Jupiter Transit: ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸಲಿರುವ ಗುರು; ವಿವಿಧ ರಾಶಿಗಳ ಮೇಲೆ ಬೃಹಸ್ಪತಿಯ ಪರಿಣಾಮ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Jupiter Transit: ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸಲಿರುವ ಗುರು; ವಿವಿಧ ರಾಶಿಗಳ ಮೇಲೆ ಬೃಹಸ್ಪತಿಯ ಪರಿಣಾಮ

Jupiter Transit: ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸಲಿರುವ ಗುರು; ವಿವಿಧ ರಾಶಿಗಳ ಮೇಲೆ ಬೃಹಸ್ಪತಿಯ ಪರಿಣಾಮ

Jupiter Transit: ಮೇ 1 ರಂದು ಗುರುವು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಬೀರಲಿದೆ. ಮೇಷ, ಕಟಕ, ಕನ್ಯಾ, ವೃಶ್ಚಿಕ ಮತ್ತು ಮಕರ ರಾಶಿಯವರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಸಿಂಹ,ಕುಂಭ ಮತ್ತು ಮೀನ ರಾಶಿಯವರು ಮಧ್ಯಮ ಮಟ್ಟದ ಫಲ ಪಡೆಯುತ್ತಾರೆ. ಉಳಿದ ರಾಶಿಯವರು ಸಾಧಾರಣ ಫಲ ಪಡೆಯುತ್ತಾರೆ.

ಗುರು ಗೋಚಾರ ಫಲ
ಗುರು ಗೋಚಾರ ಫಲ

ಗುರುವು 1 ಮೇ 2024 ರಂದು ಮಧ್ಯಾಹ್ನ ಸುಮಾರು 01.08ಕ್ಕೆ ಮೇಷ ರಾಶಿಯಿಂದ ವೃಷಭ ರಾಶಿಗೆ ಕಟಕ ಲಗ್ನದಲ್ಲಿ ಪ್ರವೇಶಿಸುತ್ತಾನೆ. ಆನಂತರ 2024ರ ಅಕ್ಟೋಬರ್ 9 ರಂದು ವಕ್ರಿಯಾಗುತ್ತಾನೆ. 2025 ರ ಫೆಬ್ರವರಿ 4 ಬೆಳಗ್ಗೆ 1.10 ರವೇಳೆಗೆ ಋಜುತ್ವವನ್ನು ಪಡೆಯುತ್ತಾನೆ. ಆನಂತರ 2025ರ ಮೇ 14ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ.

ಶುಕ್ರನು ಗುರುವಿಗೆ ಶತ್ರುವಾಗುತ್ತಾನೆ. ಅಂದರೆ ಗುರುವು ಶತ್ರು ಕ್ಷೇತ್ರದಲ್ಲಿ ಸಂಚರಿಸುತ್ತಾನೆ. ಆದ್ದರಿಂದ ಪ್ರತಿಯೊಂದು ರಾಶಿಯವರು ಗುರು ಪೂಜೆಯನ್ನು ಮಾಡಬೇಕು ಮತ್ತು ಶುಕ್ರನ ಶಾಂತಿಯನ್ನು ಮಾಡಬೇಕು. ಮೇಷ, ಕಟಕ, ಕನ್ಯಾ, ವೃಶ್ಚಿಕ ಮತ್ತು ಮಕರ ರಾಶಿಯವರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಸಿಂಹ,ಕುಂಭ ಮತ್ತು ಮೀನ ರಾಶಿಯವರು ಮಧ್ಯಮ ಮಟ್ಟದ ಫಲಗಳನ್ನು ಪಡೆಯುತ್ತಾರೆ. ಉಳಿದ ರಾಶಿಯವರು ಸಾಧಾರಣ ಮಟ್ಟದ ಫಲಗಳನ್ನು ಪಡೆಯುತ್ತಾರೆ. ಜನ್ಮ ಲಗ್ನವನ್ನೂ ಪರಿಗಣಿಸಬಹುದು.

ಮೇಷ

ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಬುದ್ದಿವಂತಿಕೆಯ ಮಾತುಕತೆಯಿಂದ ಪರಿಹರಿಸುವಿರಿ. ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಇರುತ್ತವೆ. ಒಳ್ಳೆಯ ಕೆಲಸ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ಹಣದ ಕೊರತೆ ಕಂಡುಬರುವುದಿಲ್ಲ. ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಯುವಕ ಯುವತಿಯರಿಗೆ ವಿಶೇಷ ಫಲಗಳು ದೊರೆಯಲಿವೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಹೆಚ್ಚಿನ ಪರಿಶ್ರಮ ತೋರಬೇಕು. ದಾಂಪತ್ಯದಲ್ಲಿ ಕೆಲವೊಮ್ಮೆ ಅನಾವಶ್ಯಕವಾದ ವಾದ ವಿವಾದ ಎದುರಾಗಲಿವೆ. ವೈಭವದ ಜೀವನ ನಡೆಸಲು ಇಷ್ಟಪಡುವಿರಿ. ನಿಮ್ಮಲ್ಲಿರುವ ವಿದ್ಯೆ ಮತ್ತು ಬುದ್ಧಿವಂತಿಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಯಾವುದೇ ತೊಂದರೆ ಆಗುವುದಿಲ್ಲ. ಕಷ್ಟಪಟ್ಟು ದುಡಿಯುವವರಿಗೆ ಉತ್ತಮ ಅವಕಾಶ, ವೇತನ ಮತ್ತು ಪ್ರಶಸ್ತಿ, ಪ್ರಶಂಸೆ ದೊರೆಯುತ್ತವೆ. ಆದರೆ ಆಹಾರ ಸೇವನೆಯಲ್ಲಿ ತೊಂದರೆ ಉಂಟಾಗಬಹುದು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಆಂಜನೇಯನ ಪೂಜೆಯಿಂದ ಶುಭಫಲಗಳನ್ನು ಪಡೆಯುವಿರಿ. ಸೋದರ ಸೋದರಿಯನ್ನು ಗೌರವದಿಂದ ಕಂಡಲ್ಲಿ ಸಮಸ್ಯೆಗಳು ಮರೆಯಾಗುತ್ತವೆ.

ವೃಷಭ

ವಿದ್ಯಾರ್ಥಿಗಳು ಶಿಕ್ಷಕರ ಜೊತೆಯಲ್ಲಿ ವಾದ ವಿವಾದಗಳಲ್ಲಿ ನಿರತರಾಗುತ್ತಾರೆ. ಉದ್ಯೋಗಸ್ಥರು ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ದುಡುಕಿನಿಂದ ವರ್ತಿಸಿದರೆ ನಿಮಗೆ ಅರಿವಿಲ್ಲದೆ ತಪ್ಪುಗಳಾಗುತ್ತವೆ. ಆದ್ದರಿಂದ ಶಾಂತಿ ಸಂಯಮದಿಂದ ವರ್ತಿಸಿ. ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಜನರಿಗೆ ಪರಿಚಯಿಸಲು ಮಹತ್ತರ ಅವಕಾಶ ದೊರಯುತ್ತದೆ. ಬರವಣಿಗೆಯನ್ನು ಬಲ್ಲವರು ವಿನೂತನ ಸಾಧನೆ ಮಾಡಲಿದ್ದಾರೆ. ಆತ್ಮೀಯರ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ಅವಕಾಶ ದೊರೆತಾಗ ಸಾರ್ವಜನಿಕರಿಗೆ ಸಹಾಯ ಮಾಡುವಿರಿ. ಸಂತಾನ ಲಾಭವಿದೆ. ಮಕ್ಕಳಿಗೆ ವಿಶೇಷ ಫಲಗಳು ದೊರೆಯಲಿವೆ. ಉದ್ಯೋಗದ ಸಲುವಾಗಿ ಕುಟುಂಬದಿಂದ ದೂರ ಉಳಿಯಬೇಕಾಗಿ ಬರುತ್ತದೆ. ನಿಮ್ಮ ನಂಬಿಕಸ್ಥರಿಂದ ಅಪವಾದಕ್ಕೆ ಗುರಿಯಾಗುವಿರಿ. ಶ್ರೀ ಗಣಪತಿ ಪೂಜೆಯಿಂದ ಶುಭ ಫಲಗಳು ದೊರೆಯುತ್ತವೆ. ಸಣ್ಣ ವಯಸ್ಸಿನ ಮಕ್ಕಳಿಗೆ ಅವರು ಇಷ್ಟಪಡುವ ಆಹಾರ ನೀಡುವ ಮೂಲಕ ಯಶಸ್ಸನ್ನು ಗಳಿಸಬಹುದು.

ಮಿಥುನ

ಉತ್ತಮ ಸಂಪಾದನೆ ಇದ್ದರೂ ಹಣದ ಕೊರತೆ ನಿಮ್ಮನ್ನು ಕಾಡಲಿದೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಕೇವಲ ಹೆಚ್ಚಿನ ಪ್ರಯತ್ನದಿಂದ ಮಾತ್ರ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ದಾಂಪತ್ಯ ಜೀವನದಲ್ಲಿ ಕೆಲವೊಂದು ಸಂದಿಗ್ಧ ಪರಿಸ್ಥಿತಿಯು ಎದುರಾಗಲಿದೆ. ಹೆಚ್ಚಿನ ಹಣ ಖರ್ಚಾಗುತ್ತದೆ. ನೀವು ನಂಬಿದವರೊಬ್ಬರು ವಿರೋಧಿಯಾಗಿ ಮಾರ್ಪಡುತ್ತಾರೆ. ಬುದ್ದಿವಂತಿಕೆಯಿಂದ ನೆಮ್ಮದಿಯ ಜೀವನವನ್ನು ನಡೆಸುವಿರಿ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಹಣ ಹೊಂದಿಸಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉನ್ನತ ಮಟ್ಟ ತಲುಪುವಿರಿ. ಹಾರ್ಮೋನ್ ಸಮಸ್ಯೆ ಉಂಟಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಕುಟುಂಬದ ಒಳಗೂ ಹೊರಗೂ ಪ್ರೀತಿ ಗೌರವ ಹೆಚ್ಚುತ್ತದೆ. ಜನರು ನಿಮ್ಮ ಕೆಲಸ ಕಾರ್ಯಗಳನ್ನು ಗುರುತಿಸುತ್ತಾರೆ. ಉದ್ಯೋಗ ಬದಲಿಸುವ ಮನಸ್ಸಾಗುತ್ತದೆ. ನಿಮ್ಮ ನೆಚ್ಚಿನ ನೌಕರರೊಬ್ಬರು ನಿಮ್ಮಿಂದ ದೂರ ನಡೆಯುತ್ತಾರೆ. ಶ್ರೀ ಸತ್ಯನಾರಾಯಣ ಪೂಜೆ ಮಾಡುವುದರಿಂದ ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರಿಂದ ನಿರೀಕ್ಷಿತ ಫಲಗಳನ್ನುಪಡೆಯಬಹುದು

ಕಟಕ

ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಹಣದ ಕೊರತೆ ಉಂಟಾಗುವುದಿಲ್ಲ. ನಿಮ್ಮಲ್ಲಿರುವ ಒಳ್ಳೆಯ ಗುಣದಿಂದಾಗಿ ಎಲ್ಲರ ಮನ ಗೆಲ್ಲುವಿರಿ. ಮಕ್ಕಳು ಉದ್ಯೋಗ ನಿಮಿತ್ತ ನಿಮ್ಮಿಂದ ದೂರ ಉಳಿಯುತ್ತಾರೆ. ಗುರು ಹಿರಿಯರಿಂದ ಪ್ರಶಂಸೆ ಪಡೆಯುವಿರಿ. ಕುಟುಂಬದ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸುವಿರಿ. ಬಹು ದಿನದಿಂದ ನಿರೀಕ್ಷಿಸುತ್ತಿದ್ದ ವಾಹನವನ್ನು ಕೊಳ್ಳುವಿರಿ. ನಿಮ್ಮ ಮಕ್ಕಳು ಉದ್ಯೋಗಕ್ಕಾಗಿ ವಿದೇಶಕ್ಕೆ ಅಥವಾ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಅನಿರೀಕ್ಷಿತ ಧನಲಾಭವಿರುತ್ತದೆ. ಕಷ್ಟಪಟ್ಟು ದುಡಿದ ಹಣವನ್ನು ಧಾರ್ಮಿಕ ಕೆಲಸ ಕಾರ್ಯಗಳಿಗೆ ಖರ್ಚು ಮಾಡುವಿರಿ. ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ಸಂತಸ ಕಾಣುವಿರಿ. ಕುಟುಂಬದ ಹಿರಿಯರು ಕಿರಿಯರೆಲ್ಲರೂ ನಿಮ್ಮ ಸಹಾಯ ಸಹಕಾರದಿಂದ ಸುಖ ಜೀವನ ನಡೆಸುತ್ತಾರೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು. ಪಂಚಮುಖಿ ಗಣಪತಿಯ ಪೂಜೆಯಿಂದ ಶುಭ ಫಲಗಳು ದೊರೆಯುತ್ತವೆ. ಕುಟುಂಬದ ಹೆಣ್ಣು ಮಕ್ಕಳ ಶುಭ ಹಾರೈಕೆ ಹೊಸ ಜೀವನವನ್ನು ರೂಪಿಸುತ್ತದೆ.

ಸಿಂಹ

ಬಂಧು ಬಳಗದಿಂದ ದೂರವಿರುವಿರಿ. ಕೆಲ ದಿನಗಳ ಕಾಲ ತಂದೆ ಅಥವಾ ತಾಯಿಯವರ ಆರೋಗ್ಯದಲ್ಲಿ ಸಮಸ್ಯೆ ಎದುರಾಗುತ್ತದೆ. ಆದರೆ ಗುರು ಪೂಜೆಯಿಂದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮನಸ್ಸಿನಲ್ಲಿ ಒಂದು ರೀತಿಯ ಭಯ ಆವರಿಸುತ್ತದೆ. ನಿಮ್ಮ ಮಕ್ಕಳಿಗೆ ಉನ್ನತಮಟ್ಟದ ಉದ್ಯೋಗ ದೊರೆಯುತ್ತದೆ. ಹೆಚ್ಚಿದ ಪ್ರಯತ್ನ ಪಟ್ಟಲ್ಲಿ ಸ್ವಂತಭೂಮಿ ಅಥವಾ ಮನೆಯನ್ನು ಕೊಳ್ಳಬಹುದು. ನಿಮ್ಮ ವಂಶದಲ್ಲಿ ನಿಮಗೆ ವಿಶೇಷವಾದ ಸ್ಥಾನಮಾನ ದೊರೆಯುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸಮಯ ನೀಡುವಿರಿ. ಧಾರ್ಮಿಕ ಕೇಂದ್ರಗಳಿಗೆ ಧನ ಸಹಾಯ ಮಾಡುವಿರಿ. ಜನಪ್ರಿಯ ವ್ಯಕ್ತಿಯಾಗಿ ಎಲ್ಲರ ಮನ ಗೆಲ್ಲುವಿರಿ. ಸಮಾಜದಲ್ಲಿಉನ್ನತ ಕೀರ್ತಿ ಪ್ರತಿಷ್ಠೆ ಲಭಿಸುತ್ತದೆ. ಸಣ್ಣಪುಟ್ಟ ಕೆಲಸವಾದರೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಿರಿ. ನಿಶ್ಯಕ್ತಿಯ ತೊಂದರೆ ನಿಮ್ಮನ್ನು ಕಾಡಲಿದೆ. ಧರ್ಮ ಗುರುಗಳ ಪೂಜೆಯಿಂದ ಶುಭ ಫಲಗಳು ದೊರೆಯಲಿವೆ. ನಿರುದ್ಯೋಗಿಗಳಿಗೆ ಸಹಾಯ ಮಾಡಿ ಶುಭ ಫಲಗಳನ್ನು ಪಡೆಯಿರಿ.

ಕನ್ಯಾ

ಸಮಾಜದಲ್ಲಿಉನ್ನತ ಸ್ಥಾನಮಾನ ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅವಲಂಬಿಸುವುದಿಲ್ಲ. ಅವಶ್ಯಕತೆ ಇರುವ ಹಣವನ್ನು ಸಂಪಾದಿಸಬಲ್ಲಿರಿ. ಅವಿವಾಹಿತರಿಗೆ ವಿವಾಹವಾಗುತ್ತದೆ. ಸಂಗಾತಿಯಿಂದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಉತ್ತಮ ಸಹಾಯ ಸಹಕಾರ ದೊರೆಯುತ್ತದೆ. ಯಾವುದೇ ಕೆಲಸ ಕಾರ್ಯಗಳಾದರೂ ಯೋಚಿಸದೆ ಆರಂಭಿಸುವುದಿಲ್ಲ. ಆತ್ಮೀಯರೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ತಂದೆಯಿಂದ ಅಥವಾ ಕುಟುಂಬದ ಹಿರಿಯರಿಂದ ಧನ ಸಹಾಯವಿದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ಅನೇಕರ ಸುಖ ಜೀವನಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾಗುವಿರಿ. ನಿಮ್ಮ ತಂದೆ ಅಥವಾ ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಅನೇಕ ಜನ ಮೆಚ್ಚುವ ಕೆಲಸ ಕಾರ್ಯಗಳನ್ನು ಮಾಡುವಿರಿ. ದುರ್ಗಾ ಮಾತೆಯ ಪೂಜೆಯಿಂದ ಉತ್ತಮ ಫಲಗಳು ದೊರೆಯಲಿವೆ. ಬಾಳ ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಂಡಲ್ಲಿ ಉತ್ತಮ ಫಲಗಳು ದೊರೆಯುತ್ತವೆ.

ತುಲಾ

ನಿಮ್ಮಿಂದ ಸಹಾಯ ಪಡೆದವರಿಂದ ತೊಂದರೆ ಉಂಟಾಗಬಹುದು, ಎಚ್ಚರಿಕೆಯಿಂದ ಇರಬೇಕು. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವವರೆಗೂ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ರಹಸ್ಯವನ್ನು ಕಾಪಾಡಿಕೊಳ್ಳಿರಿ. ಶಾಂತಿ ಸಂಯಮದಿಂದ ಇದ್ದರೂ ಕೆಟ್ಟ ಪರಿಸರದ ಕಾರಣ ಕೋಪ ಮತ್ತು ಉದ್ವೇಗದಿಂದ ವರ್ತಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಹೊಸದಾಗಿ ಕೆಲಸಕ್ಕೆ ಸೇರಿದವರು ಅನಾವಶ್ಯಕ ವಾದ ವಿವಾದಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದು ವಿಚಾರಕ್ಕೂ ಸ್ಪಂದಿಸದೆ ಸಮಯಕ್ಕೆ ಹೊಂದಿಕೊಂಡು ಬಾಳಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಬೇಕು. ಆಹಾರ ಸೇವನೆಯ ಪದ್ಧತಿಯನ್ನು ಬದಲಾಯಿಸಿಕೊಳ್ಳಿರಿ. ಆತ್ಮೀಯ ಸ್ನೇಹಿತರೊಬ್ಬರನ್ನು ಭೇಟಿ ಮಾಡುವಿರಿ. ಉತ್ತಮ ವಿದ್ಯಾಭ್ಯಾಸ ದೊರೆಯುತ್ತದೆ. ಸದಾ ಉನ್ನತ ಅಧ್ಯಯನಕ್ಕಾಗಿ ಹಾತೊರೆಯುವಿರಿ. ಶ್ರೀ ಆಂಜನೇಯಸ್ವಾಮಿ ಪೂಜೆಯಿಂದ ಶುಭ ಫಲಗಳು ದೊರೆಯಲಿದೆ. ಬಡವರ ವಿವಾಹಕ್ಕೆ ಸಹಾಯ ಮಾಡಿದರೆ ಪ್ರತಿಯೊಂದು ವಿಚಾರದಲ್ಲೂ ಯಶಸ್ಸನ್ನು ಗಳಿಸುವಿರಿ.

ವೃಶ್ಚಿಕ

ಉತ್ತಮ ಜನರ ಸಹವಾಸ ದೊರೆಯುತ್ತದೆ. ಆತ್ಮೀಯರಿಂದ ಹಣಕಾಸಿನ ಸಹಾಯ ದೊರೆಯಲಿದೆ. ತಪ್ಪು ಮಾಡದೇ ಹೋದರು ತಾಯಿಯವರು ಅನಾವಶ್ಯಕ ವಿರೋಧ ಎದುರಿಸಬೇಕಾಗಬಹುದು. ಹಣದ ತೊಂದರೆ ಇರುವುದಿಲ್ಲ. ಸ್ನೇಹಿತರ ಸಹಾಯ ಸಹಕಾರ ಸದಾ ಇರಲಿದೆ. ತಪ್ಪು ಗ್ರಹಿಕೆಯಿಂದ ದೂರವಾಗಿದ್ದ ಆತ್ಮೀಯರು ಮರಳಿ ಬರುತ್ತಾರೆ. ಮಗನಿಂದ ಕೆಲಕಾಲ ದೂರ ಉಳಿಯುವಿರಿ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಗೌರವ ಲಭಿಸುತ್ತದೆ. ದಾಂಪತ್ಯ ಜೀವನವು ಸುಖ ಶಾಂತಿಯಿಂದ ಕೂಡಿರುತ್ತದೆ. ವಿವಾಹ ನಿಶ್ಚಯವಾಗುತ್ತದೆ. ಮಧ್ಯ ವಯಸ್ಸಿನ ವ್ಯಕ್ತಿಗಳು ಯಾವುದೇ ಕಷ್ಟ ನಷ್ಟಗಳು ಎದುರಾದರೂ ಎದುರಿಸಿ ಗೆಲ್ಲುತ್ತಾರೆ. ಪಿತ್ರಾರ್ಜಿತ ಆಸ್ತಿಯ ವಿವಾದವು ಕೊನೆಗೊಳ್ಳಲಿದೆ. ಗುರುಗಳ ಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡರೆ ಯಾವುದೇ ತೊಂದರೆ ಇರುವುದಿಲ್ಲ.

ಧನಸ್ಸು

ಕುಟುಂಬದ ಹಿರಿಯ ವ್ಯಕ್ತಿಗಳ ಮನಸ್ತಾಪ ಕೊನೆಗೊಳ್ಳಲಿದೆ. ಇದರಿಂದಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಸೋದರದಲ್ಲಿ ಉತ್ತಮ ಅನ್ಯೋನ್ಯತೆ ಇರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಲವು ಬಾರಿ ಪ್ರವಾಸಕ್ಕೆ ತೆರಳುವಿರಿ. ತಾಯಿಯವರ ಆರೋಗ್ಯದಲ್ಲಿ ಏರಿಳಿತ ಇರಲಿದೆ. ವಿರೋಧಿಗಳು ನಿಮಗೆ ತೊಂದರೆ ಕೊಡಬೇಕೆಂದು ಯೋಚಿಸಿದರೂ ಸಾಧ್ಯವಾಗದು. ಕೈಕಾಲುಗಳಲ್ಲಿ ಊತದ ತೊಂದರೆ ಕಂಡು ಬರುತ್ತದೆ. ಶೀತದ ತೊಂದರೆ ಇರುತ್ತದೆ. ಮಾತನ್ನು ಕಡಿಮೆ ಆಡಿದಷ್ಟು ಒಳ್ಳೆಯದು. ಮಾಡಿದ ತಪ್ಪನ್ನು ಪದೇ ಪದೇ ನೆನೆದು ಪಶ್ಚಾತಾಪ ಪಡುವಿರಿ. ಸತತ ಪ್ರಯತ್ನದ ನಡುವೆಯೂ ಉದ್ಯೋಗವನ್ನು ಬದಲಿಸಲು ಸಾಧ್ಯವಾಗದು. ನಾಗಾರಾಧನೆಯಿಂದ ಶುಭ ಫಲಗಳು ದೊರೆಯುತ್ತವೆ. ಪುಟ್ಟ ಮಕ್ಕಳಿಗೆ ಅವರಿಗೆ ಇಷ್ಟವಾದ ಆಹಾರ ನೀಡಿದರೆ ಶುಭ ಉಂಟಾಗುತ್ತದೆ.

ಮಕರ

ಸಹನೆಯ ಗುಣ ಮರೆಯಾಗುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ವಾದ ವಿವಾದಗಳು ಉಂಟಾಗಲಿವೆ. ಹಣದ ತೊಂದರೆ ಕಂಡು ಬರುವುದಿಲ್ಲ. ಕೋಪದಲ್ಲಿ ಉದ್ವೇಗದಿಂದ ವರ್ತಿಸುವಿರಿ. ಸಂಗಾತಿಗೆ ಉತ್ತಮ ಆದಾಯ ದೊರೆಯುತ್ತದೆ. ಮಕ್ಕಳ ಜೊತೆಗಿದ್ದಲ್ಲಿ ಸಂತೋಷದ ಜೀವನ ವಿರುತ್ತದೆ. ದೂರದ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವಿರಿ. ಕಷ್ಟ ಎದುರಾದಾಗ ಬುದ್ಧಿವಂತಿಕೆ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಯತ್ನ ಪಟ್ಟರೆ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬಹುದು. ಬುದ್ಧಿವಂತಿಕೆಯಿಂದ ಮಾತನಾಡಬಲ್ಲಿರಿ. ಜಗಳ ಕದನಗಳಿಗೆ ಆಸ್ಪದ ನೀಡುವುದಿಲ್ಲ. ವಂಶದಲ್ಲಿಲ್ಲೇ ವಿಶೇಷ ಸ್ಥಾನಮಾನ ದೊರೆಯುತ್ತದೆ. ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಾಣಬಹುದು. ನಾಗದೇವರ ಪೂಜೆಯಿಂದ ಶುಭ ಫಲಗಳು ದೊರೆಯುತ್ತವೆ. ಕುಲದೇವರಿಗೆ ಅಕ್ಕಿ, ಬೇಳೆ ಮತ್ತು ಬೆಲ್ಲವನ್ನು ನೀಡಿದರೆ ಕಷ್ಟಾ ಮರೆಯಾಗುತ್ತವೆ.

ಕುಂಭ

ಚಿಕ್ಕ ಮತ್ತು ಚೊಕ್ಕ ಜೀವನ ನಡೆಸುವಿರಿ. ಅನೇಕ ಬಾರಿ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಿರಿ. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಯಶಸ್ಸನ್ನು ಗಳಿಸುವಿರಿ. ಅನಾರೋಗ್ಯವಿರುತ್ತದೆ. ಒಮ್ಮೆ ಕೊಟ್ಟ ಮಾತನ್ನು ನಡೆಸಿ ಕೊಡುವಿರಿ. ಯಾರಿಗೂ ತೊಂದರೆ ನೀಡುವುದಿಲ್ಲ. ಬೇರೆಯವರ ಒತ್ತಡಕ್ಕೆ ಮಣಿಯುವುದಿಲ್ಲ. ಎದುರಾಗುವ ಯಾವುದೇ ಸನ್ನಿವೇಶವನ್ನು ಧೈರ್ಯದಿಂದ ಎದುರಿಸುವಿರಿ. ಪ್ರಯತ್ನ ಪಡದೆ ಯಾವುದೇ ಕೆಲಸವನ್ನು ಅಪೂರ್ಣಗೊಳಿಸುವುದಿಲ್ಲ. ನಿಮ್ಮಲ್ಲಿನ ಬುದ್ದಿ ಶಕ್ತಿಯ ಮೇಲೆ ನಂಬಿಕೆ ಇರುತ್ತದೆ. ವಿಶೇಷ ಸ್ಥಾನಮಾನ ದೊರೆಯುತ್ತದೆ. ಹೊಸ ವಾಹನ ಕೊಳ್ಳುವಿರಿ. ಇರುವ ಮನೆಯನ್ನು ವಿಸ್ತರಿಸುವಿರಿ. ತಾಯಿಯವರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಆತ್ಮೀಯರ ಜೊತೆಯಲ್ಲಿ ವಾದ ವಿವಾದ ಉಂಟಾಗಲಿದೆ. ಶ್ರೀ ದುರ್ಗಾಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ನಿಮ್ಮ ತಾಯಿಯ ಆಶೀರ್ವಾದ ನಿಮ್ಮನ್ನು ಕಾಪಾಡಲಿದೆ.

ಮೀನ

ಮಾತಿನಲ್ಲಿ ನಿಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗದು. ವಾದ ವಿವಾದಗಳಿಗೆ ದಾರಿ ನೀಡದೆ ಮಾತುಕತೆಯಿಂದ ವಿವಾದಗಳಿಗೆ ಪರಿಹಾರ ಸೂಚಿಸುವಿರಿ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ. ಸತ್ಯ ಧರ್ಮದ ಹಾದಿಯನ್ನು ಬಿಟ್ಟು ನಡೆಯುವುದಿಲ್ಲ. ನಿಮ್ಮಲ್ಲಿರುವ ಧೈರ್ಯ ಸಾಹಸದ ಗುಣ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ. ಕಷ್ಟಪಟ್ಟು ದುಡಿದ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದನ್ನು ಮಾಡಿ ಜಯಿಸುವ ಬುದ್ದಿ ಇರುತ್ತದೆ. ಸೋದರೊಂದಿಗೆ ಅನಾವಶ್ಯಕ ವಾದ ವಿವಾದ ಇರಲಿವೆ. ಎಲ್ಲರೊಂದಿಗೆ ಹೊಂದಿಕೊಂಡು ನಡೆದುಕೊಳ್ಳುವಿರಿ. ಹಣದ ಮೇಲೆ ಅತಿಯಾದ ಆಸೆ ಇರುವುದಿಲ್ಲ. ಸೂರ್ಯನ ಪೂಜೆಯಿಂದ ಉತ್ತಮ ಆರೋಗ್ಯ ಮತ್ತು ಯಶಸ್ಸು ದೊರೆಯುತ್ತದೆ. ಹೂ ಗಿಡಗಳನ್ನು ಪೋಷಿಸಿ ನಿರೀಕ್ಷಿತ ಶುಭ ಫಲಗಳನ್ನು ಪಡೆಯಬಹುದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.