logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nitin Gadkari: ಈ ವರ್ಷ ಅಲ್ಲ, ಮುಂದಿನ ಅಕ್ಟೋಬರ್‌ನಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯ

Nitin Gadkari: ಈ ವರ್ಷ ಅಲ್ಲ, ಮುಂದಿನ ಅಕ್ಟೋಬರ್‌ನಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯ

HT Kannada Desk HT Kannada

Sep 29, 2022 07:25 PM IST

ನಿತಿನ್‌ ಗಡ್ಕರಿ

    • ಈ ವರ್ಷ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳನ್ನು ಪ್ರಯಾಣಿಕರ ವಾಹನಗಳಲ್ಲಿ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಈ ಹಿಂದೆ ಯೋಜಿಸಿತ್ತು. ಇದರಲ್ಲಿ ಬದಲಾವಣೆ ತರಲಾಗಿದ್ದು, ಇದು ಮುಂದಿನ ವರ್ಷದ ಅಕ್ಟೋಬರ್‌ ತಿಂಗಳಿನಿಂದ ಜಾರಿಗೆ ಬರಲಿದೆ.‌
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ

ನವದೆಹಲಿ: ಕಾರುಗಳಲ್ಲಿ ಕನಿಷ್ಟ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಮಹತ್ವದ ಪ್ರಸ್ತಾವನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆದರೆ, ಈ ಹಿಂದೆ ಹೇಳಿದಂತೆ ಈ ನಿಯಮ ಈ ವರ್ಷದಿಂದ ಜಾರಿಯಾಗುತ್ತಿಲ್ಲ. ಬದಲಾಗಿ ಮುಂದಿನ ವರ್ಷದಿಂದ ಜಾರಿಗೊಳ್ಳಲಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಮುಂದಿನ ವರ್ಷದ ಅಕ್ಟೋಬರ್‌ನಿಂದ ಜಾರಿಗೆ ಬರುವಂತೆ ಈ ನಿಯಮ ರೂಪಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಎಂ1 ವರ್ಗದ ಕಾರುಗಳಲ್ಲಿ ಚಾಲಕನ ಸೀಟಿನ ಜೊತೆಗೆ ಎಂಟು ಸೀಟುಗಳಿಗಿಂತ ಹೆಚ್ಚಿಲ್ಲದ ಪ್ರಯಾಣಿಕರ ಸಾಗಣೆಗೆ ಬಳಸುವ ಕಾರುಗಳಿಗೆ ಈ ನಿಯಮ ಅನ್ವಯಿಸುತ್ತದೆ.

ಈ ವರ್ಷ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳನ್ನು ಪ್ರಯಾಣಿಕರ ವಾಹನಗಳಲ್ಲಿ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಈ ಹಿಂದೆ ಯೋಜಿಸಿತ್ತು. ಇದರಲ್ಲಿ ಬದಲಾವಣೆ ತರಲಾಗಿದ್ದು, ಇದು ಮುಂದಿನ ವರ್ಷದ ಅಕ್ಟೋಬರ್‌ ತಿಂಗಳಿನಿಂದ ಜಾರಿಗೆ ಬರಲಿದೆ.‌

ಮೋಟಾರು ವಾಹನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಸುರಕ್ಷತೆಯು ಸರ್ಕಾರಕ್ಕೆ ತುಂಬಾ ಮುಖ್ಯ ಎಂಬುದಾಗಿ ಗಡ್ಕರಿ ತಿಳಿಸಿದ್ದಾರೆ. ಹೀಗಾಗಿ ಈ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು ಲೆಕ್ಕಿಸದೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

“ಆಟೋಮೊಬೈಲ್ ಉದ್ಯಮವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿಯ ನಿರ್ಬಂಧಗಳು ಮತ್ತು ಸ್ಥೂಲ ಆರ್ಥಿಕ ಸನ್ನಿವೇಶದ ಮೇಲೆ ಅದರ ಪ್ರಭಾವವನ್ನು ಪರಿಗಣಿಸಿ, 2023ರ ಅಕ್ಟೋಬರ್ 01ರಂದ ಎಂ-1 ವರ್ಗದ ಪ್ರಯಾಣಿಕರ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ” ಗಡ್ಕರಿ ಟ್ವೀಟ್ ಮಾಡಿದ್ದಾರೆ.

ಇದೇ ತಿಂಗಳ 4ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವಿನ ಬಳಿಕ ದೇಶದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಭಾರಿ ಚರ್ಚೆ ಆರಂಭವಾಗಿತ್ತು. ಇದಾದ ಬೆನ್ನಲ್ಲೇ ಸರ್ಕಾರದ ಕಡೆಯಿಂದ ಮಹತ್ವದ ನಿರ್ಧಾರ ಪ್ರಕಟಗೊಂಡಿದೆ.

ಕೆಲವು ವಾರಗಳ ಹಿಂದೆ, ನಿತಿನ್ ಗಡ್ಕರಿ ಅವರು ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಆದರೆ ಸದ್ಯ ಒಂದು ವರ್ಗದ ಕಾರುಗಳ ಮೇಲೆ, ಅದು ಕೂಡಾ ಮುಂದಿನ ವರ್ಷದಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ.

ಕಳೆದ ಸೆಪ್ಟೆಂಬರ್ 14ರಂದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಭಾರತದಲ್ಲಿನ ಆಟೋಮೊಬೈಲ್ ತಯಾರಕರನ್ನು ದೇಶದಲ್ಲಿ ಕಾರುಗಳಿಗೆ ಜಾಗತಿಕ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಅಪಘಾತಗಳನ್ನು ಕಡಿಮೆ ಮಾಡಲು ಆಟೋಮೊಬೈಲ್ ಉದ್ಯಮದ ಸಹಕಾರದ ಅಗತ್ಯವಿದೆ ಎಂದು ಹೇಳಿದ್ದರು.

“ಭಾರತದಲ್ಲಿ ಹೆಚ್ಚಿನ ಕಾರು ತಯಾರಕ ಕಂಪನಿಗಳು 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರುಗಳನ್ನು ರಫ್ತು ಮಾಡುತ್ತಿವೆ. ಆದರೆ ಭಾರತದ ಆರ್ಥಿಕ ಮಾದರಿ ಮತ್ತು ವೆಚ್ಚದ ಕಾರಣದಿಂದ ಅವರು ದೇಶದಲ್ಲಿ ಇಂತಹ ಕಾರುಗಳ ಉತ್ಪಾದನೆಗೆ ಹಿಂಜರಿಯುತ್ತಿದ್ದಾರೆ” ಎಂದು ಭಾರತೀಯ ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(ACMA) ವಾರ್ಷಿಕ ಅಧಿವೇಶನದಲ್ಲಿ ಗಡ್ಕರಿ ಹೇಳಿದ್ದಾರೆ.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಗಡ್ಕರಿ, ಪ್ರತಿ ವರ್ಷ ಸುಮಾರು ಐದು ಲಕ್ಷ ರಸ್ತೆ ಅಪಘಾತಗಳಲ್ಲಿ 1.5 ಲಕ್ಷ ಜನರು ಸಾವನ್ನಪ್ಪಿದ್ದಾರೆ ಮತ್ತು ಮೂರು ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬುದನ್ನು ಒತ್ತಿ ಹೇಳಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು