ನೀರು ಎಲ್ಲಿಂದ ಬಂತು? ಭೂಮಿಯ ಮೇಲೆ ಎಷ್ಟು ನೀರಿದೆ? ಜಲಚಕ್ರ ಅರಿಯುವ ಪ್ರಯತ್ನ ಇಲ್ಲಿದೆ -ಜ್ಞಾನ ವಿಜ್ಞಾನ
Apr 26, 2024 07:00 AM IST
ನೀರಿನ ಪ್ರಾಮುಖ್ಯತೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳು ಹಲವು. ಎಚ್.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ
- ಎಚ್.ಎ.ಪುರುಷೋತ್ತಮ ರಾವ್: ಸೂರ್ಯನ ಶಾಖದಿಂದ ಆವಿಯಾಗುವ ನೀರು ಮತ್ತೆ ಭೂಮಿಗೆ ಹಿಂದಿರುವುದೇ ಜಲಚಕ್ರ. ಈ ಜಲಚಕ್ರದ ಲೆಕ್ಕಾಚಾರವೇ ರೋಚಕ. ನೀರಿಲ್ಲದೆ ನಾವಿಲ್ಲ, ಆದರೆ ಸದಾ ನಮ್ಮನ್ನು ಕಾಪಾಡುವ ನೀರಿನ ಬಗ್ಗೆ ನಮಗೆಷ್ಟು ಗೊತ್ತು? ನಮ್ಮ ಮನೆಗೆ ನಲ್ಲಿಗಳಲ್ಲಿ ಬರುವ, ನಮ್ಮ ಲೋಟಗಳಲ್ಲಿ ತುಂಬಿಕೊಳ್ಳುವ ಕುಡಿಯುವ ನೀರಿನ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇದು.
ನೀರಿನ ಮಹತ್ವ: ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ಹೆಚ್ಚು ಮಹತ್ವವಿದೆ, ಪಾವಿತ್ರ್ಯತೆಯಿದೆ, ದ್ಯೆವತ್ವವೂ ಇದೆ. ಪ್ರಾಚೀನ ಮಾನವ ತನ್ನ ಬದುಕಿಗೆ ಆಧಾರವೆನಿಸಿದ ಪ್ರಕೃತಿಯನ್ನು ಪೂಜಿಸತೊಡಗಿದ. ನೀರಿಲ್ಲದೆ ಜೀವವಿಲ್ಲ. ಜೀವಿಯ ಅಸ್ತಿತ್ವಕ್ಕೆ ನೀರು ಮತ್ತು ಗಾಳಿ ಮೂಲಾಧಾರ. ಪ್ರಾಣಿ ಮತ್ತು ಸಸ್ಯಗಳ ದೇಹದಲ್ಲಿ ನಡೆಯುವ ಎಲ್ಲ ಪ್ರಕ್ರಿಯೆಗಳಿಗೂ ನೀರು ಮಾಧ್ಯಮ (ಅತಿಮುಖ್ಯ ಅಂಶ). ನಮ್ಮ ರಕ್ತದ ಶೇ 80 ಭಾಗ ನೀರಿನಿಂದಲೇ ತುಂಬಿದೆ. ಮನುಷ್ಯನೂ ಸೇರಿದಂತೆ ಪ್ರಾಣಿಗಳ ದೇಹದಲ್ಲಿ ನೀರಿನ ಅಂಶವು ಶೇ 10 ರಷ್ಟು ಕಡಿಮೆಯಾದರೂ ಸಾಯುತ್ತವೆ. ನಮ್ಮ ಶರೀರದ ಶೇ 70 ಭಾಗಕ್ಕೂ ಹೆಚ್ಚು ನೀರೇ ತುಂಬಿದೆ. ವಯಸ್ಕ ಸಸ್ತನಿಗಳ ತೂಕದ ಸುಮಾರು 60 ಭಾಗ ನೀರೇ ಇರುತ್ತದೆ. ನೀರು ಮಾನವನ ಅಭ್ಯುದಯಕ್ಕೆ ಎಷ್ಟು ಉಪಯೋಗವೋ ಪ್ರಕೃತಿಯ ವಿಕೋಪಕ್ಕೆ ಸಿಲುಕಿದಾಗ ಅಷ್ಟೇ ಮಾರಕವೂ ಹೌದು. ನೀರಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಗಮನಿಸೋಣವೇ.
ಜಲಚಕ್ರ ಕೆಲಸ ಮಾಡುವ ರೀತಿ
ಸೂರ್ಯನ ಶಾಖದಿಂದ ವರ್ಷವೊಂದಕ್ಕೆ 95,000 ಘನಮ್ಯೆಲುಗಳಷ್ಟು ಗಾತ್ರದ ನೀರು ಆವಿಯಾಗಿ ಗಗನಕ್ಕೇರುತ್ತದೆ. ಇದರಲ್ಲಿ 80,000 ಘನಮ್ಯೆಲಿಗಳಷ್ಟು ಪ್ರಮಾಣವು ಸಾಗರಗಳಿಂದ ಆವಿಯಾದರೆ ಉಳಿದ 15,000 ಘನಮ್ಯೆಲಿಗಳಷ್ಟು ನೀರು ಮಾತ್ರವೇ ಭೂಮಿಯ ಮೇಲಿನ ಸೆಲೆಗಳಿಂದ ಆವಿಯಾಗುತ್ತದೆ.
ವಾತಾವರಣಕ್ಕೆ ಸೇರಿದ ನೀರು ಮತ್ತೆ ಮಳೆಯ ಮೂಲಕ ಭೂಮಿಗೆ ಹಿಂತಿರುಗುತ್ತದೆ. ಇದರಲ್ಲಿ 71,000 ಘನಮ್ಯೆಲಿಗಳಷ್ಟು ಗಾತ್ರದ ಸಿಹಿ ನೀರು ನೇರವಾಗಿ ಸಾಗರಗಳಲ್ಲಿ ಬಿದ್ದರೆ ಉಳಿದ ಭಾಗ ಮಾತ್ರ ಭೂಮಿಯ ಮೇಲೆ ಬೀಳುತ್ತದೆ. ಅದರಲ್ಲೂ 9,000 ಘನಮ್ಯೆಲಿಗಳಷ್ಟು ನೀರು ನದಿ ಮತ್ತು ತೊರೆಗಳ ಮೂಲಕ ಮತ್ತೆ ಸಾಗರವನ್ನು ಸೇರುತ್ತದೆ. 15,000 ಘನಮ್ಯೆಲಿಗಳಷ್ಟು ಪ್ರಮಾಣದ ನೀರು ಮಾತ್ರ ಭೂಮಿಯಲ್ಲಿ ಇಂಗುತ್ತದೆ. ಈ ನೀರು ಜೀವಿಗಳ ಪುನರಭಿವೃದ್ದಿಗೆ ಸಹಕಾರಿಯಾಗುತ್ತದೆ
ನಮ್ಮ ಭೂಗ್ರಹದಲ್ಲಿರುವ ನೀರಿನ ಒಟ್ಟು ಪ್ರಮಾಣ 32 ಕೋಟಿ ಘನಮ್ಯೆಲಿಗಳಷ್ಟು. ಇದರಲ್ಲಿ ಶೇ 97.2 ರಷ್ಟು ಭಾಗವು ನೇರವಾಗಿ ಜನರ ಬಳಕೆಗೆ ಬಾರದ ಉಪ್ಪುನೀರು. ಉಳಿದ ಕೇವಲ ಶೇ 2.8 ಭಾಗದಷ್ಟು ಪ್ರಮಾಣ ಮಾತ್ರ ಸಿಹಿನೀರು. ವಿಪರ್ಯಾಸವೆಂದರೆ ಈ ಪ್ರಮಾಣದ ಸಿಹಿನೀರಿನ ಶೇ 77 ಭಾಗ ಭೂಮಿಯ ಉತ್ತರ ಧ್ರುವ ಪ್ರದೇಶ ಹಾಗೂ ಹಿಮಪರ್ವತಗಳ ನೀರ್ಗಲ್ಲ ನದಿಗಳಲ್ಲಿ ಸೇರಿ ಹೋಗಿfರ. ಇದು ಮನುಷ್ಯನ ಬಳಕೆಗೆ ಸಿಗುತ್ತಿಲ್ಲ.
ಶುದ್ಧ ನೀರಿನ ಪ್ರಮಾಣವೇ ಕಡಿಮೆ
ಉಳಿದ ಶೇ 23 ರಷ್ಟು ಭಾಗ ಮಾತ್ರ ಅಂತರ್ಜಲ,'ಸರೋವರ, ಕೆರೆ, ಕುಂಟೆ, ನದಿ, ವಾಯುಮಂಡಲಗಳಲ್ಲಿ ಹಂಚಿಕೆಯಾಗಿದೆ. ಅಂದರೆ ಅಂದಾಜಿನಲ್ಲಿ ಇಡೀ ಪ್ರಪಂಚದಲ್ಲಿರುವ ನೀರನ್ನು ಆರು ಲೀಟರಿನ ಒಂದು ಪಾತ್ರೆಯಲ್ಲಿ ಹಾಕಿದರೆ ನಮಗೆ ದೊರೆಯುವ ಶುದ್ದ ಸಿಹಿ ನೀರಿನ ಪ್ರಮಾಣ ಕೇವಲ ಒಂದು ಚಮಚೆಯಷ್ಟು ಮಾತ್ರ. ಸಾಗರದಿಂದ ಹೊರಟು ಮತ್ತೆ ಸಾಗರಕ್ಕೆ ಸೇರುವ ಈ ನೀರಿನ ಕಥೆ ನಿಜಕ್ಕೂ ಎಷ್ಟು ರಮ್ಯ, ರೋಚಕವಲ್ಲವೆ?
ಬೆಂಗಳೂರು ಸೇರಿದಂತೆ ಕರ್ನಾಟಕ ಮತ್ತು ದೇಶದ ಹಲವೆಡೆ ಇದೀಗ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನೀರಿನ ಕಾಳಜಿ ಮರೆತರೆ ಏನಾಗುತ್ತದೆ ಎನ್ನುವುದಕ್ಕೂ ಈ ಸಂದರ್ಭವು ಅತ್ಯುತ್ತಮ ಉದಾಹರಣೆಯಾಗಿದೆ. ಮನೆಗಳಲ್ಲಿ ನೀರಿನ ಉಳಿತಾಯ ಕ್ರಮಗಳನ್ನು ಅನುಸರಿಸುವುದು, ಮಳೆನೀರು ಸಂಗ್ರಹ, ಹಳ್ಳಿ-ನಗರಗಳಲ್ಲಿ ಕೆರೆ, ಕುಂಟೆಗಳ ಸಂರಕ್ಷಣೆಯು ಜನರು ನೀರಿನ ಕಾಳಜಿ ಮಾಡಬಹುದಾದ ಅತ್ಯುತ್ತಮ ರೀತಿಗಳಲ್ಲಿ ಕೆಲವು. ಇದರ ಜೊತೆಗೆ ಅರಣ್ಯ ಮತ್ತು ಒಟ್ಟಾರೆ ಪರಿಸರ ಸಂರಕ್ಷಣೆಯೂ ಜಲಚಕ್ರ ಕಾಪಾಡಲು ನೆರವಾಗುತ್ತದೆ ಎನ್ನುವುದನ್ನು ನಾವು ಮರೆಯದಿರೋಣ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಡಿಯುವ ಸಮಸ್ಯೆಗೆ 5 ಮುಖ್ಯ ಕಾರಣಗಳಿವು