Bilkis Bano convict: ಬಿಜೆಪಿ ಸಂಸದ, ಶಾಸಕರ ಜತೆ ವೇದಿಕೆ ಹಂಚಿಕೊಂಡ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿ, ವ್ಯಾಪಕ ಆಕ್ರೋಶ
Mar 27, 2023 12:04 PM IST
ಬಿಜೆಪಿ ಸಂಸದ, ಶಾಸಕರ ಜತೆ ವೇದಿಕೆ ಹಂಚಿಕೊಂಡ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿ. (Twitter)
ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆ ಪ್ರಕರಣದ ಅಪರಾಧಿಯು ಗುಜರಾತ್‌ನಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ, ಶಾಸಕರ ಜತೆ ವೇದಿಕೆ ಹಂಚಿಕೊಂಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಅಹಮದಾಬಾದ್: ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆ ಪ್ರಕರಣದ ಅಪರಾಧಿಯು ಗುಜರಾತ್‌ನಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ, ಶಾಸಕರ ಜತೆ ವೇದಿಕೆ ಹಂಚಿಕೊಂಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡಿರುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಸನ್ನಡತೆ ಆಧಾರದಲ್ಲಿ ಈ ಪ್ರಕರಣದ ಹನ್ನೊಂದು ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ನ್ಯಾಯಪೀಠವು ಇಂದು ವಿಚಾರಣೆ ನಡೆಸಲಿದೆ.
ಸಂತ್ರಸ್ತೆ ಬಿಲ್ಕಿಸ್ ಬಾನು ಅವರು 21 ವರ್ಷ ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದರು. ಗುಜರಾತ್ ಗಲಭೆಯ ಸಮಯದಲ್ಲಿ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದರು. ಈಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಇವರ ಮೂರು ವರ್ಷದ ಮಗುವಿನ ಹತ್ಯೆಯೂ ನಡೆದಿತ್ತು.
ಶನಿವಾರದಂದು ದಹೋಡ್‌ನಲ್ಲಿ ನೀರು ಸರಬರಾಜು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ 11 ಅಪರಾಧಿಗಳಲ್ಲಿ ಒಬ್ಬ ಶೈಲೇಶ್ ಭಟ್ ಭಾಗವಹಿಸಿದ್ದ ಫೋಟೋವನ್ನು ಬಿಜೆಪಿ ಸಂಸದ ಜಸ್ವಂತ್‌ಸಿನ್ಹ್ ಭಭೋರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಗುಜರಾತ್ ವಿಧಾನಸಭೆಯ ಬಿಜೆಪಿ ಸದಸ್ಯ ಶೈಲೇಶ್‌ಭಾಯ್ ಭಭೋರ್ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ಸರಕಾರಿ ಕಾರ್ಯಕ್ರಮದಲ್ಲಿ ಆರೋಪಿ ವೇದಿಕೆಯನ್ನು ಹಂಚಿಕೊಂಡಿರುವುದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. "ನಾನು ಈ ರಾಕ್ಷಸರನ್ನು ಮತ್ತೆ ಜೈಲಿನಲ್ಲಿ ನೋಡಲು ಬಯಸುತ್ತೇನೆ. ನ್ಯಾಯದ ಅಪಹಾಸ್ಯವನ್ನು ಶ್ಲಾಘಿಸುವ ಈ ಪೈಶಾಚಿಕ ಸರಕಾರದ ವಿರುದ್ಧ ಮತ ಚಲಾಯಿಸಲು ಬಯಸುತೇನೆ" ಎಂದು ಈ ಚಿತ್ರವನ್ನು ಉಲ್ಲೇಖಿಸಿ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.
ಮಹಿಳೆಯರ ವಿರುದ್ಧ ಘೋರ ಅಪರಾಧ ಎಸಗಿದ ಆರೋಪಿಗಳನ್ನು ಸಂಭ್ರಮಿಸಲಾಗುತ್ತಿದೆ ಎಂದು ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಶಾಸಕಿ ಕೆ.ಕವಿತಾ ಅಭಿಪ್ರಾಯಪಟ್ಟಿದ್ದಾರೆ. "ಮಹಿಳೆಯರ ವಿರುದ್ಧ ಘೋರ ಅಪರಾದ ನಡೆಸುವವರ ಜತೆ ಸಂಭ್ರಮ ಕಾಣಿಸುತ್ತಿದೆ. ಸಂತ್ರಸ್ತ್ರರು ನ್ಯಾಯಕ್ಕಾಗಿ ಮನವಿ ಮಾಡುತ್ತಿರುವಾಗ ಅಪರಾಧಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಭಾರತ ನೋಡುತ್ತಿದೆ!" ಎಂದು ಟ್ವೀಟ್ ಮಾಡಿದ್ದಾರೆ.
"ಅತ್ಯಾಚಾರಿಗಳಿಗೆ ಹೆಮ್ಮೆಯ ಸ್ಥಾನ ನೀಡುವುದು ಮತ್ತು ಪುನರ್ವಸತಿ ಕಲ್ಪಿಸುವುದು ಯಾವುದೇ ರಾಜಕೀಯ ಪಕ್ಷಕ್ಕೆ ಅದರಲ್ಲೂ ಆಡಳಿತಾರೂಢ ಬಿಜೆಪಿಗೆ ಶೋಭೆ ತರುವಂತದ್ದಲ್ಲ. ಇದು ಖಂಡನೀಯ. ಮಹಿಳೆಯರ ಕುರಿತಾದ ಗೌರವದ ಮಾತುಗಳು ಘೋಷಣೆಗೆ ಸೀಮಿತ. ಈ ಪಕ್ಷದ ರಾಜಕೀಯವು ಮಹಿಳೆಯರ ಘನತೆಗಿಂತ ಮೇಲಿದೆ" ಎಂದು ಶಿರೋಮಣಿ ಅಕಾಲಿದಳದ ಸಂಸದೆ ಹಾಗೂ ಕೇಂದ್ರದ ಮಾಜಿ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.
ಈ ಪ್ರಕರಣದ ಕುರಿತು ಡಿಸೆಂಬರ್‌ನಿಂದ ವಿಚಾರಣೆ ನಡೆದಿಲ್ಲ ಎಂದು ಬಿಲ್ಕಿಸ್ ಬಾನು ವಕೀಲರು ಗಮನ ಸೆಳೆದ ಬಳಿಕ ಅರ್ಜಿಗಳ ತನಿಖೆಗೆ ಹೊಸ ನ್ಯಾಯಪೀಠ ರಚಿಸಲು ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಕಳೆದ ಬುಧವಾರ ಸಮ್ಮತಿ ನೀಡಿದ್ದರು. ನ್ಯಾಯಮೂರ್ತಿಗಳಾದ ಜೋಸೆಫ್ ಮತ್ತು ನಾಗರತ್ನ ಅವರು ಈ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.