logo
ಕನ್ನಡ ಸುದ್ದಿ  /  ಕ್ರೀಡೆ  /  Gt Vs Mi Qualifier 2: ಶುಭ್ಮನ್ ಗಿಲ್ ದಾಖಲೆಯ ಶತಕ, ದಿಕ್ಕಾಪಾಲಾದ ಮುಂಬೈ ಇಂಡಿಯನ್ಸ್​; ಬೃಹತ್ ಮೊತ್ತ ಕಲೆ ಹಾಕಿದ ಗುಜರಾತ್

GT vs MI Qualifier 2: ಶುಭ್ಮನ್ ಗಿಲ್ ದಾಖಲೆಯ ಶತಕ, ದಿಕ್ಕಾಪಾಲಾದ ಮುಂಬೈ ಇಂಡಿಯನ್ಸ್​; ಬೃಹತ್ ಮೊತ್ತ ಕಲೆ ಹಾಕಿದ ಗುಜರಾತ್

Prasanna Kumar P N HT Kannada

May 26, 2023 10:08 PM IST

google News

ಶತಕ ಸಿಡಿಸಿದ ಶುಭ್​ಮನ್ ಗಿಲ್

    • ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯಕ್ಕೆ ಹಾಜರಾಗಿದ್ದ ಅಭಿಮಾನಿಗಳಿಗೆ ಅಕ್ಷರಶಃ ಮನರಂಜನೆ ಸಿಕ್ಕಿತು. ಗುಜರಾತ್​ ತಂಡವು, ಮುಂಬೈ ಇಂಡಿಯನ್ಸ್​ಗೆ 234 ರನ್​ಗಳ ಗುರಿ ನೀಡಿದೆ.
ಶತಕ ಸಿಡಿಸಿದ ಶುಭ್​ಮನ್ ಗಿಲ್
ಶತಕ ಸಿಡಿಸಿದ ಶುಭ್​ಮನ್ ಗಿಲ್ (IPL Twitter)

ಭಾರತದ ಯಂಗ್​ ಸೆನ್​ಸೇಷನ್​ ಬ್ಯಾಟರ್​ ಶುಭ್ಮನ್​ ಗಿಲ್​, ಆಕ್ರಮಣಕಾರಿ ಶತಕದ ನೆರವಿನಿಂದ ಗುಜರಾತ್​ ಟೈಟಾನ್ಸ್​​ ಬೃಹತ್​ ಮೊತ್ತ ಕಲೆ ಹಾಕಿದೆ. ಮುಂಬೈ ಇಂಡಿಯನ್ಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ ಗಿಲ್​, ಬೌಂಡರಿ-ಸಿಕ್ಸರ್​​ಗಳ ಸುರಿಮಳೆಗೈದರು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯಕ್ಕೆ ಹಾಜರಾಗಿದ್ದ ಅಭಿಮಾನಿಗಳಿಗೆ ಅಕ್ಷರಶಃ ಮನರಂಜನೆ ಸಿಕ್ಕಿತು. ಗುಜರಾತ್​ ತಂಡವು, ಮುಂಬೈ ಇಂಡಿಯನ್ಸ್​ಗೆ 234 ರನ್​ಗಳ ಗುರಿ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಗುಜರಾತ್​ ಟೈಟಾನ್ಸ್​, ಭರ್ಜರಿ ಆರಂಭ ಪಡೆಯಿತು. ಇನ್ನಿಂಗ್ಸ್​ ಆರಂಭಿಸಿದ ವೃದ್ಧಿಮಾನ್​ ಸಾಹ ಮಿಂಚುವ ಭರವಸೆ ಮೂಡಿಸಿದರಾದರೂ, ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 16 ಎಸೆತಗಳಲ್ಲಿ 18 ರನ್​ಗಳಿಸಿ ಪಿಯೂಷ್​ ಚಾವ್ಲಾ ಬೌಲಿಂಗ್​ನಲ್ಲಿ ಸ್ಟಂಪ್​ ಆದರು. ಆಗ ಗುಜರಾತ್​ ತಂಡದ ಮೊತ್ತ 54 ರನ್​ ಆಗಿತ್ತು. ಈ ಹಂತದಲ್ಲಿ ಮೇಲುಗೈ ಸಾಧಿಸಿದ ಮುಂಬೈ ಬೌಲರ್​ಗಳು ನಂತರ ಶುಭ್ಮಮನ್​ ಗಿಲ್​ ಆರ್ಭಟಕ್ಕೆ ದಿಕ್ಕಾಪಾಲಾದರು.

ಗಿಲ್​ ಆರ್ಭಟಕ್ಕೆ ಬೆಚ್ಚಿದ ಮುಂಬೈ

ಸಾಹ ಔಟಾದಾಗ ಗುಜರಾತ್​ ವಿರುದ್ಧ ಮುಂಬೈ ತಿರುಗಿ ಬೀಳುವ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಇದೆಲ್ಲವನ್ನೂ ಶುಭ್ಮನ್​ ಗಿಲ್​​ ಉಲ್ಟಾ ಮಾಡಿಬಿಟ್ಟರು. ಬೌಲರ್​​ಗಳ ತಂತ್ರಗಳೆಲ್ಲವನ್ನೂ ತಲೆಕೆಳಗೆ ಮಾಡಿಬಿಟ್ಟರು. ಬೌಲರ್​ಗಳ ಸವಾರಿ ಮಾಡಿದ ಗಿಲ್​​ ತಂಡದ ಮೊತ್ತವನ್ನು ಒಂದೇ ಸಮನೆ ಏರಿಸಿದರು. ಒಂದೆಡೆ ಶುಭ್ಮನ್​ ಆರ್ಭಟಿಸುತ್ತಿದ್ದರೆ, ಮತ್ತೊಂದೆಡೆ ಸಾಯಿ ಸುದರ್ಶನ್, ಗಿಲ್​ಗೆ ಅದ್ಭುತ ಸಾಥ್​ ನೀಡಿದರು. ನೋಡ ನೋಡುತ್ತಲ್ಲೇ ಇಬ್ಬರು ಅರ್ಧಶತಕ, ಶತಕದ ಜೊತೆಯಾಡಿದರು. ಈ ಜೋಡಿ 64 ಎಸೆತಗಳಲ್ಲಿ 138 ರನ್ ಕಲೆ ಹಾಕಿತು.

ದಾಖಲೆಯ ಶತಕ ಸಿಡಿಸಿದ ಗಿಲ್​

ಮುಂಬೈ ಬೌಲರ್​ಗಳಿಗೆ ಬೆಂಡೆತ್ತಿದ ಪಂಜಾಜ್​ ಪುತ್ತರ್​​, 16ನೇ ಆವೃತ್ತಿಯ ಐಪಿಎಲ್​ನ ಮಹತ್ವದ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿದರು. ಇದು ಈ ಐಪಿಎಲ್​​ನಲ್ಲಿ ಗಿಲ್​ ಬಾರಿಸಿದ 3ನೇ ಶತಕವಾಗಿದೆ. ಲೀಗ್​ ಹಂತದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ವಿರುದ್ಧ ನೂರರ ಗಡಿ ದಾಟಿದ್ದರು. ಇದೀಗ ಭರ್ಜರಿ ಶತಕದ ಮೂಲಕ ದಾಖಲೆ ಬರೆದಿದ್ದಾರೆ. 2 ಶತಕ ಸಿಡಿಸಿದ್ದ ವಿರಾಟ್​ ಕೊಹ್ಲಿ ದಾಖಲೆ ಮುರಿದಿದ್ದಾರೆ.

ಕೊನೆಗೂ ಔಟಾದ ಆರಂಭಿಕ ಆಟಗಾರ

ಬೌಲರ್​ಗಳಿಗೆ ಮನಬಂದಂತೆ ದಂಡಿಸಿದ ಬಲಗೈ ಆಟಗಾರ, ಅಕ್ಷರಶಃ ಮುಂಬೈ ಮೇಲೆ ಸವಾರಿ ಮಾಡಿದರು. 60 ಎಸೆತಗಳಲ್ಲಿ 10 ಸಿಕ್ಸರ್​, 7 ಬೌಂಡರಿಗಳ ಸಹಾಯದಿಂದ 129 ರನ್​ ಗಳಿಸಿದರು. ಆಕಾಶ್​ ಮಧ್ವಾಲ್​ ಬೌಲಿಂಗ್​ನಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಅರ್ಧಶತಕದ ಅಂಚಿನಲ್ಲಿದ್ದ ಸಾಯಿ ಸುದರ್ಶನ್​ ಕೂಡ ಔಟಾದರು. 31 ಎಸೆತಗಳಲ್ಲಿ 43 ರನ್​ ಬಾರಿಸಿದರು.

ಬೃಹತ್​ ಮೊತ್ತ

ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್​ ಪಾಂಡ್ಯ, 13 ಎಸೆತಗಳಲ್ಲಿ ಅಜೇಯ 28 ರನ್​ ಚಚ್ಚಿದರು. ರಶೀದ್​ ಖಾನ್​ ಅಜೇಯ 5 ರನ್ ಗಳಿಸಿದರು. ಅಂತಿಮವಾಗಿ ಗುಜರಾತ್​ ಟೈಟಾನ್ಸ್​ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 233 ರನ್ ಗಳಿಸಿತು.

ಆರೆಂಜ್​ ಕ್ಯಾಪ್​ ವಶಪಡಿಸಿಕೊಂಡ ಶುಭ್ಮನ್​

ಆರ್​ಸಿಬಿ ಕ್ಯಾಪ್ಟನ್​ ಫಾಫ್ ಡು ಪ್ಲೆಸಿಸ್​ ಬಳಿಯಿದ್ದ ಆರೆಂಜ್​ ಕ್ಯಾಪ್​ ಅನ್ನು ಗಿಲ್​ ತಾನು ವಶಪಡಿಸಿಕೊಂಡಿದ್ದಾರೆ. ಡು ಪ್ಲೆಸಿಸ್ ಈ ಟೂರ್ನಿಯಲ್ಲಿ 730 ರನ್​ ಗಳಿಸಿದ್ದರು. ಶತಕ ಇನ್ನಿಂಗ್ಸ್​ಗೂ ಮುನ್ನ ಗಿಲ್​, 722 ರನ್​ ಗಳಿಸಿದ್ದರು. ಈ ಪಂದ್ಯದಲ್ಲಿ 9 ರನ್​ ಗಳಿಸಿದ್ದಾಗ ಆರೆಂಜ್​ ಕ್ಯಾಪ್​ ಅನ್ನು ಸ್ವಂತವಾಗಿಸಿಕೊಂಡಿದ್ದಾರೆ. ಸದ್ಯ ಗಿಲ್​ 16 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ 851 ರನ್​ ಗಳಿಸಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ