ಕನ್ನಡ ಸುದ್ದಿ  /  ಜೀವನಶೈಲಿ  /  Summer Drinks: ಉರಿ ಬಿಸಿಲಿನಲ್ಲಿ ದೇಹ ತಂಪಾಗಿಸುವ ಹೂವಿನ ಪಾನೀಯಗಳಿವು, ಯಾವೆಲ್ಲಾ ಹೂಗಳಿಂದ ಜ್ಯೂಸ್‌ ತಯಾರಿಸಬಹುದು ನೋಡಿ

Summer Drinks: ಉರಿ ಬಿಸಿಲಿನಲ್ಲಿ ದೇಹ ತಂಪಾಗಿಸುವ ಹೂವಿನ ಪಾನೀಯಗಳಿವು, ಯಾವೆಲ್ಲಾ ಹೂಗಳಿಂದ ಜ್ಯೂಸ್‌ ತಯಾರಿಸಬಹುದು ನೋಡಿ

ಬೇಸಿಗೆಯನ್ನು ಹೇಗಪ್ಪಾ ಕಳೆಯೋದು, ಬಿಸಿಲಿನ ತಾಪಕ್ಕೆ ಹಣ್ಣು ತರಕಾರಿಗಳಿಂದೆಲ್ಲಾ ಜ್ಯೂಸ್‌ ತಯಾರಿಸಿಕೊಂಡು ದೇಹ ತಂಪು ಮಾಡಿಕೊಂಡಿದ್ದಾಯ್ತು, ಮುಂದೇನು ಅಂತ ಯೋಚನೆ ಮಾಡ್ತಾ ಇದೀರಾ? ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ನೀಡುವ ಹೂವುಗಳ ಜ್ಯೂಸ್‌ಗಳು ಹಾಗೂ ಅವುಗಳನ್ನು ಮಾಡುವ ವಿಧಾನ ಇಲ್ಲಿದೆ. (ಬರಹ: ಭಾಗ್ಯ ದಿವಾಣ)

ಉರಿ ಬಿಸಿಲಿನಲ್ಲಿ ದೇಹ ತಂಪಾಗಿಸುವ ಹೂವಿನ ಪಾನೀಯಗಳಿವು
ಉರಿ ಬಿಸಿಲಿನಲ್ಲಿ ದೇಹ ತಂಪಾಗಿಸುವ ಹೂವಿನ ಪಾನೀಯಗಳಿವು

ಹೂವು ಚೆಲುವೆಲ್ಲಾ ನಂದೆಂದಿತು... ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಎಂಬ ಹಾಡು ಕೇಳದವರಿಲ್ಲ. ಹೀಗೆ ಕನ್ನಡ ಚಿತ್ರರಂಗದಲ್ಲಂತೂ ಹೂವನ್ನು ವರ್ಣಿಸಿಕೊಂಡು ಅದೆಷ್ಟು ಸಿನಿಮಾ ಹಾಡುಗಳು ಹುಟ್ಟಿಕೊಂಡಿವೆಯೋ. ಆದರೆ ಹೂವುಗಳು ಬರಿಯ ಹೆಣ್ಣಿನ ಅಂದವನ್ನು ಹೆಚ್ಚಿಸುವ ಕೆಲಸವನ್ನು ಮಾತ್ರವೇ ಮಾಡದೆ ಅನೇಕ ಆರೋಗ್ಯದ ಸಮಸ್ಯೆಗಳಿಗೂ ಪರಿಹಾರ ನೀಡುತ್ತವೆ ಎನ್ನುವ ವಿಚಾರ ನಿಮಗೆ ಗೊತ್ತಾ? ಹೌದು, ಹೂವುಗಳ ರಸದಿಂದ ತಯಾರಿಸುವ ಜ್ಯೂಸ್‌ಗಳು ಬೇಸಿಗೆಯ ಧಗೆಯಿಂದ ನಮ್ಮ ದೇಹವನ್ನು ರಕ್ಷಿಸುವಲ್ಲಿ ನೆರವಾಗುತ್ತವೆ.

ಟ್ರೆಂಡಿಂಗ್​ ಸುದ್ದಿ

ಅದರಲ್ಲೂ ಶಂಖಪುಷ್ಪದ ಜ್ಯೂಸ್‌, ಗುಲಾಬಿ ದಳಗಳಿಂದ ತಯಾರಿಸುವ ಜ್ಯೂಸ್‌, ದಾಸವಾಳ ಹಾಗೂ ಮಲ್ಲಿಗೆ ಹೂವಿನ ಜ್ಯೂಸ್‌ಗಳು ನೈಸರ್ಗಿಕ ಬಣ್ಣಗಳಿಂದಲೇ ಹೆಸರು ಮಾಡಿದ್ದು, ಹಲವು ಆರೋಗ್ಯ ಸಮಸ್ಯೆಗಳಿಂದಲೂ ನಮ್ಮನ್ನು ರಕ್ಷಿಸುತ್ತವೆ.

ಶಂಖಪುಷ್ಟ ಹೂವಿನ ಜ್ಯೂಸ್

ಶಂಖಪುಷ್ಪದ ಜ್ಯೂಸನ್ನು ನಿತ್ಯವೂ ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಮೆದುಳಿನ ಆರೋಗ್ಯಕ್ಕೆ ಇದು ಉತ್ತಮವಾಗಿದ್ದು, ಮರೆವಿನ ಕಾಯಿಲೆ ಬರದಂತೆ ತಡೆಯುತ್ತದೆ. ನಿದ್ರಾಹೀನತೆ, ಮಾನಸಿಕ ಒತ್ತಡ, ಖಿನ್ನತೆಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಜೀರ್ಣಕ್ರಿಯೆಯನ್ನು ಸರಾಗವಾಗಿಸುವುದು ಮಾತ್ರವಲ್ಲದೆ ಉಸಿರಾಟದ ತೊಂದರೆಯಿರುವವರಿಗೂ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಶಂಖಪುಷ್ಟದ ಜ್ಯೂಸ್‌ ಪರಿಣಾಮಕಾರಿಯಾಗಿದೆ.

ಶಂಖಪುಷ್ಪ ಜ್ಯೂಸ್‌ ಮಾಡುವ ವಿಧಾನ

ಬೇಕಾಗಿರುವ ಸಾಮಗ್ರಿಗಳು: ಶಂಖಪುಷ್ಪ - 4, ಸಕ್ಕರೆ ರುಚಿಗೆ ಬೇಕಾದಷ್ಟು, ಕಾಲು ಚಮಚ ನಿಂಬೆರಸ, ಒಂದು ಚಿಟಿಕೆ ಏಲಕ್ಕಿ ಪುಡಿ, ನೆನಸಿಟ್ಟ ಸಬ್ಜಾ ಬೀಜಗಳು 1 ಚಮಚ

ತಯಾರಿಸುವ ವಿಧಾನ: 4 ಶಂಕಪುಷ್ಪ ಹೂವುಗಳ ದಳಗಳನ್ನು ಬಿಡಿಸಿಟ್ಟುಕೊಳ್ಳಿ. ಪಾತ್ರೆಯಲ್ಲಿ ನೀರು ಹಾಕಿಕೊಂಡು ಚೆನ್ನಾಗಿ ಕುದಿಸಿ ಕೆಳಗಿಳಿಸಿದ ಕೂಡಲೇ ಈ ದಳಗಳನ್ನು ಹಾಕಿ ಮಿಶ್ರ ಮಾಡಿಕೊಂಡು ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಬಿಡಿ. ತಣ್ಣಗಾಗಿ ಬಣ್ಣ ಬಿಟ್ಟ ಈ ನೀಲಿ ಜ್ಯೂಸಿಗೆ ಉಪ್ಪು ಇಲ್ಲವೇ ಸಕ್ಕರೆ, ಅದೂ ಬೇಡವೆಂದರೆ ಜೇನುತುಪ್ಪ ಸೇರಿಸಿಕೊಳ್ಳಿ. ಕಾಲು ಚಮಚ ನಿಂಬೆ ರಸ, ಇಂದು ಚಿಟಿಕೆ ಏಲಕ್ಕಿ, ಬೇಕಾದರೆ ನೆನೆಸಿಟ್ಟ ಸಬ್ಜಾ ಬೀಜಗಳನ್ನೂ ಸೇರಿಸಿಕೊಳ್ಳಿ.

ದಾಸವಾಳದ ಜ್ಯೂಸ್

ದಾಸವಾಳದ ಹೂವುಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಬೊಜ್ಜು ನಿವಾರಕ ಗುಣವನ್ನೂ ಹೊಂದಿದ್ದು, ದೇಹದಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ಕೆಮ್ಮು ಹಾಗೂ ಶೀತವನ್ನ ನಿವಾರಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೂದಲಿನ ಆರೋಗ್ಯಕ್ಕೂ ಇದು ಉತ್ತಮವಾಗಿದ್ದು, ಹೆಣ್ಣುಮಕ್ಕಳ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.

ದಾಸವಾಳದ ಜ್ಯೂಸ್ ಮಾಡುವ ವಿಧಾನ

ಬೇಕಾಗಿರುವ ಸಾಮಗ್ರಿಗಳು: ಕೆಂಪು ದಾಸವಾಳದ ಹೂವು 20-25, ನೀರು ಕಾಲು ಲೀಟರ್‌, ನಿಂಬೆಹಣ್ಣು 5-6, ಸಕ್ಕರೆ 250 ಗ್ರಾಂ

ತಯಾರಿಸುವ ವಿಧಾನ: ಮೊದಲು ಕಾಲು ಲೀಟರ್‌ ನೀರನ್ನು ಪಾತ್ರೆಯಲ್ಲಿ ಹಾಕಿಕೊಂಡು ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ಸಕ್ಕರೆಯನ್ನು ಹಾಕಿಕೊಳ್ಳಿ. ಸಕ್ಕರೆ ಕರಗಿದ ನಂತರ ಗ್ಯಾಸ್‌ ಆಫ್‌ ಮಾಡಿ. ಅದಕ್ಕೆ ತೆಗೆದಿಟ್ಟುಕೊಂಡ ದಾಸವಾಳದ ಹೂವುಗಳನ್ನು ಹಾಕಿ. ನೀರು ತಣ್ಣಗಾದ ಮೇಲೆ ಅದನ್ನು ಸೋಸಿಕೊಂಡು ನಿಂಬೆರಸವನ್ನು ಸೇರಿಸಿ. ಈ ಮಿಶ್ರಣವನ್ನು ಎರಡು ತಿಂಗಳವರೆಗೂ ಬಳಕೆ ಮಾಡಬಹುದು. ಬೇಕಾದಾಗ ಅರ್ಧ ಲೋಟ ಜ್ಯೂಸ್‌ಗೆ ಅರ್ಧ ಲೋಟ ನೀರು ಮಿಶ್ರ ಮಾಡಿ ಕುಡಿಯಬಹುದು.

ಮಲ್ಲಿಗೆ ಹೂವಿನ ಮಿಲ್ಕ್‌ ಶೇಕ್

ಮಲ್ಲಿಗೆ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾ? ಮಲ್ಲಿಗೆ ಹೂವುಗಳು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಮಲ್ಲಿಗೆ ಹೂವುಗಳು ತೂಕ ಇಳಿಸಲು ಕೂಡಾ ಸಹಾಯ ಮಾಡುತ್ತವೆ.

ಮಲ್ಲಿಗೆ ಹೂವಿನ ಮಿಲ್ಕ್‌ ಶೇಕ್ ಮಾಡುವ ವಿಧಾನ 

ಬೇಕಾಗುವ ಸಾಮಗ್ರಿಗಳು: ಒಂದು ಹಿಡಿ ಮಲ್ಲಿಗೆ ಹೂವು, ಅರ್ಧ ಲೋಟ ತಣ್ಣನೆಯ ಹಾಲು, ಅರ್ಧ ಲೋಟ ತಣ್ಣನೆಯ ನೀರು, ಸಕ್ಕರೆ ರುಚಿಗೆ ಬೇಕಾದಷ್ಟು, ಏಲಕ್ಕಿ ಎರಡು.

ತಯಾರಿಸುವ ವಿಧಾನ: ಮಲ್ಲಿಗೆ ಹೂವುಗಳನ್ನು ನೀರು ಸೇರಿಸಿ ಚೆನ್ನಾಗಿ ಗ್ರೈಂಡ್‌ ಮಾಡಿಕೊಳ್ಳಿ. ಅದೇ ಜಾರಿಗೆ ಅಳತೆಯಂತೆ ತೆಗೆದುಕೊಂಡ ಸಕ್ಕರೆ ಹಾಗೂ ಏಲಕ್ಕಿ ಸೇರಿಸಿ. ಈಗ ಅಳತೆಯಂತೆ ತೆಗೆದುಕೊಂಡ ಹಾಲನ್ನೂ ಸೇರಿಸಿಕೊಂಡು ಮತ್ತೊಮ್ಮೆ ನಯವಾಗಿ ರುಬ್ಬಿಕೊಳ್ಳಿ. ಸರ್ವಿಂಗ್‌ ಗ್ಲಾಸ್‌ಗೆ ಹಾಕಿಕೊಂಡು ಹೊಸ ಬಗೆಯ ಆರೋಗ್ಯಕರ ಮಿಲ್ಕ್‌ ಶೇಕ್‌ ಅನ್ನು ನೀವು ಸವಿಯಬಹುದು.

ಗುಲಾಬಿ ಹೂವಿನ ದಳಗಳ ಜ್ಯೂಸ್

ಗುಲಾಬಿ ದಳಗಳು ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತಮ ಪಡಿಸುವ ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುತ್ತದೆ. ದೇಹದ ತೂಕ ನಿಯಂತ್ರಣಕ್ಕೂ ಗುಲಾಬಿ ಹೂವು ಸಹಾಯಕ. ದಿನವೂ ಗುಲಾಬಿ ದಳಗಳನ್ನು ತಿನ್ನುತ್ತಾ ಹೋದರೆ, ಹೃದಯ ಸಮಸ್ಯೆ ದೂರವಾಗುವುದರ ಜೊತೆಗೆ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಗುಲಾಬಿ ಹೂವಿನ ದಳಗಳ ಜ್ಯೂಸ್ ಮಾಡುವ ವಿಧಾನ 

ಬೇಕಾಗುವ ಸಾಮಗ್ರಿಗಳು: ಗುಲಾಬಿ ಹೂವುಗಳು 5-6, ಸಕ್ಕರೆ ರುಚಿಗೆ ತಕ್ಕಷ್ಟು, ಏಲಕ್ಕಿ 1 ರಿಂದ 2, ನೆನಸಿಟ್ಟ ಚಿಯಾ ಬೀಜಗಳು 1-2 ಚಮಚ

ತಯಾರಿಸುವ ವಿಧಾನ: ಗುಲಾಬಿ ಹೂವುಗಳನ್ನು ಅಳತೆಯಂತೆ ತೆಗೆದುಕೊಂಡು ಸಕ್ಕರೆ ಹಾಗೂ ಏಲಕ್ಕಿ ಸಮೇತ ಚೆನ್ನಾಗಿ ರುಬ್ಬಿಕೊಂಡು, ಸೋಸಿಕೊಳ್ಳಿ. ಇದಕ್ಕೆ ನೆನೆಸಿಟ್ಟ ಚಿಯಾ ಬೀಜಗಳನ್ನು ಸೇರಿಸಿ, ಬೇಕಿದ್ದಲ್ಲಿ ಐಸ್‌ ಕ್ಯೂಬ್‌ಗಳನ್ನೂ ಹಾಕಿಕೊಂಡರೆ ರುಚಿಕರವಾದ ರೋಸ್‌ ಪೆಟಲ್ಸ್‌ ಜ್ಯೂಸ್‌ ಸವಿಯಲು ಸಿದ್ಧವಾಗುತ್ತದೆ.

ಹೂವುಗಳಿಂದ ಇಂತಹ ವಿಭಿನ್ನ ಬಗೆಯ ಜ್ಯೂಸ್‌ಗಳನ್ನು ತಯಾರಿಸಿಕೊಂಡು ಕುಡಿದರೆ ಬೇಸಿಗೆಯ ದಣಿವೆಯನ್ನು ನೀಗಿಸಿಕೊಳ್ಳುವುದರ ಜೊತೆಗೆ ದೇಹದ ಆಂತರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ವಿಭಾಗ