ಭಗವದ್ಗೀತೆ: ಗರ್ಭದಲ್ಲಿರುವ ಶಿಶು ಎಷ್ಟು ನಿಸ್ಸಾಹಾಯಕ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಗರ್ಭದಲ್ಲಿರುವ ಶಿಶು ಎಷ್ಟು ನಿಸ್ಸಾಹಾಯಕ; ಗೀತೆಯ ಸಾರಾಂಶ ಹೀಗಿದೆ

ಭಗವದ್ಗೀತೆ: ಗರ್ಭದಲ್ಲಿರುವ ಶಿಶು ಎಷ್ಟು ನಿಸ್ಸಾಹಾಯಕ; ಗೀತೆಯ ಸಾರಾಂಶ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಗರ್ಭದಲ್ಲಿರುವ ಶಿಶು ಎಷ್ಟು ನಿಸ್ಸಾಹಾಯಕ ಅನ್ನೋದನ್ನ ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಧೂಮೇನಾವ್ರಿಯತೇ ವಹ್ನಿರ್ಯಥಾದರ್ಶೋ ಮಲೇನ ಚ |

ಯಥೋಲ್ಬೇನಾವೃತೋ ಗರ್ಭಸ್ತಥಾ ತೇನೇದಮಾವೃತಮ್ ||38||

ಹೊಗೆಯು ಬೆಂಕಿಯನ್ನು ಮುಚ್ಚುವಂತೆ, ಧೂಳು ಕನ್ನಡಿಯನ್ನು ಮುಚ್ಚುವಂತೆ, ಗರ್ಭಕೋಶವು ಭ್ರೂಣವನ್ನು ಮುಚ್ಚುವಂತೆ, ವಿವಿಧ ಪ್ರಮಾಣಗಳ ಕಾಮವು ಜೀವಿಯನ್ನು ಮುಚ್ಚುತ್ತದೆ.

ಮೂರು ಪ್ರಮಾಣಗಳ ಆವರಣಗಳ ಜೀವಿಯನ್ನು ಮುಚ್ಚಿ ಅವನ ಶುದ್ಧ ಪ್ರಜ್ಞೆಯನ್ನು ಮಸುಕುಗೊಳಿಸುತ್ತವೆ. ಬೆಂಕಿಯಲ್ಲಿನ ಹೊಗೆ, ಕನ್ನಡಿಯ ಮೇಲಿನ ಧೂಳು, ಭ್ರೂಣದ ಸುತ್ತಣ ಗರ್ಭಕೋಶದಂತೆ ಇರುವ ಈ ಆವರಣವು ಕಾಮದ ವಿವಿಧ ತೋರಿಕೆಗಳು ಅಷ್ಟೇ. ಕಾಮವನ್ನು ಹೊಗೆಗೆ ಹೋಲಿಸಿದಾಗ ಕಿಡಿಯಂತೆ ಇರುವ ಜೀವಿಯ ಬೆಂಕಿಯು ಸ್ವಲ್ಪಮಟ್ಟಿಗೆ ಕಾಣುತ್ತದೆ ಎಂದು ಅರ್ಥ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಜೀವಿಯು ತನ್ನ ಕೃಷ್ಣಪ್ರಜ್ಞೆಯನ್ನು ಸ್ವಲ್ಪಮಟ್ಟಿಗೆ ಪ್ರದರ್ಶಿಸಿದಾಗ ಅವನನ್ನು ಹೊಗೆಯು ಮುಚ್ಚಿದ ಅಗ್ನಿಗೆ ಹೋಲಿಸಬಹುದು. ಹೊಗೆ ಇರುವಲ್ಲಿ ಅಗ್ನಿಯುವ ಇರಲೇಬೇಕು. ಆದರೂ ಪ್ರಾರಂಭದ ಘಟ್ಟದಲ್ಲಿ ಅಗ್ನಿಯು ಹೊರಕ್ಕೆ ಕಾಣಿಸಿಕೊಳ್ಳುವುದಿಲ್ಲ. ಈ ಘಟ್ಟವು ಕೃಷ್ಣಪ್ರಜ್ಞೆಯ ಆರಂಭಿಕ ಘಟ್ಟದಂತಿದೆ. ಕನ್ನಡಿಯ ಮೇಲಿನ ಧೂಳು, ಮನಸ್ಸಿನ ಕನ್ನಡಿಯನ್ನು ಹಲವಾರು ಆಧ್ಯಾತ್ಮಿಕ ರೀತಿಗಳಲ್ಲಿ ಶುಭ್ರಗೊಳಿಸುವ ವಿಧಾನಕ್ಕೆ ಸಂಬಂಧಿಸಿದೆ.

ಅತ್ಯುತ್ತಮ ಮಾರ್ಗವೆಂದರೆ ಭಗವಂತನ ಪಾವನ ನಾಮದ ಸಂಕೀರ್ತನೆ ಗರ್ಭಕೋಶವು ಭ್ರೂಣವನ್ನು ಆವರಿಸಿರುವ ಸಾದೃಶ್ಯವು ನಿಸ್ಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ. ಗರ್ಭದಲ್ಲಿರುವ ಶಿಶುವು ಎಷ್ಟು ನಿಸ್ಸಾಹಾಯಕ ಎಂದರೆ ಅದು ಅಲ್ಲಾಡಲಾರದು. ಬದುಕಿನ ಈ ಸ್ಥಿತಿಯನ್ನು ಮರಗಳ ಸ್ಥಿತಿಗೆ ಹೋಲಿಸಬಹುದು. ಮರಗಳೂ ಜೀವಿಗಳೇ. ಆದರೆ ಸ್ವಲ್ಪ ಹೆಚ್ಚುಕಡಮೆ ಪ್ರಜ್ಞೆಯೇ ಇಲ್ಲದಿರುವಷ್ಟು ಮಟ್ಟಿಗೆ ಕಾಮದ ಅತಿ ಹೆಚ್ಚಿನ ಪ್ರದರ್ಶನದಿಂದ ಅವನ್ನು ಇಂತಹ ಸ್ಥಿತಿಯಲ್ಲಿ ಇಡಲಾಗಿದೆ.

ಮುಚ್ಚಿರುವ ಕನ್ನಡಿಯನ್ನು ಪಶುಪಕ್ಷಗಿಳಿಗೆ ಹೋಲಿಸಿದೆ. ಹೊಗೆಯಿಂದ ಆವೃತವಾದ ಅಗ್ನಿಯನ್ನು ಮನುಷ್ಯನಿಗೆ ಹೋಲಿಸಿದೆ. ಮನುಷ್ಯ ರೂಪದಲ್ಲಿ ಜೀವಿಯುವ ಕೃಷ್ಣಪ್ರಜ್ಞೆಯನ್ನು ಸ್ವಲ್ಪಮಟ್ಟಿಗೆ ಪುನಶ್ಚೇತನಗೊಳಿಸಬಹುದು. ಆತನು ಇನ್ನೂ ಬೆಳವಣಿಗೆಯನ್ನು ಸಾಧಿಸಿದರೆ ಆಧ್ಯಾತ್ಮಿಕ ಜೀವನದ ಅಗ್ನಿಯನ್ನು ತನ್ನಲ್ಲಿ ಮತ್ತೆ ಹೊತ್ತಿಸಬಹುದು. ಬೆಂಕಿಯಲ್ಲಿನ ಹೊಗೆಯನ್ನು ಎಚ್ಚರಿಕೆಯಿಂದ ನಿರ್ವಹಿಸಿದರೆ ಬೆಂಕಿಯು ಪ್ರಜ್ವಲಿಸುವಂತೆ ಮಾಡಬಹುದು. ಆದುದರಿಂದ ಮಾನವಜನ್ಮವು, ಐಹಿಕ ಅಸ್ತಿತ್ವದ ಗೋಜಿನಿಂದ ತಪ್ಪಿಸಿಕೊಳ್ಳಲು ಜೀವಿಗೆ ಒಂದು ಅವಕಾಶ. ಮನುಷ್ಯ ಜನ್ಮದಲ್ಲಿ, ಸಮರ್ಥ ಮಾರ್ಗದರ್ಶನದಲ್ಲಿ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಂಡು ಶತ್ರುವಾದ ಕಾಮವನ್ನು ಸೋಲಿಸಬಹುದು.

ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ |

ಕಾಮರೂಪೇಣ ಕೌನ್ತೇಯ ದುಷ್ಪೂರೇಣಾನಲೇನ ಚ ||39||

ಹೀಗೆ ಪ್ರಾಜ್ಞನಾದ ಜೀವಿಯ ಶುದ್ಧ ಪ್ರಜ್ಞೆಯನ್ನು ಅವನ ನಿತ್ಯವೈರಿಯು ಕಾಮರೂಪದಿಂದ ಆವರಿಸುತ್ತದೆ. ಅದಕ್ಕೆ ತೃಪ್ತಿ ಎನ್ನುವುದೇ ಇಲ್ಲ. ಅದು ಅಗ್ನಿಯಂತೆ ಉರಿಯುತ್ತಿರುತ್ತದೆ.

ಒಂದೇ ಸಮನೆ ಇಂಧನವನ್ನು ಪೂರೈಸುವುದರಿಂದ ಅಗ್ನಿಯು ಹೇಗೆ ಆರುವುದಿಲ್ಲವೋ ಹಾಗೆ ಎಷ್ಟೇ ಇಂದ್ರಿಯ ಭೋಗದಿಂದಲೂ ಕಾಮಕ್ಕೆ ತೃಪ್ತಿಯಾಗುವುದಿಲ್ಲ ಎಂದು ಮನಸ್ಮೃತಿಯಲ್ಲಿ ಹೇಳಿದೆ. ಈ ಐಹಿಕ ಜಗತ್ತಿನಲ್ಲಿ ಎಲ್ಲ ಚಟುವಟಿಕೆಗಳ ಕೇಂದ್ರವು ಕಾಮ. ಆದುದರಿಂದ ಐಹಿಕ ಜನಗತ್ತನ್ನು ಮೈಥುನ್ಯಾಗಾರ ಅಥವಾ ಕಾಮಜೀವನದ ಸರಪಳಿಗಳು ಎಂದು ಕರೆಯುತ್ತಾರೆ. ಸಾಮಾನ್ಯ ಜೈಲಿನಲ್ಲಿ ಅಪರಾಧಿಗಳನ್ನು ಕಂಬಿಗಳ ಹಿಂದೆ ಇಡುತ್ತಾರೆ.

ಹಾಗೆಯೇ, ಭಗವಂತನ ನಿಯಮಗಳನ್ನು ಉಲ್ಲಂಘಿಸಿದ ಅಪರಾಧಿಗಳಿಗೆ ಕಾಮ ಜೀವನದ ಕೈಕೋಳಗಳನ್ನು ತೊಡಿಸಲಾಗುತ್ತದೆ. ಇಂದ್ರಿಯ ಭೋಗದ ಆಧಾರದ ಮೇಲೆ ಐಹಿಕ ನಾಗರಿಕತೆಯನ್ನು ಬೆಳೆಸುವುದೆಂದರೆ ಜೀವಿಯ ಐಹಿಕ ಅಸ್ತಿತ್ತವದ ಅವಧಿಯನ್ನು ಬೆಳೆಸುವುದು ಎಂದು ಅರ್ಥ. ಆದುದರಿಂದ ಈ ಕಾಮವು, ಜೀವಿಯನ್ನು ಐಹಿಕ ಜಗತ್ತಿನಲ್ಲಿಯೇ ಉಳಿಸುವ ಸಂಕೇತ. ಇಂದ್ರಿಯ ಭೋಗದಲ್ಲಿ ಸ್ವಲ್ಪ ಸುಖದ ಭಾವನೆ ಇರಬಹುದು. ಆದರೆ ವಾಸ್ತವವಾಗಿ ಸುಖ ಎನ್ನಿಸುವ ಈ ಭಾವನೆಯು ಅಂತಿಮವಾಗಿ ಭೋಗ ಪಡುವವನ ಶತ್ರುವೇ ಆಗಿರುತ್ತದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.