logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಅಸ್ತಿತ್ವ ಇರುವುದು ಧಾರ್ಮಿಕ ನಂಬಿಕೆ, ಪುರಾಣಗಳ ಮೇಲೆ; ರಾಮಮಂದಿರಕ್ಕೆ ಬೇಡ ರಾಜಕೀಯ ಬಣ್ಣ; ರಾಜೀವ ಹೆಗಡೆ ಬರಹ

ಭಾರತದ ಅಸ್ತಿತ್ವ ಇರುವುದು ಧಾರ್ಮಿಕ ನಂಬಿಕೆ, ಪುರಾಣಗಳ ಮೇಲೆ; ರಾಮಮಂದಿರಕ್ಕೆ ಬೇಡ ರಾಜಕೀಯ ಬಣ್ಣ; ರಾಜೀವ ಹೆಗಡೆ ಬರಹ

HT Kannada Desk HT Kannada

Jan 06, 2024 09:15 AM IST

ರಾಮಮಂದಿರ

    • ಭಾರತದ ಅಸ್ತಿತ್ವ ಇರುವವರೆಗೆ ರಾಮ, ಕೃಷ್ಣ, ವಿಶ್ವನಾಥರ ಜಪ ಆಗುತ್ತಲೇ ಇರುತ್ತದೆ ಹಾಗೂ ಆಗಲೇಬೇಕು. ಭಾರತೀಯರ ದೊಡ್ಡ ಗುಣವೇ ನಂಬಿಕೆ. ನಾವು ಇತರರನ್ನು ನಂಬುತ್ತೇವೆ. ಹಾಗೆ ನಂಬಿರುವ ಮುಂದಿನ ಭಾಗವೇ ಇಂದು ನಮ್ಮ ನಂಬಿಕಾ ಸ್ಥಳಗಳ ಅಸ್ತಿತ್ವಕ್ಕೆ ಹೋರಾಟ ಮಾಡಬೇಕಿದೆ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ರಾಜೀವ ಹೆಗಡೆ ಬರಹ ಇಲ್ಲಿದೆ. 
ರಾಮಮಂದಿರ
ರಾಮಮಂದಿರ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೊದಲ ಹಂತದ ಕಾರ್ಯ ಸಂಪೂರ್ಣಗೊಂಡು ಇದೀಗ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ರಾಜಕೀಯ ಬಣ್ಣಗಳು ತಳುಕು ಹಾಕಿಕೊಂಡಿರುವುದು ನಿಜ. ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳೊಂದಿಗೆ ವಿವರವಾದ ಉತ್ತರ ನೀಡಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ರಾಜೀವ ಹೆಗಡೆ ಅವರ ಬರಹ ಇಲ್ಲಿದೆ

ನಂಬಿಕೆ, ಪುರಾಣ ಇರುವಲ್ಲೇ ನಮ್ಮ ಮಂದಿರ!

ಮೊದಲ ಪ್ರಶ್ನೆ: ರಾಮಮಂದಿರ ಎಲ್ಲಿ ಕಟ್ತೀರಿ, ಯಾವಾಗ ಕಟ್ತೀರಿ?

ಎರಡನೇ ಪ್ರಶ್ನೆ: ಮಸೀದಿ ಇರುವ ಜಾಗದಲ್ಲಿ ಮಂದಿರ ಕಟ್ಟಿದರೆ ರಾಮನಿಗೆ ಬೇಸರವಾಗಲ್ವಾ?

ಮೂರನೇ ಪ್ರಶ್ನೆ: ಮಂದಿರದ ಬದಲಿಗೆ ಶಾಲೆ, ಆಸ್ಪತ್ರೆ ಕಟ್ಟಿದ್ರೆ ರಾಮನಿಗೆ ಖುಷಿಯಾಗುತ್ತಾ?

ಕೊನೆಯ ಪ್ರಶ್ನೆ: ರಾಮ ಮಂದಿರವೇನು ಸಂಘದ ಆಸ್ತಿಯೇ?

ರಾಮ ಮಂದಿರ ವಿಚಾರ ಮತ್ತೊಮ್ಮೆ ರಾಜಕೀಯ ಕೇಂದ್ರಬಿಂದುವಾಗಿದೆ. ರಾಮಮಂದಿರವನ್ನು ಬಾಯ್ತುದಿಯಲ್ಲಿ ಸ್ವಾಗತಿಸಿ, ಹಿಂಬದಿಯಿಂದ ನಾನಾ ತರಹದ ಟೀಕೆ ಮಾಡಲಾಗುತ್ತಿದೆ. ಇವುಗಳಿಗೆಲ್ಲ ಮತ್ತದೇ ಧರ್ಮಾತೀತ (ಸೆಕ್ಯುಲರ್‌ಗೆ ಸೂಕ್ತ ಪದ ಎನಿಸಿತು) ಮುಖವಾಡ ತೊಟ್ಟುಕೊಂಡವರು ಅದ್ಭುತವಾದ ಕಥೆಗಳನ್ನು ಕಟ್ಟುತ್ತಿದ್ದಾರೆ. ಈ ಮೂಲಕ ಬಿಜೆಪಿ ಬಯಸಿದಂತೆ ಪಲ್ಲಕ್ಕಿ ಉತ್ಸವ ಮಾಡಿಕೊಂಡು ಬಂದು ರಾಜಕೀಯ ಮಾಡುತ್ತಿದ್ದಾರೆ.

ಇದನ್ನೂ ಓದಿ: Ram Temple Photos: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಕೆಲಸ ಪೂರ್ಣ, ಫೋಟೋ ಶೇರ್ ಮಾಡಿದ ಟ್ರಸ್ಟ್

ಮೊದಲ ಪ್ರಶ್ನೆಗೆ ಉತ್ತರ

1990ರ ದಶಕದಿಂದ ಬಿಜೆಪಿಯ ಬೇರು ಭದ್ರವಾಗಲು ಕಾರಣವಾಗಿದ್ದು ರಾಮಮಂದಿರ ವಿಚಾರ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂದಿನಿಂದ ಬಿಜೆಪಿ ನಾಯಕರಿಗೆ ಪಕ್ಷದ ಕಾರ್ಯಕರ್ತರು ಆಂತರಿಕವಾಗಿ ಹಾಗೂ ಬಹಿರಂಗವಾಗಿ ವಿರೋಧಿ ಪಕ್ಷಗಳು, ʼರಾಮ ಮಂದಿರವನ್ನು ಯಾವಾಗ ಕಟ್ಟುತ್ತೀರಿ?ʼ ಎಂದು ಕಿಚಾಯಿಸಿಕೊಂಡೇ ಬಂದಿದ್ದರು. ಆ ಪ್ರಶ್ನೆಗೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತ್ವರಿತ ಉತ್ತರಗಳು ಬರಲು ಆರಂಭಿಸಿದವು. ರಾಮ, ರಾಮಾಯಣ ಕಾಲ್ಪನಿಕ ಎನ್ನುವ ಪ್ರಮಾಣಪತ್ರವನ್ನು ಹಿಂಪಡೆಯುವುದರಿಂದ ಹಿಡಿದು, ಅಯೋಧ್ಯೆಯ ಪ್ರತಿ ಇಂಚಿಂಚು ಅಭಿವೃದ್ಧಿಗೆ ಕೇಂದ್ರ ಹಾಗೂ ಉತ್ತರಪ್ರದೇಶ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪಣ ತೊಟ್ಟಿತು. ಇದೇ ಕಾರಣದಿಂದ ʼಮಂದಿರ ಯಾವಾಗ ಕಟ್ಟುತ್ತೀರಿ?ʼ ಎನ್ನುವ ಪ್ರಶ್ನೆಗೆ ಮೋದಿ ಉತ್ತರ ಕೊಟ್ಟಾಯಿತು. ಹಾಗೆಯೇ ಸುಪ್ರೀಂ ಕೋರ್ಟ್‌ನಿಂದ ಕಾನೂನುಬದ್ಧವಾಗಿ ಅನುಮತಿ ಪಡೆದೇ ಈ ಮಹತ್‌ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ ಇದರಲ್ಲಿ ಕಾನೂನು ಕೊಂಕುಗಳನ್ನು ಹುಡುಕುವ ಸೋಗಲಾಡಿತನವನ್ನು ಮಾಡಬೇಡಿ. ಇನ್ನೊಂದೆಡೆ ಮಂದಿರವನ್ನು ಯಾವಾಗ ಕಟ್ಟುತ್ತೀರಿ ಎಂದು ಕಿಚಾಯಿಸಿದ ಹಾಗೂ ಪ್ರತಿ ಹಂತದ ಕಾನೂನು ಹೋರಾಟದಲ್ಲಿ ಅಡ್ಡಗಾಲಾಗಿದ್ದ ಪ್ರತಿಪಕ್ಷಗಳು ಇಂದು ಮಂದಿರ ನಿರ್ಮಾಣದ ಕ್ರೆಡಿಟ್‌ ತೆಗೆದುಕೊಳ್ಳಲಾಗದು. ಬದಲಾಗಿ ಕಾನೂನು ಹೋರಾಟ ಮಾಡಿದ ರಾಮಲಲಾ ಟ್ರಸ್ಟ್‌, ಸಂಘಟಿತ ಹೋರಾಟ ಮಾಡಿದ ಆರ್‌ಎಸ್‌ಎಸ್‌ ಹಾಗೂ ರಾಜಕೀಯ, ಆಡಳಿತಾತ್ಮಕ ಹೋರಾಟ ಮಾಡಿದ ಬಿಜೆಪಿ ಮಾತ್ರ ಮಂದಿರ ನಿರ್ಮಾಣದ ಕ್ರೆಡಿಟ್‌ ತೆಗೆದುಕೊಳ್ಳಲು ಸಾಧ್ಯ.

ಎರಡನೇ ಪ್ರಶ್ನೆಗೆ ಉತ್ತರ

ಮರ್ಯಾದಾ ಪುರುಷೋತ್ತಮ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಕೆಲವರಿಗೆ, ಇದ್ದಕ್ಕಿದ್ದಂತೆ ಭಕ್ತಿ ತುಂಬಿ ತುಳುಕುತ್ತಿದೆ. ಲಕ್ಷಾಂತರ ಜನ ಪ್ರಾರ್ಥನೆ ಮಾಡಿದ ಮಸೀದಿಯಲ್ಲಿ ರಾಮನನ್ನು ಪ್ರತಿಷ್ಠಾಪಿಸಿದರೆ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗುವುದಿಲ್ಲವೇ ಎಂದು ಭಾಷಣ ಮಾಡುತ್ತಿದ್ದಾರೆ. ಇದನ್ನೇ ತಿರುಗಿ ಕೇಳಿದರೆ ಹೇಗಿರುತ್ತದೆ ಹೇಳಿ? ಭಾರತಕ್ಕೆ ಮುಸ್ಲಿಂ ರಾಜರು ಬೇರೆ ದೇಶಗಳಿಂದ ಬಂದು ದಾಳಿ ಮಾಡುವ ಮುನ್ನವೇ ರಾಮಾಯಣ, ಮಹಾಭಾರತದ ಉಲ್ಲೇಖವಿತ್ತು. ರಾಮ-ಅಯೋಧ್ಯೆ. ಕೃಷ್ಣ-ಮಥುರಾ, ಕಾಶಿ-ವಿಶ್ವನಾಥನ ಉಲ್ಲೇಖವಿತ್ತು. ಉದ್ದೇಶಪೂರ್ವಕವಾಗಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲೆಂದೇ ಮೊಘಲ್‌ ಹಾಗೂ ಇತರ ರಾಜರು ಈ ಪುಣ್ಯ ಕ್ಷೇತ್ರದಲ್ಲಿ ಮಸೀದಿ ನಿರ್ಮಿಸಿದ್ದನ್ನು ಒಪ್ಪಿಕೊಳ್ಳಲು ಸಮಸ್ಯೆ ಏನು? ನಮ್ಮ ಮನೆಗೆ ಪರಕೀಯರು ಬಂದು ಇದು ನಂದೇ ಆಸ್ತಿಯೆಂದರೆ ಸುಪ್ರೀಂ ಕೋರ್ಟ್‌ವರೆಗೆ ಹೋಗಿ ದೇವರ ಮೇಲೆ ಭಾರ ಹಾಕುತ್ತೇವೆ. ಅದೇ ದೇವರ ವಿಚಾರಕ್ಕೆ ಬಂದಾಗ ಸುಮ್ಮನೇ ಕೂರಲು ಹೇಗೆ ಸಾಧ್ಯ? ರಾಮ, ಕೃಷ್ಣ, ವಿಶ್ವನಾಥರು ಎಷ್ಟು ಪೂಜನೀಯವೋ, ಅವು ಅಯೋಧ್ಯೆ, ಮಥುರಾ, ಕಾಶಿಯಲ್ಲಿದ್ದಾಗ ಮಾತ್ರ ಅದಕ್ಕೆ ನಮನ ಸಲ್ಲಿಕೆಯಾಗುತ್ತದೆ. ಈ ದೇಶದ ಯಾವೊಬ್ಬ ಹಿಂದೂ ಇತರ ಧರ್ಮೀಯರಿಗೆ ಅಗೌರವ ತೋರುತ್ತಿಲ್ಲ. ನಮ್ಮ ನಂಬಿಕೆಯ ತಾಣಗಳನ್ನು ಗೌರವಿಸಿ ಎಂದು ಭಕ್ತಿಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದಾರೆ. ವಿಶ್ವದ ಇನ್ಯಾವ ದೇಶದಲ್ಲಿ ತನ್ನ ದೇವರನ್ನು ಪೂಜಿಸುವ ತಾಣದಲ್ಲಿ ಬೇಡಿಕೊಳ್ಳುವ ಪರಿಸ್ಥಿತಿ ಇದೆ? ಸಹನಶೀಲತೆ, ಧರ್ಮಾತೀತತೆ(ಜಾತ್ಯತೀತತೆ), ಧಾರ್ಮಿಕ ನಂಬಿಕೆ ಎನ್ನುವುದು ಕೆಲವರಿಗೆ ಮಾತ್ರ ಸೀಮಿತವಾಗಿಲ್ಲ. ರಾಮ-ಕೃಷ್ಣ-ವಿಶ್ವನಾಥನನ್ನು ನಂಬುವರಿಗೂ ಇವೆಲ್ಲ ವಿಚಾರಗಳು ಸಂವಿಧಾನಬದ್ಧವಾಗಿಯೇ ದೊರೆತಿವೆ. ಅಂದ್ಹಾಗೆ ರಾಮ-ಕೃಷ್ಣ-ವಿಶ್ವನಾಥನನ್ನು ಪೂಜಿಸುವವರು ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ಆರಾಧಿಸಿದರೂ ದೇಶದ ವಿಚಾರ ಬಂದಾಗ ಸಂವಿಧಾನ, ಸುಪ್ರೀಂ ಕೋರ್ಟ್‌ನ್ನು ಒಪ್ಪಿಕೊಳ್ಳುತ್ತಾರೆ ಹಾಗೂ ಅಪ್ಪಿಕೊಳ್ಳುತ್ತಾರೆ. ಅಷ್ಟಕ್ಕೂ ಈ ದೇಶದ ಬಹುತೇಕ ಪುರಾತನ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಾಗೂ ಐತಿಹಾಸಿಕ ತಾಣಗಳು ದಾಳಿಕೋರರ ಕೆಂಗಣ್ಣಿಗೆ ಗುರಿಯಾಗಿದ್ದೇಕೆ? ಚಿನ್ನ, ಸಂಪತ್ತನ್ನು ದೋಚುವುದರ ಜತೆಗೆ ನಮ್ಮ ನಂಬಿಕೆಗಳಿರುವ ವಿಗ್ರಹಗಳನ್ನು ಛಿದ್ರಗೊಳಿಸಿದ್ದೇಕೆ? ಹೀಗಾಗಿ ನಮಗೆ ದಯವಿಟ್ಟು ಸಂವಿಧಾನ, ಕಾನೂನು, ಧರ್ಮದ ಕುರಿತು ಪಾಠ ಮಾಡುವ ಕಷ್ಟವನ್ನು ತೆಗೆದುಕೊಳ್ಳಬೇಡಿ.

ಇದನ್ನೂ ಓದಿ: Silver replicas of Ram Mandir: ಬೆಳ್ಳಿಯಿಂದ ರಾಮ ಮಂದಿರದ ಪ್ರತಿಕೃತಿ ತಯಾರಿಸಿದ ಆಭರಣ ವ್ಯಾಪಾರಿ.. ಫೋಟೋಸ್​ ನೋಡಿ ಕಣ್ತುಂಬಿಕೊಳ್ಳಿ

ಮೂರನೇ ಪ್ರಶ್ನೆಗೆ ಉತ್ತರ

ಈ ದೇಶದಲ್ಲಿ ಮಂದಿರ ನಿರ್ಮಾಣ ಮಾಡಿದಾಗಲೆಲ್ಲ ಶಾಲೆ, ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಯುತ್ತದೆ. ವಿಚಿತ್ರವೆಂದರೆ ಈ ದೇಶದಲ್ಲಿ ಅತಿ ಹೆಚ್ಚು ಭೂಮಿ ಹೊಂದಿರುವ ವಕ್ಫ್‌ ಬೋರ್ಡ್‌ ಹಾಗೂ ಬ್ರಿಟಿಷರಿಂದ ಜಾಗವನ್ನು ಲೀಸ್‌ ಪಡೆದು ಕಟ್ಟಿರುವ ಚರ್ಚ್‌ಗಳ ವಿಚಾರದಲ್ಲಿ ಈ ಪ್ರಶ್ನೆಯನ್ನು ಎತ್ತುವುದೇ ಇಲ್ಲ. ಈ ದೇಶದ ಸಾವಿರಾರು ಮಠ, ಮಂದಿರಗಳು ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಪರಿಣಾಮಕಾರಿ ಹಾಗೂ ಕಡಿಮೆ ದರದಲ್ಲಿ, ಉಚಿತವಾಗಿ ನಡೆಸುತ್ತಿವೆ ಎನ್ನುವುದನ್ನು ಮರೆಯಕೂಡದು. ಕೆಲ ಸಿನೆಮಾಗಳಲ್ಲಿ ಎಡಚರರು ತೋರಿಸುವಂತೆ ಸೇವೆಯೆಂದರೆ ಒಂದು ಧರ್ಮದ ಸಂಸ್ಥೆಗೆ ಸೀಮಿತವಾಗಿಲ್ಲ. ಅಷ್ಟಕ್ಕೂ ಈ ಮಂದಿರ ಕಟ್ಟಲು ಸರ್ಕಾರದಿಂದ ನಯಾಪೈಸೆ ಹಣವನ್ನು ಟ್ರಸ್ಟ್‌ ಪಡೆದಿಲ್ಲ. ಭಕ್ತರು ದಾನದ ಮೂಲಕ ಕೊಟ್ಟಿರುವ ಹಣದಿಂದ ಭವ್ಯ ಮಂದಿರ ತಲೆ ಎತ್ತುತ್ತಿದೆ. ರಾಮ, ಕೃಷ್ಣ, ವಿಶ್ವನಾಥ ಎನ್ನುವುದು ನಂಬಿಕೆಯ ವಿಚಾರವಷ್ಟೇ. ಧಾರ್ಮಿಕ ನಂಬಿಕೆ, ಪ್ರೇರಣೆಯು ಈ ದೇಶದಲ್ಲಿ ಸಾಕಷ್ಟು ಪವಾಡಗಳನ್ನು ಮಾಡಿದೆ. ಇದನ್ನು ಒಪ್ಪಿಕೊಳ್ಳಲು ಕಷ್ಟವಾದರೆ ಅದು ನಿಮ್ಮ ಸಮಸ್ಯೆಯಷ್ಟೇ.

ಕೊನೆಯ ಪ್ರಶ್ನೆಗೆ ಉತ್ತರ

ರಾಮ, ಕೃಷ್ಣ, ವಿಶ್ವನಾಥರು ಸಂಘ ಪರಿವಾರ, ಬಿಜೆಪಿಯ ಆಸ್ತಿಯಲ್ಲ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಆದರೆ ರಾಜಕೀಯ ಹಾಗೂ ಹೋರಾಟದ ವಿಚಾರದಲ್ಲಿ ಈ ದೇವರ ಪರವಾಗಿ ನಿಂತವರು ಮಾತ್ರ ಸಂಘ ಪರಿವಾರ ಹಾಗೂ ಬಿಜೆಪಿ. ರಾಮರಾಜ್ಯದ ಪರಿಕಲ್ಪನೆ ಪ್ರತಿಪಾದಿಸಿದ ಗಾಂಧಿಯನ್ನು ಪೂಜಿಸುತ್ತಾ ಮರ್ಯಾದಾ ಪುರುಷೋತ್ತಮನ ಅಸ್ತಿತ್ವ ಪ್ರಶ್ನಿಸಿ, ಮಂದಿರವನ್ನು ಅಲ್ಲಿ ನಿರ್ಮಿಸದಿದ್ದರೆ ಸಮಸ್ಯೆ ಏನೆಂದು ಕೇಳಿ, ರಾಮಾಯಣ, ಮಹಾಭಾರತ, ಪುರಾಣಕ್ಕೆ ದಾಖಲೆಗೆ ಆಗ್ರಹಿಸಿಕೊಂಡು, ಈಗ ರಾಮಭಕ್ತಿಗೆ ತನಗೂ ಕ್ರೆಡಿಟ್‌ ಬೇಕೆಂದರೆ ಅದನ್ನು ದೇವರು ಮೆಚ್ಚಲು ಸಾಧ್ಯವೇ? ಯಾವುದೇ ಸೈದ್ಧಾಂತಿಕ ವಿರೋಧವಿದ್ದರೂ ನಾವು ಭಾರತೀಯರಾಗಿ ಒಂದು ವಿಷಯವನ್ನು ಮರೆಯಕೂಡದು. ಈ ದೇಶದ ಅಸ್ತಿತ್ವ ಇರುವುದೇ ಧಾರ್ಮಿಕ ನಂಬಿಕೆ ಹಾಗೂ ಪುರಾಣಗಳ ಮೇಲೆ. ಧಾರ್ಮಿಕ ನೆಲೆಗಟ್ಟಿಲ್ಲದೇ ಕೆಲ ಶತಮಾನಗಳ ಹಿಂದಿನ ಭಾರತದ ಇತಿಹಾಸವನ್ನು ಉಲ್ಲೇಖಿಸುವುದು ಕೂಡ ಕಷ್ಟವಾಗುತ್ತದೆ. ಭಾರತದ ಅಸ್ತಿತ್ವ ಇರುವವರೆಗೆ ರಾಮ, ಕೃಷ್ಣ, ವಿಶ್ವನಾಥರ ಜಪ ಆಗುತ್ತಲೇ ಇರುತ್ತದೆ ಹಾಗೂ ಆಗಲೇಬೇಕು. ಭಾರತೀಯರ ದೊಡ್ಡ ಗುಣವೇ ನಂಬಿಕೆ. ನಾವು ಇತರರನ್ನು ನಂಬುತ್ತೇವೆ. ಹಾಗೆ ನಂಬಿರುವ ಮುಂದಿನ ಭಾಗವೇ ಇಂದು ನಮ್ಮ ನಂಬಿಕಾ ಸ್ಥಳಗಳ ಅಸ್ತಿತ್ವಕ್ಕೆ ಹೋರಾಟ ಮಾಡಬೇಕಿದೆ.

ಕೊನೆಯದಾಗಿ: ರಾಮ, ಕೃಷ್ಣ, ವಿಶ್ವನಾಥನ ಮಂದಿರ ನಿರ್ಮಾಣವು ಯಾರ ವಿರುದ್ಧವೂ ಅಲ್ಲ, ಈಗಲೂ ಕಾಲ ಮಿಂಚಿಲ್ಲ. ಬನ್ನಿ ಎಲ್ಲರೂ ಭಾರತದ ಗತ ವೈಭವವನ್ನು ಒಪ್ಪಿಕೊಂಡು, ಅಪ್ಪಿಕೊಳ್ಳೋಣ. ಎಲ್ಲರೂ ಸೌಹಾರ್ದತೆಯಿಂದ ಬಾಳೋಣ.

ಇನ್ನಾದರೂ ಬದಲಾಗಿ, ಹೀಗೆ ಮಾತನಾಡಿ....

1. ಹಿಂದೂಗಳ ಪವಿತ್ರ ಸ್ಥಳವಾದ ಮಥುರಾ, ಕಾಶಿಯಲ್ಲೂ ಭವ್ಯ ಮಂದಿರ ನಿರ್ಮಿಸೋಣ.

2. ಮಂದಿರ ಕೆಡವಿ ಮಸೀದಿ ಕಟ್ಟಿದ್ದು ಕೂಡ ರಾಮ, ಕೃಷ್ಣರಿಗೆ ಬೇಸರ ತರಿಸುತ್ತದೆ.

3. ಅದೆಷ್ಟೋ ಮಠ, ಮಂದಿರಗಳು ಶಾಲೆ, ಆಸ್ಪತ್ರೆಯನ್ನೂ ಕಟ್ಟಿ ಬೆಳೆಸುತ್ತಿವೆ.

4. ಆರಂಭದಿಂದಲೇ ಎಲ್ಲರೂ ಸ್ವೀಕರಿಸಿದರೆ ರಾಮ, ಕೃಷ್ಣ, ವಿಶ್ವನಾಥ ಎಲ್ಲರ ಶ್ರದ್ಧೆಯ ಆಸ್ತಿಯಾಗಲಿ.

ಜನವರಿ 3 ರಂದು ರಾಜೀವ ಹೆಗಡೆ ಈ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈಗಾಗಲೇ ಹಲವರು ಇದಕ್ಕೆ ಲೈಕ್‌ ಮಾಡಿದ್ದಾರೆ, ಅಲ್ಲದೇ ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ