ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sankashahara Chaturthi: ಇಂದು ಸಂಕಷ್ಟಹರ ಚತುರ್ಥಿ; ಈ ರಾಶಿಯವರಿಗೆ ದೊರೆಯಲಿದೆ ವಿಘ್ನ ನಿವಾರಕ ಗಣೇಶನ ಅನುಗ್ರಹ

Sankashahara Chaturthi: ಇಂದು ಸಂಕಷ್ಟಹರ ಚತುರ್ಥಿ; ಈ ರಾಶಿಯವರಿಗೆ ದೊರೆಯಲಿದೆ ವಿಘ್ನ ನಿವಾರಕ ಗಣೇಶನ ಅನುಗ್ರಹ

Sankashahara Chaturthi: ಇಂದು( ಏ.27) ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಈ ದಿನ ವಿಘ್ನ ನಿವಾರಕ ಗಣೇಶನ ಅನುಗ್ರಹ ಪಡೆಯಲು ಭಕ್ತರು ಸಂಜೆ ಚಂದ್ರೋದಯದವರೆಗೂ ಉಪವಾಸ ಮಾಡುತ್ತಾರೆ. ಸಂಕಷ್ಟಹರ ಚತುರ್ಥಿ ವ್ರಥ ಕಥೆ ಓದಿ ಉಪವಾಸ ಮುರಿಯುತ್ತಾರೆ.

ಇಂದು ಸಂಕಷ್ಟಹರ ಚತುರ್ಥಿ ಈ ರಾಶಿಯವರಿಗೆ ದೊರೆಯಲಿದೆ ವಿಘ್ನ ನಿವಾರಕ ಗಣೇಶನ ಅನುಗ್ರಹ
ಇಂದು ಸಂಕಷ್ಟಹರ ಚತುರ್ಥಿ ಈ ರಾಶಿಯವರಿಗೆ ದೊರೆಯಲಿದೆ ವಿಘ್ನ ನಿವಾರಕ ಗಣೇಶನ ಅನುಗ್ರಹ (PC: Pixaby)

ಸಂಕಷ್ಟಹರ ಚತುರ್ಥಿ: ಪ್ರತಿ ತಿಂಗಳು ಹುಣ್ಣಿಮೆ ಆದ ನಾಲ್ಕನೇ ದಿನಕ್ಕೆ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ವಿಘ್ನ ನಿವಾರಕನನ್ನು ಪೂಜಿಸಿ, ಉಪವಾಸವಿದ್ದು ರಾತ್ರಿ ಚಂದ್ರೋದಯವಾದ ನಂತರ ಸಂಕಷ್ಟಹರ ಚತುರ್ಥಿ ವ್ರತ ಕಥೆಯನ್ನು ಓದಿ, ನಂತರ ಉಪವಾಸ ಮುರಿಯಲಾಗುತ್ತದೆ. ಈ ವ್ರತವನ್ನು ಆಚರಿಸುವುದು ಏಕೆ? ಪೂಜಾ ವಿಧಿ ವಿಧಾನ ಏನು? ಶುಭ ಮುಹೂರ್ತ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಈ ತಿಂಗಳು ಏಪ್ರಿಲ್‌ 27 ರಂದು ಅಂದರೆ, ಶನಿವಾರ ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಹೆಸರೇ ಸೂಚಿಸುವಂತೆ ಸಂಕಷ್ಟದಲ್ಲಿ ಇರುವವರು ಈ ಪೂಜೆ ಕೈಗೊಂಡರೆ ಅವರ ಕಷ್ಟಗಳು ದೂರಾಗುವುದರಲ್ಲಿ ಎರಡು ಮಾತಿಲ್ಲ. ಸಂತಾನ, ಮಕ್ಕಳ ದೀರ್ಘಾಯುಷ್ಯ, ಉದ್ಯೋಗ, ಆರೋಗ್ಯ, ಸುಖ, ಸಮೃದ್ಧಿಗಾಗಿ, ಮನಸ್ಸಿನ ಕೋರಿಕೆಯನ್ನು ಈಡೇರಿಸಿಕೊಳ್ಳಲು ಈ ಉಪವಾಸವನ್ನು ಆಚರಿಸುತ್ತಾರೆ. ಈ ದಿನ ಗಣೇಶ ಮತ್ತು ಚಂದ್ರನನ್ನು ಪೂಜಿಸಲಾಗುತ್ತದೆ.

ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ದುಃಖಗಳು ನಿವಾರಣೆಯಾಗಿ ಜೀವನದಲ್ಲಿ ಸುಖ, ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ. ಸಂಕಷ್ಟಹರ ಚತುರ್ಥಿಯ ದಿನ ಶಿವಯೋಗ ಮತ್ತು ಜ್ಯೇಷ್ಟ ನಕ್ಷತ್ರ ಸೇರಿ ನವಪಂಚಮ ಯೋಗವಾಗುತ್ತದೆ.

ಶುಭ ಸಮಯ

ಹಿಂದೂ ಕ್ಯಾಲೆಂಡರ್ ಪ್ರಕಾರ, ಸಂಕಷ್ಟಹರ ಚತುರ್ಥಿಯ ಶುಭ ಸಮಯವು ಏಪ್ರಿಲ್ 27 ರಂದು ಬೆಳಗ್ಗೆ 8.17 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಏಪ್ರಿಲ್ 28 ರಂದು ಬೆಳಿಗ್ಗೆ 8.21 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಸಂಕಷ್ಟಹರ ಚತುರ್ಥಿಯನ್ನು ಉದಯ ತಿಥಿಯ ಪ್ರಕಾರ ಏಪ್ರಿಲ್ 27 ರಂದು ಆಚರಿಸಲಾಗುತ್ತದೆ.

ಪೂಜೆಯ ವಿಧಾನ

ಸಂಕಷ್ಟಹರ ಚತುರ್ಥಿಯ ದಿನ ಗಣೇಶನನ್ನು ಪೂಜಿಸಬೇಕು. ಈ ವ್ರತ ಮಾಡುವುದರಿಂದ ಸಂಪತ್ತು, ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ. ಗಂಗಾಜಲವನ್ನು ಚಿಮುಕಿಸಿ ಇಡೀ ಮನೆಯನ್ನು ಶುದ್ಧೀಕರಿಸಬೇಕು. ಪೂಜಾ ಕೋಣೆಯಲ್ಲಿ ಪೀಠವನ್ನು ಇಟ್ಟು ಅದರ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಕಬೇಕು. ಅದರ ಮೇಲೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ನಿಯಮಗಳ ಪ್ರಕಾರ ಗಣಪತಿಗೆ ಮೊದಲ ಪೂಜೆ ಸಲ್ಲಿಸಬೇಕು. ವಿಘ್ನೇಶ್ವರನ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು . ಹಣ್ಣು, ಪುಷ್ಪ, ದೂರ್ವ ಹುಲ್ಲು, ದೀಪ, ನೈವೇದ್ಯಗಳನ್ನು ಅರ್ಪಿಸಬೇಕು. ದರ್ಭೆ ಹುಲ್ಲು ಗಣೇಶನಿಗೆ ತುಂಬಾ ಇಷ್ಟವಾಗುತ್ತದೆ. ಜೊತೆಗೆ ಬಿಳಿ ಎಕ್ಕದ ಗಿಡದ ಹೂವಿನ ಹಾರ, ಗರಿಕೆಯನ್ನು ಗಣೇಶನಿಗೆ ಅರ್ಪಿಸಿದರೆ ಅವನ ಆಶೀರ್ವಾದ ದೊರೆಯುತ್ತದೆ. ಹಾಗೆಯೇ ಗಣೇಶನ ಬೀಜ ಮಂತ್ರಗಳನ್ನು ಪಠಿಸಬೇಕು. ಮೋದಕ ಅಥವಾ ಮೋತಿಚೂರು ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.

ಸಂಕಷ್ಟಹರ ಚತುರ್ಥಿಯಂದು ಈ ಮಂತ್ರಗಳನ್ನು ಪಠಿಸಿ

ಪೂಜೆಯ ನಂತರ ಸಂಕಷ್ಟಹರ ಚತುರ್ಥಿಯ ಕಥೆಯನ್ನು ಓದಿ. ನಂತರ 'ಓಂ ಗಣಪತಿಯೇ ನಮಃ' ಎಂಬ ಮಂತ್ರವನ್ನು ಜಪಿಸಿ. ಗಣಪತಿಗೆ ಆರತಿ ಬೆಳಗಬೇಕು. ಸಂಜೆ ಚಂದ್ರನನ್ನು ನೋಡಿ ಅರ್ಘ್ಯವನ್ನು ಅರ್ಪಿಸಬೇಕು . ಸಂಕಷ್ಟಹರ ಚತುರ್ಥಿಯಂದು ಉಪವಾಸ ಮಾಡುವವರು ಚಂದ್ರನನ್ನು ನೋಡಿದ ನಂತರವೇ ಉಪವಾಸವನ್ನು ಬಿಡಬೇಕು. 'ಓಂ ವಿನಾಯಕಾಯ ನಮಃ' ಎಂಬ ಮಂತ್ರವನ್ನು ದಿನವಿಡೀ ಪಠಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ ದೊರೆಯಲಿದೆ

ಸಂಕಷ್ಟಹರ ಚತುರ್ಥಿಯ ದಿನ, ವೃಷಭ, ತುಲಾ, ಮಕರ ಮತ್ತು ಇತರ ರಾಶಿಚಕ್ರದ ಚಿಹ್ನೆಗಳು ವಿಶೇಷವಾಗಿ ಗಣೇಶನ ಆಶೀರ್ವಾದ ಪಡೆಯುತ್ತಾರೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಗಣೇಶನ ಆರಾಧನೆಯಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ವಿಘ್ನೇಶ್ವರನ ಕೃಪೆಯಿಂದ ಕೆಲಸಗಳು ಕಾಲಕ್ಕೆ ತಕ್ಕಂತೆ ಪೂರ್ಣಗೊಳ್ಳಲಿವೆ. ವ್ಯಾಪಾರ ವಿಸ್ತರಣೆಯಾಗಲಿದೆ. ಎಲ್ಲಾ ಕೆಲಸದಲ್ಲೂ ಪ್ರಗತಿ ಇರುತ್ತದೆ. ವಿಶ್ವಾಸಾರ್ಹತೆ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಇರುತ್ತದೆ. ಪತಿ ಪತ್ನಿಯರ ಬಾಂಧವ್ಯ ಗಟ್ಟಿಯಾಗುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ.

ಇವಿಷ್ಟೇ ಅಲ್ಲದೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ವಿಶೇಷ ಉಡುಗೊರೆ ದೊರೆಯಲಿದೆ. ಗಣೇಶನ ಆಶೀರ್ವಾದದಿಂದ ಅನಾರೋಗ್ಯದ ಸಮಸ್ಯೆ ಕಳೆದು ಒಳ್ಳೆ ಆರೋಗ್ಯ ದೊರೆಯುತ್ತದೆ.