ಭಗವದ್ಗೀತೆ: ಕರ್ಮ, ಅಕರ್ಮ ತೀರ್ಮಾನಿಸುವಾಗ ಬುದ್ಧಿವಂತರಿಗೂ ದಿಗ್ಭ್ರಮೆಯಾಗುತ್ತೆ; ಗೀತೆಯ ಅರ್ಥ ಹೀಗಿದೆ-spiritual news bhagavad gita updesh lord krishna karma and akarma conclude time bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಕರ್ಮ, ಅಕರ್ಮ ತೀರ್ಮಾನಿಸುವಾಗ ಬುದ್ಧಿವಂತರಿಗೂ ದಿಗ್ಭ್ರಮೆಯಾಗುತ್ತೆ; ಗೀತೆಯ ಅರ್ಥ ಹೀಗಿದೆ

ಭಗವದ್ಗೀತೆ: ಕರ್ಮ, ಅಕರ್ಮ ತೀರ್ಮಾನಿಸುವಾಗ ಬುದ್ಧಿವಂತರಿಗೂ ದಿಗ್ಭ್ರಮೆಯಾಗುತ್ತೆ; ಗೀತೆಯ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕರ್ಮ, ಅಕರ್ಮ ತೀರ್ಮಾನಿಸುವಾಗ ಬುದ್ಧಿವಂತರಿಗೂ ದಿಗ್ಭ್ರಮೆಯಾಗುತ್ತೆ ಎಂಬುದರ ಗೀತೆಯ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ |

ಕುರು ಕರ್ಮೈವ ತಸ್ಮಾತ್ತ್ವಂ ಪೂರ್ವೈಃ ಪೂರ್ವತರಂ ಕೃತಮ್ ||15||

ಪ್ರಾಚೀನ ಕಾಲದ ಎಲ್ಲ ಮುಕ್ತಾತ್ಮರೂ ನನ್ನ ದಿವ್ಯಸ್ವಭಾವವನ್ನು ಹೀಗೆ ಅರ್ಥಮಾಡಿಕೊಂಡು ಕರ್ಮವನ್ನು ಮಾಡಿದರು. ನೀನೂ ಅವರ ಹೆಜ್ಜೆಯನ್ನು ಅನುಸರಿಸಿ ನಿನ್ನ ಕರ್ತವ್ಯವನ್ನು ಮಾಡಬೇಕು.

ಮನುಷ್ಯರಲ್ಲಿ ಎರಡು ವರ್ಗಗಳು. ಕೆಲವರ ಹೃದಯಗಳು ಕಲುಷಿತವಾದ ಐಹಿಕ ವಿಷಯಗಳಿಂದ ತುಂಬಿಹೋಗಿರುತ್ತವೆ. ಕೆವರು ಐಹಿಕವಾಗಿ ಮುಕ್ತರು. ಇವರಿಬ್ಬರಿಗೂ ಕೃಷ್ಣಪ್ರಜ್ಞೆಯ ಸಮಾನವಾಗಿ ಪ್ರಯೋಜನಕರ. ಕಲ್ಮಷಗಳಿಂದ ತುಂಬಿಹೋದವರು ಕ್ರಮವಾದ ಶುದ್ಧೀಕರಣ ಪ್ರಕ್ರಿಯೆಗಾಗಿ ಕೃಷ್ಣಪ್ರಜ್ಞೆಯ ಮಾರ್ಗವನ್ನು ಸ್ವೀಕರಿಸಬಹುದು. ಭಕ್ತಿಸೇವೆಯ ನಿಯಂತ್ರಕ ತತ್ವಗಳನ್ನು ಅನುಸರಿಸಬಹುದು. ಆಗಲೇ ಕಶ್ಮಲಗಳಿಂದ ಪರಿಶುದ್ಧರಾದವರು ಇದೇ ಕೃಷ್ಣಪ್ರಜ್ಞೆಯಲ್ಲಿ ಮುಂದುವರಿಯಬಹುದು. ಇದರಿಂದ ಇತರರೂ ತಮ್ಮ ಆದರ್ಶ ಚಟುವಟಿಕೆಗಳನ್ನು ಅನುಸರಿಸಿ ಅದರ ಪ್ರಯೋಜನ ಪಡೆಯುವಂತಾಗುತ್ತದೆ.

ಬುದ್ಧಿ ಇಲ್ಲದವರು ಅಥವಾ ಹೊಸದಾಗಿ ಕೃಷ್ಣಪ್ರಜ್ಞೆಯ ದೀಕ್ಷೆಯನ್ನು ಪಡೆದವರು, ಕೃಷ್ಣಪ್ರಜ್ಞೆಯನ್ನು ತಿಳಿದುಕೂಳ್ಳದೆಯೇ ಕ್ರಿಯೆಗಳಿಂದ ನಿವೃತ್ತರಾಗಲು ಬಯಸುತ್ತಾರೆ. ಯುದ್ಧರಂಗದ ಕರ್ತವ್ಯಗಳನ್ನು ಮಾಡಬೇಕು ಎಂದು ತಿಳಿದಿರಬೇಕು ಅಷ್ಟೇ. ಕೃಷ್ಣಪ್ರಜ್ಞೆಯ ಚಟುವಟಿಕೆಗಳನ್ನು ಬಿಟ್ಟು, ಕೃಷ್ಣಪ್ರಜ್ಞೆಯ ಹೊರಪ್ರದರ್ಶನ ಮಾಡುತ್ತ ದೂರದಲ್ಲಿ ಕುಳಿತುಕೊಳ್ಳುವುದಕ್ಕಿಂತ, ಕೃಷ್ಣನಿಗಾಗಿ ಕಾರ್ಯಕ್ಷೇತ್ರದಲ್ಲಿ ತೊಡಗುವುದು ಹೆಚ್ಚು ಮುಖ್ಯ. ಆಗಲೇ ಹೆಸರಿಸಿದ ಸೂರ್ಯದೇವತೆ ವಿವಸ್ವಾನನಂತಹ ಭಗವಂತನ ಹಿಂದಿನ ಶಿಷ್ಯರನ್ನು ಅನುಸರಿಸಿ, ಕೃಷ್ಣಪ್ರಜ್ಞೆಯಲ್ಲಿ ಕೆಲಸಮಾಡಬೇಕೆಂದು ಇಲ್ಲಿ ಅರ್ಜುನನಿಗೆ ಭಗವಂತನು ಹೇಳುತ್ತಿದ್ದಾನೆ.

ತನ್ನ ಹಿಂದಿನ ಕಾರ್ಯಗಳೂ, ಭೂತಕಾಲದಲ್ಲಿ ಕೃಷ್ಣಪ್ರಜ್ಞೆಯಲ್ಲಿ ಕೆಲಸಮಾಡಿದವರ ಕಾರ್ಯಗಳೂ ಭಗವಂತನಿಗೆ ತಿಳಿದಿದೆ. ಆದುದರಿಂದಲೇ ಆತನು ಕೋಟ್ಯಂತರ ವರ್ಷಗಳ ಹಿಂದೆ ತನ್ನಿಂದ ಈ ಕಲೆಯನ್ನು ಕಲಿತ ಸೂರ್ಯದೇವನ ಕಾರ್ಯಗಳನ್ನು ಆದರ್ಶವಾಗಿ ಹೇಳುತ್ತಾನೆ. ಕೃಷ್ಣನ ಇಂತಹ ಹಿಂದಿನ ಶಿಷ್ಯರನ್ನೆಲ್ಲ, ಕೃಷ್ಣನು ನಿಯಮಿಸಿದ ಕರ್ತವ್ಯಗಳಲ್ಲಿ ನಿರತರಾಗಿದ್ದ ಗತಕಾಲದ ಮುಕ್ತಾತ್ಮರು ಎಂದು ಇಲ್ಲಿ ಹೆಸರಿಸಲಾಗಿದೆ.

ಕಿಂ ಕರ್ಮ ಕಿಮಕರ್ಮೇತಿ ಕವಯೋಪ್ಯತ್ರ ಮೋಹಿತಾಃ |

ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞತ್ವಾ ಮೋಕ್ಷ್ಯಸೇಶುಭಾತ್ ||16||

ಕರ್ಮವು ಯಾವುದು ಅಕರ್ಮವು ಯಾವುದು ಎಂಬುದನ್ನು ತೀರ್ಮಾನಿಸುವಾಗ ಬುದ್ಧಿವಂತರಿಗೂ ದಿಗ್ಭ್ರಮೆಯಾಗುತ್ತದೆ. ಕರ್ಮವೆಂದರೇನು ಎಂಬುದನ್ನು ಈಗ ನಿನಗೆ ವಿವರಿಸಿ ಹೇಳುತ್ತೇನೆ. ಅದನ್ನು ತಿಳಿದು ನೀನು ಎಲ್ಲ ಅಶುಭದಿಂದ ಬಿಡುಗಡೆ ಹೊಂದುವೆ.

ಕೃಷ್ಣಪ್ರಜ್ಞೆಯಲ್ಲಿ ಕರ್ಮವನ್ನು ಹಿಂದಿನ ನಿಜವಾದ ಭಕ್ತರ ಮೇಲ್ಪಂಕ್ತಿಯಂತೆ ಮಾಡಬೇಕು. ಇದನ್ನು 15ನೆಯ ಶ್ಲೋಕದಲ್ಲಿ ಹೇಳಿದೆ. ಇಂತಹ ಕರ್ಮವು ಏಕೆ ಸ್ವತಂತ್ರವಾಗಿರಬಾರದು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ಹೇಳಿದೆ.

ಈ ಅಧ್ಯಾಯದ ಪ್ರಾರಂಭದಲ್ಲಿ ವಿವರಿಸಿದಂತೆ, ಗುರುಶಿಷ್ಯ ಪರಂಪರೆಯಲ್ಲಿರುವವರಿಗೆ ಅಧಿಕಾರವು ದತ್ತವಾಗಿರುತ್ತದೆ. ಕೃಷ್ಣಪ್ರಜ್ಞೆಯಲ್ಲಿ ಕಾರ್ಯಮಾಡಲು ಇಂತಹವರ ಮಾರ್ಗದರ್ಶನವನ್ನು ಅನುಸರಿಸಬೇಕು. ಕೃಷ್ಣಪ್ರಜ್ಞೆಯ ಪದ್ಧತಿಯನ್ನು ಮೊದಲು ತಿಳಿಸಿಕೊಟ್ಟದ್ದು ಸೂರ್ಯದೇವನಿಗೆ. ಸೂರ್ಯದೇವನು ತನ್ನ ಮಗನಾದ ಮನುವಿಗೆ ಇದನ್ನು ವಿವರಿಸಿದನು. ಮನುವು ತನ್ನ ಮಗನಾದ ಇಕ್ಷ್ವಾಕುವಿಗೆ ವಿವರಿಸಿದನು. ಆ ಪ್ರಾಚೀನ ಕಾಲದಿಂದ ಈ ಪದ್ಧತಿಯು ಭೂಮಿಯ ಮೇಲೆ ನಡೆದುಕೊಂಡು ಬಂದಿದೆ.

ಆದುದರಿಂದ ನಾವು ಗುರುಶಿಷ್ಯ ಪರಂಪರೆಯಲ್ಲಿನ ಹಿಂದಿನ ಅಧಿಕೃತ ಜನರ ಹೆಜ್ಜೆಯಲ್ಲಿ ನಡೆಯಬೇಕು. ಇಲ್ಲವಾದರೆ ಅತ್ಯಂತ ಬುದ್ಧಿವಂತರಾದವರಿಗೂ ಕೃಷ್ಣಪ್ರಜ್ಞೆಯಲ್ಲಿನ ಕಾರ್ಯಪ್ರಮಾಣಗಳ ವಿಷಯದಲ್ಲಿ ದಿಗ್ಭ್ರಮೆಯಾಗುತ್ತದೆ. ಈ ಕಾರಣಕ್ಕಾಗಿ ಭಗವಂತನು ಅರ್ಜುನನಿಗೆ ನೇರವಾಗಿ ಕೃಷ್ಣಪ್ರಜ್ಞೆಯನ್ನು ಉಪದೇಶಿಸಲು ನಿರ್ಧರಿಸಿದನು. ಭಗವಂತನು ಅರ್ಜುನನಿಗೆ ನೇರವಾಗಿ ಉಪದೇಶ ಮಾಡಿದುದರಿಂದ, ಯಾರು ಅರ್ಜುನನ ಹೆಜ್ಜೆಗಳಲ್ಲಿ ನಡೆಯುತ್ತಾರೋ ಅವರಿಗೆ ಖಂಡಿತ ದಿಗ್ಭ್ರಮೆಯಾಗುವುದಿಲ್ಲ.

ಧರ್ಮದ ಮಾರ್ಗವನ್ನು ಅಪರಿಪೂರ್ಣವಾದ ಪ್ರಾಯೋಗಿಕ ತಿಳುವಳಿಕೆಯಿಂದ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ವಾಸ್ತವವಾಗಿ ಧರ್ಮದ ತತ್ವಗಳನ್ನು ಭಗವಂತನು ಮಾತ್ರವೇ ವಿಧಿಸಬಲ್ಲ. ಧರ್ಮಂ ತು ಸಾಕ್ಷಾದ್ ಭಗವತ್ಪ್ರಣೀತಮ್ (ಭಾಗವತ 6.3.19). ಅಪರಿಪೂರ್ಣವಾದ ಊಹೆಗಳಿಂದ ಧಾರ್ಮಿಕ ತತ್ವವನ್ನು ಯಾರೂ ಸೃಷ್ಟಿಸಲಾರರು. ಬ್ರಹ್ಮ, ಶಿವ, ನಾರದ, ಮನು, ಕುಮಾರರು, ಕಪಿಲ, ಪ್ರಹ್ಲಾದ, ಭೀಷ್ಮ, ಶುಕಮುನಿಗಳು, ಯಮರಾಜ, ಜನಕ ಮತ್ತು ಬಲಿಮಹಾರಾಜ - ಇಂತಹ ಶ್ರೇಷ್ಠ ಅಧಿಕಾರಿಗಳ ಹೆಜ್ಜೆಯನ್ನು ಅನುಸರಿಸಬೇಕು.

ಊಹಾತ್ಮಕ ಚಿಂತನೆಯಿಂದ ಧರ್ಮವೆಂದರೇನು ಅಥವಾ ಆತ್ಮಸಾಕ್ಷಾತ್ಕಾರ ಎಂದರೇನು ಎಂದು ತಿಳಿಯಲು ಸಾಧ್ಯವಿಲ್ಲ. ಆದುದರಿಂದ ತನ್ನ ಭಕ್ತರ ಬಗ್ಗೆ ಇರುವ ನಿಷ್ಕಾರಣ ಕಾರುಣ್ಯದಿಂದ ಭಗವಂತನು ಕರ್ಮ ಯಾವುದು ಮತ್ತು ಅಕರ್ಮ ಯಾವುದು ಎಂದು ಅರ್ಜುನನಿಗೆ ನೇರವಾಗಿ ವಿವರಿಸುತ್ತಾನೆ. ಕೃಷ್ಣಪ್ರಜ್ಞೆಯಲ್ಲಿ ಮಾಡಿದ ಕರ್ಮ ಮಾತ್ರವೇ ಮನುಷ್ಯನನ್ನು ಐಹಿಕ ಅಸ್ತಿತ್ವದ ಗೋಜಿನಿಂದ ಬಿಡುಗಡೆ ಮಾಡಬಲ್ಲದು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.