ಸಿನಿಮಾ ಸ್ಟೋರಿಯನ್ನೂ ಮೀರಿಸುವಂತಿದೆ ಸಂಜು ಬಸಯ್ಯ- ಪಲ್ಲವಿ ಲವ್‌ ಸ್ಟೋರಿ! ಎಲ್ಲಿಯೂ ಹೇಳದ ಗುಟ್ಟು ರಟ್ಟು ಮಾಡಿದ ಕಾಮಿಡಿ ಕಿಲಾಡಿ
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ಸ್ಟೋರಿಯನ್ನೂ ಮೀರಿಸುವಂತಿದೆ ಸಂಜು ಬಸಯ್ಯ- ಪಲ್ಲವಿ ಲವ್‌ ಸ್ಟೋರಿ! ಎಲ್ಲಿಯೂ ಹೇಳದ ಗುಟ್ಟು ರಟ್ಟು ಮಾಡಿದ ಕಾಮಿಡಿ ಕಿಲಾಡಿ

ಸಿನಿಮಾ ಸ್ಟೋರಿಯನ್ನೂ ಮೀರಿಸುವಂತಿದೆ ಸಂಜು ಬಸಯ್ಯ- ಪಲ್ಲವಿ ಲವ್‌ ಸ್ಟೋರಿ! ಎಲ್ಲಿಯೂ ಹೇಳದ ಗುಟ್ಟು ರಟ್ಟು ಮಾಡಿದ ಕಾಮಿಡಿ ಕಿಲಾಡಿ

Comedy Khiladigalu Sanju Basayya Love story: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ- ಪಲ್ಲವಿ ಬಳ್ಳಾರಿ ಜೋಡಿಯ ಲವ್‌ಸ್ಟೋರಿ ಸಿನಿಮಾವನ್ನೂ ಮೀರಿಸುವಂತಿದೆ. ಮನೆಯ ಮಂದಿಯನ್ನು ಎದುರು ಹಾಕಿಕೊಂಡು, ರಿಜಿಸ್ಟರ್‌ ಮದುವೆ ಆಗಿ, ಈಗ ಎರಡೂ ಕುಟುಂಬದ ಜತೆ ಅಷ್ಟೇ ಖುಷಿಯಾಗಿದೆ ಈ ಜೋಡಿ. ಆ ಪ್ರೇಮ್‌ ಕಹಾನಿ ಬಗ್ಗೆ ಈ ಜೋಡಿ ಹೇಳಿಕೊಂಡಿದೆ.

ಸಂಜು ಬಸಯ್ಯ- ಪಲ್ಲವಿ ಬಳ್ಳಾರಿ ಲವ್‌ ಸ್ಟೋರಿ
ಸಂಜು ಬಸಯ್ಯ- ಪಲ್ಲವಿ ಬಳ್ಳಾರಿ ಲವ್‌ ಸ್ಟೋರಿ (Instagram\ Sanju Basayya)

Sanju basayya and Pallavi Bellary Love story: ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಇಡೀ ಕರುನಾಡಿಗೆ ಚಿರಪರಿಚಿತರಾದವರು ಬೈಲಹೊಂಗಲ ಮೂಲದ ಕುಬ್ಜ ನಟ ಸಂಜು ಬಸಯ್ಯ. ತಮ್ಮ ಕಾಮಿಡಿ ಟೈಮಿಂಗ್‌ ಮತ್ತು ಪಂಚಿಂಗ್‌ ಡೈಲಾಗ್‌ಗಳ ಮೂಲಕವೇ ನಗುವಿನ ಹೊಳೆಯನ್ನೇ ಹರಿಸುತ್ತಿದ್ದಾರೆ ಈ ನಟ. ಹೀಗಿರುವ ಇದೇ ಸಂಜು ಬಸಯ್ಯ, ಕಾಮಿಡಿ ಕಿಲಾಡಿಗಳು ಶೋಗೂ ಮುನ್ನ ಡ್ರಾಮಾ ಜೂನಿಯರ್ಸ್‌ಗೂ ಆಡಿಷನ್‌ ಕೊಟ್ಟು ಅಲ್ಲಿಯೂ ಸೆಲೆಕ್ಟ್‌ ಆಗಿದ್ದರು. ಆದರೆ, ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ಬಳಿಕ ಬಂದ ಕಾಮಿಡಿ ಕಿಲಾಡಿ ಮೂಲಕ ಮತ್ತೆ ಅದೇ ಜೀ ವೇದಿಕೆ ಏರಿ ತಮ್ಮ ಪ್ರತಿಭಾ ಪ್ರದರ್ಶನ ಹೊರಗೆಡವಿದರು.

ಹೀಗೆ ಇದೇ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಿಂದ ಫೇಮಸ್‌ ಆದ ಸಂಜು, ತಮ್ಮ ಕುಟುಂಬ ನಡೆಸಿಕೊಂಡು ಬರ್ತಿದ್ದ ಆರ್ಕೆಸ್ಟ್ರಾಗಳಲ್ಲಿಯೂ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡರು. ಉತ್ತರ ಕರ್ನಾಟಕ ಭಾಗದ ಬಹುತೇಕ ಜಾತ್ರಾ ಸಮಯದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳು, ನಾಟಕಗಳಲ್ಲಿ ಕಾಣಿಸಿಕೊಂಡು ಫೇಮ್‌ ಗಿಟ್ಟಿಸಿಕೊಂಡರು. ಮದುವೆ ಬಳಿಕ ಜೋಡಿ ನಂಬರ್‌ 1 ಶೋನಲ್ಲಿಯೂ ಪತ್ನಿ ಪಲ್ಲವಿ ಬಳ್ಳಾರಿ ಅವರ ಜತೆಗೆ ತೆರಳಿದ್ದರು. ಆದರೆ, ಇದೇ ಸಂಜು ಬಸಯ್ಯ ಮತ್ತು ಪಲ್ಲವಿ ಜೋಡಿಯ ಮದುವೆ ಅಷ್ಟು ಸುಲಭವಾಗಿ ನಡೆದಿಲ್ಲ. ಏಕೆಂದರೆ, ಈ ಜೋಡಿ ಎರಡೂ ಮನೆ ಕಡೆಯಿಂದ ಒಪ್ಪಿ ಮದುವೆ ಆಗಿಲ್ಲ!

ಸಂಜು ಬಸಯ್ಯ ಮತ್ತು ಪಲ್ಲವಿ ಅವರ ಪ್ರೇಮ್‌ ಕಹಾನಿ, ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ. ಇಲ್ಲಿ ಪ್ರೀತಿ ಇದೆ, ಬ್ರೇಕಪ್‌ ಇದೆ, ಬಳಿಕ ಮನೆಯವರಿಗೆ ಹೇಳದೇ ರಿಜಿಸ್ಟರ್‌ ಮದುವೆ, ಅದಾದ ಬಳಿಕ ಮನೆ ಬಿಟ್ಟು ಹೊರಬಂದಿದ್ದು.. ಹೀಗೆ ಪ್ರೀತಿಗಾಗಿ ಎಲ್ಲ ಕಷ್ಟ ಸುಖಗಳನ್ನು ದಾಟಿ, ಇದೀಗ ಎರಡೂ ಕುಟುಂಬದ ಜತೆಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇವರಿಬ್ಬರ ಲವ್‌ಸ್ಟೋರಿ ಶುರುವಾಗಿದ್ದು ಯಾವಾಗಿನಿಂದ? ಮೊದಲು ಪ್ರಪೋಸ್‌ ಮಾಡಿದ್ದು ಯಾರು? ಅದಾದ ಮೇಲೆ ಏನೆಲ್ಲ ಆಯ್ತು? ಈ ಎಲ್ಲದರ ಬಗ್ಗೆ ಪ್ರಿಯಾ ಸವಡಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದೆ ಈ ಜೋಡಿ.

2016ರಿಂದಲೇ ಪಲ್ಲವಿ ನನಗೆ ಪರಿಚಯ..

"ಕಾಮಿಡಿ ಕಿಲಾಡಿಗಳು ಶೋಗೆ ಹೋಗುವುದಕ್ಕೂ ಮೊದಲು ನನ್ನ ಮತ್ತು ಪಲ್ಲವಿ ಅವರ ಮುಖಾಮುಖಿ ಆಗಿದ್ದು ಆರ್ಕೆಸ್ಟ್ರಾದಲ್ಲಿ. ಕಾಮಿಡಿ ಕಿಲಾಡಿ ಶೋಗೂ ಹೋಗಿರಲಿಲ್ಲ. ಅಂದರೆ 2016ರಿಂದಲೇ ಪರಿಚಯ. ಇಬ್ಬರೂ ಫ್ರೆಂಡ್ಸ್‌ ಆದ್ವಿ. ಅದಾದ ಮೇಲೆ ಆ ಸ್ನೇಹದ ಗಾಢತೆ ಹೆಚ್ಚಾಗುತ್ತ ಹೋಯಿತು. ಅದಾದ ಮೇಲೆ ಕಾಮಿಡಿ ಕಿಲಾಡಿಗಳೂ ಶೋಗೂ ಹೋಗಿ ಬಂದೆ. ಹೀಗಿರುವಾಗ ಒಂದು ದಿನ ನನ್ನ ಮತ್ತು ಪಲ್ಲವಿ ನಡುವೆ ಜಗಳ ಆಯ್ತು. ಮಾತಿಗೆ ಮಾತು ಬೆಳೆಯಿತು. ಹಾಗಂತ ದೂರ ಆಗಲಿಲ್ಲ. ಪಕ್ಕದಲ್ಲಿಯೇ ಕೂತಿದ್ದಾಗಲೇ ಐ ಲವ್‌ ಯೂ ಅಂತ ಮೆಸೆಜ್‌ ಮಾಡಿದೆ. ಮೆಸೆಜ್‌ ನೋಡಿ, ಬಿದ್ದು ಬಿದ್ದು ನಕ್ಲು" ಎಂದಿದ್ದಾರೆ ಸಂಜು.

ಗಿಡ್ಡ ಅದಾನವ, ಅವ ಯಾಕೆ

"2021ರ ಸುಮಾರಿಗೆ ಇದೇ ವಿಚಾರವನ್ನು ಎರಡೂ ಮನೆಗಳಲ್ಲಿ ಪ್ರಸ್ತಾಪ ಮಾಡಿದ್ವಿ. ಆದರೆ ಮನೆಯಲ್ಲಿ ಒಪ್ಪಲಿಲ್ಲ. ಹಾಗಾಗಿ ಹೊರಗಿನವರಿಗೆ ಕಾಣಲಿ ಅಂತ ಬ್ರೇಕಪ್‌ ಸಹ ಮಾಡಿಕೊಂಡ್ವಿ. ಆದ್ರೆ, ನಾವು ಫೋನ್‌ನಲ್ಲಿ ಟಚ್‌ನಲ್ಲಿ ಇದ್ವಿ. ಪಲ್ಲವಿ ಅವರ ಮನೆಯಲ್ಲಿ, ಗಿಡ್ಡ ಇದ್ದಾನವ, ಅವನ್ನ ಕಟ್ಕೊಂಡ್‌ ಏನ್‌ ಮಾಡ್ತಿ ಅಂತ ಬೇಡ ಅಂದ್ರು. ನಮ್ಮ ಮನೆಯಲ್ಲೂ ಮದುವೆಗೆ ಒಪ್ಪಿರಲಿಲ್ಲ. ಆಗ ಹೆಚ್ಚು ತಡ ಮಾಡದೇ, ಮನೆಯಲ್ಲಿ ಹೇಳದೇ ಇಬ್ಬರೂ ರಿಜಿಸ್ಟರ್‌ ಮದುವೆ ಮಾಡಿಕೊಂಡ್ವಿ. ಅಫಿಷಿಯಲ್‌ ಆಗಿ ಬೈಲಹೊಂಗಲದಲ್ಲಿ ನಮ್ಮ ಮದುವೆ ಆಯ್ತು" ಎಂದು ಸಂಜು ಬಸಯ್ಯ ಹೇಳಿದ್ದಾರೆ.

ಮನೆಯವರಿಗೆ ಹೇಳದೇ ರಿಜಿಸ್ಟರ್‌ ಮದುವೆ

ಪಲ್ಲವಿ ಸಹ ಇದೇ ವಿಚಾರದ ಬಗ್ಗೆ ಮುಂದುವರಿದು ಸಂದರ್ಶನದಲ್ಲಿ ಮಾತನಾಡಿದ್ದಾರೆ, "ರಿಜಿಸ್ಟರ್‌ ಮದುವೆಯಲ್ಲಿ ಸಂಜು ಅವರ ಸ್ನೇಹಿತ ಒಬ್ಬರೇ ಇದ್ದಿದ್ದು. ಇನ್ನುಳಿದಂತೆ ಫ್ಯಾಮಿಲಿಯಿಂದ ಯಾರೂ ಇರಲಿಲ್ಲ. ರಿಜಿಸ್ಟರ್‌ ಆಗ್ತಿದ್ದಂತೆ ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ಮತ್ತೆ ಮದುವೆ ಮಾಡಿಕೊಂಡ್ವಿ. ಅದಾದ ಮೇಲೆ ಒಂದು ವಾರದ ಬಳಿಕ ಮನೆಯಲ್ಲಿ ರಿಜಿಸ್ಟರ್‌ ಮದುವೆ ಬಗ್ಗೆ ಇಬ್ಬರೂ ಹೇಳಿಕೊಂಡ್ವಿ. ಹೇಳುವ ಕರ್ತವ್ಯ ಇತ್ತು ಹೇಳಿದ್ದೇನೆ ಎಂದೆ. ಹಾಗಾದರೆ ಈ ಮನೆ ಋಣ ಮುಗೀತು, ಮಾತನಾಡಬೇಡ ಎಂದು ಹೇಳಿ ಕಳಿಸಿದ್ರು. ಆವತ್ತೇ ಸಂಜು ಅವರ ಜತೆ ಮನೆ ಬಿಟ್ಟು ಬಂದೆ. ಈಗ ಮನೆಯಲ್ಲಿ ಎಲ್ಲರೂ ಮೊದಲಿನಂತಿದ್ದಾರೆ. ಬೈಲಹೊಂಗಲದಲ್ಲಿಯೂ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡ್ವಿ. ಮದುವೆ ಬಳಿಕ ನೆಗೆಟಿವ್‌ ಕಾಮೆಂಟ್‌ಗಳೂ ಬಂದವು. ಹಾಗಂತ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಇಬ್ಬರೂ ಚೆನ್ನಾಗಿದ್ದೇವೆ. ಮುಂದೆಯೂ ಹಾಗೇ ಇರ್ತಿವೆ" ಎಂದಿದ್ದಾರೆ ಪಲ್ಲವಿ.

Whats_app_banner