Summer Recipes: ಲಸ್ಸಿ ಕುಡಿಯೋಕೆ ಹೊರಗೆ ಏಕೆ? ಮೊಸರು ಬಳಸಿ ಮನೆಯಲ್ಲೇ ತಯಾರಿಸಿ ವಿವಿಧ ರೀತಿಯ ರುಚಿಕರ ಪಾನೀಯಗಳು
Apr 23, 2024 03:46 PM IST
ಮೊಸರಿನಿಂದ ತಯಾರಿಸಬಹುದಾದ ಪಾನೀಯಗಳು
Summer Recipes: ಭಾರತೀಯ ಆಹಾರ ಪದ್ಧತಿಯಲ್ಲಿ ಊಟದ ಜೊತೆ ಅಥವಾ ನಂತರ ಮೊಸರನ್ನು ಬಳಸಲಾಗುತ್ತದೆ. ಕೇವಲ ಊಟದ ಜೊತೆ ಮಾತ್ರವಲ್ಲ ಮೊಸರಿನಿಂದ ಪಾನೀಯ ತಯಾರಿಸಿಯೂ ಸೇವಿಸಲಾಗುತ್ತದೆ. ಮಸಾಲೆ ಲಸ್ಸಿಯಿಂದ ಸಿಹಿ ಲಸ್ಸಿಯವರೆಗೆ ಹಲವಾರು ಬಗೆಯ ಮೊಸರಿನಿಂದ ಮಾಡಲಾದ ಪಾನೀಯಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಈ ರೀತಿಯ ಪಾನೀಯಗಳು ಬೇಸಿಗೆಗೆ ಹೇಳಿ ಮಾಡಿಸಿದಂತಿದೆ.
ಭಾರತೀಯ ಆಹಾರ ಪದ್ಧತಿಯಲ್ಲಿ ಊಟದ ಜೊತೆ ಅಥವಾ ನಂತರ ಮೊಸರನ್ನು ಬಳಸಲಾಗುತ್ತದೆ. ಕೇವಲ ಊಟದ ಜೊತೆ ಮಾತ್ರವಲ್ಲ ಮೊಸರಿನಿಂದ ಪಾನೀಯ ತಯಾರಿಸಿಯೂ ಸೇವಿಸಲಾಗುತ್ತದೆ. ಮಸಾಲೆ ಲಸ್ಸಿಯಿಂದ ಸಿಹಿ ಲಸ್ಸಿಯವರೆಗೆ ಹಲವಾರು ಬಗೆಯ ಮೊಸರಿನಿಂದ ಮಾಡಲಾದ ಪಾನೀಯಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಈ ರೀತಿಯ ಪಾನೀಯಗಳು ಬೇಸಿಗೆಗೆ ಹೇಳಿ ಮಾಡಿಸಿದಂತಿದೆ.
ಕೆಲವರಿಗಂತೂ ಚಳಿ ಇರಲಿ, ಮಳೆ ಇರಲಿ ಊಟದ ಜೊತೆ ಮೊಸರು ಅಥವಾ ಮಜ್ಜಿಗೆ ಇರಲೇಬೇಕು. ಅದರಲ್ಲೂ ಬೇಸಿಗೆಯಲ್ಲಂತೂ ಈ ಮೊಸರು, ಮಜ್ಜಿಗೆ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಇದು ಬಾಯಿ ರುಚಿಗೆ ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಮೊಸರು ಸೇವನೆಯು ದೇಹವನ್ನು ತಂಪಾಗಿರಿಸುವುದಲ್ಲದೆ ಜೀರ್ಣಕ್ರಿಯೆಗೂ ಸಹಕಾರಿ. ಮಸಾಲೆ ಲಸ್ಸಿಯಿಂದ ಸಿಹಿ ಲಸ್ಸಿಯವರೆಗೆ ಹಲವಾರು ಬಗೆಯ ಮೊಸರಿನಿಂದ ಮಾಡಲಾದ ಪಾನೀಯಗಳನ್ನು ತಯಾರಿಸಲಾಗುತ್ತದೆ.
ಈ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ತೀವ್ರವಿದ್ದು, ಹೊರಗಡೆಯಿಂದ ಮನೆಗೆ ಬಂದಾಕ್ಷಣ ತಂಪಾದ ಪಾನೀಯ ಕುಡಿಯಬೇಕು ಎಂದೆನಿಸುತ್ತದೆ. ಯಾವುದೇ ಕೂಲ್ ಡ್ರಿಂಕ್ಸ್‌ಗಳ ಮೊರೆ ಹೋಗದೆ ಆರೋಗ್ಯಕ್ಕೆ ಹಿತಕರವಾದ ಮೊಸರಿನಿಂದ ತಯಾರಿಸಬಹುದಾದ ಸಿಂಪಲ್ ಪಾನೀಯ ರೆಸಿಪಿಗಳನ್ನು ಮನೆಯಲ್ಲಿಯೇ ಪ್ರಯತ್ನಿಸಿ.
ಬೇಸಿಗೆಯಲ್ಲಿ ಏಕೆ ಮೊಸರು ಸೇವಿಸಬೇಕು?
ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಬಿ 12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳಿಂದ ಮೊಸರು ಸಮೃದ್ಧವಾಗಿದೆ. ಇದಲ್ಲದೆ, ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಮೊಸರು ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬಿಸಿ ವಾತಾವರಣದಲ್ಲಿ, ಮೊಸರು ಸೇವನೆಯು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ 8 ಬಗೆಯ ಮೊಸರು ಆಧರಿತ ಬೇಸಿಗೆ ಪಾನೀಯಗಳನ್ನು ತಯಾರಿಸುವುದು ಹೇಗೆ? ಇಲ್ಲಿದೆ ಮಾಹಿತಿ
1. ಲಸ್ಸಿ: ಮೊಸರು, ನೀರು, ಸಕ್ಕರೆ ಮತ್ತು ಒಂದು ಚಿಟಿಕೆ ಏಲಕ್ಕಿ ಅಥವಾ ಕೇಸರಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಇದಕ್ಕೆ ಮಾವು, ಸ್ಟ್ರಾಬೆರಿ ಅಥವಾ ಬಾಳೆಹಣ್ಣುಗಳನ್ನು ಕೂಡ ಸೇರಿಸಬಹುದು. ಇದರಿಂದ ರುಚಿ ಮತ್ತಷ್ಟು ಹೆಚ್ಚಾಗುವುದು.
2. ಮಸಾಲೆಯುಕ್ತ ಬಾಳೆಹಣ್ಣು ಶೇಕ್: ಮೊಸರಿಗೆ ಚೆನ್ನಾಗಿ ಹಣ್ಣಾದ ಬಾಳೆಹಣ್ಣು, ಸ್ವಲ್ಪ ಜೇನುತುಪ್ಪ ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಅಥವಾ ಜಾಯಿಕಾಯಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ನೀವು ಐಸ್ ಕ್ರೀಂ ಪ್ರಿಯರಾಗಿದ್ದರೆ ವೆನಿಲ್ಲಾ ಐಸ್ ಕ್ರೀಮ್ ಕೂಡ ಸೇರಿಸಬಹುದು.
3. ಸ್ಮೂಥಿ: ಮೊಸರಿಗೆ ಬಾಳೆಹಣ್ಣು, ಅನಾನಸ್ ಅಥವಾ ನಿಮಗಿಷ್ಟವಾದ ಹಣ್ಣುಗಳ ಜೊತೆಗೆ ಜೇನುತುಪ್ಪ ಅಥವಾ ಬೆಲ್ಲದಂತಹ ಸಿಹಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಸವಿಯಿರಿ.
4. ಚಾಟ್ ಮೊಸರು: ಮೊಸರಿಗೆ ತಣ್ಣನೆಯ ನೀರು, ಸಕ್ಕರೆ, ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ ಮತ್ತು ಒಂದು ಚಿಟಿಕೆ ಚಾಟ್ ಮಸಾಲಾದೊಂದಿಗೆ ಮಿಶ್ರಣ ಮಾಡಿ ಚೆನ್ನಾಗಿ ಬೆರೆಸಿ. ಈ ಪಾನೀಯಕ್ಕೆ ಬೇಕಿದ್ದರೆ ಐಸ್ ಕ್ಯೂಬ್‌ಗಳನ್ನು ಸಹ ಹಾಕಿ ಕುಡಿಯಬಹುದು.
5. ಮಸಾಲ ಮಜ್ಜಿಗೆ: ಮೊಸರನ್ನು ನೀರು, ಉಪ್ಪು, ಹುರಿದ ಜೀರಿಗೆ ಪುಡಿ ಮತ್ತು ಕತ್ತರಿಸಿದ ಪುದೀನ ಎಲೆಗಳೊಂದಿಗೆ ಮಿಶ್ರಣ ಮಾಡಿ. ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿಗಳು ಅಥವಾ ಶುಂಠಿಯನ್ನು ಕೂಡ ಸೇರಿಸಬಹುದು.
6. ಸೌತೆಕಾಯಿ-ಪುದೀನಾ ಮೊಸರು ಲಸ್ಸಿ: ಮೊಸರಿಗೆ ಕತ್ತರಿಸಿದ ಸೌತೆಕಾಯಿ, ತಾಜಾ ಪುದೀನ ಎಲೆಗಳು, ನಿಂಬೆ ರಸ, ಜೇನುತುಪ್ಪ ಅಥವಾ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಪುದೀನಾ ಚಿಗುರು ಎಲೆಗಳನ್ನು ಅಲಂಕರಿಸಿ ಸವಿಯಿರಿ.
7. ಕಲ್ಲಂಗಡಿ ಮೊಸರು ಸ್ಮೂಥಿ: ಮೊಸರಿಗೆ ಕಲ್ಲಂಗಡಿ ಹಣ್ಣನ್ನು ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ಕಾಮಕಸ್ತೂರಿ ಬೀಜ ಮತ್ತು ಪುದೀನಾ ಸೇರಿಸಿ, ಸವಿಯಿರಿ.
8. ಮಾವಿನ ಲಸ್ಸಿ: ಮೊಸರಿಗೆ ಹಣ್ಣಾದ ಮಾವಿನ ತಿರುಳು, ಸ್ವಲ್ಪ ಹಾಲು, ಸಕ್ಕರೆ ಮತ್ತು ಏಲಕ್ಕಿ ಪುಡಿಯೊಂದಿಗೆ ನಯವಾಗುವ ತನಕ ಮಿಶ್ರಣ ಮಾಡಿ. ಇದಕ್ಕೆ ಡ್ರೈ ಫ್ರೂಟ್ಸ್ ಅಥವಾ ಕೇಸರಿ ಎಳೆಗಳನ್ನು ಸಹ ಹಾಕಿ ಸವಿಯಬಹುದು.
ಮೊಸರು ಸೇವನೆಯಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕೇವಲ ಊಟದೊಂದಿಗೆ ಮಾತ್ರ ಸವಿಯುವುದಲ್ಲದೆ, ಇದರಿಂದ ವಿವಿಧ ಬಗೆಯ ಪಾನೀಯಗಳನ್ನು ಮಾಡಬಹುದು ಎಂಬ ಬಗ್ಗೆ ನೀವು ತಿಳಿದುಕೊಂಡಿರಿ. ಹಾಗಿದ್ದರೆ, ಇನ್ಯಾಕೆ ತಡ ಮನೆಯಲ್ಲಿಯೇ ಈ ಪಾನೀಯಗಳನ್ನು ತಯಾರಿಸಿ, ಕುಡಿಯಿರಿ.