Summer Tips: ಸೆಖೆಯ ಕಾರಣ ರಾತ್ರಿ ಸರಿಯಾಗಿ ನಿದ್ದೆ ಬರ್ತಾ ಇಲ್ವಾ? ಬೇಸಿಗೆಯ ದಿನಗಳಲ್ಲಿ ನೆಮ್ಮದಿಯ ನಿದ್ರೆಗೆ ಈ ಸರಳ ಸಲಹೆ ಪಾಲಿಸಿ
May 02, 2024 12:37 PM IST
ಬೇಸಿಗೆಯ ದಿನಗಳಲ್ಲಿ ನೆಮ್ಮದಿಯ ನಿದ್ದೆಗೆ ಈ ಸರಳ ಸಲಹೆ ಪಾಲಿಸಿ
- ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಹಗಲಿನ ವೇಳೆ ಬಿಡಿ ರಾತ್ರಿ ಹೊತ್ತಿನಲ್ಲೂ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಸೆಖೆಯ ಕಾರಣ ನಿದ್ದೆಯ ಕೊರತೆ ಕಾಡುತ್ತಿದ್ದೆ. ಈ ಸಮಯದಲ್ಲಿ ಶಾಂತ, ಮನಃಸ್ಫೂರ್ತಿಯ ನಿದ್ದೆ ಬರಬೇಕು ಅಂದ್ರೆ ಏನು ಮಾಡಬೇಕು ನೋಡಿ.
ಕರ್ನಾಟಕ ಸೇರಿದಂತೆ ಭಾರತದಾದ್ಯಂತ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಬಿಸಿಲಿನ ಝಳಕ್ಕೆ ಮನುಷ್ಯರು ಸೇರಿದಂತೆ ಭೂಮಿಯ ಮೇಲಿರುವ ಸಕಲ ಪ್ರಾಣಿಗಳು ತತ್ತರಿಸಿ ಹೋಗಿವೆ. ಹಗಲಿನ ವೇಳೆಯಲ್ಲಿ ಹೊರಗಡೆ ಕಾಲಿಡುವುದು ಅಸಾಧ್ಯವಾಗಿದೆ. ಹಿಂದೆಲ್ಲಾ ರಾತ್ರಿ ವೇಳೆಯಾದ್ರೂ ವಾತಾವರಣ ತಂಪಾಗಿರುತ್ತಿತ್ತು. ಆದರೆ ಈಗ ರಾತ್ರಿ ಸೆಖೆಯಿಂದ ನೆಮ್ಮದಿಯಾಗಿ ನಿದ್ದೆ ಮಾಡುವುದು ಅಸಾಧ್ಯವಾಗಿದೆ. ವಿಪರೀತ ಬಿಸಿ, ಸೆಖೆಯ ಕಾರಣದಿಂದ ನಿದ್ದೆಯ ಕೊರತೆ ಕಾಡುತ್ತಿದೆ. ಹಾಗಾದರೆ ಸೆಖೆಯ ನಡುವೆಯು ನೆಮ್ಮದಿಯ ನಿದ್ದೆ ಬರಬೇಕು ಅಂದ್ರೆ ಈ ಸರಳ ಟಿಪ್ಸ್‌ಗಳನ್ನು ಪಾಲಿಸಿ.
ಕಿಟಕಿಗಳನ್ನು ತೆರೆದಿಡಿ
ಉರಿ ಬಿಸಿಲಿಗೆ ಭೂಮಿ ಕಾದು ಬೆಂಡಾಗಿರುತ್ತದೆ. ಹಗಲಿನ ವೇಳೆ ಸೂರ್ಯನ ತಾಪದಿಂದ ಮನೆಯ ರೂಮ್‌ಗಳಲ್ಲಿ ಬಿಸಿ ವಾತಾವರಣ ತುಂಬಿರುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ಕಿಟಕಿಗಳನ್ನು ತೆರೆದಿಡಬೇಕು. ರಾತ್ರಿ ವೇಳೆ ಕೂಡ ಕಿಟಕಿ ತೆರೆದಿಡುವ ಮೂಲಕ ತಾಜಾ ಗಾಳಿ ಮನೆಯೊಳಗೆ ಬರುವಂತೆ ನೋಡಿಕೊಳ್ಳಬೇಕು. ತಾಜಾ ಗಾಳಿಯು ಬಿಸಿ ವಾತಾವರಣವನ್ನು ತಣ್ಣಗೆ ಮಾಡುವುದು ಮಾತ್ರವಲ್ಲ, ಚೆನ್ನಾಗಿ ನಿದ್ದೆ ಬರಲು ಸಹಕರಿಸುತ್ತದೆ.
ಹೆಚ್ಚು ನೀರು ಕುಡಿಯಿರಿ
ರಾತ್ರಿ ವೇಳೆ ಹೆಚ್ಚು ನೀರು ಕುಡಿಯುವುದರಿಂದ ನಿದ್ದೆಗೆ ಭಂಗ ಉಂಟಾಗುತ್ತದೆ ಎನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ದೇಹದ ತಾಪಮಾನ ಇಳಿಕೆಯಾಗುತ್ತದೆ. ನೀರು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗಿ ಸೆಖೆಯು ಕಡಿಮೆಯಾಗುತ್ತದೆ.
ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿ
ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಇದರಿಂದ ದೇಹದಲ್ಲಿ ಚೈತನ್ಯ ಮೂಡುತ್ತದೆ. ಬೇಸಿಗೆಯಲ್ಲಿ ರಾತ್ರಿ ವೇಳೆ ತಣ್ಣೀರಿನ ಸ್ನಾನ ಮಾಡಬಾರದು, ಇದರಿಂದ ಆ ಕ್ಷಣಕ್ಕೆ ಚರ್ಮಕ್ಕೆ ರಕ್ತದ ಹರಿವು ಕಡಿಮೆಯಾದ್ರೂ ನಂತರ ಒಮ್ಮೆಲೆ ರಕ್ತದ ಹರಿವು ಹೆಚ್ಚಿ ಸೆಖೆ ಹೆಚ್ಚುತ್ತದೆ. ಇದರಿಂದ ನಿದ್ದೆಗೆ ತೊಂದರೆ ಉಂಟಾಗಬಹುದು.
ಐಸ್‌ಪ್ಯಾಕ್ ಬಳಸಿ
ನಿಮ್ಮ ದೇಹ ಅತಿಯಾದ ಶಾಖದಿಂದ ಬಳಲುತ್ತಿದ್ದರೆ ಐಸ್‌ಪ್ಯಾಕ್ ಬಳಸುವ ಮೂಲಕ ದೇಹವನ್ನು ತಂಪಾಗಿ ಇರಿಸಿಕೊಳ್ಳಬಹುದು. ನಿಮ್ಮ ಮಣಿಕಟ್ಟುಗಳು, ಕುತ್ತಿಗೆ, ಮೊಣಕೈಗಳು, ತೊಡೆಸಂದು, ಕಣಕಾಲುಗಳು ಮತ್ತು ಮೊಣಕಾಲುಗಳ ಹಿಂದಿನ ನಾಡಿಗಳ ಮೇಲೆ ಐಸ್‌ಪ್ಯಾಕ್ ಇರಿಸಿಕೊಳ್ಳುವ ಮೂಲಕ ದೇಹವನ್ನು ತಂಪಾಗಿಸಿರಬಹುದು. ಜೊತೆಗೆ ಇದರಿಂದ ನಿದ್ದೆಯು ಚೆನ್ನಾಗಿ ಬರುತ್ತದೆ.
ಎಲ್ಲಾ ಲೈಟ್ ಆನ್ ಮಾಡಬೇಡಿ
ಬೇಸಿಗೆಯಲ್ಲಿ ಲೈಟ್ ಬೆಳಕು ಕೂಡ ಮನೆಯೊಳಗಿನ ತಾಪಮಾನ ಹೆಚ್ಚಲು ಕಾರಣವಾಗುತ್ತದೆ. ಹಾಗಾಗಿ ಕಡಿಮೆ ಲೈಟ್ ಬಳಸಿ. ಹೈವೋಲ್ಟೇಜ್ ಲೈಟ್‌ಗಳನ್ನು ಉರಿಸದೇ ಇರುವುದು ಉತ್ತಮ. ಕೋಣೆಯಲ್ಲಿ ಮಲಗುವ ಅರ್ಧ ಗಂಟೆ ಮುಂಚೆ ಲೈಟ್ ಆಫ್ ಮಾಡಿ ಇಡಿ. ನಂತರ ಮಲಗಿ.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಿ
ಬೇಸಿಗೆಯಲ್ಲಿ ಲೈಟ್‌ಗಳಂತೆ ಮೊಬೈಲ್, ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಸೆಖೆ ಹೆಚ್ಚುವಂತೆ ಮಾಡುತ್ತದೆ. ಇದರ ಬೆಳಕು ಹಾಗೂ ಕಿರಣಗಳು ಕೋಣೆಯ ಉಷ್ಣಾಂಶವನ್ನು ಹೆಚಿಸುತ್ತವೆ. ಹಾಗಾಗಿ ಮಲಗಲು ಒಂದು ಗಂಟೆ ಇರುವಾಗಲೇ ಇವುಗಳಿಂದ ದೂರ ಇರುವುದು ಉತ್ತಮ.
ಬ್ಲಾಂಕೆಟ್ ಬಳಸದಿರಿ
ಹಲವರಿಗೆ ಬೇಸಿಗೆಯಲ್ಲೂ ಬ್ಲಾಂಕೆಟ್ ಹೊದ್ದು ಮಲಗುವ ಅಭ್ಯಾಸವಿರುತ್ತದೆ. ಆದರೆ ಇದರಿಂದ ಸೆಖೆ ಹೆಚ್ಚಬಹುದು. ದೇಹವಿಡೀ ಬೆವರಿ ನಿದ್ದೆಗೆ ಅಡ್ಡಿಯಾಗಬಹುದು. ಹಾಗಾಗಿ ಬೇಸಿಗೆಯಲ್ಲಿ ಬ್ಲಾಂಕೆಟ್ ಇಲ್ಲದೇ ಮಲಗಲು ಪ್ರಯತ್ನಿಸಿ.
ರಾತ್ರಿ ಮಲಗುವಾದ ಸಡಿಲವಾದ ಕಾಟನ್ ಬಟ್ಟೆ ಧರಿಸಿ
ರಾತ್ರಿ ಮಲಗಿದಾಗ ನಿದ್ದೆ ಬಾರದೇ ಇರಲು ಮತ್ತೊಂದು ಪ್ರಮುಖ ಕಾರಣ ಎಂದರೆ ನಾವು ಧರಿಸುವ ಬಟ್ಟೆ. ಬೇಸಿಗೆಯಲ್ಲಿ ಮಲಗುವಾಗ ಸಾಧ್ಯವಾದಷ್ಟು ಸಡಿಲ ಬಟ್ಟೆ ಧರಿಸಬೇಕು. ಕಾಟನ್ ಬಟ್ಟೆಗಳಿಗೆ ಆದ್ಯತೆ ನೀಡಿ. ಇದು ಚರ್ಮದ ಆರೋಗ್ಯಕ್ಕೂ ಉತ್ತಮ.
ಅತಿಯಾದ ವ್ಯಾಯಾಮ ಸಲ್ಲ
ಬೇಸಿಗೆಯಲ್ಲಿ ಸಂಜೆ ವೇಳೆಗೆ ಅತಿಯಾಗಿ ದೇಹ ದಂಡಿಸುವುದರಿಂದ ಕೂಡ ನಿದ್ದೆಯ ಸಮಸ್ಯೆ ಕಾಡಬಹುದು. ಇದು ಸೆಖೆ ಹೆಚ್ಚಲು ಇನ್ನೊಂದು ಪ್ರಮುಖ ಕಾರಣವಾಗುತ್ತದೆ. ಆ ಕಾರಣಕ್ಕೆ ಬೇಸಿಗೆಯ ದಿನಗಳಲ್ಲಿ ಸಾಧ್ಯವಾದಷ್ಟು ದೇಹದಂಡನೆಯನ್ನು ಕಡಿಮೆ ಮಾಡಿ.
ಈ ಎಲ್ಲಾ ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಬೇಸಿಗೆಯಲ್ಲಿ ನೆಮ್ಮದಿಯ ನಿದ್ದೆ ಮಾಡಬಹುದು. ನಿದ್ದೆಯ ಕೊರತೆಯಿಂದ ಹಗಲಿನ ವೇಳೆಯಲ್ಲೂ ಮಂಕಾದಂತೆ ಅನ್ನಿಸಬಹುದು. ಆಕ್ಟಿವ್ ಆಗಿರಲು ಕಷ್ಟವಾಗಬಹುದು. ಹಾಗಾಗಿ ಚೆನ್ನಾಗಿ ನಿದ್ದೆ ಮಾಡುವುದು ಅತ್ಯವಶ್ಯ.
ವಿಭಾಗ