Monsoon Delay: ಅರಬ್ಬೀ ಸಮುದ್ರದಲ್ಲಿ ಸೈಕ್ಲೋನ್; ಕರಾವಳಿ ಕರ್ನಾಟಕದಲ್ಲಿ ಮಳೆ ನಿರೀಕ್ಷೆ
Jun 06, 2023 06:28 PM IST
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ಬಿರುಗಾಳಿ ಎದ್ದಿದ್ದು, ಬಿಪರ್‌ಜೋಯ್ ಚಂಡಮಾರುತ ಸೃಷ್ಟಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)
Cyclone Forecast Monsoon Delay: ಆಗ್ನೇಯ ಅರಬ್ಬೀಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತಕ್ಕೆ ಬಿಪರ್‌ಜೋಯ್ (Biparjoy) ಎಂದು ಹೆಸರಿಸಲಾಗಿದೆ. ಈ ಚಂಡಮಾರುತವು ಕೇರಳ ಕರಾವಳಿಯತ್ತ ಆಗಮಿಸುತ್ತಿರುವ ಮಾನ್ಸೂನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳುತ್ತಿವೆ.
ಆಗ್ನೇಯ ಅರಬ್ಬೀ ಸಮುದ್ರ (Southeast Arabian Sea)ದಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಬಿಪರ್‌ಜಾಯ್ (Biparjoy) ಚಂಡಮಾರುತ ಸೃಷ್ಟಿಯಾಗಿದೆ. ಇದರಿಂದಾಗಿ ಭಾರತದಲ್ಲಿ ಮುಂಗಾರು ಮಳೆ (monsoon in India) ವಿಳಂಬವಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಮಂಗಳವಾರ ತಿಳಿಸಿದೆ.
ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿರುಗಾಳಿಯು ಚಂಡಮಾರುತ ಸ್ವರೂಪ ಪಡೆದು ಉತ್ತರದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಇದರಿಂದಾಗಿ ಕೇರಳಕ್ಕೆ ಮುಂಗಾರು ಪ್ರವೇಶ ನಿಧಾನವಾಗಬಹುದು.
ಗುಜರಾತ್‌ನ ಪೋರಬಂದರ್‌ನ ದಕ್ಷಿಣಕ್ಕೆ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಈ ವಾಯಭಾರ ಕುಸಿತವನ್ನು ಗಮನಿಸಲಾಗಿದೆ. ಇದು ವಾಯುವ್ಯಕ್ಕೆ ಚಲಿಸುತ್ತ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.
ಗೋವಾದ ಪಶ್ಚಿಮ-ನೈಋತ್ಯಕ್ಕೆ 920 ಕಿ.ಮೀ., ಮುಂಬೈನಿಂದ 1,120 ಕಿ.ಮೀ. ದಕ್ಷಿಣ-ನೈಋತ್ಯ, ಪೋರಬಂದರ್‌ನಿಂದ ದಕ್ಷಿಣಕ್ಕೆ 1,160 ಕಿ.ಮೀ., ಮತ್ತು ಪಾಕಿಸ್ತಾನದ ಕರಾಚಿಯಿಂದ 1,520 ಕಿ.ಮೀ. ದಕ್ಷಿಣಕ್ಕೆ ಮಂಗಳವಾರ (ಜೂ.6) ಮುಂಜಾನೆ 5:30ಕ್ಕೆ ವಾಯುಭಾರ ಕುಸಿತ ಉಂಟಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಚಂಡಮಾರುತವು ಉತ್ತರಾಭಿಮುಖವಾಗಿ ನೆಲೆಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ಬಿರುಗಾಳಿಯು ಚಂಡಮಾರುತವಾಗಿ ತೀವ್ರಗೊಳ್ಳುತ್ತದೆ ಎಂದು ವರದಿ ಹೇಳಿದೆ.
ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ವ್ಯವಸ್ಥೆಯ ರಚನೆ ಉಂಟಾಗಬಹುದು ಎಂದು ಸೋಮವಾರವೇ ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿತ್ತು. ಚಂಡಮಾರುತವು ಕೇರಳ ಕರಾವಳಿಯತ್ತ ಮಾನ್ಸೂನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಅರಬ್ಬೀ ಸಮುದ್ರದ ಸೈಕ್ಲೋನ್ ಕಾರಣ ಮುಂಗಾರು ವಿಳಂಬ ಸಾಧ್ಯತೆ
ಭಾರತದಲ್ಲಿ ಮಾನ್ಸೂನ್‌ಗೆ ಅರೇಬಿಯನ್ ಸಮುದ್ರದಲ್ಲಿ ಸೈಕ್ಲೋನಿಕ್ ರಚನೆಯ ಅಪಾಯವನ್ನು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಊಹಿಸಿದೆ. ಅರಬ್ಬಿ ಸಮುದ್ರದ ಚಂಡಮಾರುತದ ಪ್ರಭಾವದಿಂದ ಮಾನ್ಸೂನ್ ಸ್ಟ್ರೀಮ್ ಕರಾವಳಿ ಭಾಗಗಳನ್ನು ತಲುಪಲು ಮತ್ತು ಪಶ್ಚಿಮ ಘಟ್ಟಗಳ ಆಚೆಗೆ ನುಸುಳಲು ಕಷ್ಟವಾಗಬಹುದು ಎಂದು ಅದು ಹೇಳಿದೆ.
ಕೇರಳಕ್ಕೆ ಮುಂಗಾರು ಪ್ರವೇಶ ಯಾವಾಗ?
ಈ ಬಾರಿ ಕೇರಳಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದೆ. ರಾಜ್ಯಕ್ಕೆ ಮುಂಗಾರು ಯಾವಾಗ ಆಗಮಿಸಲಿದೆ ಎಂಬ ಬಗ್ಗೆ ಹವಾಮಾನ ಇಲಾಖೆ ಇನ್ನೂ ಸ್ಪಷ್ಟವಾಗಿ ಏನೂ ಹೇಳಿಲ್ಲ. ಹವಾಮಾನ ಮುನ್ಸೂಚನೆ ನೀಡುವ ಖಾಸಗಿ ಏಜೆನ್ಸಿ ಸ್ಕೈಮೆಟ್ ವೆದರ್ ಪ್ರಕಾರ, ಜೂನ್ 8 ಅಥವಾ ಜೂನ್ 9 ರಂದು ಕೇರಳದ ಮೇಲೆ ಮಾನ್ಸೂನ್ ಪ್ರಾರಂಭವಾಗಲಿದೆ. ಮುಂಗಾರು ಆರಂಭ ಬಹಳ ಸೌಮ್ಯವಾಗಿರಲಿದೆ ಎಂದು ಪಿಟಿಐ ವರದಿ ಮಾಡಿದೆ.
ಸ್ಕೈಮೆಟ್ ವರದಿ ಪ್ರಕಾರ, ಮುಂಗಾರು ಮಳೆ ಕೇರಳವನ್ನು ಜೂನ್ 7ರಂದು ಪ್ರವೇಶಿಸಬಹುದು. ಆದರೆ ಇದು ಮೂರು ದಿನಗಳಷ್ಟು ವ್ಯತ್ಯಾಸವಾಗಲೂ ಬಹುದು. ನೈಋತ್ಯ ಮಾನ್ಸೂನ್ ಜೂನ್ 10ರೊಳಗೆ ಆಗಮಿಸುವ ಸಾಧ್ಯತೆಯಿದೆ. ಜೂನ್ ಆರಂಭದಲ್ಲಿ ಲಕ್ಷದ್ವೀಪ, ಕೇರಳ ಮತ್ತು ಕರಾವಳಿ ಕರ್ನಾಟಕದ ಮೇಲೆ ಸತತ ಎರಡು ದಿನಗಳಲ್ಲಿ ನಿಗದಿತ ಮಳೆಯ ಅಗತ್ಯವಿದೆ. ಅದರ ಪ್ರಕಾರ, ಮಳೆಯ ಹರಡುವಿಕೆ ಮತ್ತು ತೀವ್ರತೆಯು ಜೂನ್ 8 ಅಥವಾ ಜೂನ್ 9 ರಂದು ಈ ಅವಶ್ಯಕತೆಗಳಿಗೆ ಹೊಂದಿಕೆಯಾಗಬಹುದು. ಈ ವಾರ್ಷಿಕ ಮಳೆಗಾಲದ ಆರಂಭವು ಜೋರಾಗಿ ಇರಲ್ಲ. ಸೌಮ್ಯವಾಗಿ ಮಳೆಗಾಲ ಆರಂಭವಾಗಬಹುದು.
ಸಾಮಾನ್ಯ ಸಂದರ್ಭಗಳಲ್ಲಿ, ಮಾನ್ಸೂನ್ ಜೂನ್ 1 ರಂದು ಸುಮಾರು ಏಳು ದಿನಗಳ ಪ್ರಮಾಣಿತ ವಿಚಲನದೊಂದಿಗೆ ಕೇರಳದಲ್ಲಿ ಪ್ರಾರಂಭವಾಗುತ್ತದೆ. ಇದರಂತೆ, ಜೂನ್ 4 ರ ವೇಳೆಗೆ ಮಾನ್ಸೂನ್ ಕೇರಳವನ್ನು ಪ್ರವೇಶಿಸಬಹುದು ಎಂದು ಬಾರತೀಯ ಹವಾಮಾನ ಇಲಾಖೆ ಮೇ ಮಧ್ಯಭಾಗದಲ್ಲಿ ಹೇಳಿತ್ತು.
ಕಳೆದ ನಾಲ್ಕು ವರ್ಷಗಳ ಮಳೆಗಾಲ ಶುರುವಾದ ಇತಿಹಾಸ ಗಮನಿಸಿದರೆ, ಕೇರಳದಲ್ಲಿ ಮುಂಗಾರು ಬೇಗ ಆಗಮನವಾಗಿದೆ. 2022 ರಲ್ಲಿ, ಆಗ್ನೇಯ ಮಾನ್ಸೂನ್ ಮೇ 29 ರಂದು ಆಗಮಿಸಿತು. 2021ರಲ್ಲಿ, ಜೂನ್ 3 ರಂದು, 2020 ರಲ್ಲಿ ಜೂನ್ 1 ರಂದು, 2019 ರಲ್ಲಿ ಜೂನ್ 8 ರಂದು ಮತ್ತು 2018 ರಲ್ಲಿ ಮೇ 29 ರಂದು ಪ್ರವೇಶಿಸಿತ್ತು.