logo
ಕನ್ನಡ ಸುದ್ದಿ  /  ಕ್ರೀಡೆ  /  India Vs Australia 2nd T20i: ರೋಹಿತ್ ಪವರ್ ಹಿಟ್ಟಿಂಗ್-ಡಿಕೆ ಫಿನಿಶಿಂಗ್, ಭಾರತಕ್ಕೆ ರೋಚಕ ಜಯ

India vs Australia 2nd T20I: ರೋಹಿತ್ ಪವರ್ ಹಿಟ್ಟಿಂಗ್-ಡಿಕೆ ಫಿನಿಶಿಂಗ್, ಭಾರತಕ್ಕೆ ರೋಚಕ ಜಯ

Jayaraj HT Kannada

Sep 24, 2022 07:34 AM IST

ಪಂದ್ಯ ಗೆದ್ದ ಭಾರತ

    • ಸದ್ಯ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿರುವ‌ ಉಭಯ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿವೆ. ಎರಡು ತಂಡಗಳು ಇದೀಗ ಹೈದರಾಬಾದ್‌ಗೆ ಪ್ರಯಾಣಿಸಲಿವೆ. ಭಾನುವಾರ ನಡೆಯಲಿರುವ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಗೆಲುವು ಪಡೆಯಲಿದೆ.
ಪಂದ್ಯ ಗೆದ್ದ ಭಾರತ
ಪಂದ್ಯ ಗೆದ್ದ ಭಾರತ (BCCI)

ನಾಗ್ಪುರ: ಎಂಟು ಓವರ್‌ಗಳಿಗೆ ಸೀಮಿತಗೊಂಡ ಎರಡನೇ ಟಿ20 ಪಂದ್ಯದಲ್ಲಿ, ಆಸ್ಟ್ರೇಲಿಯಾ ವಿರುದ್ಧ ಭಾರತ ರೋಚಕ ಗೆಲುವ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಅಜೇಯ 46 ರನ್‌ ಗಳಿಸಿ ಭಾರತದ ಗೆಲುವಿನಲ್ಲಿನ ಪ್ರಮುಖ ಪಾತ್ರ ವಹಿಸಿದರು. ಭಾಗಶಃ ಮಳೆ ವಶಪಡಿಸಿಕೊಂಡಿದ್ದ ಪಂದ್ಯವನ್ನು ಅಂತಿಮವಾಗಿ ಭಾರತ ವಶಪಡಿಸಿಕೊಂಡಿತು. ಟೀಂ ಇಂಡಿಯಾ ಆರು ವಿಕೆಟ್‌ಗಳ ಜಯ ಸಾಧಿಸಿತು. ಹೀಗಾಗಿ ಪಂದ್ಯಕ್ಕಾಗಿ ಸಾಕಷ್ಟು ಹೊತ್ತು ಕಾದಿದ್ದ ನಾಗ್ಪುರದ ಅಭಿಮಾನಿಗಳಿಗೆ ಭಾರತ ಸಿಹಿ ಸುದ್ದಿ ಕೊಟ್ಟಿತು.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಭರ್ಜರಿ ನಾಲ್ಕು ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಸಿಡಿಸಿದರು. ಆರಂಭಿಕನಾಗಿ ಬಂದು ಅಜೇಯರಾಗಿ ಉಳಿದ ಕ್ಯಾಪ್ಟನ್‌, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಓವರ್‌ ವೇಳೆ ಬಂದ ಮ್ಯಾಚ್‌ ಫಿನಿಷರ್‌ ದಿನೇಶ್‌ ಕಾರ್ತಿಕ್‌ ಸತತ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಮತ್ತೊಂದು ಬೌಂಡರಿ ಸಿಡಿಸಿ ಗೆಲುವು ತಮ್ಮದಾಗಿಸಿಕೊಂಡರು. ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ತಂಡ ಗೆಲುವಿನ ನಗೆ ಬೀರಿತು.

ನಾಗ್ಪುರದಲ್ಲಿ ಮಳೆಯಿಂದಾಗಿ ಕ್ರೀಡಾಂಗಣ ಪೂರ್ತಿ ಒದ್ದೆಯಾಗಿತ್ತು. ಹೀಗಾಗಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಎರಡೂವರೆ ಗಂಟೆ ತಡವಾಗಿ ಆರಂಭವಾಯ್ತು. ಸತತ ಮೂರು ಬಾರಿ ಪಿಚ್ ಮತ್ತು ಮೈದಾನವನ್ನು ಪರಿಶೀಲಿಸಲಾಯಿತು. ಕೊನೆಗೂ ಮೂರನೇ ಬಾರಿಗೆ ಫೀಲ್ಡ್ ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ಆನಂದ್ ಪಡ್ನಾಭನ್ 8 ಓವರ್‌ಗಳ ಪಂದ್ಯ ನಡೆಸಲು ತೀರ್ಮಾನಿಸಿದರು. ಅದರಂತೆ 9.15ಕ್ಕೆ ಟಾಸ್‌ ನಡೆದು, 9.30ಕ್ಕೆ ಪಂದ್ಯ ಆರಂಭವಾಯ್ತು. ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ, ಮೊದಲ ಟಿ20 ಪಂದ್ಯದಲ್ಲಿ ನೀಡಿದ ಪ್ರದರ್ಶನ ಪುನರಾವರ್ತಿಸುವಲ್ಲಿ ವಿಫಲವಾಯ್ತು. ಪಂದ್ಯ ಎಂಟು ಓವರ್‌ಗೆ ಸೀಮಿತವಾಗಿದ್ದರಿಂದ, ಅದಕ್ಕೆ ತಕ್ಕನಾಗಿ ಬ್ಯಾಟ್‌ ಬೀಸಲು ವಿಫಲವಾಯ್ತು. ಆರಂಭದಿಂದ ಒಂದು ಮಟ್ಟಿಗೆ ರನ್‌ ಬರುತ್ತಿದ್ದರೂ, ಭಾರತದ ಬೌಲರ್‌ಗಳು ಕಾಂಗರೂಗಳನ್ನು ಮೇಲಿಂದ ಮೇಲೆ ಕಾಡಿದರು. ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಮೇಲಿಂದ ಮೇಲೆ ಎರಡು ವಿಕೆಟ್‌ ಕಿತ್ತರು. ಇದರ ಜತೆಗೆ ಒಂದು ರನೌಟ್‌ ಭಾರತಕ್ಕೆ ಪ್ರಯೋಜನವಾಯ್ತು.

ನಾಯಕ ಆರನ್ ಫಿಂಚ್ 15 ಎಸೆತಗಳಲ್ಲಿ 31 ರನ್ ಗಳಿಸಿದರೆ, ಆಸೀಸ್‌ ಪರ ಮ್ಯಾಥ್ಯೂ ವೇಡ್ 20 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿ ತಂಡ 5 ವಿಕೆಟ್‌ಗೆ 90 ರನ್ ಗಳಿಸುವಲ್ಲಿ ನೆರವಾದರು.

ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆಟಗಾರರು, ಆರಂಭದಿಂದಲೇ ಆತ್ಮವಿಶ್ವಾಸದ ಹೊಡೆತಗಳನ್ನಾಡಿದರು. ರೋಹಿತ್ ಸ್ಪಷ್ಟ ಉದ್ದೇಶದೊಂದಿಗೆ ಬ್ಯಾಟ್‌ ಬೀಸಿದರು. ಮೇಲಿಂದ ಮೇಲೆ ಸಿಕ್ಸರ್ ಸಿಡಿಸಿ, ಆರಂಭಿಕ ಓವರ್‌ನಲ್ಲೇ ಜೋಶ್ ಹ್ಯಾಜಲ್‌ವುಡ್‌ ಜೋಶ್‌ ಅಡಗಿಸಿದರು. ಮೊದಲ ಓವರ್‌ನಲ್ಲಿ ಮೂರು ಭರ್ಜರಿ ಸಿಕ್ಸರ್‌ನೊಂದಿಗೆ ಇನ್ನಿಂಗ್ಸ್‌‌ ಆರಂಭವಾಯ್ತು.

ಆಸೀಸ್‌ ಪರ್‌ ಪ್ಯಾಟ್ ಕಮ್ಮಿನ್ಸ್ 2 ಓವರ್‌ಗಳಲ್ಲಿ 23 ರನ್‌ ಬಿಟ್ಟುಕೊಟ್ಟು 1 ವಿಕೆಟ್ ಕಿತ್ತರು. ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ಆಡಮ್ ಝಂಪಾ 2 ಓವರ್‌ಗಳಲ್ಲಿ 16 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಿತ್ತರು.

ಕೆಎಲ್ ರಾಹುಲ್ 10 ರನ್‌ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ 11 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಭಾರತ 4.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 55 ರನ್ ‌ಗಳಿಸಿ ಸಂಕಷ್ಟದಲ್ಲಿತ್ತು. ಮುಂದಿನ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಗೋಲ್ಡನ್‌ ಡಕ್‌ಗೆ ಬಲಿಯಾದರು.

ವಿಕೆಟ್‌ಗಳ ಪತನದಿಂದ ವಿಚಲಿತರಾಗದ ನಾಯಕ ರೋಹಿತ್, ಮುಂದಿನ ಓವರ್‌ನಲ್ಲಿ ಸೀನ್ ಅಬಾಟ್ ಎಸೆತಗಳಲ್ಲಿ 11 ರನ್ ಕಲೆಹಾಕಿದರು. ಹಾರ್ದಿಕ್ ಪಾಂಡ್ಯ ಕಮ್ಮಿನ್ಸ್ ಎಸೆತದಲ್ಲಿ ಬೌಂಡರಿ ಗಳಿಸಿದರು. ಆದರೆ ಏಳನೇ ಓವರ್‌ನಲ್ಲಿ ಫಿಂಚ್‌ ಹಿಡಿದ ಕ್ಯಾಚ್‌ನಲ್ಲಿ ಔಟಾದರು. ಆ ಬಳಿಕ ಬಂದ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್‌, ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಸ್ಯಾಮ್ಸ್ ಎಸೆತದಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿಯೊಂದಿಗೆ ತಂಡಕ್ಕೆ ಬೇಕಿದ್ದ 9 ರನ್‌ಗಳನ್ನು ಎರಡೇ ಎಸೆತಗಳಲ್ಲಿ ಕಲೆ ಹಾಕಿದರು.

ಬೆನ್ನು‌ ನೋವಿನಿಂದಾಗಿ ಇಂಗ್ಲೆಂಡ್ ಪ್ರವಾಸದ ಅಂತ್ಯದಿಂದಲೂ ಪಂದ್ಯದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಈ ಪಂದ್ಯದ ಮೂಲಕ ಕಂಬ್ಯಾಕ್‌ ಮಾಡಿದರು. 2 ಓವರ್‌ಗಳಲ್ಲಿ ಬೂಮ್ರಾ 23 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದರು.

ಸದ್ಯ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿರುವ‌ ಉಭಯ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿವೆ. ಎರಡು ತಂಡಗಳು ಇದೀಗ ಮುತ್ತಿನ ನಗರಿಗೆ ಪ್ರಯಾಣಿಸಲಿವೆ. ಭಾನುವಾರ ನಡೆಯಲಿರುವ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಗೆಲುವು ಪಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು