logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra Governor: ಮಹಾರಾಷ್ಟ್ರ ರಾಜ್ಯಪಾಲರ ಎತ್ತಂಗಡಿಗೆ ಒತ್ತಾಯಿಸಿದ ಶಿಂಧೆ ಬಣ: ಏನು ಕಾರಣ?

Maharashtra Governor: ಮಹಾರಾಷ್ಟ್ರ ರಾಜ್ಯಪಾಲರ ಎತ್ತಂಗಡಿಗೆ ಒತ್ತಾಯಿಸಿದ ಶಿಂಧೆ ಬಣ: ಏನು ಕಾರಣ?

HT Kannada Desk HT Kannada

Nov 21, 2022 04:52 PM IST

ಸಂಗ್ರಹ ಚಿತ್ರ

    • ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು, ರಾಜ್ಯದಿಂದ ಕೂಡಲೇ ವರ್ಗಾಯಿಸಬೇಕು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಒತ್ತಾಯಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಕುರಿತು ರಾಜ್ಯಪಾಲರ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಗಾಯಕ್ವಾಡ್‌ ಗುಡುಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ANI)

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು, ರಾಜ್ಯದಿಂದ ಕೂಡಲೇ ವರ್ಗಾಯಿಸಬೇಕು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಒತ್ತಾಯಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಬುಲ್ಧಾನಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಗಾಯಕ್ವಾಡ್, ಕೊಶ್ಯಾರಿ ಅವರು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕನ ಬಗ್ಗೆ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಎಂದು ಕಿಡಿಕಾರಿದ್ದಾರೆ.

ಭಗತ್‌ ಸಿಂಗ್‌ ಕೊಶ್ಯಾರಿ ಈ ಹಿಂದೆಯೂ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಅವರಾಡಿರುವ ಮಾತುಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಂಜಯ್‌ ಗಾಯಕ್ವಾಡ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳಿಗೆ ಎಂದಿಗೂ ವಯಸ್ಸಾಗುವುದಿಲ್ಲ. ಶಿವಾಜಿ ಅವರನ್ನು ಪ್ರಸ್ತುತ ವಿಶ್ವದ ಯಾವುದೇ ಮಹಾನ್ ನಾಯಕನಿಗೆ ಹೋಲಿಸುವುದು ಸಾಧ್ಯವಿಲ್ಲ. ಈ ಸತ್ಯ ಸಂಗತಿಯನ್ನು ರಾಜ್ಯಪಾಲರು ಅರ್ಥಮಾಡಿಕೊಳ್ಳಬೇಕು. ರಾಜ್ಯದ ಇತಿಹಾಸವನ್ನು ಅರಿಯದ ಈ ವ್ಯಕ್ತಿಯನ್ನು ಈ ಕೂಡಲೇ ಮಹಾರಾಷ್ಟ್ರದಿಂದ ವರ್ಗಾಯಿಸಬೇಕು ಎಂದು ನಾನು ಕೇಂದ್ರದ ಬಿಜೆಪಿ ನಾಯಕರಲ್ಲಿ ನನ್ನ ವಿನಂತಿ ಮಾಡುವುದಾಗಿ ಗಾಯಕ್ವಾಡ್‌ ತಿಳಿಸಿದ್ದಾರೆ.

ಗಾಯಕ್ವಾಡ್ ಅವರು ಸಿಎಂ ಏಕನಾಥ್ ಶಿಂಧೆ ನೇತೃತ್ವದ 'ಬಾಳಾಸಾಹೇಬಾಂಚಿ ಶಿವಸೇನಾ ' ಬಣದ ಶಾಸಕರಾಗಿದ್ದು, ಈ ಬಣ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ಮುನ್ನಡೆಸುತ್ತಿದೆ.

ವಿವಾದ ಏನು?

ಕಲೆದ ಶನಿವಾರ (ನ.19) ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯಾರಿ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ಛತ್ರಪತಿ ಶಿವಾಜಿ ಮಹಾರಾಜ್ ಅವರು ಭೂತಕಾಲದ ಆದರ್ಶ ವ್ಯಕ್ತಿತ್ವವಾಗಿದ್ದು, ಮಹಾರಾಷ್ಟ್ರದ ಇಂದಿನ ಯುವಕರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

ಭಗತ್‌ ಸಿಂಗ್‌ ಕೊಶ್ಯಾರಿ ಅವರ ಈ ಹೇಳಿಕೆ ಮಹಾರಾಷ್ಟ್ರದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿದ್ದು, ಇದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವತ್‌, ಶಿವಾಜಿ ಮಹಾರಾಜರಿಗೆ ಮಾಡಿದ ಈ ಅವಮಾನವನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದರು. ಅಲ್ಲದೇ ರಾಜ್ಯಪಾಲರ ವಿರುದ್ಧ ಸೊಲ್ಲೆತ್ತದೇ ಏಕನಾಥ್‌ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ, ತನ್ನ ಆತ್ಮಸ್ವಾಭಿಮಾನವನ್ನು ಮಾರಿಕೊಂಡಿದೆ ಎಂದು ಸಂಜಯ್‌ ರಾವತ್‌ ತೀವ್ರ ವಾಗ್ದಾಳಿ ನಡೆಸಿದ್ದರು.

ಇದೀಗ ಶಿಂಧೆ ಬಣದ ಶಾಸಕ ಸಂಜಯ್‌ ಗಾಯಕ್ವಾಡ್‌ ಅವರು ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿದ್ದು, ಕೊಶ್ಯಾರಿ ಅವರ ವರ್ಗಾವಣೆಗೆ ಒತ್ತಾಯಿಸಿದ್ಧಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು