WTC Final 2023: ಮಹತ್ವದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ತಂಡದಲ್ಲಿ ನಾಲ್ವರು ವೇಗಿಗಳಿಗೆ ಮಣೆ
Jun 07, 2023 02:43 PM IST
ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್
- World Test Championship final: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಮ್ ಇಂಡಿಯಾ ಎದುರಿಸುತ್ತಿದೆ. ಪ್ರಶಸ್ತಿ ಸುತ್ತಿನ ಹೋರಾಟದ ಪಂದ್ಯಕ್ಕೆ ಇಂಗ್ಲೆಂಡ್ ರಾಜಧಾನಿ ಲಂಡನ್ನ ದಿ ಓವಲ್ ಮೈದಾನ ಆತಿಥ್ಯ ವಹಿಸುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (World Test Championship Final 2023) ಪಂದ್ಯದಲ್ಲಿ ಹೋರಾಡಲು ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು (India vs Australia) ಸಿದ್ಧವಾಗಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ ತಂಡದಲ್ಲಿ ನಾಲ್ವರು ವೇಗಿಗಳಿಗೆ ಮಣೆ ಹಾಕಲಾಗಿದ್ದು, ಜಡೇಜಾ ಒಬ್ಬರೇ ಸ್ಪಿನ್ನರ್ ಪಾತ್ರ ನಿಭಾಯಿಸಲಿದ್ದಾರೆ. ಅನುಭವಿ ಸ್ಪಿನ್ನರ್ ಅಶ್ವಿನ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಮೊಹಮ್ಮದ್ ಶಮಿ, ಸಿರಾಜ್, ಉಮೇಶ್ ಯಾದವ್ ಹಾಗೂ ಶಾರ್ದುಲ್ ಠಾಕೂರ್ ತಂಡದಲ್ಲಿದ್ದಾರೆ. ಇದೇ ವೇಳೆ ಶ್ರೀಕರ್ ಭರತ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.
ಬರೋಬ್ಬರಿ 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸಿನಲ್ಲಿರುವ ಭಾರತಕ್ಕೆ, ಬಲಿಷ್ಠ ಆಸ್ಟ್ರೇಲಿಯಾ ಸುಲಭ ತುತ್ತಾಗುವ ಸಾಧ್ಯತೆ ಇಲ್ಲ. ಕಳೆದ ಆವೃತ್ತಿಯ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾ, ಈ ಬಾರಿ ಹೊಸ ನಾಯಕ ಹಾಗೂ ಹೊಸ ಕೋಚ್ ಬಳಗದೊಂದಿಗೆ ಹೊಸ ಸವಾಲು ಎದುರಿಸುತ್ತಿದೆ.
ಇಂಗ್ಲೆಂಡ್ನ ವೇಗದ ಬೌಲಿಂಗ್ ಸ್ನೇಹಿ ಪಿಚ್ ಆಸಿಸ್ಗೆ ಹೆಚ್ಚು ನೆರವಾಗಲಿದೆ. ಆದರೆ, ಭಾರತ ಕೂಡಾ ಯಾವುದೇ ನೆಲದಲ್ಲಿ ಬಲಿಷ್ಠವಾಗಿದೆ. ಆಸಿಸ್ ಪ್ರವಾಸ ವೇಳೆಯೂ ಆತಿಥೇಯರನ್ನು ಅವರದ್ದೇ ನೆಲದಲ್ಲಿ ಮಣಿಸಿರುವುದು ಗಮನಾರ್ಹ. ಆಸಿಸ್ ಬಲಿಷ್ಠ ಬೌಲಿಂಗ್ ಎದುರು ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಸತ್ವಪರೀಕ್ಷೆಯೂ ಎದುರಾಗಲಿದೆ.
ಗೆದ್ದವರಿಗೆ ಚಿನ್ನದ ಗದೆ ಟ್ರೋಫಿ
ಈ ಫೈನಲ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗದೆಯನ್ನು ವಿತರಿಸಲಾಗುತ್ತದೆ. ಇದನ್ನು ಈ ಹಿಂದೆ ಪ್ರತಿ ವರ್ಷ ಐಸಿಸಿ ರ್ಯಾಂಕಿಂಗ್ನಲ್ಲಿ ನಂ 1 ಸ್ಥಾನ ಪಡೆದ ತಂಡಕ್ಕೆ ನೀಡಲಾಗುತ್ತಿತ್ತು. ಜಂಟಿ ಚಾಂಪಿಯನ್ ಆದರೆ ಇದೇ ಚಿನ್ನದ ಟ್ರೋಫಿ ಇಬ್ಬರಿಗೂ ಹಂಚಿಕೆಯಾಗಲಿದೆ.
ಆಸ್ಟ್ರೇಲಿಯಾ ಮತ್ತು ಭಾರತ ಮುಖಾಮುಖಿ
ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಈವರೆಗೂ ಒಟ್ಟು 106 ಬಾರಿ ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ 32ರಲ್ಲಿ ಭಾರತ, 44ರಲ್ಲಿ ಆಸ್ಟ್ರೇಲಿಯಾ ಗೆದ್ದಿವೆ. 29ರಲ್ಲಿ ಡ್ರಾ ಸಾಧಿಸಿವೆ. 1 ಟೈ ಕಂಡಿವೆ. ಭಾರತದಲ್ಲಿ54, ಆಸಿಸ್ನಲ್ಲಿ 52 ಪಂದ್ಯಗಳು ನಡೆದಿವೆ. ಇದೇ ಮೊದಲ ಬಾರಿಗೆ ಉಭಯ ತಂಡಗಳು ತಟಸ್ಥ ಸ್ಥಳದಲ್ಲಿ ಮುಖಾಮುಖಿಯಾಗುತ್ತಿವೆ.
ಪಿಚ್ ರಿಪೋರ್ಟ್
ಓವಲ್ ಮೈದಾನವು 1880ರಿಂದಲೂ ಟೆಸ್ಟ್ ಪಂದ್ಯಗಳು ನಡೆಯುತ್ತಾ ಬಂದಿವೆ. ಆದರೆ ಇಲ್ಲಿ ಜೂನ್ ತಿಂಗಳಲ್ಲಿ ಟೆಸ್ಟ್ ನಡೆಯುತ್ತಿರುವುದು ಇದೇ ಮೊದಲು. ಹೀಗಾಗಿ ಈ ಪಿಚ್ ಬಗ್ಗೆ ಕೌತುಕ ಸೃಷ್ಟಿಯಾಗಿದೆ. ಸಾಂಪ್ರಾದಾಯಿಕ ಬೌನ್ಸ್ನಿಂದ ಕೂಡಿರುವ ಇಲ್ಲಿನ ಪಿಚ್ ವೇಗಿಗಳ ಪ್ರಾಬಲ್ಯದ ನಡುವೆ ಸ್ಪಿನ್ನರ್ಗಳಿಗೂ ನೆರವು ನೀಡುತ್ತಿದೆ. ಪಂದ್ಯದ 4 ಅಥವಾ 5ನೇ ದಿನದಾಟ ಮತ್ತು 6ನೇ ದಿನದಾಟವೂ ಮಳೆಯ ಅಡ್ಡಿಉಂಟು ಮಾಡುವ ಸಾಧ್ಯತೆ ಇದೆ.
ನೇರ ಪ್ರಸಾರ
ಡಿಸ್ನಿ ಸ್ಟಾರ್ ಇಂಡಿಯಾ ಟಿವಿ ಗೈಡ್ ಪ್ರಕಾರ, WTC ಫೈನಲ್ ಅನ್ನು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 2 HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ HD ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ.
ಭಾರತ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಆಡುವ ಬಳಗ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೆನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.