WTC final: ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಆಟಗಾರರು ಮತ್ತು ಅಂಪೈರ್‌ಗಳು ಕಪ್ಪುಪಟ್ಟಿ ಧರಿಸಿದ್ದೇಕೆ
Jun 07, 2023 04:32 PM IST
ಭಾರತ ತಂಡ
- India vs Australia: ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರು ಮತ್ತು ಅಂಪೈರ್‌ಗಳು ಕಪ್ಪು ಪಟ್ಟಿಯನ್ನು ಧರಿಸಿ ಮೈದಾನ್ಕಕಿಳಿದಿದ್ದಾರೆ.
ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship final) ಪಂದ್ಯ ಆರಂಭಗೊಂಡಿದೆ. ಟಾಸ್ ಸೋತ ಆಸ್ಟ್ರೇಲಿಯಾ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಆಟಗಾರರು ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಇವರೊಂದಿಗೆ ಪಂದ್ಯದ ಅಂಪೈರ್‌ಗಳು ಕೂಡಾ ಇದೇ ನಡೆ ಅನುಸರಿಸಿದ್ದಾರೆ. ಇದರ ಹಿಂದೆ ಸದುದ್ದೇಶವಿದೆ.
ಇತ್ತೀಚೆಗಷ್ಟೇ ಓಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಿಂದಾಗಿ ನೂರಾರು ಜನರು ಸಾವನ್ನಪ್ಪಿದರು. ರೈಲು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ, ಶೋಕಾಚರಣೆಯ ಸಂಕೇತವಾಗಿ ಭಾರತ ಮತ್ತು ಆಸ್ಟ್ರೇಲಿಯಾದ ಆಟಗಾರರು ಇಂದು ಕಪ್ಪುಪಟ್ಟಿ ಧರಿಸಿ ಆಡುತ್ತಿದ್ದಾರೆ. ಪಂದ್ಯ ಆರಂಭವಾಗುವುದಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸುವ ಮೂಲಕ ಉಭಯ ತಂಡದ ಆಟಗಾರರು ಮಡಿದವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿದರು.
ಲಂಡನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆಟಗಾರರು ಮೈದಾನಕ್ಕಿಳಿಯುತ್ತಿದ್ದಂತೆ, ಶೋಕಾಚರಣೆಯ ಸಂಕೇತವಾಗಿ ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿದ್ದಾರೆ. ಭಾರತ ಮಾತ್ರವಲ್ಲದೆ ಆಸೀಸ್ ಆಟಗಾರರು ಹಾಗೂ ಅಂಪೈರ್‌ಗಳು ಕೂಡಾ ಕಪ್ಪು ಪಟ್ಟಿ ಧರಿಸಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಒಡಿಶಾದಲ್ಲಿ ನಡೆದ ಭೀಕರ ದುರಂತದಿಂದಾಗಿ 288 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಸುಮಾರು 1000 ಮಂದಿ ಗಾಯಗೊಂಡಿದ್ದಾರೆ. ಇದು ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾಗಿದೆ.
ಮೈದಾನದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಭಾವುಕರಾಗಿರುವುದು ಕಂಡುಬಂತು.
“ಭಾರತ ತಂಡವು ದುರಂತಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ. ದುರಂತದಿಂದ ಪ್ರಾಣ ಕಳೆದುಕೊಂಡವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತದೆ. ಶೋಕಾಚರಣೆಯ ಸಂಕೇತವಾಗಿ, ಟೀಮ್ ಇಂಡಿಯಾ ಆಟಗಾರರು ಇಂದು ಕಪ್ಪು ಪಟ್ಟಿ ಧರಿಸಲಿದೆ” ಎಂದು ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ನಾಲ್ವರು ವೇಗಿಗಳಿಗೆ ಮಣೆ ಹಾಕಲಾಗಿದ್ದು, ಜಡೇಜಾ ಒಬ್ಬರೇ ಸ್ಪಿನ್ನರ್ ಪಾತ್ರ ನಿಭಾಯಿಸಲಿದ್ದಾರೆ. ಅನುಭವಿ ಸ್ಪಿನ್ನರ್ ಅಶ್ವಿನ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಮೊಹಮ್ಮದ್ ಶಮಿ, ಸಿರಾಜ್, ಉಮೇಶ್ ಯಾದವ್ ಹಾಗೂ ಶಾರ್ದುಲ್ ಠಾಕೂರ್ ತಂಡದಲ್ಲಿದ್ದಾರೆ. ಇದೇ ವೇಳೆ ಶ್ರೀಕರ್ ಭರತ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.
ಆಸ್ಟ್ರೇಲಿಯಾ ಇನ್ನಿಂಗ್ಸ್‌ನ ಮೂರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಉಸ್ಮಾನ್ ಖವಾಜಾ ಡಕೌಟ್ ಆಗಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟಿದ್ದಾರೆ. ಆದರೆ, ಆ ಬಳಿಕ ಡೇವಿಡ್ ವಾರ್ನರ್ ಹಾಗೂ ಲ್ಯಾಬುಶೆನ್ ಅರ್ಧಶತಕದ ಜೊತೆಯಾಟವಾಡಿದ್ದಾರೆ.
ಭಾರತ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಆಡುವ ಬಳಗ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೆನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.