ ಸೂಕ್ತ ಪರಿಹಾರ ಸಿಗುತ್ತಿಲ್ಲ. ಒಮ್ಮೊಮ್ಮೆ ಈ ನೋವಿನ ಕಾರಣದಿಂದ ಜೀವನ ನರಕ ಎನ್ನಿಸಿ ಬಿಡುತ್ತದೆʼ ಎಂದು ಹಲವರು ಗೋಳು ತೋಡಿಕೊಂಡಿದ್ದನ್ನು ನೀವು ಕೇಳಿಸಿಕೊಂಡಿರಬಹುದು. ಆದರೆ ಮುಟ್ಟಿನ ನೋವಿಗೆ ನಿವಾರಣೆಗೆ ಮನೆಮದ್ದುಗಳೇ ಬೆಸ್ಟ್. ಇದಕ್ಕಾಗಿ ಅಮ್ಮ ಹೇಳುವ ಒಂದು ಬೆಸ್ಟ್ ಉಪಾಯ ಎಂದರೆ ಹೊಕ್ಕಳ ಮೇಲೆ ಎಣ್ಣೆ ಹಾಕಿಕೊಳ್ಳುವುದು. ಹೊಕ್ಕಳಿನ ಮೇಲೆ ಎಣ್ಣೆ ಹಾಕಿಕೊಳ್ಳುವುದರಿಂದ ನೋವು ನಿವಾರಣೆಯಾಗುತ್ತದೆ, ಯಾಕೆಂದರೆ ಅದು ದೇಹದ ಕೇಂದ್ರ ಭಾಗವಾಗಿದೆ. ನಾಭಿಯ ಮೇಲೆ ಎಣ್ಣೆಯ ಹಚ್ಚುವುದರಿಂದ ಸ್ನಾಯುಗಳು ಸಡಿಲಗೊಳ್ಳಿತ್ತದೆ. ತೆಂಗಿನೆಣ್ಣೆಯು ಉರಿಯೂತ ವಿರೋಧಿ ಲಕ್ಷಣಗಳನ್ನು ಹೊಂದಿದ್ದು ಇದು ಮುಟ್ಟಿನ ಸೆಳೆತವನ್ನು ನೈಸರ್ಗಿಕವಾಗಿ ನಿವಾರಿಸುತ್ತದೆ. ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಮುಟ್ಟಿನ ನೋವಿಗೆ ಪರಿಹಾರ ಸಿಗುವುದು ಹೌದೋ ಅಲ್ಲವೋ ಎಂಬುದನ್ನು ತಿಳಿಯೋಣ.
ಮುಟ್ಟಿನ ಸೆಳೆತಕ್ಕೆ ಕಾರಣವೇನು?
ಮುಟ್ಟಿನ ಸಮಯದಲ್ಲಿ ನೋವು ಬರುವುದು ಸಹಜ ಸಂಗತಿ. ಶೇ 60ರಷ್ಟು ಮಹಿಳೆಯರು ಮುಟ್ಟಿನ ಅವಧಿಯುಲ್ಲಿ ಸೌಮ್ಯತರದ ನೋವು ಹೊಂದಿರುತ್ತಾರೆ. ಆದರೆ ಶೇ 5 ರಿಂದ 15 ರಷ್ಟು ಮಂದಿ ತೀವ್ರವಾದ ಮುಟ್ಟಿನ ನೋವು ಅನುಭವಿಸುತ್ತಾರೆ. ಇದು ಅವರ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ಗರ್ಭಕೋಶದ ಸಂಕೋಚನವು ನೋವು ಹಾಗೂ ಅಸ್ವಸ್ಥತೆಯನ್ನು ಉಂಟು ಮಾಡಬಹುದು ಎಂದು ಸ್ತ್ರೀರೋಗ ತಜ್ಞೆ ಡಾ. ಆಸ್ತಾ ದಯಾಲ್ ಹೇಳುತ್ತಾರೆ.
ಕೊರಿಯನ್ ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್‌ನಲ್ಲಿ ಪ್ರಕಟವಾದ 2022ರ ಅಧ್ಯಯನದ ಪ್ರಕಾರ ಮುಟ್ಟಿನ ನೋವಿಗೆ ಡಿಸ್ಮೆನೊರಿಯಾ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ಮುಟ್ಟಿನ ಅವಧಿಯ ಆರಂಭಕ್ಕೂ ಮೊದಲು ನೋವು ಕಾಣಿಸುತ್ತದೆ. ಕೆಲವು ದಿನಗಳ ನಂತರ ಅದು ತಾನಾಗಿಯೇ ಕಡಿಮೆಯಾಗುತ್ತದೆ. ನೋವು ಹಾಗೂ ದೇಹದ ಉರಿಯೂತವನ್ನ ಉಂಟು ಮಾಡುವ ಹಾರ್ಮೋನ್‌ಗಳು ಗರ್ಭಾಶಯದ ಸ್ನಾಯುವಿನ ಸಂಕೋಚನವನ್ನು ಪ್ರಚೋದಿಸುತ್ತದೆ.
ಹೊಕ್ಕುಳದ ಮೇಲೆ ತೆಂಗಿನೆಣ್ಣೆ ಹಚ್ಚುವುದರಿಂದ ಮುಟ್ಟಿನ ನೋವು ಕಡಿಮೆಯಾಗುವುದೇ?
ತೆಂಗಿನೆಣ್ಣೆಯು ಸ್ನಾಯುಗಳಿಗೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಇದು ಮುಟ್ಟಿನ ಸೆಳೆತದಿಂದ ಪರಿಹಾರ ನೀಡುತ್ತದೆ ಎಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ನರ್ಸಿಂಗ್ ರಿಸರ್ಚ್‌ನಲ್ಲಿ ಪ್ರಕಟವಾದ 2023 ರ ಅಧ್ಯಯನ ತಿಳಿಸಿದೆ. ಹಿಂದಾವಿ ಜರ್ನಲ್‌ನಲ್ಲಿ ಪ್ರಕಟವಾದ ಮತ್ತೊಂದು ಸಂಶೋಧನೆಯು ಲ್ಯಾವೆಂಡರ್, ಋಷಿ, ಗುಲಾಬಿಯಂತಹ ಸಾರಭೂತ ತೈಲಗಳ ಬಳಕೆಯನ್ನು ಸೂಚಿಸುತ್ತದೆ. ಮರ್ಜೋರಾಮ್, ದಾಲ್ಚಿನ್ನಿ ಮತ್ತು ಲವಂಗವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹೊಕ್ಕುಳ ಮತ್ತು ಹೊಟ್ಟೆಯ ಸುತ್ತಲೂ ಮಸಾಜ್ ಮಾಡಿದಾಗ ಮುಟ್ಟಿನ ಸೆಳೆತವು ಕಡಿಮೆಯಾಗುತ್ತದೆ.
ಮುಟ್ಟಿನ ನೋವು ನಿವಾರಣೆಗೆ ಹೊಕ್ಕುಳಿಗೆ ತೆಂಗಿನೆಣ್ಣೆಯನ್ನು ಹೇಗೆ ಹಚ್ಚಬೇಕು?
ಮುಟ್ಟಿನ ನೋವು ನಿವಾರಣೆಗೆ ಸ್ವಲ್ಪ ಪ್ರಮಾಣದ ತೆಂಗೆನೆಣ್ಣೆಯನ್ನು ಹೊಕ್ಕುಳದ ಪ್ರದೇಶಕ್ಕೆ ಹಾಕಿ ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಇದು ರಕ್ತ ಪರಿಚಲನೆ ಸುಧಾರಿಸಲು ಮತ್ತು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನೀವು ಹೊಕ್ಕುಳಕ್ಕೆ ಎಣ್ಣೆ ಹಾಕಿದಾಗ ಚರ್ಮ ಸೇರಿದಂತೆ ಇಡೀ ದೇಹವು ಪ್ರಯೋಜನವನ್ನು ನೀಡುತ್ತದೆ. ಹೊಕ್ಕುಳಕ್ಕೆ ಎಣ್ಣೆ ಹಾಕುವುದರಿಂದ ಚರ್ಮಕ್ಕೂ ಸಾಕಷ್ಟು ಪ್ರಯೋಜನಗಳಿದೆ. ಹೊಕ್ಕುಳಕ್ಕೆ ಎಣ್ಣೆ ಹಾಕುವುದರಿಂದ ದೇಹದಲ್ಲಿನ ವಿವಿಧ ರಕ್ತನಾಳಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಎಣ್ಣೆಯು ಹೊಟ್ಟೆಯ ಅಸ್ವಸ್ಥತೆಯನ್ನು ನಿರ್ವಹಿಸುತ್ತದೆ. ಫಲವತ್ತೆಯನ್ನು ಉತ್ತೇಜಿಸುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದ ಮುಟ್ಟಿನ ನೋವಿನ ನಿವಾರಣೆಯ ಜೊತೆಗೆ ವಿವಿಧ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆʼ ಎಂದು ತಜ್ಞರು ಹೇಳುತ್ತಾರೆ.
ಈ ವಿಷಯ ನೆನಪಿನಲ್ಲಿರಲಿ
ನಿಮ್ಮ ಅವಧಿ ಪ್ರಾರಂಭವಾಗುವ ಮೊದಲು ಕನಿಷ್ಠ ಒಂದು ವಾರದವರೆಗೆ ನೀವು ದಿನಕ್ಕೆ ಒಮ್ಮೆ ನಿಮ್ಮ ಹೊಟ್ಟೆಯ ಮೇಲೆ ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆಯನ್ನು ಮಸಾಜ್ ಮಾಡಬಹುದು. ಆದಾಗ್ಯೂ, ಮುಟ್ಟಿನ ಸೆಳೆತ ಪ್ರಾರಂಭವಾಗುವ ಮೊದಲು ಅಥವಾ ಸಮಯದಲ್ಲಿ ಹೊಕ್ಕುಳ ಪ್ರದೇಶದಲ್ಲಿ ತೆಂಗಿನ ಎಣ್ಣೆಯನ್ನು ಬಳಸುವುದು ಗರಿಷ್ಠ ಪರಿಣಾಮಕಾರಿತ್ವವನ್ನು ನೀಡುತ್ತದೆ.
ಹೊಕ್ಕಳಿಗೆ ತೆಂಗಿನೆಣ್ಣೆ ಹಚ್ಚುವುದರಿಂದ ಅಡ್ಡಪರಿಣಾಮಗಳಿದ್ಯಾ?
ತೆಂಗಿನ ಎಣ್ಣೆಯನ್ನು ಹೊಕ್ಕುಳಲ್ಲಿ ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದಿದ್ದರೂ, ತೆಂಗಿನ ಎಣ್ಣೆಯಿಂದ ನಿಮಗೆ ಅಲರ್ಜಿ ಇದ್ದರೆ, ಅದನ್ನು ಚರ್ಮಕ್ಕೆ ಅನ್ವಯಿಸಬೇಡಿ. ಜೊತೆಗೆ, ನಿಮ್ಮ ಋತುಚಕ್ರದಲ್ಲಿ ಈ ನೈಸರ್ಗಿಕ ಚಿಕಿತ್ಸೆ ವಿಧಾನವನ್ನು ಅಳವಡಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ.
ತೆಂಗಿನೆಣ್ಣೆಯನ್ನು ಹೊಕ್ಕಳಿಗೆ ಹಚ್ಚಿಕೊಳ್ಳುವುದರಿಂದ ಮುಟ್ಟಿನ ನೋವು ಮಾತ್ರವಲ್ಲ, ಇನ್ನೂ ಹಲವು ಪ್ರಯೋಜನಗಳಿಗೆ ಎಂಬುದು ನಿಮಗೆ ಈ ತಿಳಿದಿರಬಹುದು. ಇನ್ನೇಕೆ ತಡ ಮುಟ್ಟಿನ ನೋವು ಉಂಟಾದರೆ ಹೊಕ್ಕಳಿಗೆ ಎಣ್ಣೆ ಹಚ್ಚಿ ನೋಡಿ.
ವಿಭಾಗ