ಭಗವದ್ಗೀತೆ: ಮನುಷ್ಯನ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಗೀತೆಯೇ ಮಾರ್ಗ; ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಭಕ್ತಿಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್ ಅವರು ಭಗವದ್ಗೀತಾ ಯಥಾರೂಪದ ನಿರೂಪಣೆಯನ್ನು ನೀಡಿದ್ದು, ಇದರ ಮೊದಲ ಭಾಗವನ್ನು ಇಲ್ಲಿ ನೀಡಲಾಗಿದೆ.
ಭಗವದ್ಗೀತೆಯು (Bhagavadgita) ಎಲ್ಲಾಉಪನಿಷತ್ತುಗಳ ಸಾರವಾಗಿದೆ. ನೂರಾರು ತತ್ವಶಾಸ್ತ್ರಜ್ಞರನ್ನು ಚಿಂತನೆಗೆ ಒಳಪಡಿಸಿದಂತಹ ಮಹಾನ್ ಗ್ರಂಥ ಇದು. ಈ ಭಗವದ್ಗೀತೆಯನ್ನು 5,000 ವರ್ಷಗಳ ಹಿಂದೆ ಭಗವಾನ್ ಶ್ರೀಕೃಷ್ಣನು ತನ್ನ ಭಕ್ತನಾದಂತಹ ಅರ್ಜುನನಿಗೆ ಉಪದೇಶಿಸಿದನು.
ಭಗವದ್ಗೀತೆಯು ಮಹಾಭಾರತದ ಒಂದು ಭಾಗವೇ ಆಗಿದ್ದರೂ, ಅದು ಪ್ರತ್ಯೇಕವಾಗಿಯೇ ಓದಲ್ಪಟ್ಟಿರುವಂತಹ ಗ್ರಂಥ. ಮಹಾಭಾರತ ಯುದ್ಧವು ಪ್ರಾರಂಭವಾಗುವ ಮೊದಲು ಗೊಂದಲಕ್ಕೆ ಈಡಾಗಿದ್ದಂತಹ ಅರ್ಜುನನಿಗೆ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದನು.
ಧರ್ಮ ಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನಡೆದ ಈ ಘೋರ ಯುದ್ಧದಲ್ಲಿ 18 ಅಕ್ಷೋಹಿಣಿ ಸೈನ್ಯಗಳು ಭಾಗವಹಿಸಿದ್ದವು. ಭಗವದ್ಗೀತೆಯಲ್ಲಿ ಒಟ್ಟು 700 ಶ್ಲೋಕಗಳಿವೆ. ಮಹಾಭಾರತದಲ್ಲಿ ಭೀಷ್ಮ ಪರ್ವದ 25ನೇ ಅಧ್ಯಾಯದಿಂದ 42ನೇ ಅಧ್ಯಾಯದವರೆಗೆ ಭಗವದ್ಗೀತೆಯನ್ನು ಪ್ರಸ್ತುತಪಡಿಸಲಾಗಿದೆ. ಮಹಾಭಾರತವನ್ನು ರಚಿಸಿರುವಂತಹ ವೇದವ್ಯಾಸರು ಸಾಕ್ಷಾತ್ ಭಗವಂತನ ಅವತಾರವಾಗಿದ್ದಾರೆ.
ಈ ಕಾರಣಗಳಿಗೆ ಭಗವದ್ಗೀತೆ ಅಧ್ಯಯನ ಮಾಡಬೇಕು
ಭಗವದ್ಗೀತೆಯನ್ನು ಅಧ್ಯಯನ ಮಾಡಲು ನಮಗೆ ಅನೇಕ ಕಾರಣಗಳಿವೆ. ಭಗವದ್ಗೀತೆಯ ಅಧ್ಯಯನದಿಂದ ವ್ಯಕ್ತಿಯು ಅಂಧಕಾರದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಭಗವದ್ಗೀತೆಯನ್ನು ಕೇಳುವ ಮೊದಲು ಅರ್ಜುನನು ಗೊಂದಲದಲ್ಲಿದ್ದ. ಭಗವದ್ಗೀತೆಯನ್ನು ಕೇಳಿದ ಮೇಲೆ ಅರ್ಜುನನು ಸರಿಯಾದಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಇಲ್ಲಿ ಅರ್ಥಮಾಡಿಕೊಳ್ಳಬೇಕಾದಂತಹ ಪ್ರಮುಖವಾದ ವಿಷಯವೇನೆಂದರೆ, ಭಗವದ್ಗೀತೆಯನ್ನು ಅಧ್ಯಯನ ಮಾಡುವಂತಹ ವ್ಯಕ್ತಿಯು ಜೀವನದ ಸಮಸ್ಯೆಗಳಿಂದ ದೂರ ಹೋಗುವುದಿಲ್ಲ. ಬದಲಾಗಿ ವಿವೇಚನೆಯಿಂದ ತನ್ನೆಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತಹ ಮಾರ್ಗವನ್ನು ಹುಡುಕಿ ಕೊಳ್ಳುತ್ತಾನೆ.
ಜೀವನದಲ್ಲಿಒಬ್ಬ ವ್ಯಕ್ತಿಯ ನಿಜವಾದ ಕರ್ತವ್ಯ ಏನು ಎನ್ನುವುದನ್ನು ಭಗವದ್ಗೀತೆಯು ನಮಗೆ ತಿಳಿಸಿಕೊಡುತ್ತದೆ. ಪತಿತ ಜೀವಗಳನ್ನು ಉದ್ಧಾರ ಮಾಡುವುದಕ್ಕಾಗಿ ಭಗವಂತನು ಅನೇಕ ಯೋಜನೆಗಳನ್ನು ತಯಾರಿಸುತ್ತಾನೆ. ಕುರುಕ್ಷೇತ್ರ ರಣರಂಗದಲ್ಲಿಅರ್ಜುನನನ್ನು ನಿಮಿತ್ತವಾಗಿಸಿಕೊಂಡು ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯನ್ನು ಮನುಕುಲಕ್ಕಾಗಿ ಬೋಧಿಸಿದನು. ತನ್ನ ಭಕ್ತರನ್ನು ಉದ್ದರಿಸುವುದಕ್ಕಾಗಿ ಭಗವಂತನು ಎಂತಹ ತ್ಯಾಗಕ್ಕಾದರೂ ಸಿದ್ಧನಾಗಿರುತ್ತಾನೆ.
ಸಿಂಹಾಸನವು ಪಾಂಡುವಿಗೆ ದೊರಕಲು ಕಾರಣ
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀಕೃಷ್ಣ ಸಾಮಾನ್ಯ ಸಾರಥಿಯಂತೆ ಅರ್ಜುನನ ಸೇವೆ ಮಾಡಿದನು. ಭಗವಂತನು ಇದೆಲ್ಲವನ್ನು ಮಾಡುವುದು ನಮ್ಮ ಉದ್ಧಾರಕ್ಕಾಗಿಯೇ. ಇದನ್ನೆಲ್ಲಾ ನಾವು ಅರ್ಥ ಮಾಡಿಕೊಳ್ಳಬೇಕೆಂದರೆ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು. ಧೃತರಾಷ್ಟ್ರ ಮತ್ತು ಪಾಂಡು ಇಬ್ಬರು ಅಣ್ಣತಮ್ಮಂದಿರು. ಅಣ್ಣನಾದಂತಹ ಧೃತರಾಷ್ಟ್ರನು ಕುರುಡನಾಗಿದ್ದರಿಂದ ಸಹಜವಾಗಿಯೇ ಸಿಂಹಾಸನವು ಪಾಂಡುವಿಗೆ ದೊರಕಿತು. ಧೃತರಾಷ್ಟ್ರನಿಗೆ 100 ಜನ ಗಂಡು ಮಕ್ಕಳು. ಅವರಲ್ಲಿ ದುರ್ಯೋಧನನೇ ಹಿರಿಯನು. ಪಾಂಡುವಿಗೆ ಐದು ಜನ ಗಂಡು ಮಕ್ಕಳು. ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಇವರೇ ಆ ಐದು ಮಕ್ಕಳು. ಪಾಂಡು ಮಹಾರಾಜನು ಚಿಕ್ಕಪ್ರಾಯದಲ್ಲಿ ಮರಣ ಹೊಂದಿದನು.
ಪಾಂಡವರು ಇನ್ನೂ ಚಿಕ್ಕವರಾದ್ದರಿಂದ ಧೃತರಾಷ್ಟ್ರನು ಸಿಂಹಾಸನವನ್ನು ಏರಿದನು. ಯುಧಿಷ್ಠಿರನು ಸೂಕ್ತವಯಸ್ಸಿಗೆ ಬಂದಾಗ ಆತನು ಸಿಂಹಾಸನವನ್ನು ಪಡೆಯುತ್ತಾನೆ ಎಂಬ ಒಪ್ಪಂದವನ್ನು ಮಾಡಿದ್ದರು. ಆದರೆ ಧೃತರಾಷ್ಟ್ರನು ತನ್ನ ಮಗನಾದಂತಹ ದುರ್ಯೋಧನನೇ ರಾಜನಾಗಬೇಕೆಂದು ಬಯಸಿದ. ಅದು ಸಾಧ್ಯವಾಗದೇ ಹದಾಗ, ರಾಜ್ಯವನ್ನು ಎರಡು ವಿಭಾಗ ಮಾಡಿ, ಪಾಂಡವರಿಗೆ ಖಾಂಡವವನವನ್ನು ನೀಡಿದರು. ಬರಡು ಭೂಮಿಯಾಗಿದ್ದಂತಹ ಆ ನೆಲವನ್ನು ಪಾಂಡವರು ಶ್ರೀಕೃಷ್ಣನ ಅನುಗ್ರಹದಿಂದ ಇಂದ್ರಪ್ರಸ್ಥ ಎಂಬ ಹೆಸರಿನ ಸಮೃದ್ಧಭೂಮಿಯನ್ನಾಗಿ ಪರಿವರ್ತಿಸಿದರು.
ಶಕುನಿ ಸಹಾಯದಿಂದ ಪಾಂಡವರನ್ನ ದ್ಯೂತದಲ್ಲಿ ಸೋಲಿಸಿದ ದುರ್ಯೋಧನ
ಮುಂದೆ ರಾಜ ಯುಧಿಷ್ಠಿರನು ರಾಜಸೂಯ ಯಾಗವನ್ನು ಮಾಡಿ ಅಪಾರವಾದ ಸಂಪತ್ತನ್ನು ಗಳಿಸಿದನು. ದುರ್ಯೋಧನನಿಗೆ ಯುಧಿಷ್ಠಿರನ ಏಳಿಗೆಯನ್ನು ನೋ ಡಿ ಸಹಿಸಲು ಸಾಧ್ಯವಾಗಲಿಲ್ಲ. ಪಾಂಡವರನ್ನು ಸಾಯಿಸಲು ಅವನು ಮಾಡಿದಂತಹ ಎಲ್ಲಾಪ್ರಯತ್ನಗಳು ವಿಫಲವಾದವು. ಚಾಣಾಕ್ಷನಾದಂತಹ ದುರ್ಯೋಧನನು ತನ್ನ ಮಾವನಾದಂತಹ ಶಕುನಿಯ ಸಹಾಯದಿಂದ ಪಾಂಡವರನ್ನು ದ್ಯೂತದಲ್ಲಿ ಸೋಲಿಸಿದನು. ಪಾಂಡವರ ಪತ್ನಿಯಾದಂತಹ ದ್ರೌಪದಿಗೆ ತುಂಬಿದ ಸಭೆಯಲ್ಲಿಅವಮಾನವನ್ನು ಮಾಡಲು ಪ್ರಯತ್ನಿಸಿದರು.
ಪಾಂಡವರನ್ನು 12 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸಕ್ಕೆ ಕಳುಹಿಸಿದರು. ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿ ಬಂದಂತಹ ಪಾಂಡವರಿಗೆ ಅವರ ರಾಜ್ಯವನ್ನು ನ್ಯಾಯವಾಗಿ ಹಿಂದಕ್ಕೆ ನೀಡಲು ದುರ್ಯೋಧನನು ಒಪ್ಪಲಿಲ್ಲ. ಕನಿಷ್ಠ ಪಕ್ಷ 5 ಗ್ರಾಮಗಳನ್ನಾದರೂ ಕೊಡಬೇಕೆಂದು ಶ್ರೀಕೃಷ್ಣನು ಕೇಳಿದಾಗ ದುರ್ಯೋಧನನು ನಾನು ಪಾಂಡವರಿಗೆ ಒಂದು ಸೂಜಿಮೊನೆಯಷ್ಟು ಜಾಗವನ್ನು ಕೊಡುವುದಿಲ್ಲಎಂದು ಹೇಳಿದನು. ಆಗ ಯುದ್ಧವು ಅನಿವಾರ್ಯವಾಯಿತು.
ಕುರುಕ್ಷೇತ್ರದಲ್ಲಿ ಒಗ್ಗೂಡಿದ್ದ ಅಕ್ಷೊಹಿಣಿಗಳು ಎಷ್ಟು?
ಕೌರವರು ಮತ್ತು ಪಾಂಡವರು ಪ್ರಪಂಚದ ನಾನಾ ಭಾಗಗಳಿಂದ ಸೇನೆಯನ್ನು ಒಗ್ಗೂಡಿಸಲು ಪ್ರಾರಂಭಿಸಿದರು. ಕೌರವರು 11 ಅಕ್ಷೂಹಿಣಿ ಸೇನೆಯನ್ನು ಒಗ್ಗೂಡಿಸಿದ್ದರು. ಪಾಂಡವರು ಏಳು ಅಕ್ಷೂಹಿಣಿ ಸೇನೆಯನ್ನು ಒಗ್ಗೂಡಿಸಿದರು. ಈ ರೀತಿಯಾಗಿ 18 ಅಕ್ಷೋಹಿಣಿ ಸೇನೆಯು ಕುರುಕ್ಷೇತ್ರ ರಣರಂಗದಲ್ಲಿಒಗ್ಗೂಡಿತು.
ಭಗವದ್ಗೀತೆಯಲ್ಲಿಒಟ್ಟು 18 ಅಧ್ಯಾಯಗಳಿವೆ. ಭಗವದ್ಗೀತೆಯು ಧೃತರಾಷ್ಟ್ರನ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ. ಹುಟ್ಟು ಕುರುಡನಾದಂತಹ ಧೃತರಾಷ್ಟ್ರನು, ಕುರುಕ್ಷೇತ್ರ ರಣರಂಗದಲ್ಲಿ ಬಂದು ಸೇರಿದಂತಹ ತನ್ನ ಮಕ್ಕಳು ಏನು ಮಾಡಿದರು ಎಂಬುದನ್ನು ತಿಳಿದುಕೊಳ್ಳುವಂತಹ ಉದ್ದೇಶದಿಂದ ತನ್ನ ಮಂತ್ರಿಯಾದ ಸಂಜಯನಲ್ಲಿಒಂದು ಪ್ರಶ್ನೆಯನ್ನು ಕೇಳುತ್ತಾನೆ. ಆ ಪ್ರಶ್ನೆಯೇ ಭಗವದ್ಗೀತೆಯ ಮೊದಲನೆಯ ಶ್ಲೋಕವಾಗಿದೆ.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು.
ಭಗವದ್ಗೀತಾ ಯಥಾರೂಪದ ನಿರೂಪಕರು: ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ).