logo
ಕನ್ನಡ ಸುದ್ದಿ  /  Nation And-world  /  Kerala Govt Allows Menstrual And Maternity Leave For Female Students Across All State Universities

Menstrual & Maternity Leave: 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆ ಘೋಷಿಸಿದ ಕೇರಳ ಸರ್ಕಾರ.. ಮುಟ್ಟಿನ ರಜೆಯೂ ಸಿಗಲಿದೆ

HT Kannada Desk HT Kannada

Jan 20, 2023 04:52 PM IST

ಸಾಂದರ್ಭಿಕ ಚಿತ್ರ

    • ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆಯನ್ನು ನೀಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ (ಕೇರಳ): ಕೊಚ್ಚಿನ್​ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಘೋಷಿಸಿದ ಹಾಗೂ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆ ಘೋಷಿಸಿದ ಬೆನ್ನಲ್ಲೇ ಕೇರಳ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆಯನ್ನು ನೀಡುವುದಾಗಿ ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

“ಮತ್ತೊಮ್ಮೆ ಕೇರಳವು ರಾಷ್ಟ್ರಕ್ಕೆ ಮಾದರಿಯಾಗಿದೆ. ನಮ್ಮ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ಮುಟ್ಟಿನ ಮತ್ತು ಹೆರಿಗೆ ರಜೆಗಳನ್ನು ನೀಡಲಾಗುವುದು, ಲಿಂಗ ಸಮಾನತೆಯುಳ್ಳ ಸಮಾಜವನ್ನು ಸಾಕಾರಗೊಳಿಸುವ ಎಲ್‌ಡಿಎಫ್ ಸರ್ಕಾರದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ" ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

ಈವರೆಗೆ ಶೆ.75ರಷ್ಟು ಹಾಜರಾತಿ ಇದ್ದವರಿಗೆ ಮಾತ್ರ ಸೆಮಿಸ್ಟರ್​ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ವಿದ್ಯಾರ್ಥಿನಿಯರು ಮುಟ್ಟಿನ ರಜೆಯನ್ನು ಬಳಸಿಕೊಂಡು ಶೇ.73 ರಷ್ಟು ಹಾಜರಾತಿ ಇದ್ದರೂ ಪರೀಕ್ಷೆ ಬರೆಯಬಹುದಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವೆ ಡಾ.ಆರ್.ಬಿಂದು ತಿಳಿಸಿದ್ದಾರೆ. ಕೆಲ ವಿದ್ಯಾರ್ಥಿನಿಯರು ಮದುವೆ ಬಳಿಕವೂ ವ್ಯಾಸಂಗ ಮುಂದುವರೆಸಿರುತ್ತಾರೆ. 18 ವರ್ಷ ಮೇಲ್ಪಟ್ಟ ಅಂತಹ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ಸಿಗಲಿದೆ.

ಹೆರಿಗೆ ರಜೆ ಘೋಷಿಸಿದ್ದ ಮಹಾತ್ಮ ಗಾಂಧಿ ವಿವಿ

ಕಳೆದ ಡಿಸೆಂಬರ್​ನಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯವು ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ವಿವಾಹಿತ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ಘೋಷಿಸಿತ್ತು. ವಿವಿಯ ಕುಲಪತಿ ಸಿ.ಟಿ ಅರವಿಂದ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು.

ಈ ಹೆರಿಗೆ ರಜೆಯನ್ನು ಹೆರಿಗೆಯ ಮೊದಲು ಅಥವಾ ನಂತರ ತೆಗೆದುಕೊಳ್ಳಬಹುದು. ಆದರೆ ಮೊದಲ ಅಥವಾ ಎರಡನೆಯ ಗರ್ಭಧಾರಣೆಗೆ ಮಾತ್ರ ನೀಡಲಾಗುತ್ತದೆ. ಜೊತೆಗೆ ಕೋರ್ಸ್ ಅವಧಿಯಲ್ಲಿ ಒಮ್ಮೆ ಮಾತ್ರ ನೀಡಲಾಗುತ್ತದೆ. ಕೋರ್ಸ್‌ ಅವಧಿಯಲ್ಲಿ ಹೆರಿಗೆ ರಜೆ ಪಡೆದ ವಿದ್ಯಾರ್ಥಿನಿಯರಿಗೆ ಅದೇ ಸೆಮೆಸ್ಟರ್‌ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು ಅಥವಾ ಮುಂದಿನ ಸೆಮೆಸ್ಟರ್‌ನಲ್ಲಿ ಸಪ್ಲಿಮೆಂಟರಿ ಪರೀಕ್ಷೆಗೆ ಅವರು ಹಾಜರಾಗಬಹುದು. ಅಬಾರ್ಷನ್‌ ಅಥವಾ ಟ್ಯುಬೆಕ್ಟಮಿಗಾಗಿ 14 ದಿನಗಳ ರಜೆ ನೀಡಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿತ್ತು.

ಮುಟ್ಟಿನ ರಜೆ ಘೋಷಿಸಿದ್ದ ಕೊಚ್ಚಿನ್​ ವಿವಿ

ಕೆಲ ದಿನಗಳ ಹಿಂದಷ್ಟೇ ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು (CUSAT) ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡುವುದಾಗಿ ಘೋಷಿಸಿತ್ತು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ವಿಶ್ವವಿದ್ಯಾನಿಲಯವು ಹೆಚ್ಚುವರಿ ಹಾಜರಾತಿ ನೀಡುವುದಾಗಿ ತಿಳಿಸಿದೆ. ಅಂದರೆ ಪ್ರತಿ ಸೆಮಿಸ್ಟರ್​ಗೆ ಶೇ. 2ರಷ್ಟು ಹಾಜರಾತಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು.

ಈ ವಿವಿಯಲ್ಲಿ ಶೇಕಡಾ 75ರಷ್ಟು ಹಾಜರಾತಿ ಇದ್ದವರು ಮಾತ್ರ ಸೆಮಿಸ್ಟರ್ ಪರೀಕ್ಷೆ ಬರೆಯಬಹುದು. ಇದಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಉಪಕುಲಪತಿಗಳಿಗೆ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಬೇಕು. ಆದರೆ ಋತುಚಕ್ರದ ರಜೆಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ. ಇನ್ನು ಮುಂದೆ ವಿದ್ಯಾರ್ಥಿನಿಯರ ಹಾಜರಾತಿ ಶೇ.73 ಇದ್ದರೂ ಸಮಸ್ಯೆಯಿಲ್ಲ.

ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 4000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ವಿದ್ಯಾರ್ಥಿನಿಯರಿಗೆ ಮುಟ್ಟಿನ ದಿನಗಳಲ್ಲಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡುವಂತೆ ವಿವಿಧ ವಿದ್ಯಾರ್ಥಿ ಸಂಘಗಳು ಬಹುಕಾಲದಿಂದ ಒತ್ತಾಯಿಸುತ್ತಾ ಬಂದಿದ್ದವು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು