ಭಾರತ ತಂಡವನ್ನು ಭೇಟಿಯಾದ ಆಸ್ಟ್ರೇಲಿಯಾ ಪ್ರಧಾನಿ; ವಿರಾಟ್ ಕೊಹ್ಲಿ-ಆಂಥೋನಿ ಅಲ್ಬನೀಸ್ ತಮಾಷೆಯ ಸಂಭಾಷಣೆ ವೈರಲ್
ಪರ್ತ್ನಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನಿಸ್ ಶ್ಲಾಘಿಸಿದ್ದಾರೆ. "ಅದೊಂದು ಅದ್ಭುತ ಶತಕವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್, ನೀವು ಅದಕ್ಕೆ ಮಸಾಲೆ ಸೇರಿಸುತ್ತಿದ್ದೀರಿ ಎಂದು ಹೇಳಿದರು.
ಭಾರತ ಕ್ರಿಕೆಟ್ ತಂಡ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, 5 ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರ ಮೊದಲ ಪಂದ್ಯ ಪರ್ತ್ನಲ್ಲಿ 295 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ಡಿಸೆಂಬರ್ 6ರಿಂದ ಶುರುವಾಗುವ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಸಮರಾಭ್ಯಾಸ ನಡೆಸುತ್ತಿದೆ. ಮುಂದಿನ ಪಂದ್ಯಕ್ಕೆ ಕಸರತ್ತು ನಡೆಸುತ್ತಿರುವ ಮಧ್ಯೆ ಭಾರತೀಯ ಆಟಗಾರರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.
ಪ್ರಧಾನಿ ಅಲ್ಬನೀಸ್ ಅವರಿಗೆ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರು ಭಾರತ ತಂಡದ ಆಟಗಾರರನ್ನು ಪರಿಚಯಿಸಿದರು. ಈ ವೇಳೆ ಪ್ರಧಾನಿ ಅವರು ಪರ್ತ್ ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನ ಶ್ಲಾಘಿಸಿದ್ದಾರೆ. ಹಾಗೆ ಮುಂದಿನ ಪಂದ್ಯಗಳಿಗೆ ಶುಭ ಕೋರಿದ್ದಾರೆ. ಅದರಲ್ಲೂ ವಿಶೇಷವಾಗಿ ಆಂಥೋನಿ ಅಲ್ಬನೀಸ್ ಅವರಿಗೆ ವಿರಾಟ್ ಕೊಹ್ಲಿ ಹೆಸರು ಪರಿಚಯಿಸುವ ಅಗತ್ಯವೇ ಇರಲಿಲ್ಲ. ಏಕೆಂದರೆ ಕೊಹ್ಲಿ ಕಂಡೊಡನೆ ಖುಷ್ ಆದರು. ಪರ್ತ್ ಟೆಸ್ಟ್ನಲ್ಲಿ ಶತಕ ಗಳಿಸಿದ ವಿರಾಟ್ ಅವರನ್ನು ಶ್ಲಾಘಿಸಿದರು. ಇದಕ್ಕೆ ಕೊಹ್ಲಿ ಪ್ರತಿಕ್ರಿಯಿಸಿ ಧನ್ಯವಾದ ಹೇಳಿದ್ದಲ್ಲದೆ, ತಮಾಷೆ ಕೂಡ ಮಾಡಿದರು.
ವಿರಾಟ್ ಮತ್ತು ಅಲ್ಬನೀಸ್ ಸಂಭಾಷಣೆ ವೈರಲ್
ವಿರಾಟ್ ಅವರನ್ನು ನೋಡಿದ ಕೂಡಲೇ ಅಲ್ಬನೀಸ್ ಅವರೊಂದಿಗೆ ಕೈಕುಲುಕಿ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಇದಾದ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ, 'ನೀವು ಪರ್ತ್ನಲ್ಲಿ ಅದ್ಭುತ ಶತಕ ಬಾರಿಸಿದ್ದೀರಿ. ಆ ಸಮಯದಲ್ಲಿ ನಾವು ಸಾಕಷ್ಟು ತೊಂದರೆ ಅನುಭವಿಸುವಂತೆ ಮಾಡಿದ್ದೀರಿ. ಇದು ನಿಜವಾಗಿಯೂ ಅದ್ಭುತ ಶತಕ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್, ನೀವು ಅದಕ್ಕೆ ಮಸಾಲೆ ಸೇರಿಸುತ್ತಿದ್ದೀರಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ವಿರಾಟ್ ಮತ್ತು ಅಲ್ಬನೀಸ್ ನಡುವಿನ ಸಂಭಾಷಣೆ ಸಾಕಷ್ಟು ತಮಾಷೆಯಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿಗೂ ಟ್ಯಾಗ್
ಕೊಹ್ಲಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಅವರ ಜೊತೆಗೆ ಮಾತುಕತೆ ನಡೆಸಿ, ಪರ್ತ್ನಲ್ಲಿ ನೀಡಿದ ಉತ್ತಮ ಪ್ರದರ್ಶನಕ್ಕೆ ಶ್ಲಾಘಿಸಿದರು. ಕೊಹ್ಲಿ ಪರ್ತ್ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 30ನೇ ಶತಕ ಗಳಿಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ 81ನೇ ಸೆಂಚುರಿ. ಅಲ್ಲದೆ, ಬುಮ್ರಾ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇಬ್ಬರ ನಂತರ ರವೀಂದ್ರ ಜಡೇಜಾ, ಆರ್ ಅಶ್ವಿನ್ ಅವರನ್ನು ಪರಿಚಯಿಸಿದ ವಿಡಿಯೋ ನೆಟ್ಸ್ನಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಸರ್ಕಾರದ ಸಿಬ್ಬಂದಿಯೊಂದಿಗೆ ಭಾರತ ಗ್ರೂಪ್ ಫೋಟೋ ತೆಗೆಸಿಕೊಂಡಿದೆ. ಆಲ್ಬನೀಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ವಿದೇಶ ಪ್ರವಾಸ ಕೈಗೊಂಡಾಗೆಲ್ಲಾ ಅಲ್ಲಿನ ಹೈಕಮೀಷನ್ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗುತ್ತದೆ. ಈ ಬಾರಿ ಭಾರತೀಯ ಆಟಗಾರರು ಆಸೀಸ್ ಪ್ರಧಾನಿಯನ್ನು ಭೇಟಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಧಾನಿ ಅವರು ಟೀಮ್ ಇಂಡಿಯಾ ಆಟಗಾರರೊಂದಿಗೆ ಸಾಕಷ್ಟು ಸಮಯವನ್ನು ಕಳೆದರು. ಅವರೊಂದಿಗೆ ಸಾಕಷ್ಟು ಸಂವಹನ ನಡೆಸಿದರು. ಟೀಮ್ ಇಂಡಿಯಾ ನವೆಂಬರ್ 30ರಂದು ಮಿನಿಸ್ಟರ್ ಇಲೆವೆನ್ ವಿರುದ್ಧ ಎರಡು ದಿನಗಳ ಅಭ್ಯಾಸ ಪಂದ್ಯ ಆಡಲಿದೆ.