Lionel Messi: ರೊನಾಲ್ಡೊ ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಲಿದ್ದಾರೆ ಲಿಯೋನೆಲ್ ಮೆಸ್ಸಿ
Jun 06, 2023 02:47 PM IST
ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ
- Al Hilal: ಲಿಯೋನೆಲ್ ಮೆಸ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ನಿಯೋಗವು ಪ್ಯಾರಿಸ್‌ಗೆ ತೆರಳಿದೆ ಎಂದು ವರದಿಯಾಗಿದೆ.
ಫುಟ್ಬಾಲ್ ಕ್ಲಬ್ ಪಿಎಸ್‌ಜಿ (PSG) ಜೊತೆಗಿನ ಲಿಯೋನೆಲ್ ಮೆಸ್ಸಿ (Lionel Messi) ಅವರ ಒಪ್ಪಂದದ ಅವಧಿ ಕೊನೆಗೊಳ್ಳುತ್ತಿದ್ದಂತೆ, ಹಲವಾರು ಫುಟ್ಬಾಲ್ ಕ್ಲಬ್‌ಗಳು ಫುಟ್ಬಾಲ್ ಸ್ಟಾರ್ ಹಿಂದೆ ಬಿದ್ದಿವೆ. ಅರ್ಜೆಂಟೀನಾ ನಾಯಕನನ್ನು ಅಲ್ ಹಿಲಾಲ್ (Al Hilal), ಇಂಟರ್ ಮಿಯಾಮಿ, ಎಫ್‌ಸಿ ಬಾರ್ಸಿಲೋನಾ, ನ್ಯೂಕ್ಯಾಸಲ್ ಯುನೈಟೆಡ್ ಮತ್ತು ಚೆಲ್ಸಿಯಾ ಕ್ಲಬ್ ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ. 2022ರ ಫಿಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ನಾಯಕನ ಮುಂದಿನ ನಡೆಗಾಗಿ ಜಾಗತಿಕ ಕ್ರೀಡಾರಂಗ ಕಾಯುತ್ತಾ ಕುಳಿತಿದೆ.
ಜಾಗತಿಕ ಫುಟ್ಬಾಲ್‌ನ ದಿಗ್ಗಜ ಆಟಗಾರರಲ್ಲಿ ಮೆಸ್ಸಿ ಹಾಗೂ ರೊನಾಲ್ಡೊ ಅಗ್ರಗಣ್ಯರು. ಈಗಾಗಲೇ ರೊನಾಲ್ಡೊ ಸೌದಿ ಅರೇಬಿಯಾ ಫುಟ್ಬಾಲ್ ಕ್ಲಬ್ ಅಲ್ ನಾಸರ್ ಸೇರಿಕೊಂಡು, ಒಂದು ಆವೃತ್ತಿಯಲ್ಲಿ ಆಡಿದ್ದಾರೆ. ಇದೀಗ ಮೆಸ್ಸಿ ಕೂಡಾ ಸೌದಿ ಅರೇಬಿಯಾ ಫುಟ್ಬಾಲ್ ಕ್ಲಬ್ ಸೇರಿಕೊಳ್ಳುವ ಸುಳಿವು ಸಿಕ್ಕಿದೆ.
ವರದಿಗಳ ಪ್ರಕಾರ, ಸೌದಿಯ ನಿಯೋಗವೊಂದು ಈಗಾಗಲೇ ಪ್ಯಾರಿಸ್‌ಗೆ ತೆರಳಿದೆ. ಅಲ್ಲಿ ಮೆಸ್ಸಿಯನ್ನು ಸೆಳೆದು ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಫುಟ್ಬಾಲ್ ಕ್ಲಬ್ ನಿಯೋಗವು ಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಮೆಸ್ಸಿ ಪ್ರಸ್ತುತ ಇರುವ ಪಿಎಸ್‌ಜಿ ಕ್ಲಬ್ ಜೊತೆಗಿನ ಒಪ್ಪಂದವು ಜೂನ್ 30ರಂದು ಕೊನೆಗೊಳ್ಳುತ್ತದೆ. ಹೀಗಾಗಿ ಅದು ಮುಗಿದ ಬೆನ್ನಲ್ಲೇ ಹೊಸ ಕ್ಲಬ್‌ನತ್ತ ಅವರು ಮುಖಮಾಡುವ ಸಾಧ್ಯತೆ ಇದೆ.
ಇದಕ್ಕೂ ಮೊದಲು, ಮೆಸ್ಸಿಯ ತಂದೆ ಜಾರ್ಜ್ ಅವರು, ಲೀಗ್ 1 ಅಭಿಯಾನ ಮುಗಿದ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಹಿರಂಗಪಡಿಸಿದ್ದರು. ಅಲ್ ಹಿಲಾಲ್ ಕ್ಲಬ್ ಕಡೆಯಿಂದ ಆಫರ್ ಬಂದಿದೆ ಎನ್ನಲಾದ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ. ಆದರೆ, ಅತ್ತ ಪ್ಯಾರಿಸ್‌ನಲ್ಲಿರುವ ಸೌದಿ ನಿಯೋಗ ಕೂಡಾ ಅಲ್ ಹಿಲಾಲ್ ಕ್ಲಬ್ ಕಡೆಯಿಂದ ಬಂದಿರುವುದು ಎಂಬ ವರದಿ ಹರಿದಾಡುತ್ತಿದೆ. ಹೀಗಾಗಿ ಈ ಕುರಿತು ಸ್ಪಷ್ಟನೆ ಸಿಗಬೇಕಿದೆ.
ಮೆಸ್ಸಿಗೆ ವರ್ಷಕ್ಕೆ 350-600 ಮಿಲಿಯನ್ ಯುರೋ ಆಫರ್ ಮಾಡಲಾಗಿದೆ ಎಂದು ವರದಿಯಾಗಿದೆ. ಒಂದು ವೇಳೆ ಇದು ನಿಜವಾದರೆ, ಅವರು ರೊನಾಲ್ಡೊ ಹಿಂದಿಕ್ಕಲಿದ್ದಾರೆ. ಅಲ್ ನಾಸರ್ ಕ್ಲಬ್ ಸೇರಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ಫುಟ್‌ಬಾಲ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುವಾಗಿ ಮೆಸ್ಸಿ ಹೊರಹೊಮ್ಮಲಿದ್ದಾರೆ.
ಆರಂಭದಲ್ಲಿ, ಬಾರ್ಸಿಲೋನಾ ಮೆಸ್ಸಿಯ ಆದ್ಯತೆಯ ಕ್ಲಬ್ ಎಂದು ಹೇಳಲಾಗಿತ್ತು. ಆದರೆ, ಮೆಸ್ಸಿ ತಮ್ಮ ಹಿಂದಿನ ಕ್ಲಬ್‌ಗೆ ಮರಳುವ ಸಾಧ್ಯತೆ ಕಡಿಮೆಯಾಗಿದೆ.
ಪ್ಯಾರಿಸ್ ಸೇಂಟ್-ಜರ್ಮೈನ್ (Paris Saint Germain) ಕ್ಲಬ್‌ನಲ್ಲಿ ಎರಡು ವರ್ಷಗಳ ಕಾಲ ಆಡಿದ ಬಳಿಕ ಪ್ರಸಕ್ತ ಋತುವಿನ ಕೊನೆಯಲ್ಲಿ ತಂಡ ತೊರೆಯಲಿದ್ದಾರೆ ಎಂದು ಕ್ಲಬ್ ತಂಡದ ಕೋಚ್ ಕ್ರಿಸ್ಟೋಫ್ ಗಾಲ್ಟಿಯರ್ ಈ ಹಿಂದೆ ಹೇಳಿದ್ದರು. 2021ರ ಆಗಸ್ಟ್ ತಿಂಗಳಲ್ಲಿ, ಚಾಂಪಿಯನ್ಸ್ ಲೀಗ್ ಗೆಲ್ಲುವ ಮಹತ್ವಾಕಾಂಕ್ಷೆಯೊಂದಿಗೆ ಪಿಎಸ್‌ಜಿ ಕ್ಲಬ್ ಮೆಸ್ಸಿಯನ್ನು ತಂಡಕ್ಕೆ ನೇಮಿಸಿಕೊಂಡಿತು.
ತಮ್ಮ ಅನುಮೋದನೆಯಿಲ್ಲದೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದಕ್ಕಾಗಿ ಮೆಸ್ಸಿಯನ್ನು ಇತ್ತೀಚೆಗೆ ಪ್ಯಾರಿಸ್ ಸೇಂಟ್-ಜರ್ಮೈನ್ ಎಫ್‌ಸಿ ಕ್ಲಬ್ ಅಮಾನತುಗೊಳಿಸಿತ್ತು. ಹೀಗಾಗಿ ಫುಟ್‌ಬಾಲ್ ಸೂಪರ್‌ಸ್ಟಾರ್ ತಮ್ಮ ಅನಧಿಕೃತ ಭೇಟಿಗಾಗಿ ಕ್ಲಬ್‌ಗೆ ಕ್ಷಮೆಯಾಚಿಸಿದ್ದರು. ವರದಿಗಳ ಪ್ರಕಾರ, ತರಬೇತಿಗೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ಎರಡು ವಾರಗಳ ಕಾಲ ಅಮಾನತುಗೊಳಿಸಲಾಗಿತ್ತು. “ನಾನು ನನ್ನ ತಂಡದ ಆಟಗಾರರಿಗೆ ಮತ್ತು ಕ್ಲಬ್‌ಗೆ ಕ್ಷಮೆಯಾಚಿಸಲು ಬಯಸುತ್ತೇನೆ” ಎಂದು ಮೆಸ್ಸಿ ತಮ್ಮ ಸೌದಿ ಭೇಟಿಯ ನಂತರ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದರು.