ಭಾರಿ ಬಿಸಿಲೆಂದು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳುತ್ತಿದ್ದೀರಾ? ತೂಕ ಏರಿಕೆ ಸಮಸ್ಯೆಗೆ ಇದೂ ಒಂದು ಕಾರಣ
Apr 30, 2024 04:14 PM IST
ಭಾರಿ ಬಿಸಿಲೆಂದು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳುತ್ತಿದ್ದೀರಾ
- ತೂಕ ಏರಿಕೆಗೆ ಸಾಕಷ್ಟು ವಿಚಾರಗಳು ಕಾರಣವಾಗಿದೆ. ಅತಿಯಾಗಿ ತಿನ್ನುವುದು, ವ್ಯಾಯಾಮ ಮಾಡದೇ ಇರುವುದು ಮಾತ್ರ ತೂಕ ಏರಿಕೆಗೆ ಕಾರಣ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಯಾವೆಲ್ಲ ಅಂಶಗಳು ನಿಮ್ಮ ದೇಹದಲ್ಲಿ ತೂಕ ಏರಿಕೆಗೆ ಕಾರಣವಾಗುತ್ತೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ
ಅತಿಯಾಗಿ ತಿನ್ನುವುದು ಹಾಗೂ ವ್ಯಾಯಾಮದ ಕೊರತೆಯಿಂದಾಗಿ ಸಾಮಾನ್ಯವಾಗಿ ನಾವು ತೂಕ ಏರಿಕೆಯ ಸಮಸ್ಯೆಯನ್ನು ಕಾಣುತ್ತೇವೆ. ಆದರೆ ಕೇವಲ ಇದು ಮಾತ್ರವಲ್ಲ. ಇನ್ನೂ ತೆರೆಮರೆಯಲ್ಲಿರುವ ಸಾಕಷ್ಟು ವಿಚಾರಗಳು ಸದ್ದಿಲ್ಲದೇ ನಿಮ್ಮ ತೂಕ ಏರಿಕೆಗೆ ಕಾರಣವಾಗುತ್ತಿರುತ್ತದೆ. ಪೋಷಕಾಂಶದ ಕೊರತೆ, ವಿಟಾಮಿನ್‌ಗಳ ಅಸಮರ್ಪಕ ಪೂರೈಕೆ ಹಾಗೂ ದೇಹದಲ್ಲಿ ಮಿನರಲ್‌ಗಳ ಸಮತೋಲನದಲ್ಲಿ ಉಂಟಾಗುವ ಸಮಸ್ಯೆಗಳು ಕೂಡ ನಿಮ್ಮ ತೂಕ ಏರಿಕೆಗೆ ಕಾರಣವಾಗಿಡಬಿಡಬಹುದು.
ಕೇವಲ ಈ ಕಾರಣಗಳು ಮಾತ್ರವಲ್ಲ. ತೂಕ ಏರಿಕೆಗೆ ಕಾರಣವಾಗುವ ಇನ್ನೊಂದು ಪ್ರಮುಖ ಕಾರಣದ ಬಗ್ಗೆ ಹೇಳಿದರೆ ನಿಮಗೆ ಆಶ್ಚರ್ಯ ಎನಿಸಬಹುದು. ನೀವು ನಂಬಿದ್ರೆ ನಂಬಿ! ಸೂರ್ಯನಿಂದ ತಪ್ಪಿಸಿಕೊಂಡು ತಿರುಗುವ ನಿಮ್ಮ ಅಭ್ಯಾಸ ಕೂಡ ಸದ್ದಿಲ್ಲದೇ ನಿಮ್ಮ ತೂಕವನ್ನು ಏರಿಸಿಬಿಡಬಹುದು.
ತೂಕ ಏರಿಕೆಗೆ ಕಾರಣವಾಗುವ ವಿವಿಧ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ
1. ವಿಟಮಿನ್ ಡಿ ಕೊರತೆ
ಮುಖ್ಯವಾಗಿ ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಅಂಶವು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಮಟ್ಟ ಕಡಿಮೆಯಾದಾಗ ದೇಹದಲ್ಲಿ ಕೊಬ್ಬಿನ ಅಂಶವನ್ನು ಕರಗಿಸುವ ಪ್ರಕ್ರಿಯೆ ನಿಧಾನವಾಗುತ್ತಾ ಹೋಗುತ್ತದೆ. ಇದರಿಂದ ತೂಕ ಏರಿಕೆ ಉಂಟಾಗುತ್ತದೆ.
2. ಒಮೆಗಾ 3 ಕೊಬ್ಬಿನಾಮ್ಲದ ಕೊರತೆ
ಸಾಮಾನ್ಯವಾಗಿ ಮೀನುಗಳಲ್ಲಿ ಒಮೆಗಾ 3 ಅಂಶವು ಹೇರಳವಾಗಿ ಸಿಗುತ್ತದೆ. ಇವುಗಳು ನಿಮ್ಮ ಹಸಿವಿನ ಹಾರ್ಮೋನುಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಓಮೆಗಾ 3 ಅಂಶದ ಕೊರತೆಯಿಂದಾಗಿ ನಿಮಗೆ ಹಸಿವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ನಿಮಗೆ ಕ್ಯಾಲರಿ ಭರಿತ ಆಹಾರವನ್ನು ಸೇವಿಸುವಂತೆ ಪ್ರೇರಿಪಿಸಬಹುದು. ಇದರಿಂದ ನಿಮ್ಮ ತೂಕ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿರುತ್ತದೆ.
ಇದನ್ನೂ ಓದಿ | Mango Fruit: ಮಾವಿನ ಹಣ್ಣು ಅತಿಯಾಗಿ ಸೇವಿಸಿದರೆ ಎದುರಾಗಬಹುದಾದ 5 ಆರೋಗ್ಯ ಸಮಸ್ಯೆಗಳಿವು
3. ಪ್ರೊಟೀನ್ ಕೊರತೆ
ಪ್ರೊಟೀನ್‌ಗಳು ನಮ್ಮ ಸ್ನಾಯುಗಳ ಬೆಳವಣಿಗೆಗೆ ಪ್ರಮುಖವಾಗಿ ಬೇಕಾಗುವ ಅಂಶವಾಗಿದೆ. ಅಲ್ಲದೆ ಇವುಗಳು ನಿಮಗೆ ಅಷ್ಟು ಸುಲಭವಾಗಿ ಹಸಿವಿನ ಅನುಭವವನ್ನು ನೀಡುವುದಿಲ್ಲ. ಕಡಿಮೆ ಪ್ರೊಟೀನ್‌ನಿಂದಾಗಿ ನಿಮಗೆ ಬೇಗನೇ ಹಸಿವಾಗುತ್ತದೆ. ಹಾಗೂ ನೀವು ಹೆಚ್ಚೆಚ್ಚು ತಿನ್ನಲು ಆರಂಭಿಸುತ್ತೀರಿ. ಇದರಿಂದ ತೂಕ ಏರಿಕೆ ಉಂಟಾಗುತ್ತದೆ.
4. ವಿಟಮಿನ್ ಬಿ ಕೊರತೆ
ಬಿ 12 ಹಾಗೂ ಬಿ 6 ವಿಟಮಿನ್‌ಗಳು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳು ನಾವು ಸೇವಿಸುವ ಆಹಾರವನ್ನು ಶಕ್ತಿಯಲ್ಲಿ ಪರಿವರ್ತಿಸುವ ಕಾರ್ಯ ಮಾಡುತ್ತವೆ. ಆದರೆ ವಿಟಮಿನ್ ಬಿ ಕೊರತೆ ಉಂಟಾದಾಗ ನಮಗೆ ಸಕ್ಕರೆ ಅಂಶಯುಕ್ತ ಆಹಾರ ಸೇವನೆ ಮಾಡಬೇಕೆಂದು ಎನಿಸುತ್ತದೆ ಹಾಗೂ ಇದರಿಂದ ತೂಕ ಏರಿಕೆ ಉಂಟಾಗುತ್ತದೆ.
5. ಆಯೋಡಿನ್ ಕೊರತೆ
ಆಯೋಡಿನ್ ಕೊರತೆಯಿಂದಾಗಿ ಹೈಪೋಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ನಿಮಗೆ ತೂಕ ಏರಿಕೆ ಮಾಡುತ್ತದೆ.
6. ಕಬ್ಬಿಣಾಂಶದ ಕೊರತೆ
ಕಬ್ಬಿಣಾಂಶದ ಕೊರತೆ ಕೂಡ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಕಬ್ಬಿಣಾಂಶದ ಕೊರತೆಯಿಂದಾಗಿ ಹಾರ್ಮೋನ್‌ಗಳಲ್ಲಿ ಅಸಮತೋಲನ, ತೂಕ ಏರಿಕೆ ಹಾಗೂ ನಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.
ಹಾಗಾದರೆ ನಾವೇನು ಮಾಡಬೇಕು?
1. ವೈದ್ಯರನ್ನು ಭೇಟಿ ಮಾಡಿ
ಒಂದು ವೇಳೆ ನಿಮಗೆ ಪೋಷಕಾಂಶದ ಕೊರತೆ ಉಂಟಾಗುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತಿದೆ ಎಂದೆನಿಸಿದರೆ, ಖಂಡಿತವಾಗಿಯೂ ನೀವು ಮೊದಲು ರಕ್ತ ಪರೀಕ್ಷೆ ಮಾಡಿಸಿ ಬಳಿಕ ವೈದ್ಯರ ಸಲಹೆಯಂತೆ ಆಹಾರ ಸೇವನೆ ಮಾಡುವುದು ಒಳಿತು.
2. ಸಮತೋಲಿತ ಆಹಾರ
ಜಂಕ್ ಫುಡ್‌ಗಳು, ಸಂಸ್ಕರಿಸಿದ ಆಹಾರ ಇವುಗಳಿಂದ ಯಾವುದೇ ಲಾಭವಿಲ್ಲ. ಹೀಗಾಗಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ನಿಮ್ಮ ಆಯ್ಕೆಯಾಗಿರಲಿ. ಆರೋಗ್ಯರಕ ಆಹಾರ ಕ್ರಮವು ತೂಕದ ಸಮಸ್ಯೆ ಮಾತ್ರವಲ್ಲದೇ ನಿಮ್ಮ ದೇಹದ ಸಮಗ್ರ ಆರೋಗ್ಯವನ್ನು ಕಾಪಾಡುತ್ತದೆ.
3. ಸೂರ್ಯನ ಬೆಳಕಿಗೆ ಮೈಯೊಡ್ಡಿ
ದೇಹದಲ್ಲಿ ವಿಟಮಿನ್ ಡಿ ಅಂಶವನ್ನು ನಿಯಂತ್ರಿಸಲು ಸೂರ್ಯನ ಕಿರಣಕ್ಕೆ ನಿಮ್ಮ ಮೈ ಒಡ್ಡುವುದನ್ನು ರೂಢಿಸಿಕೊಳ್ಳಿ.
4. ಮೀನು ಸೇವನೆ
ನೀವು ಮಾಂಸಾಹಾರಿಯಾಗಿದ್ದರೆ ಒಮೆಗಾ 3 ಅಂಶವನ್ನು ಹೊಂದಿರುವ ಮೀನುಗಳನ್ನು ಸೇವನೆ ಮಾಡಿ. ಇಲ್ಲವಾದಲ್ಲಿ ಫ್ಲ್ಯಾಕ್ಸ್ ಬೀಜಗಳನ್ನು ಸೇವಿಸಿ
5. ಡೈರಿ ಉತ್ಪನ್ನಗಳ ಸೇವನೆ
ಹಾಲು, ಚೀಸ್ ಹಾಗೂ ಮೊಸರಿನಲ್ಲಿ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಪ್ರಮಾಣ ಅಗಾಧವಾಗಿ ಇರುತ್ತದೆ. ಇವುಗಳನ್ನು ನಿಯಂತ್ರಿತ ಪ್ರಮಾಣದಲ್ಲಿ ಸೇವನೆ ಮಾಡಿ.