ಗದಗ ಗ್ರಾಮೀಣಾಭಿವೃದ್ದಿ ವಿವಿಗೆ ಸಿಎಂ ಇನ್ನು ಕುಲಾಧಿಪತಿ, ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ: ಸಂಪುಟದ ಪ್ರಮುಖ ನಿರ್ಣಯಗಳೇನು
Karnataka Governor Power Curtailed: ಗದಗದಲ್ಲಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯಕ್ಕೆ ಇನ್ನು ಮುಂದೆ ರಾಜ್ಯಪಾಲರ ಬದಲು ಸಿಎಂ ಅವರು ಕುಲಾಧಿಪತಿಯಾಗಿರಲಿದ್ದಾರೆ. ಈ ಸಂಬಂಧದ ವಿಧೇಯಕಕ್ಕೆ ಸಂಪುಟ ಅನುಮೋದನೆ ನೀಡಿದೆ.
Karnataka Governor Power Curtailed: ಕರ್ನಾಟಕದಲ್ಲಿ ಆರು ತಿಂಗಳಿನಿಂದ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವೆ ನಡೆದಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಹಗರಣದ ತನಿಖೆಗೆ ಅನುಮತಿ ನೀಡಿದ ವಿಚಾರದ ಸಂಘರ್ಷದ ಮುಂದುವರಿದ ಭಾಗವಾಗಿ ಅವರ ಅಧಿಕಾರವನ್ನೇ ಮೊಟಕುಗೊಳಿಸುವ ಹಂತಕ್ಕೂ ಹೋಗಿದೆ. ಕರ್ನಾಟಕದ ವಿಶ್ವವಿದ್ಯಾನಿಲಯಗಳಿಗೆ ರಾಜ್ಯಪಾಲರೇ ಕುಲಾಧಿಪತಿ. ಆದರೆ ಈಗ ಗದಗದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರ ಬದಲು ಮುಖ್ಯಮಂತ್ರಿ ಅವರೇ ಕುಲಾಧಿಪತಿಯಾಗಲಿದ್ದಾರೆ. ಈ ತಿದ್ದುಪಡಿ ವಿಧೇಯಕಕ್ಕೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಇದು ಮತ್ತಷ್ಟು ಸಂಘರ್ಷದ ಮುನ್ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-204 ಕ್ಕೆ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಇಲ್ಲಿಯವರೆಗೆ ರಾಜ್ಯಪಾಲರು ಕುಲಾಧಿಪತಿಗಳಾಗಿದ್ದರು. ತಿದ್ದುಪಡಿಯ ನಂತರ ಮುಖ್ಯಮಂತ್ರಿಗಳು ಕುಲಪತಿಗಳಾಗಲಿದ್ದಾರೆ. ವಿಶ್ವವಿದ್ಯಾಲಯ ಹೆಚ್ಚು ಕ್ರಿಯಾಶೀಲವಾಗಬೇಕು ಹಾಗೂ ನಿರ್ಣಯಗಳು ಶೀಘ್ರವಾಗಿ ಆಗಬೇಕು ಎನ್ನುವ ಕಾರಣಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸಚಿವ ಎಚ್ಕೆ ಪಾಟೀಲ್ ಗುರುವಾರ ನಡೆದ ಸಚಿವ ಸಂಪುಟ ಬಳಿಕ ಮಾಹಿತಿ ನೀಡಿದರು.
ಕರ್ನಾಟಕದಲ್ಲೂ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಜತೆಗೆ ವಿಷಯವಾರು ವಿಶ್ವವಿದ್ಯಾನಿಲಯಗಳಿವೆ. ಉನ್ನತ ಶಿಕ್ಷಣ ಕಾಯಿದೆ ಪ್ರಕಾರ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ರಾಜ್ಯಪಾಲರೇ ಕುಲಾಧಿಪತಿ. ಆಯಾ ವಿಷಯದ ಸಚಿವರು ಸಮವರ್ತಿತ ಕುಲಪತಿಗಳು. ಆದರೆ ಈಗ ರಾಜ್ಯಪಾಲರ ಬದಲಿಗೆ ಸಿಎಂ ಅವರನ್ನು ನೇಮಿಸುವ ವಿಧೇಯಕಕ್ಕೆ ಸಂಪುಟ ಅನುಮೋದನೆ ನೀಡಿದೆ.
ಸಂಪುಟದ ಇತರೆ ನಿರ್ಣಯಗಳು
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂದು ಒಟ್ಟು 9 ವಿಧೇಯಕಗಳಿಗೆ ತಿದ್ದುಪಡಿ ಮಾಡಿ ಅನುಮೋದಿಸಲಾಗಿದೆ.
- ಅಸಂಘಟಿತ ಕಾರ್ಮಿಕರ ಕರ್ನಾಟಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024 ನ್ನು ಅನುಮೋದಿಸಲಾಗಿದೆ. ಕಾರ್ಮಿಕ ಕಲ್ಯಾಣ ನಿಧಿಗೆ ಪ್ರತಿ ಕಾರ್ಮಿಕರಿಂದ 20 ರೂ, ಮಾಲೀಕರಿಂದ 40 ರೂ. ಹಾಗೂ ಸರ್ಕಾರದಿಂದ 20 ರೂ.ಗಳನ್ನು ಸಂಗ್ರಹಿಸುವುದನ್ನು ಹೆಚ್ಚಿಸಿ 50-50 ಮಾಡಲಾಗಿದೆ . ಪ್ರಸ್ತುತ ಕಾರ್ಮಿಕರಿಂದ 50 ರೂ, ಸರ್ಕಾರದಿಂದ 50 ರೂ.ಗಳು ಹಾಗೂ ಮಾಲೀಕರಿಂದ 100 ಹಾಗೂ ವಂತಿಗೆಯನ್ನು ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆ. 42 ಕೋಟಿ ರೂ.ಗಳ ವಂತಿಗೆ ಸಂಗ್ರಹವಾಗುತ್ತಿತ್ತು. ತಿದ್ದುಪಡಿಯಿಂದ 100 ಕೋಟಿ ರೂ.ಗಳಷ್ಟು ಮೊತ್ತ ಸಂಗ್ರಹವಾಗುವ ಅಂದಾಜಿದೆ.
- ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2024ಕ್ಕೆ ಅನುಮೋದನೆ: ಕೊಳವೆಬಾವಿಗಳನ್ನು ಕೊರೆದು ವಿಫಲವಾದಲ್ಲಿ ಕೊಳವೆಬಾವಿಗಳನ್ನು ಮುಚ್ಚದೇ ಬಿಡುವುದನ್ನು ತಪ್ಪಿಸಲು ಈ ವಿಧೇಯಕವನ್ನು ತಿದ್ದುಪಡಿ ಮಾಡಲಾಗಿದೆ. ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗುವ ಅಧಿಸೂಚಿಯಲ್ಲದ ಪ್ರದೇಶಗಳಲ್ಲಿ ಅಂತರ್ಜಲ ಉಪಯೋಗಿಸಿ ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ 5000 ರೂ.ಗಳ ದಂಡ ಹಾಗೂ ಮೂರು ತಿಂಗಳ ಕಾರಾಗ್ರಹ ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.
- ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ-2024, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ
- ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ವಿಧೇಯಕ, 2024"ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ
ಇದನ್ನೂ ಓದಿರಿ:IAS Posting: ಐಎಎಸ್ ಅಧಿಕಾರಿ ವರ್ಗಾವಣೆ: ಕರ್ನಾಟಕ ಹೂಡಿಕೆ ವೇದಿಕೆ ಹೊಸ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಸಿಇಒ
ಪ್ರವಾಸಿ ತಾಣಗಳಲ್ಲಿ ರೋಪ್ ವೇ
- ರಾಜ್ಯದ ಹಲವಾರು ಪ್ರವಾಸಿ ತಾಣಗಳಲ್ಲಿ ರೋಪ್ ವೇ ಗಳನ್ನು ನಿರ್ಮಿಸುವ ಸಂಬಂಧ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಸ್ ವಿಧೇಯಕ 2024 ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ. ಅಂಜನಾದ್ರಿ, ಯಾದಗಿರಿ, ನಂದಿಬೆಟ್ಟ, ಸವದತ್ತಿ ಸೇರಿದಂತೆ 12 ಕಡೆಗಳಲ್ಲಿ ಸಮೀಕ್ಷೆ ನಡೆಸಿ ರೋಪ್ ವೇ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
- ಕೇಂದ್ರ ಪ್ರವಾಸೋದ್ಯಮದ ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಮೈಸೂರಿನಲ್ಲಿ ಪರಿಸರ ಅನುಭವ ವಲಯ( Ecological Experience Zone)ವನ್ನು 18.47 ಕೋಟಿ ಮೊತ್ತದಲ್ಲಿ ಹಾಗೂ ಹಂಪಿಯಲ್ಲಿ ಪ್ರವಾಸಿ ಮೂಲೆ( Travellers Nook) ಅನ್ನು 25.63 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಟೆಂಡರ್ ಕರೆಯಲು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ ಮೂಲಕ ಕರೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ.
- ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ , ನಿರ್ವಹಣೆಗೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಿಂದ ಟೆಂಡರ್ ಮೂಲಕ ಹೋಟೆಲ್ ಆಪರೇಟರ್ನ್ನು ಆಯ್ಕೆ ಮಾಡಲು ಅನುಮೋದನೆ ನೀಡಲಾಗಿದೆ. ಪಂಚತಾರಾ ಹೋಟೆಲ್ ಗಳ ಸಮರ್ಪಕ ನಿರ್ವಹಣೆಯ ಸಲುವಾಗಿ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಟ್ಟಡದ ಪುನರ್ ನಿರ್ಮಾಣ,ನವೀಕರಣ,ನಿವರ್ಹಣೆ ಗಾಗಿ ಖಾಸಗಿಯವರಿಂದ ಟೆಂಡರ್ ಕರೆಯಲಾಗುವುದು. ಖಾಸಗಿ ನಿರ್ವಹಣೆಯ ಮೂಲಕ ಉತ್ತಮ ಲಾಭ ಹಾಗೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿರಿ: ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಅಂದ್ರು ಸಚಿವ ಎಂಬಿ ಪಾಟೀಲ್
ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿ ಖರೀದಿ
- ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿಗಳನ್ನು 4300 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ (ರೈಲ್ವೆ ಮಂತ್ರಾಲಯ) ಅನುದಾನದಿಂದ (Equity ಮಾದರಿ 50:50 ಅನುಪಾತದಲ್ಲಿ) ಖರೀದಿಸಲು ಅನುಮೋದನೆ ನೀಡಲಾಗಿದೆ.
ಆರೋಗ್ಯಕೇಂದ್ರಗಳಿಗೆ ಉಪಕರಣ ಖರೀದಿಗೆ ಅನುಮೋದನೆ
- 2024-25ನೇ ಸಾಲಿನಲ್ಲಿ ಕಾರ್ಯಕ್ರಮಗಳಡಿ 15 ವಿವಿಧ ಹಣಕಾಸು ಆಯೋಗದ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗ ಪತ್ತೆ ಮೂಲ ಸೌಕರ್ಯಗಳನ್ನು ಒದಗಿಸಲು ರೂ. 145.99 ಕೋಟಿಗಳಲ್ಲಿ ಉಪಕರಣಗಳನ್ನು ಖರೀದಿಸಲು ಹಾಗೂ ರೂ. 84.88 ಕೋಟಿಗಳ ಅಂದಾಜು ಮೊತ್ತದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕ್ಷೇಮ ಕೇಂದ್ರ - ನಮ್ಮ ಕ್ಲಿನಿಕ್ ಗಳಲ್ಲಿನ ಪ್ರಯೋಗಾಲಯಗಳನ್ನು ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸಲು ಉಪಕರಣಗಳನ್ನು ಖರೀದಿಸಲು ಹಾಗೂ 5 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ರೂ. 72.96 ಕೋಟಿಗಳ ಅಂದಾಜು ಮೊತ್ತದಲ್ಲಿ ನಮ್ಮ ಕ್ಲಿನಿಕ್ಗಳಿಗೆ ಅಗತ್ಯವಿರುವ ಔಷಧಿ ಮತ್ತು ರಾಸಾಯನಿಕಗಳನ್ನು PM- ABHIM ಅನುದಾನದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- PM- ABHIM ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರದ CIMS , ಇಲ್ಲಿಗೆ ಅನುಮೋದನೆಯಾಗಿರುವ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕವನ್ನು ಜಿಲ್ಲೆಯ ಚಿಂತಾಮಣಿ ತಾಲ್ಲೂಕಿಗೆ ಸ್ಥಳಾಂತರಿಸಿ 16.63 ಕೋಟಿ ವೆಚ್ಚಲದಲಿ ನಿರ್ಮಿಸಲು ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
- PM- ABHIM ಯೋಜನೆಯಡಿಯಲ್ಲಿ 108.36 ಕೋಟಿ ರೂ ವೆಚ್ಚದಲ್ಲಿ ಒಟ್ಟು 254 ನಗರ ಆರೋಗ್ಯ ಕ್ಷೇಮಕೇಂದ್ರ – ನಮ್ಮ ಕ್ಲಿನಿಕ್ ಗಳನ್ನು ಉಪಕರಣಗಳೊಂದಿಗೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ
- ರಾಯಚೂರು ಜಿಲ್ಲೆ , ತಾಲ್ಲೂಕಿನ ಯರಮರಸ್ ಗ್ರಾಮದಲ್ಲಿ 14 ಗುಂಟೆ ಗೋಮಾಳ ಜಮೀನನ್ನು ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು ಇವರಿಗೆ ಮಂಜೂರು ಮಾಡಲಾಗಿದೆ.
ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇಬ್ರಿಡ್ಜ್
- ಕಬ್ಬು ಬೆಳೆಗಾರರ ಹಿತ ಕಾಯಲು ಎಲ್ಲಾ ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇಬ್ರಿಡ್ಜ್ ಗಳನ್ನು ಸ್ಥಾಪಿಸಲು ಮೊದಲ ಹಂತದಲ್ಲಿ ರಾಜ್ಯದ 13 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಗುರುತಿಸಿದ 15 ಸ್ಥಳಗಳಲ್ಲಿ 11.01 ಕೋಟಿ ರೂ.ಗಳಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಸೇತುವೆ ನಿರ್ಮಾಣ
- ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವನ್ನು 25 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
500 ಸರ್ಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತನೆ
- ಎಡಿಬಿಯ 2500 ಕೋಟಿ ಗಳ ಬಾಹ್ಯ ನಿಧಿ ಸಹಯೋಗದೊಂದಿಗೆ ಜುಲೈ 2025 ರಿಂದ ಜೂನ್ 2029 ರವರೆಗೆ ಅಸ್ತಿತ್ವದಲ್ಲಿರುವ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಉಪಕ್ರಮವನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ.