ನವಗ್ರಹಗಳ ದೋಷ ಪರಿಹಾರಕ್ಕೆ ಆಂಜನೇಯನ ಪೂಜೆಯೇ ಪರಿಹಾರ; ಹನುಮನ ಅನುಗ್ರಹ ಪಡೆಯಲು ಹೀಗಿರಲಿ ಪೂಜಾಕ್ರಮ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವಗ್ರಹಗಳ ದೋಷ ಪರಿಹಾರಕ್ಕೆ ಆಂಜನೇಯನ ಪೂಜೆಯೇ ಪರಿಹಾರ; ಹನುಮನ ಅನುಗ್ರಹ ಪಡೆಯಲು ಹೀಗಿರಲಿ ಪೂಜಾಕ್ರಮ

ನವಗ್ರಹಗಳ ದೋಷ ಪರಿಹಾರಕ್ಕೆ ಆಂಜನೇಯನ ಪೂಜೆಯೇ ಪರಿಹಾರ; ಹನುಮನ ಅನುಗ್ರಹ ಪಡೆಯಲು ಹೀಗಿರಲಿ ಪೂಜಾಕ್ರಮ

ನವಗ್ರಹಗಳ ದೋಷದಿಂದ ಬದುಕಿನಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಅದಕ್ಕಾಗಿ ಆಂಜನೇಯ ಪೂಜೆಯನ್ನು ಮಾಡಬೇಕು. ಆಂಜನೇಯನ ಪೂಜೆಯನ್ನು ಮಾಡುವ ಮೂಲಕ ನವಗ್ರಹಗಳ ಅಶುಭ ಫಲಗಳಿಂದ ಪಾರಾಗಬಹುದು.

ನವಗ್ರಹಗಳ ದೋಷ ಪರಿಹಾರಕ್ಕೆ ಆಂಜನೇಯನ ಪೂಜೆಯೇ ಪರಿಹಾರ
ನವಗ್ರಹಗಳ ದೋಷ ಪರಿಹಾರಕ್ಕೆ ಆಂಜನೇಯನ ಪೂಜೆಯೇ ಪರಿಹಾರ

ರಾವಣನು ಒಮ್ಮೆ ನವಗ್ರಹಗಳನ್ನು ಬಂಧನದಲ್ಲಿ ಇರಿಸುತ್ತಾನೆ. ಆಗ ಆಂಜನೇಯನು ಸಮಸ್ತ ನವಗ್ರಹ ದೇವತೆಗಳನ್ನು ಬಂಧಮುಕ್ತಗೊಳಿಸುತ್ತಾನೆ. ಹೀಗಾಗಿಯೇ ಶ್ರೀ ಆಂಜನೇಯನ ಪೂಜೆಯನ್ನು ಮಾಡುವ ಮೂಲಕ ನವಗ್ರಹಗಳ ಅಶುಭ ಫಲಗಳಿಂದ ಪಾರಾಗಬಹುದು.

ಆಂಜನೇಯನ ಪೂಜೆ ಮಾಡುವ ಮುನ್ನ ಮುಖ್ಯ ವಿಚಾರವನ್ನು ನೆನಪಿನಲ್ಲಿ ಇಡಬೇಕು. ಭೀಮನನ್ನೇ ಅಸ್ಥಿರಗೊಳಿಸಿದ ಆಂಜನೇಯನ ನಿಜವಾದ ಶಕ್ತಿ ಇರುವುದು ರಾಮನಾಮದಲ್ಲಿ ಮಾತ್ರ. ರಾಮನಾಮ ಬಲದಿಂದ ಆಂಜನೇಯನ ವಿರುದ್ಧ ಶ್ರೀರಾಮಚಂದ್ರನೇ ಸೋಲುವ ಸಂದರ್ಭ ಬಂದುಬಿಡುತ್ತದೆ. ಆದ್ದರಿಂದ ಆಂಜನೇಯನ ಪೂಜೆಯನ್ನು ಮಾಡುವ ಮೊದಲು ಕುಲ ದೇವರ ಪೂಜೆಯನ್ನು ಮಾಡಬೇಕು. ಪ್ರತಿಯೊಂದು ಊರನ್ನು ಒಂದು ಹೆಣ್ಣು ದೇವತೆ ಕಾಪಾಡುತ್ತಾಳೆ. ಆಕೆಯನ್ನು ಗ್ರಾಮ ದೇವತೆ ಎಂದು ಕರೆಯುತ್ತೇವೆ. ಈ ಕಾರಣದಿಂದ ಗ್ರಾಮ ದೇವತೆಯ ಪೂಜೆಯನ್ನು ಮಾಡಬೇಕು. ಪೂಜೆ ಎಂದರೆ ಆಯಾ ದೇವರ ಶ್ಲೋಕಗಳನ್ನು ಪಠಿಸಿದರೂ ಸಾಕು.

ಅನಂತರದ ಮುಖ್ಯ ವಿಚಾರವೆಂದರೆ ಸಂಕಲ್ಪ. ಪ್ರತಿಯೊಂದು ಪೂಜೆಯನ್ನು ಮಾಡುವುದರ ಹಿಂದೆ ಒಂದು ನಿಜವಾದ ಕಾರಣವಿರುತ್ತದೆ. ಪ್ರತಿಯೊಬ್ಬರು ಮನಸ್ಸಿನಲ್ಲಿ ಒಂದು ಆಸೆಯನ್ನು ಇಟ್ಟುಕೊಂಡು ಇಷ್ಟ ದೇವತೆಗಳ ಪೂಜೆಯನ್ನು ಮಾಡುತ್ತಾರೆ. ಆಸೆಯನ್ನು ದೇವರಲ್ಲಿ ಬೇಡಿಕೊಳ್ಳುವುದೇ ಸಂಕಲ್ಪ. ಇದರಲ್ಲಿ ದಿನ ಶುದ್ದಿ ಅಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಮುಂತಾದವು ಬರುತ್ತದೆ. ಇದನ್ನು ದಿನ ಶುದ್ದಿ ಎಂದು ಕರೆಯುತ್ತೇವೆ.

ಮೊದಲು ಮನೆಯಲ್ಲಿರುವ ಹಿರಿಯರ ಆಶೀರ್ವದವನ್ನು ಪಡೆಯಬೇಕು. ಅನಂತರ ಶ್ರೀ ಆಂಜನೇಯ ಸ್ವಾಮಿಯ ಭಾವಚಿತ್ರವನ್ನು ಅಥವಾ ನಮ್ಮ ಹೆಬ್ಬೆಟ್ಟಿನ ಅಳತೆಯ ಆಂಜನೇಯನ ವಿಗ್ರಹವನ್ನು ಗಣಪತಿಯ ಸಮೇತ ಇಟ್ಟುಕೊಳ್ಳಬೇಕು.

ಆಂಜನೇಯನಿಗೆ ನೈವೇದ್ಯವಾಗಿ ಯಾವುದೇ ಹಣ್ಣನ್ನು ಬಳಸಬಹುದು. ಆದರೆ ಬಾಳೆಹಣ್ಣು ಮತ್ತು ಎಳನೀರನ್ನು ಮರೆಯಬಾರದು. ಇದರೊಂದಿಗೆ ರವೆಯಿಂದ ಮಾಡಿದ ಸಜ್ಜಿಗೆಯನ್ನು ನೈವೇದ್ಯವಾಗಿ ನೀಡಬೇಕು. ಈ ಪ್ರಸಾದವನ್ನು ಮೊದಲು ಇಬ್ಬರು ಮಕ್ಕಳಿಗೆ ನೀಡಿ ಕುಟುಂಬದ ಎಲ್ಲರೂ ಸೇವಿಸಬೇಕು. ಹೂಗಳಲ್ಲಿ ಪ್ರತಿಯೊಂದು ಹೂವು ಆಂಜನೇಯನಿಗೆ ಇಷ್ಟ. ಆದರೆ ಸಿಂಧೂರವನ್ನು ಕಡ್ಡಾಯವಾಗಿ ಬಳಸಲೇಬೇಕು. ಈ ರೀತಿ ನೀತಿಯಿಂದ ನಾವು ಬೇಡುವ ಎಲ್ಲಾ ವರಗಳನ್ನು ಶ್ರೀ ಆಂಜನೇಯನು ದಯ ಪಾಲಿಸುತ್ತಾನೆ. ಈ ಕೆಳಕಂಡ ಸಂಕಲ್ಪದ ಮಂತ್ರ ಒಂದೇ ರೀತಿ ಕಂಡರೂ ಮಂತ್ರ ಭಾಗದಲ್ಲಿ ಬದಲಾವಣೆ ಇದೆ ಗಮನಿಸಿ.

ಮೊದಲು ಎರಡು ತುಪ್ಪದ ದೀಪಗಳನ್ನು ದೇವರ ಎರಡು ಬದಿಗಳಲ್ಲಿ ಬೆಳಗಿಸಬೇಕು. ಅನಂತರ ಆ ದೀಪಗಳನ್ನು ಪೂಜಿಸಬೇಕು. ಇದಾದ ನಂತರ ಆಂಜನೇಯ ಸ್ವಾಮಿಯನ್ನು ಪೂಜಾಮಂಟಪಕ್ಕೆ ಆಹ್ವಾನಿಸಬೇಕು. ಅಂಜನೇಯ ಸ್ವಾಮಿಯ ಬೇರೆ ಬೇರೆ ಶ್ಲೋಕಗಳ ಬಗ್ಗೆ ತಿಳಿದಿಲ್ಲ ಎಂದರೆ ಒಂದೇ ಶ್ಲೋಕವನ್ನು ಪ್ರತಿ ಬಾರಿಯೂ ಹೇಳಿದರೆ ಖಂಡಿತ ತಪ್ಪಲ್ಲ. ಅನಂತರ ಪೀಠ ಪೂಜೆಯನ್ನು ಮಾಡಬೇಕು. ತದನಂತರ ಬರುವುದೇ ಸಂಕಲ್ಪ. ಇದಾದ ನಂತರ ಪಂಚಾಮೃತ ಅಭಿಷೇಕ ಮಾಡುವ ಬದಲು ಪಂಚಾಮೃತವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ. ಆಂಜನೇಯನಿಗೆ ಹಾಲು ಮತ್ತು ನೀರಿನ ಅಭಿಷೇಕ ಬಲುಪ್ರಿಯ. ಎಳನೀರನ್ನು ಮರೆಯಬಾರದು. ತೆಂಗಿನಕಾಯಿ ಹೋಳನ್ನು ಸಮರ್ಪಿಸುವುದು ಮರೆಯಬಾರದು.

ಸಾಧ್ಯವಾದರೆ ಕೋತಿಗಳಿಗೆ ಬಾಳೆಹಣ್ಣು ಮತ್ತು ತೆಂಗಿನಹೋಳನ್ನು ನೀಡಬಹುದು. ಇದರಿಂದ ನವಗ್ರಹಗಳ ತೊಂದರೆಯಿಂದ ಪಾರಾಗುವುದು ಖಂಡಿತ. ನೈವೇದ್ಯಕ್ಕೆ ಪ್ರಸಾದವನ್ನು ಸಿದ್ಧಪಡಿಸಿಕೊಳ್ಳದೇ ಊದಿನ ಕಡ್ಡಿಯನ್ನು ಯಾವುದೇ ಕಾರಣಕ್ಕೂ ಹಚ್ಚಬಾರದು. ಧರ್ಮಶಾಸ್ತ್ರಗಳ ಪ್ರಕಾರ ಊದಿನ ಕಡ್ಡಿಯನ್ನು ಅಂಟಿಸಿದ ತಕ್ಷಣ ದೇವರಿಗೆ ಹಸಿವೆ ಹೆಚ್ಚಾಗುತ್ತದೆ. ಆಂಜನೇಯ ಸ್ವಾಮಿಗೆ ಕಷ್ಟಪಟ್ಟು ದುಡಿಯುವ ಜನರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಆದ್ದರಿಂದ ಕಾರ್ಮಿಕ ವರ್ಗಕ್ಕೆ ಸಹಾಯ ಮಾಡಿದರೆ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ.

ಪೂಜೆಯ ಆರಂಭ

ಶ್ರೀ ಗುರುಭ್ಯೋನಮ: ಮಾತೃಭ್ಯೋನಮ: ಪಿತೃಭ್ಯೋನಮ: ಆಚಾರ್ಯೇಭ್ಯೋನಮ:

ಗುರುರ್ಬ್ರಹ್ಮಾ ಗುರುವಿರ್ಷ್ಣು: ಗುರುರ್ದೇವೋ ಮಹೇಶ್ವರ:

ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈಶ್ರೀಗುರುವೇ ನಮ:

ಗುರುವೇ ಸರ್ವಲೋಕಾನಾಂ ಭಿಷಜೇ ಭವ ರೋಗಿಣಾಮ್

ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮ:

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್

ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕ:

ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪ:

ಧೂಮ್ರಕೇತುರ್ಗಣಾಧ್ಯಕ್ಷ: ಫಾಲಚಂದೋಗಜಾನನ:

ದ್ವಾದಶೈತಾನಿ ನಾಮಾನಿ ಯ: ಪಠೇಚ್ಛೃಣುಯಾದಪಿ

ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ

ಸಂಗ್ರಾಮೇ ಸರ್ವಕಾಯೇಷು ವಿಘ್ನಸ್ತಸ್ಯ ನ ಜಾಯತೇ

ಅಭೀಪ್ಸಿತಾರ್ಥಸಿದ್ಧ್ಯರ್ಥಂ ಪೂಜಿತೋ ಯಸುರೈರಪಿ

ಸರ್ವವಿಘ್ನಚ್ಛಿದೇ ತಸ್ಮೈ ಗಣಾಧಿಪತಯೇ ನಮ:

ಶುಭಾಭ್ಯಾಂ ಶುಭೇ ಶೋಭನೇ ಮುಹೂರ್ತೇ ಅದ್ಯ ಬ್ರಹ್ಮಣ: ದ್ವಿತೀಯಪರಾರ್ಧೇ ಶ್ವೇತ ವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೆ ಚಾಂದ್ರಾಮಾನೇನಾಸ್ಯ ಪ್ರಭವಾದಿ ಷಷ್ಥಿಸಂವತ್ಸರಾಣಾಂ ಮಧ್ಯೇ ಶ್ರೀಮತ್ ಶೋಭನಕೃತು ನಾಮಸಂವತ್ಸರೇ ___________ಯನೆ _________ಋತೌ __________ಮಾಸೇ___________ಪಕ್ಷೇ ______________( ತಿಥಿಯನ್ನುಹೇಳಬೇಕು )___________ ( ದಿನವನ್ನು ಹೇಳಬೇಕು ) ವಾಸರಯುಕ್ತಾಯಾಂ ಶುಭನಕ್ಷತ್ರ ಶುಭಯೋಗ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಮಮ (ಮನಸ್ಸಿನಲ್ಲಿ ಅವಿವಾಹಿತರು ಹೇಳಬೇಕು ) ಉಪಾತ್ತ ಸಮಸ್ತ ದುರಿತಕ್ಷಯದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಅಸ್ಮಾಕಂ ( ವಿವಾಹಿತರು ಹೇಳಬೇಕು ) ಸಹಕುಟುಂಬಾನಾಂ ಕ್ಷೇಮಸ್ಠೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ. ಧರ್ಮಾರ್ಥ ಕಾಮಮೋಕ್ಷ ಚತುರ್ವಿದ ಫಲಪುರುಷಾರ್ಥ ಸಿಧ್ಯರ್ಥಂ ಸಕಲ ಕಾರ್ಯೇಷು ನಿರ್ವಿಘ್ನಥಾ ಸಿಧ್ಯರ್ಥಂ ಸಮಸ್ತ ಸನ್ಮಂಗಳಾ ವ್ಯಾಪ್ಯಾರ್ಥಂ ಯಾವಜ್ಜೀವ ದೀರ್ಘಸೌಮಂಗಲ್ಯಾಭಿವೃದ್ಧ್ಯರ್ಥಂ ಪುತ್ರ ಪೌತ್ರ ಸಂಪತ್ ಸೌಭಾಗ್ಯ ಸಿದ್ದ್ಯರ್ಥಂ ಧನ ಕನಕ ವಸ್ತು ವಾಹನ ಧಾನ್ಯ ಪಶುಸುತ ಕ್ಷೇತ್ರಾಯುರಾರೋಗ್ಯ ಐಶ್ವರ್ಯಾದಿ ಸಕಲ ಮನೋರಧಾವಾಪ್ರ್ಯರ್ಥಂ ಸತ್ಸಂತಾನ ಸೌಭಾಗ್ಯ ಶುಭಫಲಾ ವ್ಯಾಪ್ತ್ಯರ್ಥಂ ಅಪಮೃತ್ಯು ಪೀಡಾ ಪರಿಹಾ ದ್ವಾರಾ ದೀರ್ಘಾಯುಷ್ಯ ಅಭಿವೃದ್ಧ್ಯರ್ಥಂ ಅಚಂಚಲ ಭಕ್ತಿಸಿದ್ಧ್ಯರ್ಥಂ ಇಷ್ಟಕಾಮ್ಯಾರ್ಥ ಸಿದ್ಧ್ಯರ್ಥಂ ಸಮಸ್ತಕಾರ್ಯೇಷು ನಿರ್ವಿಘ್ನಪೂರ್ವಕ ಜಯಪ್ರಾಪ್ತ್ಯರ್ಥಂ ಸಕಲ ಗ್ರಹದೋಷಾ ನಿವೃತ್ಯರ್ಥಂ ಭೂತ ಬಾದಾ ನಿವೃತ್ಯರ್ಥಂ ಸರ್ಪದೋಷ ನಿವಾರರಾರ್ಥಂ ಋಣಭಾದಾ ನಿವೃತ್ಯರ್ಥಂ ಸಕಲವಿಧ್ಯಾ ಪಾರಂಗತಾ ಸಿದ್ದ್ಯರ್ಥಂ ಸಕಲದೇವತಾ ಪ್ರಸಾದೇನ ಧನ ಪಶು ಪುತ್ರಲಾಭಾದಿ ಫಲಸಿದ್ಧ್ಯರ್ಥಂ

ಪೂರ್ವೋಕ್ತ ಏವಂಗುಣ ವಿಶೇಷಣ ವಿಶಿಷ್ಠಾಯಾಂ ಶುಭತಿಥೌ ಮಮೋಪಾತ್ತ ದುರಿತ ಕ್ಷಯದ್ವಾರಾ ಸೀತಾ ಲಕ್ಷ್ಮಣ ಭರತ ಶತೃಘ್ನ ಹನುಮತ್ ಸಮೇತ ಶ್ರೀ ರಾಮಚಂದ್ರಸ್ವಾಮಿ ದೇವತಾ ಪ್ರೀತ್ಯರ್ಥಂ ಶ್ರೀ ಆಂಜನೇಯ ಸ್ವಾಮಿ ದೇವತಾ ಪ್ರೀತ್ಯರ್ಥಂ ಕಲ್ಪೋಕ್ತ ಪ್ರಕಾರೇಣ ಶ್ರೀ ಆಂಜನೇಯಸ್ವಾಮಿದೇವತ ಷೋಡಶೋಪಚಾರ ಪೂಜಾನಿ ಕರಿಷ್ಯೆ

ತದನಂತರ ಅಭಿಷೇಕ,ವಸ್ತ್ರಾದಿಯಾದಿ ದೂಪ, ದೀಪ, ನೇವೇದ್ಯ ಮತ್ತು ಮಂಗಳಾರತಿ ಮಾಡಬೇಕು.

ಅನಂತರ ನಿಮಗೆ ತಿಳಿದ ಶ್ರೀ ಆಂಜನೇಯಸ್ವಾಮಿಯ ಮಂತ್ರವನ್ನು ಹೇಳಿ ದೀರ್ಘದಂಡ ನಮಸ್ಕಾರವನ್ನು ಮಾಡಬೇಕು.

ಈ ಕೆಳಕಂಡ ಮಂತ್ರ ಶಕ್ತಿಶಾಲಿಯಾದದ್ದು ಎಂದು ಹೇಳಲಾಗಿದೆ.

ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ

ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ ಶತ್ರೂನ್ ಸಂಹಾರ ಮಾಂ ಪ್ರಭೋ

ಇದರ ಜೊತೆ ಈ ಕೆಳಗಿನ ಶ್ಲೋಕವನ್ನೂ ಹೇಳುವುದು ಮುಖ್ಯ

ಓಂ ದಶರಥಾಯ ವಿದ್ಮಹೇ , ಸೀತಾ ವಲ್ಲಭಾಯ ಧೀಮಹಿ, ತನ್ನೋ ಶ್ರೀರಾಮಃಪ್ರಚೋದಯಾತ್‌

ರಾಮ ರಾಮೇತಿ, ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ

ಬರಹ: ಎಚ್‌, ಸತೀಶ್‌, ಜ್ಯೋತಿಷಿ

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.