logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Parliament Visitor Pass : ವಿಸಿಟರ್ ಪಾಸ್ ಎಂದರೇನು, ಲೋಕಸಭೆ-ರಾಜ್ಯಸಭೆ ಕಲಾಪ ನೋಡಲು ಸಾರ್ವಜನಿಕರು ಪಾಸ್‌ಗಳನ್ನು ಹೇಗೆ ಪಡೆಯಬಹುದು

Parliament Visitor Pass : ವಿಸಿಟರ್ ಪಾಸ್ ಎಂದರೇನು, ಲೋಕಸಭೆ-ರಾಜ್ಯಸಭೆ ಕಲಾಪ ನೋಡಲು ಸಾರ್ವಜನಿಕರು ಪಾಸ್‌ಗಳನ್ನು ಹೇಗೆ ಪಡೆಯಬಹುದು

HT Kannada Desk HT Kannada

Dec 13, 2023 08:34 PM IST

google News

ಸಂಸತ್ ಕಲಾಪ ವೀಕ್ಷಣೆಗೆ ವಿಸಿಟರ್ ಪಾಸ್‌ ನೀಡಲಾಗುತ್ತಿದ್ದು, ಇದೇನು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

  • ಲೋಕಸಭೆ ಭದ್ರತಾ ಲೋಪ ಪ್ರಕರಣದ ಹಿನ್ನೆಲೆಯಲ್ಲಿ ವಿಸಿಟರ್ ಪಾಸ್‌ ಗಮನಸೆಳೆದಿದೆ. ಹಾಗಾದರೆ, ಸಂಸತ್ ಭವನಕ್ಕೆ ಪ್ರವೇಶಿಸಿ ಲೋಕಸಭೆ-ರಾಜ್ಯಸಭೆ ಕಲಾಪ ನೋಡಲು ಸಾರ್ವಜನಿಕರು ಪಾಸ್‌ಗಳನ್ನು ಹೇಗೆ ಪಡೆಯಬಹುದು. ವಿಸಿಟರ್ ಪಾಸ್ ಎಂದರೇನು, ಭದ್ರತಾ ವ್ಯವಸ್ಥೆ ಹೇಗಿರುತ್ತದೆ ಎಂಬ ಬಗ್ಗೆ ನಮಗೆ ತಿಳಿದಿರುವ 10 ಅಂಶಗಳು ಹೀಗಿವೆ.  

ಸಂಸತ್ ಕಲಾಪ ವೀಕ್ಷಣೆಗೆ ವಿಸಿಟರ್ ಪಾಸ್‌ ನೀಡಲಾಗುತ್ತಿದ್ದು, ಇದೇನು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಸಂಸತ್ ಕಲಾಪ ವೀಕ್ಷಣೆಗೆ ವಿಸಿಟರ್ ಪಾಸ್‌ ನೀಡಲಾಗುತ್ತಿದ್ದು, ಇದೇನು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಭಾರತದ ಶಕ್ತಿ ಕೇಂದ್ರ ಸಂಸತ್‌ ಭವನದಲ್ಲಿ ಇಂದು (ಡಿ.13) ಭದ್ರತಾ ಲೋಪ ಉಂಟಾಗಿದ್ದು, ಇದರಲ್ಲಿ ಭಾಗಿಯಾದವರ ಪೈಕಿ ಇಬ್ಬರು ಕರ್ನಾಟಕದವರು. ಬಿಗಿ ಭದ್ರತೆ ಇರುವ ಸಂಸತ್ ಭವನದ ಒಳಗೆ ಇಬ್ಬರು ಯುವಕರು ಹಳದಿ ಹೊಗೆ ಬರುವ ವಸ್ತುವನ್ನು ತಂದು ಕೋಲಾಹಲ ಸೃಷ್ಟಿಸಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ. ಈ ಇಬ್ಬರಿಗೆ ಪಬ್ಲಿಕ್ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಣೆಗೆ ಪಾಸ್‌ ಒದಗಿಸಿದ್ದು ಮೈಸೂರು ಸಂಸದ ಪ್ರತಾಪ್ ಸಿಂಹ ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಸಾರ್ವಜನಿಕರಿಗೆ ಲೋಕಸಭೆ/ ರಾಜ್ಯಸಭೆಯ ವೀಕ್ಷಕರ ಗ್ಯಾಲರಿ ಅಥವಾ ಪಬ್ಲಿಕ್ ಗ್ಯಾಲರಿಯಲ್ಲಿ ಕುಳಿತು ಲೋಕಸಭೆ ಕಲಾಪ ವೀಕ್ಷಣೆಗೆ ಅವಕಾಶ ಇದೆಯೇ, ಲೋಕಸಭೆ/ ರಾಜ್ಯಸಭೆಯ ವೀಕ್ಷಕರ ಗ್ಯಾಲರಿ ಅಥವಾ ಪಬ್ಲಿಕ್ ಗ್ಯಾಲರಿಯಲ್ಲಿ ಕುಳಿತು ಲೋಕಸಭೆ ಕಲಾಪ ವೀಕ್ಷಣೆಗೆ ಪಾಸ್ ಪಡೆಯುವುದು ಹೇಗೆ, ಯಾರು ಕೊಡುತ್ತಾರೆ - ಇಲ್ಲಿದೆ ಕೆಲವು ನಿರ್ದಿಷ್ಟ ಮಾಹಿತಿ .

ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪಬ್ಲಿಕ್ ಗ್ಯಾಲರಿ ಪಾಸ್‌ ವಿತರಣೆ ನಿಷೇಧಿಸಿದ ಲೋಕಸಭೆ ಸ್ಪೀಕರ್

ಕೆಲವರು ಎಸಗಿದ ಭದ್ರತಾ ಲೋಪದ ಕಾರಣ ಇನ್ನು ಮುಂದೆ ಪಬ್ಲಿಕ್ ಗ್ಯಾಲರಿಯ ವಿಸಿಟರ್ ಪಾಸ್ ವಿತರಿಸಬಾರದು ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಇಂದು (ಡಿ.13 ) ಆದೇಶಿಸಿದ್ದಾರೆ. ಇದರೊಂದಿಗೆ ಪಬ್ಲಿಕ್ ಗ್ಯಾಲರಿಯಿಂದ ಕಲಾಪ ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರು ಕಳೆದುಕೊಂಡಿದ್ದಾರೆ.

ಸಂಸದರು, ಮಾಜಿ ಸಂಸದರು ಮತ್ತು ಅವರ ಆಪ್ತ ಕಾರ್ಯದರ್ಶಿಗಳು ಪಾಸ್ ವಿತರಿಸಬಾರದು ಎಂದು ಸ್ಪೀಕರ್ ಓಂ ಬಿರ್ಲಾ ಆದೇಶ ನೀಡಿದ್ದಾರೆ. ಸಂಸತ್‌ನ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂಸತ್ ಕಲಾಪ ವೀಕ್ಷಣೆಗೆ ಇರುವ ವಿಸಿಟರ್ ಪಾಸ್ ಎಂದರೇನು? ಅದನ್ನು ಹೇಗೆ ವಿತರಿಸುತ್ತಾರೆ

1. ವಿಸಿಟರ್ ಪಾಸ್ ಎಂದರೆ

ಸಂಸತ್ ಕಲಾಪ ನೋಡಲು ಹೋಗುವವರು ತಮ್ಮ ಕ್ಷೇತ್ರದ ಸಂಸದರಿಗೆ ಮನವಿ ಸಲ್ಲಿಸಬೇಕು. ಮನವಿ ಸಲ್ಲಿಸಿದವರ ಪೂರ್ವಾಪರ ಮತ್ತು ಉದ್ದೇಶಗಳನ್ನು ಅರಿತುಕೊಂಡು ಬಳಿಕ ಸಂಸತ್ ಕಲಾಪ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಪತ್ರವೇ ವಿಸಿಟರ್ ಪಾಸ್‌.

2. ಸಂಸದರು ಮಾತ್ರವೇ ಪಾಸ್ ನೀಡುವುದಾ…

ಲೋಕಸಭೆ ಅಥವಾ ರಾಜ್ಯ ಸಭೆ ಕಲಾಪ ನಡೆಯುವಾಗ ಒಬ್ಬ ಸಂಸತ್ ಸದಸ್ಯ ಮಾತ್ರ ಅಲ್ಲ, ಗಜೆಟೆಡ್ ಅಧಿಕಾರಿಗಳು ಕೂಡ ಈ ಕಲಾಪ ವೀಕ್ಷಣೆಗೆ ಅವಕಾಶ ನೀಡಬಹುದು. ಆದರೆ ಅದಕ್ಕೂ ಮೊದಲು ಆ ವೀಕ್ಷಕರ ಬಗ್ಗೆ ಅವರಿಗೆ ಪೂರ್ಣ ಮಾಹಿತಿ, ಪರಿಚಯ ಇರಬೇಕಾದ್ದು ಅವಶ್ಯ.

3. ಸಂಸತ್ ಪ್ರವೇಶಕ್ಕೆ ರಹದಾರಿ ವಿಸಿಟರ್ ಪಾಸ್‌

ಸಂಸದರು ನೀಡುವ ಈ ವಿಸಿಟರ್ ಪಾಸ್ ಹೊಂದಿದ್ದರೆ ಮಾತ್ರವೇ ಸಂಸತ್‌ ಭವನದ ಒಳಗೆ ಪ್ರವೇಶ. ಈ ಪಾಸ್ ಇಲ್ಲದೇ ಇದ್ದರೆ ಸಂಸತ್ ಭವನದ ಒಳಗೆ ಪ್ರವೇಶ ಸಾಧ್ಯವಿಲ್ಲ.

4. ಸಂಸತ್‌ ಭವನದೊಳಗೆ ಪ್ರವೇಶಕ್ಕೆ ಭದ್ರತಾ ತಪಾಸಣೆ ಹೇಗಿರುತ್ತದೆ

ಸಂಸತ್ ಭವನದೊಳಗೆ ಪ್ರವೇಶಕ್ಕೆ ವಿಸಿಟರ್ ಪಾಸ್ ಹೊಂದಿರುವ ವ್ಯಕ್ತಿ ಬಿಗಿ ಭದ್ರತಾ ವ್ಯವಸ್ಥೆಯ ನಿಯಮ ಪಾಲಿಸಬೇಕು. ಮೊಬೈಲ್ ಮತ್ತು ಇತರೆ ಆಯುಧಗಳಂತಹ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತೆ ಇಲ್ಲ. ಲೋಕ ಪರಿಶೋಧಕ ಮಷಿನ್‌ ಮೂಲಕ ಹಾದುಹೋಗಬೇಕು.

5. ಸಂಸತ್ ಕಲಾಪ ನೋಡಲು ಒಂದು ಗಂಟೆ ಅವಕಾಶ

ಲೋಕಸಭೆ ಮತ್ತು ರಾಜ್ಯಸಭೆ ಕಲಾಪ ನೋಡಬೇಕಾದರೂ ಈ ನಿಯಮ ಪಾಲಿಸಲೇಬೇಕು. ನೀರಿನ ಬಾಟಲಿ, ಘನವಸ್ತುಗಳನ್ನು ಕೂಡ ವೀಕ್ಷಕರ ಗ್ಯಾಲರಿಗೆ ಕೊಂಡೊಯ್ಯುವಂತೆ ಇಲ್ಲ. ವಿಸಿಟರ್‌ ಪಾಸ್‌ ಹೊಂದಿದವರಿಗೆ ಒಂದು ಗಂಟೆ ಪಬ್ಲಿಕ್ ಗ್ಯಾಲರಿಯಲ್ಲಿ ಕುಳಿತುಕೊಳ್ಳುವ ಅವಕಾಶವಿದೆ. ವೀಕ್ಷಕರ ಸಂಖ್ಯೆ ಹೆಚ್ಚಿದ್ದರೆ ಈ ಅವಧಿಯನ್ನು ಅಧಿಕಾರಿಗಳು ಕಡಿಮೆ ಮಾಡುತ್ತಾರೆ.

ಬಹುಪದರದ ಭದ್ರತಾ ವ್ಯವಸ್ಥೆ ಹೊಂದಿರುವ ಸಂಸತ್ ಭವನ

1. ಭದ್ರತಾ ಅಧಿಕಾರಿ/ಸಹಾಯಕ ನಿರ್ದೇಶಕರು (ಭದ್ರತೆ) ಸಂಸತ್ ಭವನದ ಒಳಗೆ ಚಲಿಸುವ ವ್ಯಕ್ತಿಗಳ ಪಾಸ್‌ಗಳನ್ನು ಸರಿಯಾಗಿ ಪರಿಶೀಲಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಪಾಸ್ ದುರ್ಬಳಕೆ ಆದರೆ ಆ ಪ್ರಕರಣಗಳನ್ನು ಉಪ ನಿರ್ದೇಶಕರ (ಭದ್ರತೆ) ತನಿಖೆಗೆ ಒಪ್ಪಿಸುತ್ತಾರೆ.

2. ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಬಹು-ಪದರದ ರಕ್ಷಣೆಯಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸಾಂಪ್ರದಾಯಿಕ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

3. ಭದ್ರತಾ ವ್ಯವಸ್ಥೆಯ ಭಾಗವಾಗಿ ರಸ್ತೆಗಳಲ್ಲಿ ಟೈರ್ ಕಿಲ್ಲರ್‌ಗಳು ಮತ್ತು ರೋಡ್ ಬ್ಲಾಕರ್‌ಗಳನ್ನು ಇರಿಸಲಾಗಿದೆ. ಭದ್ರತೆ ಪವರ್ ಫೆನ್ಸ್ ಕೂಡ ಸಂಸತ್ ಭವನದ ಸುತ್ತಲೂ ಇದ್ದು, ಇದು ನುಸುಳುಕೋರರಿಗೆ ಬಹುದೊಡ್ಡ ಸವಾಲು ಒಡ್ಡುವಂಥವು.

4. ಭದ್ರತಾ ವ್ಯವಸ್ಥೆಯ ಉತ್ತಮ ಸಮನ್ವಯಕ್ಕಾಗಿ ಜಂಟಿ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗಿದೆ.

5. ಸಂಸತ್ತಿನ ಭದ್ರತಾ ವ್ಯವಸ್ಥೆಯ ಕೇಂದ್ರ ಬಿಂದುವಾಗಿರುವುದು ಭದ್ರತಾ ವಿಭಾಗದ ಜಂಟಿಕಾರ್ಯದರ್ಶಿ. ಸಂಸತ್ತಿನ ಭದ್ರತಾ ಸೇವೆಗಳು, ದೆಹಲಿ ಪೊಲೀಸ್, ಸಂಸತ್ತು ಕರ್ತವ್ಯ ಗುಂಪು ಮತ್ತು ವಿವಿಧ ಮಿತ್ರ ಭದ್ರತಾ ಏಜೆನ್ಸಿಗಳನ್ನು ಒಳಗೊಂಡ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಹೊಣೆಗಾರಿಕೆ ಇವರದ್ದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ