ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು; ತೀರ್ಥವನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬಾರದು; ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು; ತೀರ್ಥವನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬಾರದು; ಮಾಹಿತಿ

ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು; ತೀರ್ಥವನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬಾರದು; ಮಾಹಿತಿ

ದೇವಸ್ಥಾನ, ಪೂಜೆ ಹೀಗೆ ಯಾವುದೇ ಧಾರ್ಮಿಕ ಸ್ಥಳ ಅಥವಾ ಕಾರ್ಯಕ್ರಮಗಳಲ್ಲಿ ತೀರ್ಥ ಕೊಡುವುದು ವಾಡಿಕೆ. ತೀರ್ಥ ಎಂದರೆ ದೇವರು ನೀಡುವ ಪ್ರಸಾದ ಎಂದೇ ಭಾವಿಸುತ್ತೇವೆ. ತೀರ್ಥಕ್ಕೆ ಸಾಕಷ್ಟು ಮಹತ್ವವಿದೆ. ಜೊತೆಗೆ ತೀರ್ಥ ತೆಗೆದುಕೊಳ್ಳುವಾಗ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತಹ ನಿಯಮಗಳು ಹೀಗಿವೆ.

ತೀರ್ಥ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳು
ತೀರ್ಥ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳು

ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದ ನಂತರ ತೀರ್ಥ ತೆಗೆದುಕೊಳ್ಳುವುದು ವಾಡಿಕೆ. ತೀರ್ಥ ತೆಗೆದುಕೊಳ್ಳದೇ ಬಹುಶಃ ಯಾರೂ ದೇವಸ್ಥಾನದಿಂದ ಹೊರಬರುವುದಿಲ್ಲ. ತೀರ್ಥಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಧಾನ್ಯವಿದೆ. ತೀರ್ಥ ನಾನಾ ರೂಪದಲ್ಲಿ ಇರಬಹುದು. ಆದರೆ ಭಕ್ತಿ ಮಾತ್ರ ಒಂದೇ ಆಗಿರುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತೀರ್ಥ ತೆಗೆದುಕೊಳ್ಳುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. ಇದರಿಂದ ಮಾತ್ರ ದೇವರ ಅನುಗ್ರಹ ಸಿಗಲು ಸಾಧ್ಯ ಎನ್ನಲಾಗುತ್ತದೆ. ತೀರ್ಥ ತೆಗೆದುಕೊಳ್ಳುವಾಗ ಈ ನಿಯಮಗಳು ಕಡ್ಡಾಯ

ಹಸ್ತಗೋಕರ್ಣ ಮುದ್ರೆಯೊಂದಿಗೆ ತೀರ್ಥವನ್ನು ತೆಗೆದುಕೊಳ್ಳಬೇಕು. ಕೆಲವರು ಬಲಗೈಯಿಂದ ಮಾತ್ರ ತೀರ್ಥ ತೆಗೆದುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದು ಕ್ರಮವಲ್ಲ. ತೀರ್ಥ ತೆಗೆದುಕೊಳ್ಳುವಾಗ ಬಲಗೈಯನ್ನು ಎಡಗೈಯಲ್ಲಿ ಇರಿಸಬೇಕು. ಹೆಬ್ಬೆರಳು ಮತ್ತು ತೋರು ಬೆರಳನ್ನು ಮಡಿಸಿ ಮತ್ತು ಇತರ ಮೂರು ಬೆರಳುಗಳನ್ನು ಮುಂದಕ್ಕೆ ಚಾಚುವಂತೆ ಇರಿಸಬೇಕು. ಈ ಮುದ್ರೆಯಲ್ಲಿರುವ ದೇವರ ಪವಿತ್ರ ನೀರನ್ನು ತೆಗೆದುಕೊಂಡು ಬಾಯಿಗೆ ಹಾಕಬೇಕು. ತೀರ್ಥ ಕುಡಿಯುವಾಗ ಸದ್ದು ಮಾಡಬಾರದು. ಹಾಗೆಯೇ ತೀರ್ಥವೂ ಕೆಳಗೆ ಬೀಳಬಾರದು. ತೀರ್ಥವನ್ನು ಇತರರೊಂದಿಗೆ ಹಂಚಿಕೊಳ್ಳುವುದು ತಪ್ಪು. ಓಂ ಅಚ್ಯುತ, ಅನಂತ, ಗೋವಿಂದ ಎಂಬ ನಾಮಗಳನ್ನು ಸ್ಮರಿಸುತ್ತಾ ಭಕ್ತಿ ಶ್ರದ್ಧೆಯಿಂದ ಭಗವಂತನನ್ನು ಸ್ಪರ್ಶಿಸುತ್ತಾ ತೀರ್ಥವನ್ನು ಕುಡಿಯಬೇಕು.

ತೀರ್ಥವನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು

ತೀರ್ಥ ತೆಗೆದುಕೊಂಡ ನಂತರ ಅನೇಕರು ತಮ್ಮ ಬಲಗೈಯನ್ನು ತಲೆಯ ಮೇಲೆ ಇಡುತ್ತಾರೆ ಅಂದರೆ ತಲೆ ನೇವರಿಸುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ಏಕೆಂದರೆ ಬ್ರಹ್ಮದೇವನು ತಲೆಯ ಮೇಲಿದ್ದಾನೆ. ಹೀಗೆ ಮಾಡುವುದರಿಂದ ನಾವು ಬ್ರಹ್ಮದೇವನಿಗೆ ಎಂಜಲು ಮುಟ್ಟಿಸಿದಂತಾಗುತ್ತದೆ. ಅದಕ್ಕಾಗಿಯೇ ತೀರ್ಥವನ್ನು ಸೇವಿಸಿದ ನಂತರ ನಿಮ್ಮ ಕೈಗಳನ್ನು ಉಜ್ಜಬಾರದು ಅಥವಾ ಒರೆಸಬಾರದು.

ಕೆಲವು ಕಡೆ ಮೂರು ಬಾರಿ ತೀರ್ಥ ತೆಗೆದುಕೊಳ್ಳಲು ಹೇಳುತ್ತಾರೆ. ಇದು ಯಾಕೆ ಎಂಬುದು ಹಲವರಿಗೆ ತಿಳಿದಿಲ್ಲ. ಮೊದಲ ಸಲ ನೀಡುವ ತೀರ್ಥವು ದೈಹಿಕ ಮತ್ತು ಮಾನಸಿಕ ಶುದ್ಧಿಗಾಗಿ ನೀಡಲಾಗುತ್ತದೆ. ಎರಡನೇ ಬಾರಿ ನ್ಯಾಯ ಧರ್ಮದ ನಡತೆ ಸರಿಯಾಗಿರಬೇಕು ಎಂದು ನೀಡಲಾಗುತ್ತದೆ. ಮೂರನೆಯ ಬಾರಿಗೆ ಪವಿತ್ರ ಭಗವಂತನ ಪರಮ ವಾಕ್ಯವನ್ನು ಯೋಚಿಸಿ ತೆಗೆದುಕೊಳ್ಳಬೇಕು.

ಕೆಲವರು ಪ್ರಸಾದ ತೆಗೆದುಕೊಂಡ ನಂತರ ಬಲಗೈಯಲ್ಲಿ ಇಟ್ಟುಕೊಂಡು ತಿನ್ನುತ್ತಾರೆ. ಹಾಗೆ ಮಾಡುವುದು ತಪ್ಪು. ಬಲಗೈಯಿಂದ ಪ್ರಸಾದವನ್ನು ತೆಗೆದುಕೊಂಡ ನಂತರ ಅದನ್ನು ಎಡಗೈಗೆ ವರ್ಗಾಯಿಸಬೇಕು. ಆ ನಂತರ ಪ್ರಸಾದವನ್ನು ಕಣ್ಣಿಗೆ ಹಚ್ಚಿಕೊಂಡು ಸ್ವಲ್ಪ ಸ್ವಲ್ಪವಾಗಿ ತಿನ್ನಬೇಕು. ಇದನ್ನು ಒಂದು ಕೈಯಲ್ಲಿ ಹಕ್ಕಿಯಂತೆ ಇಟ್ಟುಕೊಂಡು ತಿಂದರೆ ಮುಂದಿನ ಜನ್ಮದಲ್ಲಿ ಹಕ್ಕಿಯಾಗಿ ಹುಟ್ಟುವಿರಿ ಎಂಬ ಮಾತಿದೆ. ಮಹಿಳೆಯರು ಸೀರೆ ಸೆರಗು ಒಡ್ಡಿ ಹೂವು ಹಣ್ಣು ಪ್ರಸಾದವನ್ನು ಸ್ವೀಕರಿಸಬೇಕು.

ಯಾವಾಗ ತೀರ್ಥ ತೆಗೆದುಕೊಳ್ಳಬಾರದು

ದೇಹ ಅಶುದ್ಧವಾದಾಗ ತೀರ್ಥ ತೆಗೆದುಕೊಳ್ಳಬಾರದು. ಸ್ನಾನವನ್ನು ಮುಗಿಸದೆ, ಮಲವಿಸರ್ಜನೆಯ ನಂತರ ಪಾದಗಳನ್ನು ತೊಳೆಯದೆ ತೀರ್ಥವನ್ನು ತೆಗೆದುಕೊಳ್ಳಬಾರದು. ಅದೊಂದು ಅಪವಿತ್ರ ಕೃತ್ಯ. ವಿಭೂತಿ ಮತ್ತು ಕುಂಕುಮ ಇಲ್ಲದಿದ್ದರೂ ತೀರ್ಥ ಪ್ರಸಾದಗಳನ್ನು ತೆಗೆದುಕೊಳ್ಳಬಾರದು. ಅದಕ್ಕಾಗಿಯೇ ದೇವಸ್ಥಾನಕ್ಕೆ ಹೋಗುವವರೆಲ್ಲರೂ ಮೊದಲು ಕುಂಕುಮ ತೆಗೆದುಕೊಂಡು ಹಣೆಗೆ ಬೊಟ್ಟು ಹಾಕುತ್ತಾರೆ. ಮಹಿಳೆಯರು ಮುಟ್ಟಿನ ಸಮಯದಲ್ಲಿಯೂ ತೀರ್ಥ ಮತ್ತು ಪ್ರಸಾದಗಳನ್ನು ಮುಟ್ಟಬಾರದು. ಪೂಜಾ ಕೋಣೆಯ ಕಡೆಗೆ ಹೋಗಬೇಡಿ.

ತೀರ್ಥದಲ್ಲಿ ಎಷ್ಟು ವಿಧ?

ತೀರ್ಥವನ್ನು ನಾಲ್ಕು ರೀತಿಯಲ್ಲಿ ಹೇಳಲಾಗುತ್ತದೆ. ಮೊದಲನೆಯದು ಜಲತೀರ್ಥ. ಅಕಾಲಿಕ ಮರಣ ಮತ್ತು ಎಲ್ಲಾ ರೋಗಗಳಿಂದ ಮುಕ್ತಿ. ರಾತ್ರಿ ಪೂಜೆಯ ನಂತರ ಕಷಾಯ ತೀರ್ಥವನ್ನು ವಿತರಿಸಲಾಗುತ್ತದೆ. ಕೆಲವು ದೇವಸ್ಥಾನಗಳಲ್ಲಿ ಮಾತ್ರ ಕೊಡುತ್ತಾರೆ. ಪಂಚಾಮೃತ ತೀರ್ಥವನ್ನು ಸೇವಿಸಿದರೆ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಪಾನಕ ತೀರ್ಥ ನೀಡಲಾಗುತ್ತದೆ. ಇವುಗಳಷ್ಟೇ ಅಲ್ಲ, ತುಳಸಿ ತೀರ್ಥ, ಬಿಲ್ವ ತೀರ್ಥ ಮತ್ತು ಪಾಚ ಕರ್ಪೂರ ತೀರ್ಥವನ್ನೂ ವಿತರಿಸಲಾಗುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.