WPL 2023: ಮುಂಬೈ ಇಂಡಿಯನ್ಸ್‌ಗೆ ಸತತ ಎರಡನೇ ಸೋಲು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ
Mar 20, 2023 10:22 PM IST
ಮೆಗ್ ಲ್ಯಾನಿಂಗ್
ಈ ಗೆಲುವಿನ ಬೆನ್ನಲ್ಲೇ ಡೆಲ್ಲಿ ತಂಡವು ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಕೇವಲ ಒಂಬತ್ತು ಓವರ್‌ಗಳಲ್ಲೇ ಗುರಿ ಬೆನ್ನತ್ತುವ ಮೂಲಕ ಹೆಚ್ಚು ನೆಟ್ ರನ್ ರೇಟ್ ಸಂಪಾದಿಸಿದೆ. ಹೀಗಾಗಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.
ಮುಂಬೈ: ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಈ ದಿನದ ಎರಡನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಡೆಲ್ಲಿ ಬೌಲಿಂಗ್ ದಾಳಿಗೆ ತತ್ತರಿಸಿತು. ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿದ ತಂಡವು ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಲಷ್ಟೇ ಶಕ್ತವಾಯ್ತು. ಸರಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ, ಕೇವಲ 9 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಭರ್ಜರಿಯಾಗಿ 9 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.
ಡೆಲ್ಲಿ ಪರ ಅಲಿಸ್ ಕ್ಯಾಪ್ಸೇ ಅಜೇಯ 38 ರನ್ ಗಳಿಸಿದರೆ, ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 32 ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 33 ರನ್ ಗಳಿಸಿ ಔಟಾದರು.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಬ್ಯಾಟಿಂಗ್ ಲೈನಪ್ ಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ 1 ರನ್ ಗಳಿಸಿ ಔಟಾದರೆ, ಹೇಲಿ ಮ್ಯಾಥ್ಯೂಸ್ 5 ರನ್ ಗಳಿಸಿ ನಿರ್ಗಮಿಸಿದರು. ನಟಾಲಿ ಸಿವರ್ ಬ್ರಂಟ್ ಗೋಲ್ಡನ್ ಡಕ್‌ಗೆ ಬಲಿಯಾದರೆ, ಅಮೇಲಿಯಾ 8 ರನ್ ಗಳಿಸಿದರು. ಈ ವೇಳೆ ಕ್ರೀಸ್‌ಕಚ್ಚಿ ಆಡಲು ಯತ್ನಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್, 23 ರನ್ ಗಳಿಸಿ ಔಟಾದರು.
ಪೂಜಾ ವಸ್ತ್ರಾಕರ್ 26 ರನ್ ಗಳಿಸಿ ತಂಡದ ಪರ ಹೆಚ್ಚು ಮೊತ್ತ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಮುಂಬೈ ಬ್ಯಾಟರ್‌ಗಳನ್ನು ಕಾಡಿದ ಕಾಪ್, ಶಿಖಾ ಪಂಡೆ ಮತ್ತು ಜೊನಾಸೆನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನ ಬೆನ್ನಲ್ಲೇ ಡೆಲ್ಲಿ ತಂಡವು ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಕೇವಲ ಒಂಬತ್ತು ಓವರ್‌ಗಳಲ್ಲೇ ಗುರಿ ಬೆನ್ನತ್ತುವ ಮೂಲಕ ಹೆಚ್ಚು ನೆಟ್ ರನ್ ರೇಟ್ ಸಂಪಾದಿಸಿದೆ. ಹೀಗಾಗಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.
ಉಭಯ ತಂಡಗಳಿಗೂ ನಾಳೆ ತಲಾ ಒಂದು ಪಂದ್ಯಗಳಿವೆ. ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ತಂಡವು ಆರ್‌ಸಿಬಿಯನ್ನು ಎದುರಿಸಲಿದೆ. ಇದೇ ವೇಳೆ ದಿನದ ಎರಡನೇ ಪಂದ್ಯದಲ್ಲಿ ಡೆಲ್ಲಿ ತಂಡವು ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ನಾಳಿನ ಪಂದ್ಯದ ಬಳಿಕ ಅಂತಿಮ ಅಂಕಪಟ್ಟಿ ಸಿದ್ಧವಾಗಲಿದೆ. ಅಲ್ಲದೆ ನೇರವಾಗಿ ಫೈನಲ್ ಪ್ರವೇಶಿಸುವ ತಂಡ ಯಾವುದು ಎಂಬುದು ತಿಳಿಯಲಿದೆ.
ಮತ್ತೊಂದೆಡೆ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಇಂದಿನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಜ್ ರೋಚಕ ಜಯ ಗಳಿಸಿದೆ. ಆ ಮೂಲಕ ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಯ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿದೆ. ಇದೇ ವೇಳೆ ಗುಜರಾತ್ ಹಾಗೂ ಆರ್‌ಸಿಬಿ ತಂಡಗಳು ಆವೃತ್ತಿಯ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿವೆ.