ಬಲಿಪಾಡ್ಯಮಿ ದಿನ ಆರಂಭವಾಗುವ ಕಾರ್ತಿಕ ಮಾಸದ ಮಹತ್ವವೇನು? ಗ್ರಹಗಳ ರಾಶಿ ಪ್ರವೇಶ ಸೇರಿ ಆಸಕ್ತಿಕರ ಮಾಹಿತಿ ಇಲ್ಲಿದೆ
ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದಂದು ರುದ್ರಹೋಮ ಅಥವಾ ಶತರುದ್ರ ಹೋಮ ಮಾಡುವುದರಿಂದ ಜೀವನದ ಎಲ್ಲಾ ಕಷ್ಟ ನಷ್ಟಗಳು ದೂರವಾಗುತ್ತವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಿದೆ. ಬಲಿಪಾಡ್ಯಮಿಯ ದಿನ ಆರಂಭವಾಗುವ ಕಾರ್ತಿಕ ಮಾಸದ ಮಹತ್ವ ಮತ್ತು ಸೂರ್ಯ ಸಂಚಾರದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಕಾರ್ತಿಕ ಮಾಸವು 2024ರ ನವಂಬರ್ 2ರ ಭಾನುವಾರ ಆರಂಭವಾಗುತ್ತದೆ. ಆ ದಿನವನ್ನು ಬಲಿಪಾಡ್ಯಮಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. 2024ರ ಡಿಸೆಂಬರ್ 1ರ ಭಾನುವಾರದವರಿಗೆ ಕಾರ್ತಿಕ ಮಾಸ ಇರುತ್ತದೆ. ಕಾರ್ತಿಕ ಮಾಸದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶಿವನಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ. ನವೆಂಬರ್ 15 ರವರೆಗೆ ಸೂರ್ಯ ತುಲಾರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವದಿಯಲ್ಲಿ ರವಿಗೆ ಸಂಬಂಧಿಸಿದ ಪೂಜೆ ಮಾಡುವುದರಿಂದ ಮತ್ತು ರವಿಯ ಶಾಂತಿಯನ್ನು ಮಾಡುವುದರಿಂದ ಆರೋಗ್ಯದ ತೊಂದರೆಯಿಂದ ಪಾರಾಗಬಹುದು. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಅನುಬಂಧ ಉಂಟಾಗುತ್ತದೆ. ಕುಟುಂಬದ ಹಿರಿಯರ ಜೊತೆಗಿನ ಮನಸ್ತಾಪವು ದೂರವಾಗುತ್ತದೆ. ಸೂರ್ಯನ ಪೂಜೆಯನ್ನು ಮಾಡಿ ರವೆ ಅಥವಾ ಗೋಧಿಯಿಂದ ಮಾಡಿದ ಸಿಹಿ ತಿಂಡಿಯನ್ನು ನೈವೇದ್ಯವನ್ನಾಗಿ ಅರ್ಪಿಸಬೇಕು.
ರವಿಯು ಜನ್ಮಕುಂಡಲಿಯಲ್ಲಿ ಕುಟುಂಬದ ಹಿರಿಯರು ಮತ್ತು ಸೋದರರನ್ನು ಸೂಚಿಸುತ್ತದೆ. ಈ ಕಾರಣದಿಂದಲೇ ಯಮದ್ವಿತೀಯಕ್ಕೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಈ ಅವಧಿಯಲ್ಲಿ ಎರಡು ಸೋಮವಾರಗಳು ಬರುತ್ತವೆ. ಈ ಅವಧಿಯಲ್ಲಿ ಶಿವನ ಪೂಜೆಯನ್ನು ಮಾಡಿ ಉಪವಾಸ ಮಾಡುವುದರಿಂದ ಮನದಲ್ಲಿ ಇರುವ ಅನಾವಶ್ಯಕ ಯೋಚನೆಗಳು ದೂರವಾಗುತ್ತವೆ.
ನವಂಬರ್ ತಿಂಗಳ 16 ರಂದು ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಮೇಷ ಮತ್ತು ಸಿಂಹದಲ್ಲಿದ್ದಾಗ ಶಕ್ತಿಶಾಲಿಯಾಗಿರುತ್ತಾನೆ. ಇದೇ ರೀತಿ ವೃಶ್ಚಿಕ ರಾಶಿಯಲ್ಲಿಯೂ ಶಕ್ತಿ ಶಾಲಿಯಾಗಿರುತ್ತಾನೆ. ಈ ಅವಧಿಯಲ್ಲಿಯೂ ಎರಡು ಸೋಮವಾರಗಳು ಇರಲಿವೆ. ಆ ದಿನಗಳಂದು ಶಿವನ ಪೂಜೆ ಮಾಡಿ ಉಪವಾಸವ್ರತವನ್ನು ಆಚರಿಸುವುದು ಒಳ್ಳೆಯದು. ರವಿಯನ್ನು ಒಲಿಸಿಕೊಳ್ಳಲು ಶಿವನ ಪೂಜೆಯನ್ನು ಮಾಡಬಹುದು. ರವಿಯು ಉತ್ತಮ ಆರೋಗ್ಯಕ್ಕೆ ಕಾರಣನಾಗುತ್ತಾನೆ. ಆದ್ದರಿಂದ ಈ ಅವಧಿಯಲ್ಲಿ ಕೆಲವೆಡೆ ಸೂರ್ಯನಮಸ್ಕಾರವನ್ನು ಮಾಡುವ ಪದ್ಧತಿಯೂ ಇದೆ. ಶ್ರೀ ಧನ್ವಂತರಿ ಜಯಂತಿಯೂ ಸಹ ಇದೇ ಅವಧಿಯಲ್ಲಿ ಬರುತ್ತದೆ.
ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದಂದು ರುದ್ರಹೋಮ ಅಥವಾ ಶತರುದ್ರ ಹೋಮ ಮಾಡುವುದರಿಂದ ಜೀವನದ ಎಲ್ಲಾ ಕಷ್ಟ ನಷ್ಟಗಳು ದೂರವಾಗುತ್ತವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಿದೆ. ಕಾರ್ತಿಕ ಮಾಸದಲ್ಲಿ ಹೋಮ ಹವನಾದಿಗಳು ಮತ್ತು ಪೂಜೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಮಾಸದಲ್ಲಿ ಪ್ರತಿದಿನವು ಮನೆಯ ಹೊಸಿಲು ಮತ್ತು ಮನೆಯ ಸುತ್ತಮುತ್ತಲು ದೀಪವನ್ನು ಬೆಳಗಿಸುವುದು ಸಂಪ್ರದಾಯವಾಗಿದೆ. ಮಾಘಸ್ನಾನದಂತೆ ಕಾರ್ತಿಕ ಮಾಸದಲ್ಲಿ ಮಾಡುವ ಪುಣ್ಯಸ್ನಾನವು ಲಾಭಕರವಾಗಿದೆ. ನದಿಯ ತೀರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಮನದ ಆಸೆ ಆಕಾಂಕ್ಷೆಗಳು ಕೈಗೂಡುತ್ತವೆ.
ಕಾರ್ತಿಕ ಮಾಸ ಆಚರಣೆಯಿಂದ ಸಿಗುವ ಪ್ರಯೋಜನಗಳು
ಶ್ರೀಕೃಷ್ಣ ಪರಮಾತ್ಮನಿಗೆ ರುಕ್ಮಿಣಿ ಮತ್ತು ಸತ್ಯಭಾಮೆಯರ ಮೇಲೆ ಸಮಾನ ಪ್ರೀತಿ ವಿಶ್ವಾಸ ಇರುತ್ತದೆ. ಸಹಜವಾಗಿ ಎಲ್ಲರಂತೆ ಇವರು ಸಹ ಜೀವನದಲ್ಲಿ ತಪ್ಪನ್ನು ಮಾಡಿರುತ್ತಾರೆ. ಆದರೆ ಸತ್ಯಭಾಮೆಯ ತಪ್ಪು ಅಗಾದ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ನೊಂದ ಸತ್ಯಭಾಮೆಯು ತನ್ನ ಪಾಪ ಕೃತ್ಯಗಳಿಂದ ಮುಕ್ತಿ ಪಡೆಯಲು ಯಾವುದಾದರೊಂದು ಸರಳವಾದ ವ್ರತವನ್ನು ತಿಳಿಸಲು ನಾರದ ಮಹರ್ಷಿಗಳನ್ನು ಕೇಳುತ್ತಾಳೆ. ಆಗ ಕಾರ್ತಿಕ ಮಾಸದ ವ್ರತವನ್ನು ಮಾಡಲು ತಿಳಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಸೂರ್ಯನು ತುಲಾ ರಾಶಿಯಲ್ಲಿ ಇರುವ ದಿನಗಳಲ್ಲಿ ಗೋದುಳಿ ಲಗ್ನದಲ್ಲಿ ಸ್ನಾನ ಸಂಧ್ಯಾ ವಂದನೆಗಳನ್ನು ಮಾಡಿ ದೀಪಾರಾಧನೆ ಮಾಡಬೇಕು.
ಏಕಾದಶಿಯಂದು ಉಪವಾಸ ಮಾಡಿ ಜಾಗರಣೆ ಮಾಡಬೇಕು. ಆ ನಂತರ ತುಳಸಿ ದಾಮೋದರ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಯಾರೇ ಮಾಡಿದರೂ ಅವರ ಪಾಪ ಕರ್ಮಗಳಿಂದ ಮುಕ್ತಿ ಪಡೆಯಬಹುದು ಎಂದು ನಾರದರು ಹೇಳುತ್ತಾರೆ. ಇದರಿಂದ ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸೂರ್ಯೋದಯದ ಮುಂಚೆ ಸ್ನಾನಾದಿಗಳನ್ನು ಮುಗಿಸಿ ಪೂಜೆಯಲ್ಲಿ ತೊಡಗಿದರೆ ಜೀವನದ ಕಷ್ಟ ನಷ್ಟಗಳು ದೂರವಾಗುತ್ತವೆ. ಈ ರೀತಿ ಕಾರ್ತಿಕಮಾಸದಲ್ಲಿನ ಧಾಮಿಕ ಆಚರಣೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ.