Opinion: ಲೋಕಸಭಾ ಚುನಾವಣೆ 2024: 543 ಸ್ಥಾನಗಳಿಗೆ ನಡೆಯುವ ಹಾವು ಏಣಿಯಾಟದಲ್ಲಿ ಯುವಜನರಿಗೆಷ್ಟು ಅವಕಾಶ ಸಿಗಬಹುದು
Mar 07, 2024 09:46 AM IST
ಮಾಜಿ ಕೇಂದ್ರ ಸಚಿವ ಡಾ.ಹರ್ಷವರ್ಧನ್ (ಎಡಚಿತ್ರ); ಸಂಸದ ಗೌತಮ್ ಗಂಭೀರ್ (ಬಲ ಚಿತ್ರ)
ಲೋಕಸಭೆ ಚುನಾವಣೆ ಸನ್ನಿಹಿತವಾಗಿದೆ. 543 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯೂ ಘೋಷಣೆಯಾಗತೊಡಗಿದೆ. ಈ ನಡುವೆ, ರಾಜಕಾರಣ ಸೇರಿ ಸಂಸದರಾಗಿದ್ದ ಕೆಲವರು ರಾಜಕೀಯ ನಿವೃತ್ತಿ ಘೋಷಿಸಿ ಮತ್ತೆ ವೃತ್ತಿಕ್ಷೇತ್ರದ ಕಡೆಗೆ ಹೆಜ್ಜೆ ಹಾಕುವಂತಾದರೆ ಮಾದರಿ ನಡೆಯಾಗಬಹುದು ಎಂದೆನಿಸಿತು.
ಲೋಕಸಭೆ ಚುನಾವಣೆಯ ಗುಂಗು ಆವರಿಸತೊಡಗಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಇನ್ನೇನು ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಪ್ರಾದೇಶಿಕ ಪಕ್ಷಗಳೂ ಅಷ್ಟೆ. ಇರುವುದೇ 543 ಹುದ್ದೆಗಳು. ಪ್ರತಿ ಐದು ವರ್ಷಗಳಿಗೆ ಒಮ್ಮೆ ಆ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದವರ ಪೈಕಿ ಒಬ್ಬರನ್ನು ಆಯ್ಕೆ ಮಾಡಬೇಕು. ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯಲ್ಪಡುವ ಈ ಪ್ರಕ್ರಿಯೆ ವಾಡಿಕೆಯಂತೆ ನಡೆಯುತ್ತ ಬಂದಿದೆ.
ಸಂಸದರಾಗಿ 8 ಸಲ, 9 ಸಲ ಹೀಗೆ ಆಯ್ಕೆಯಾದವರು ಕೂಡ ಮತ್ತೊಂದು ಅವಧಿಗೆ ಆಯ್ಕೆಯಾಗಬೇಕು ಎಂದು ಬಯಸುತ್ತಿದ್ದಾರೆ. ಅಂದರೆ 40 – 45 ವರ್ಷದಿಂದ ಆ ಕ್ಷೇತ್ರವನ್ನು ಅವರೊಬ್ಬರೇ ಪ್ರತಿನಿಧಿಸುತ್ತಿದ್ದಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಇದನ್ನೇ ಮಾದರಿಯಾಗಿ ಕಣ್ಮುಂದೆ ಇರಿಸಿಕೊಂಡವರು ಇದೇ ರೀತಿ ನಿರಂತರ ಸಂಸದರಾಗುತ್ತಲೇ ಇರಬೇಕು ಎಂದು ಬಯಸುತ್ತಿರುತ್ತಾರೆ. ಇದೆಲ್ಲವೂ ರಾಜಕಾರಣದ ಭಾಗವೇ ಆಗಿಹೋಗಿದೆ. ಆದರೆ ಇಂತಹ ರಾಜಕಾರಣದ ನಡುವೆ ಈ ಬಾರಿ ಇದಕ್ಕೆ ವ್ಯತಿರಿಕ್ತವಾದ ಕೆಲವು ವಿದ್ಯಮಾನಗಳು ನಡೆಯುತ್ತಿರುವುದನ್ನು ಗಮನಿಸಿರಬಹುದು.
ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್ (ಪೂರ್ವ ದೆಹಲಿ ಲೋಕಸಭಾ ಕ್ಷೇತ್ರ) ರಾಜಕೀಯ ನಿವೃತ್ತಿ ಘೋಷಿಸಿದರು. ಮತ್ತೆ ಕ್ರಿಕೆಟಿನ ಕಡೆಗೆ ಗಮನಹರಿಸುವುದಾಗಿ ಹೇಳಿದರು. ಹಾಗಂತ ಅವರೇನೂ ಎರಡು ಅಥವಾ ಮೂರು ಅವಧಿಗೆ ಸಂಸದರಾಗಿದ್ದವರಲ್ಲ. 2019ರ ಚುನಾವಣೆಯಲ್ಲಿ ಗೆದ್ದು ಸಂಸದರಾದವರು. ಈ ಅವಧಿ ಮುಗಿಯುತ್ತಿದ್ದಂತೆ ರಾಜಕಾರಣದಿಂದ ತಮ್ಮ ವೃತ್ತಿಗೆ ಹಿಂದಿರುಗುತ್ತಿದ್ದಾರೆ.
ಇಎನ್‌ಟಿ ವೈದ್ಯ, ಮಾಜಿ ಆರೋಗ್ಯ ಸಚಿವ, ಹಾಲಿ ಸಂಸದ ಡಾ.ಹರ್ಷವರ್ಧನ್ (ಚಾಂದಿನಿ ಚೌಕ್) ಕೂಡ ರಾಜಕೀಯ ನಿವೃತ್ತಿ ಘೋಷಿಸಿದರು. ಕೋವಿಡ್ ಸಂಕಷ್ಟ ಬಂದಾಗ ದೇಶದ ಆರೋಗ್ಯದ ಕಡೆಗೆ ನಿಗಾವಹಿಸಿದ, ಆಯುರ್ವೇದಕ್ಕೆ ಪ್ರಾಮುಖ್ಯತೆ ಒದಗಿಸಿದ ಕೀರ್ತಿ ಅವರದ್ದು. ಅವರೂ ಅಷ್ಟೇ ಐದಾರು ಅವಧಿಗೆ ಸಂಸದರಾಗಿದ್ದವರಲ್ಲ. 2014ರಲ್ಲಿ ಸಂಸದರಾದರು. ಎರಡನೇ ಅವಧಿ ಮುಗಿಸಿ, ರಾಜಕೀಯ ನಿವೃತ್ತಿ ಘೋಷಿಸಿದರು.
ಮಾಜಿ ಸಚಿವ, ಹಾಲಿ ಸಂಸದ ಜಯಂತ್ ಸಿನ್ಹಾ (ಹಜಾರಿಬಾಘ್) ಅವರು ಕೂಡ ಚುನಾವಣಾ ರಾಜಕೀಯದಿಂದ ದೂರಾಗುವುದಾಗಿ ಘೋಷಿಸಿದರು. ಜಯಂತ್ ಸಿನ್ಹಾ ಕಳೆದ ಲೋಕಸಭಾ ಚುನಾವಣೆ (2019) ಯಲ್ಲಿ ದಾಖಲೆ ಮತಗಳನ್ನು ಗಳಿಸಿ ಗೆಲುವು ಕಂಡವರು. ಹಜಾರಿಬಾಘ್‌ನ 10,70,929 ಮತಗಳ ಪೈಕಿ 7,28,798 ಮತಗಳನ್ನು ಅವರು ಗಳಿಸಿದ್ದರು.
ಇವರ ರಾಜಕೀಯ ನಡೆಯ ವಿಚಾರವಾಗಿರುವ ಸಾಮಾನ್ಯ ರಾಜಕಾರಣದ ಟೀಕೆ ಟಿಪ್ಪಣಿಗಳನ್ನು ಬಿಟ್ಟುಬಿಡೋಣ. ಲೋಕಸಭೆ ಚುನಾವಣೆ ಬಂತು. ಈಗಾಗಲೇ ಹೇಳಿದ ಹಾಗೆ ಇರುವುದೇ 543 ಸ್ಥಾನ. ಆಕಾಂಕ್ಷಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ಎಲ್ಲರಿಗೂ ಅಲ್ಲದೇ ಹೋದರೂ ಕೆಲವರಿಗಾದರೂ ಅವಕಾಶ ಸಿಗಬೇಕಲ್ಲ… ಹಾಗೆ ಈ ವಿದ್ಯಮಾನಗಳನ್ನು ಗಮನಿಸಿದಾಗ ಮೂಡಿದ ಆಲೋಚನೆಗಳಿವು..
ಲೋಕಸಭೆ ಚುನಾವಣೆ; ಯುವಜನ ಕೇಂದ್ರಿತವಾಗಿ ಮೂಡಿದ 5 ಆಲೋಚನೆಗಳಿವು
1) ಅರೆ ಎಷ್ಟು ಚೆಂದದ ನಿರ್ಧಾರ. ರಾಜಕಾರಣಕ್ಕೆ ಬಂದರು. ತಮ್ಮ ಕೆಲಸ ಮುಗಿಯಿತು ಎನ್ನುವ ಭಾವನೆ ಮನಸ್ಸಿಗೆ ಮೂಡಿದ ತತ್‌ಕ್ಷಣ, ನಮ್ಮ ವೃತ್ತಿಕ್ಷೇತ್ರದ ಕಡೆಗೆ ಗಮನಹರಿಸುತ್ತೇವೆ. ಚುನಾವಣಾ ರಾಜಕಾರಣದಿಂದ ಮುಕ್ತಗೊಳಿಸಿ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡು ಹೊರಟೇ ಬಿಟ್ಟರು ಈ ವೃತ್ತಿಪರರು. ಬಹುಶಃ ವೃತ್ತಿಪರರು ರಾಜಕಾರಣಕ್ಕೆ ಬಂದರೆ ಹೀಗೆಯೇ ಇರುತ್ತದೇನೋ.. ಮತ್ತೊಂದು ಅವಧಿಗೆ ನಾನೇ ಸಂಸದನಾಗಬೇಕು, ನಾನೇ ಸಚಿವನಾಗಬೇಕು ಎಂಬ ತುಡಿತದ ಬದಲು, ನನ್ನಂತೆ ಇನ್ನೂ ಒಂದಷ್ಟು ವೃತ್ತಿಪರರು ಬಂದು ದೇಶಕಾರ್ಯ ಮಾಡಲಿ ಎಂಬ ಸದಾಶಯ ಬರುತ್ತದೇನೋ.. ಸಾಮಾನ್ಯ ರಾಜಕಾರಣಿಗಳಾಗಿದ್ದರೆ, ಇದ್ದರೆ ನನಗೆ ಟಿಕೆಟ್ ಕೊಡುವುದಿಲ್ಲ ಅಲ್ವ, ನಾನು ಕಾಂಗ್ರೆಸ್ ಸೇರುತ್ತೇನೆ, ಬಿಜೆಪಿ ಸೇರುತ್ತೇನೆ, ಜೆಡಿಎಸ್ ಸೇರುತ್ತೇನೆ ಎಂದು ಪಕ್ಷಾಂತರ ಮಾಡುತ್ತ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದರೇನೋ…
2) ಎರಡು ಅವಧಿ ಆಯಿತು, ಮೂರನೇಯದ್ದೂ ಆಯಿತು. ಈ ಬಾರಿಯೂ ನನಗೇ ಟಿಕೆಟ್. ಪಕ್ಷದ ವರಿಷ್ಠರು ಈಗಾಗಲೇ ಹೇಳಿದ್ದಾರೆ ಎಂದು ಹೇಳುತ್ತ ತಿರುಗಾಡುತ್ತಿರುವ ಹಾಲಿ ಸಂಸದರನ್ನೂ ಜನ ಗಮನಿಸಿದ್ದಾರೆ. ಅವರಿಗೆಲ್ಲ ಗೌತಮ್ ಗಂಭೀರ್, ಜಯಂತ್ ಸಿನ್ಹಾ, ಡಾ.ಹರ್ಷವರ್ಧನ್ ಅವರು ಆದರ್ಶ ಯಾಕೆ ಆಗಲ್ಲ? ತಮ್ಮದು ಎನ್ನುವ ವೃತ್ತಿಕ್ಷೇತ್ರದಲ್ಲಿ ಯಾಕೆ ಮುಂದುವರಿಯಬಾರದು? ಹಳೆಯ ನೀರು ಹೋಗಿ ಹೊಸ ನೀರು ಬರಬೇಕಲ್ಲವೇ, ನೀರು ನಿಂತರೆ ಕೊಳಚೆಯಾಗಿಬಿಡುತ್ತದೆ. ವ್ಯವಸ್ಥೆಯಲ್ಲೂ ಅಷ್ಟೇ. ಹತ್ತಾರು ವರ್ಷ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಅದದೇ ವ್ಯಕ್ತಿಗಳಿದ್ದರೂ ಅದುವೇ ಆಗುತ್ತದೆ. ಹೀಗಾಗಿ ಸ್ವವಿವೇಚನೆಯನ್ನು ಇಂತಹ ಸಂಸದರೇಕೆ ಬೆಳೆಸಿಕೊಳ್ಳುತ್ತಿಲ್ಲ. ದೇಶದ ಹಿತದ ಕಡೆಗೇಕೆ ಗಮನಹರಿಸಬಾರದು.. ತಾನೂ ಒಬ್ಬ ಕಾರ್ಯಕರ್ತನಾಗಿದ್ದೆ. ಈಗಾಗಲೇ ಎರಡು ಅಥವಾ ಮೂರು ಅವಧಿಗೆ ಸಂಸದನಾಗಿದ್ದೇನೆ. ಇನ್ನೊಂದು ಅವಧಿಗೆ ಬೇಡ. ತನ್ನಂತೆಯೇ ಇರುವ ಬೇರೆ ಕಾರ್ಯಕರ್ತನಿಗೆ ಅವಕಾಶ ಸಿಗಲಿ ಎಂದು ಸಂಸದ ಸ್ಥಾನ ಬಿಟ್ಟುಕೊಡಬಾರದೇಕೆ?
3) ಒಂದು ಲೋಕಸಭಾ ಕ್ಷೇತ್ರವನ್ನು 3,4,5,6,7,8 ಹೀಗೆ ಜೀವಿತಾವಧಿಗೆ ಸ್ಪರ್ಧಿಸಿ ಗೆಲ್ಲುವ ರಾಜಕಾರಣಿಗಳು ಹೊಸತಲೆಮಾರಿಗೆ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಯಾಕೆ ಕೊಡಲ್ಲ?. ಹಾಗಂತ ಅವರ ಮಗನಿಗೋ, ಸಂಬಂಧಿಕನಿಗೋ ಟಿಕೆಟ್ ಕೊಟ್ಟು ಕಣಕ್ಕೆ ಇಳಿಸಲಿ ಎಂದಲ್ಲ. ಸ್ವಂತ ಸಂಘಟನಾ ಬಲದಿಂದ ಕ್ಷೇತ್ರದಲ್ಲೊಂದು ವರ್ಚಸ್ಸು ಬೆಳೆಸಿಕೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಗೆಲುವು ಸಾಧಿಸುವುದು ಒಂದು ಕಡೆ. ಪಕ್ಷದ ಮತ ಬ್ಯಾಂಕ್ ಬಳಸಿಕೊಂಡು ಜೀವಿತಾವಧಿಗೆ ಟಿಕೆಟ್ ಬಯಸುವ ರಾಜಕಾರಣಿಗಳಿಗೂ ವಿವೇಚನೆ ಬೇಕಲ್ಲವೆ? ತನ್ನಂತೆಯೇ ಇನ್ನೂ ಒಂದಷ್ಟು ಯುವ ಕಾರ್ಯಕರ್ತರಿದ್ದಾರೆ. ಅವರಿಗೂ ಅವಕಾಶ ಸಿಗಲಿ. ಅವರ ಪ್ರತಿಭೆಯೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂಬ ವಿವೇಚನೆ ಇರಬೇಕಲ್ಲವೆ?
4) ಪಕ್ಷಾತೀತವಾಗಿ ಅರ್ಹರನ್ನು ಆಯ್ಕೆ ಮಾಡಬೇಕು ಎಂಬುದು ಆದರ್ಶವಾದ. ಅದು ಕೂಡ ವಿಸ್ತೃತ ಚರ್ಚೆಗೆ ಎಡೆಮಾಡುವ ವಿಚಾರ. ಅದು ಸದ್ಯ ಒತ್ತಟ್ಟಿಗಿರಲಿ. ಈ ವಿಚಾರದ ಕಡೆಗೆ ಗಮನಹರಿಸೋಣ. ಯಾರನ್ನು ನಿಲ್ಲಿಸಿದರೂ ಪಕ್ಷ ನಿಷ್ಠ ಮತದಾರರು ಮತಹಾಕಿ ಗೆಲ್ಲಿಸಿಯೇ ಗೆಲ್ಲಿಸುತ್ತಾರೆ ಎಂಬ ವಿಶ್ವಾಸದೊಂದಿಗೆ ಮೂರನೇ ಅವಧಿಗೆ, ನಾಲ್ಕನೇ ಅವಧಿಗೆ ಎಂದು ಅದದೇ ರಾಜಕಾರಣಿಯನ್ನು ಕಣಕ್ಕಿಳಿಸುವುದು ಯಾಕೆ? ಇದು ಕಾಂಗ್ರೆಸ್ ಇರಬಹುದು, ಬಿಜೆಪಿ ಇರಬಹುದು, ಜೆಡಿಎಸ್ ಇರಬಹುದು ಅಥವಾ ಇನ್ಯಾವುದೇ ಪಕ್ಷ ಇರಬಹುದು. ಎಲ್ಲ ಕಡೆಯೂ ಒಂದೇ. ಹೀಗಿರುವಾಗ ಪಕ್ಷದ ವ್ಯವಸ್ಥೆಯನ್ನು ಮುನ್ನಡೆಸುವವರ ವಿವೇಚನೆ ಯಾರದ್ದಾದರೂ ಸ್ವಾರ್ಥ ಹಿತಾಸಕ್ತಿಗೆ ತಲೆಬಾಗುತ್ತಿದೆಯೇ? ಆಯಾ ಕ್ಷೇತ್ರದಲ್ಲಿ ಪಕ್ಷ ನಿಷ್ಠೆ ತೋರಿ ಕೆಲಸ ಮಾಡುವ ಕಾರ್ಯಕರ್ತರು ಕೂಡ ಇದ್ದಾರೆ. ಅವರಿಗೂ ಒಂದು ಅವಕಾಶ ಕೊಡಬೇಕು ಎನ್ನುವ ವಿವೇಚನೆ ಯಾಕೆ ಬಳಸುವುದಿಲ್ಲ. ಪಕ್ಷ ನಿಷ್ಠ ಮತದಾರರು ಇರುವಲ್ಲಿ ಪ್ರತಿ 5 ವರ್ಷಕ್ಕೆ ಒಮ್ಮೆ ಹೊಸಬರಿಗೆ ಯಾಕೆ ಅವಕಾಶ ಕೊಡಬಾರದು?
5) ಹಿಂದೆಲ್ಲ ಅರಸುತನ ಪರಂಪರಾಗತವಾಗಿ ಬರುತ್ತಿತ್ತು. ಹಾಗೆಯೇ ಈಗ ಸಂಸದ ಸ್ಥಾನವೂ. ಕೆಲವೊಂದು ಕ್ಷೇತ್ರಗಳಲ್ಲಿ ನಾಲ್ಕಾರು ದಶಕಗಳಿಂದ ಒಬ್ಬನೇ ಅಥವಾ ಅವರ ಕುಟುಂಬದವರೇ ಸಂಸದರಾಗಿ ಮುಂದುವರಿದಿದ್ಧಾರೆ. ಅರಸುತನ ಆನುವಂಶಿಕವಾಗಿ ಬಂದರೆ, ಇದು ಅದರ ಇನ್ನೊಂದು ರೂಪ ಎಂದು ಹೇಳಬಹುದೇನೊ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡ ಹಾಗೆ. ಇಂತಹ ಸಂಸದರು ಕೂಡ ತಮ್ಮ ಕ್ಷೇತ್ರದಲ್ಲಿ ಯುವ ತಲೆಮಾರು ಇದೆ, ತನಗಾಗಿ ಪಕ್ಷ ನಿಷ್ಠೆಯೊಂದಿಗೆ ದುಡಿದ ಕಾರ್ಯಕರ್ತರಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹೊಸಬರಿಗೆ ಅವಕಾಶ ಮಾಡಿಕೊಡಬೇಕಾದ ಸಂದರ್ಭದ ಇದು. ಪಕ್ಷ ನಿಷ್ಠೆ ತೋರುತ್ತ ತಮಗೂ ಒಂದು ಅವಕಾಶ ಸಿಗಬಹುದು ಎಂದು ಕಾಯುತ್ತಿರುವ ಅನೇಕ ಯುವಜನರು ಮಧ್ಯ ವಯಸ್ಸು ದಾಟಿ ನಿವೃತ್ತಿ ವಯಸ್ಸಿನ ಅಂಚು ತಲುಪಿದ್ದಾರೆ. ಅವರಿಗೂ ಒಂದು ಅವಕಾಶ ಸಿಗಲಿ, ಕ್ಷೇತ್ರದ ಅಭಿವೃದ್ಧಿಗೆ ಅವರ ಚಿಂತನೆಗಳು, ಆಲೋಚನೆಗಳೂ ಹರಿದು ಬರಲಿ ಎಂದು ಆಶಿಸುವುದು ತಪ್ಪೇ?
ಬಯಸುವುದು ಇಷ್ಟೇ
ಭಾರತದಲ್ಲಿ 96 ಕೋಟಿ ಮತದಾರರು ಇದ್ದಾರೆ. ಅವರಲ್ಲಿ ರಾಜಕಾರಣದಲ್ಲಿ ಸಕ್ರಿಯವಾಗಿರುವ ಕೋಟ್ಯಂತರ ಜನರೂ ಇದ್ದಾರೆ. ಪಕ್ಷವೇ ಮುಖ್ಯ, ನಾಯಕತ್ವವೇ ಮುಖ್ಯ ಎನ್ನುತ್ತ ಅದದೇ ಮುಖಗಳನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಹಲವರದ್ದು. ಅದನ್ನೇ ಅವರ ದೌರ್ಬಲ್ಯ ಎಂದು ಪರಿಗಣಿಸದೇ ಆಯಾ ಕ್ಷೇತ್ರದಲ್ಲಿ ಹೊಸಬರಿಗೂ ಅವಕಾಶಕೊಡಬೇಕು. ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಿಲ್ಲ. ಕ್ಷೇತ್ರವನ್ನು ಪ್ರತಿನಿಧಿಸುವ ವಿಚಾರದಲ್ಲಿ ಗಮನಿಸಬೇಕಾದ ಅಂಶಗಳ ಕಡೆಗೆ ಗಮನಸೆಳೆಯುವ ಪ್ರಯತ್ನ ಇದು. ಪಕ್ಷದ ಮತ ಬ್ಯಾಂಕ್ ಭದ್ರವಾಗಿರುವ ಕಡೆ ಪ್ರತಿ 5 ವರ್ಷಕ್ಕೊಮ್ಮೆ ಅಭ್ಯರ್ಥಿ ಬದಲಾಗುವಂತೆ ಇದ್ದರೆ ಚೆನ್ನ. ಆಗ ಸಿಕ್ಕುವ 5 ವರ್ಷದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುವುದಕ್ಕೆ ಸಂಸದರಾದವರು ಪ್ರಯತ್ನಿಸಿಯಾರು. ಮತದಾರರಿಗೂ, ಪಕ್ಷದ ಕಾರ್ಯಕರ್ತರಿಗೂ ಒಂದಷ್ಟು ನೆಮ್ಮದಿ ಸಿಕ್ಕೀತು ಎಂಬ ಸದಾಶಯ.
ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ, HTಕನ್ನಡ
(ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)